ಸಾರಾಂಶ
ಒಂದೊಂದು ಕನ್ನಡ ಪದಕ್ಕೂ ಹತ್ತಾರು ಅರ್ಥಗಳಿವೆ: ಪಿ.ಕೆ.ಬಸವರಾಜ್
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾ. ಕಸಾಪದಿಂದ ಕನ್ನಡ ಡಿಂಡಿಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಒಂದೊಂದು ಕನ್ನಡ ಪದಕ್ಕೂ ಹತ್ತಾರು ಅರ್ಥಗಳಿದ್ದು ಕನ್ನಡ ಭಾಷೆಯಲ್ಲಿ ಮಾತನಾಡುವಾಗ ಅದು ಹೃದಯದಿಂದ ಬರುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಪಿ.ಕೆ.ಬಸವರಾಜ್ ತಿಳಿಸಿದರು.
ಗುರುವಾರ ತಾಲೂಕಿನ ಅಳಲಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ನವಂಬರ್ ತಿಂಗಳ ಕನ್ನಡ ಡಿಂಡಿಮ ಕಾರ್ಯಕ್ರಮದಲ್ಲಿ ಕನ್ನಡ ಭಾಷಾ ವೈಭವ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಕನ್ನಡ ಭಾಷೆಯನ್ನು ಕ್ರಿಸ್ತ ಪೂರ್ವದಲ್ಲೇ ಬಳಸುತ್ತಿದ್ದರು ಎಂಬುದು ಇತಿಹಾಸದಿಂದ ತಿಳಿದು ಬಂದಿದೆ. ಹಲ್ಮಿಡಿ ಶಾಸನ, ಬೇಲೂರು ಶಾಸನದಲ್ಲೂ ಉಲ್ಲೇಖವಿದೆ. ಕವಿರಾಜ ಮಾರ್ಗ ಗ್ರಂಥ ನಮ್ಮ ಕನ್ನಡ ಭಾಷೆಗೆ ಮೂಲ ಗ್ರಂಥವಾಗಿದೆ. ಕನ್ನಡಕ್ಕೆ ತನ್ನದೇ ಆದ ಲಿಪಿ ಇದೆ. ಆದರೆ, ಇಂಗ್ಲೀಷ್ ಭಾಷೆಗೆ ಯಾವುದೇ ಲಿಪಿ ಇಲ್ಲ. ಕನ್ನಡಕ್ಕೆ 8 ಜ್ಞಾನ ಪೀಠ ಪ್ರಶಸ್ತಿ ಬಂದಿದೆ. ಕ್ರಿ.ಶ.750 ವರ್ಷಗಳ ಹಿಂದೆ ಹಳೆ ಕನ್ನಡ ಇತ್ತು. ನಂತರ 1500 ರಿಂದ 1850 ರ ವರೆಗೂ ನವ ಕನ್ನಡ ಬಳಕೆಯಲ್ಲಿತ್ತು ಎಂದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಾದ ಪೂರ್ಣಿಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ, ಜಲ, ನೆಲದ ಉಳಿವಿಗೆ, ಅಸ್ಮಿತೆಗಾಗಿ 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪ್ರಾರಂಭವಾಯಿತು. ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸ ಇದೆ. ಮಕ್ಕಳು ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷೆ ಜುಬೇದ ಮಾತನಾಡಿ, ನವಂಬರ್ ತಿಂಗಳಿಗೆ ಮಾತ್ರ ಕನ್ನಡ ರಾಜ್ಯೋತ್ಸವ ಸೀಮಿತವಾಗಿರದೆ ಕನ್ನಡ ರಾಜ್ಯೋತ್ಸವ ನಿತ್ಯೋತ್ಸವಾಗಬೇಕು. ಈ ವರ್ಷ ಕಸಾಪದಿಂದ ಶ್ರಾವಣ ಸಂಜೆ ಕಾರ್ಯಕ್ರಮ ನಡೆಸಲಾಗಿತ್ತು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿ ಮಕ್ಕಳು ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆಯಬೇಕು ಎಂದು ಸಲಹೆ ನೀಡಿದರು.ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕನ್ನಡ ಭಾಷೆಯಲ್ಲಿ ಗ್ರಾಮೀಣ ಸೊಗಡಿದೆ. ಮಕ್ಕಳು ಕನ್ನಡ ಸಾಹಿತ್ಯ ಓದಬೇಕು. ನರಸಿಂಹರಾಜಪುರದಲ್ಲಿ ಕನ್ನಡ ಭವನ ಇಲ್ಲವಾಗಿದೆ. ಕನ್ನಡ ಭವನ ನಿರ್ಮಿಸಲು ನಿವೇಶನ ನೀಡುವಂತೆ ಈಗಾಗಲೇ ಪಟ್ಟಣ ಪಂಚಾಯಿತಿಗೆ ಮನವಿ ಮಾಡಲಾಗಿದೆ. ಕಸಾಪದಿಂದ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಸುಂದರವಾಗಿ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.
ಈ ವೇಳೆ 25 ಮಕ್ಕಳಿಗೆ ಕನ್ನಡದಲ್ಲಿ ಸುಂದರವಾಗಿ ಬರೆಯುವ ಸ್ಪರ್ಧೆ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಮೆಣಸೂರು ಗ್ರಾಪಂ ಸದಸ್ಯ ಶ್ರೀನಾಥ್, ಕಸಾಪ ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ ವಾಣಿ ನರೇಂದ್ರ, ಜೇಸಿ ಪೂರ್ವಾಧ್ಯಕ್ಷ ಚರಣರಾಜ್, ಸಹನ , ಅಮಿತ ಉಪಸ್ಥಿತರಿದ್ದರು.