ಸಾರಾಂಶ
ಪ್ರತಿ ವರ್ಷ ನವೆಂಬರ್‌ನಿಂದ ಫೆಬ್ರವರಿ ಮೊದಲ ವಾರದಲ್ಲಿ ಹಕ್ಕಿಗಳು ಕರಾವಳಿಯತ್ತ ವಲಸೆ ಬರುವುದು ವಾಡಿಕೆ. ಫೆಬ್ರವರಿಯಲ್ಲಿ ಹಕ್ಕಿಗಳ ವೀಕ್ಷಣೆ ಹಾಗೂ ಎಣಿಕೆ ಕಾರ್ಯಕ್ಕೆ ಸೂಕ್ತ ಸಮಯವಾಗಿದೆ. ಹಕ್ಕಿಗಳು ಯುರೋಪ್, ಮಧ್ಯ ಏಷ್ಯಾ, ಉತ್ತರ ಏಷ್ಯಾ ಮತ್ತು ಹಿಮಾಲಯಗಳಿಂದ ಮಂಗಳೂರಿಗೆ ವಲಸೆ ಬರುತ್ತವೆ. ಆದರೆ ಈ ಬಾರಿ ಹಕ್ಕಿಗಳ ವಲಸೆಯಲ್ಲಿ ಭಾರಿ ಕುಸಿತವಾಗಿದೆ.
ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳಪರಿಸರದ ಅಸಮತೋಲನವು ಜಾಗತಿಕವಾಗಿ ಪರಿಣಾಮ ಬೀರಿದ್ದು, ಮಾನವ ಈಗಾಗಲೇ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾನೆ. ಈಗ ಇದು ಪಕ್ಷಿ ಸಂಕುಲಗಳ ಮೇಲೂ ಭಾರಿ ಪರಿಣಾಮ ಬೀರಿದೆ.
ಹೌದು, ಅಕಾಲಿಕ ಮಳೆ, ಕಲುಷಿತ ಜಲಮೂಲಗಳಿಂದಾಗಿ ಪಕ್ಷಿಗಳ ಆಗಮನ ಕೊರತೆಗೆ ಕಾರಣ ಎಂದು ಅಂದಾಜಿಸಲಾಗಿದೆ. ಪರಿಸರದ ಮೇಲೆ ಅತಿಯಾದ ಮಾನವ ಹಸ್ತಕ್ಷೇಪಗಳಿಂದ ಪಕ್ಷಿಗಳ ವಲಸೆಯಲ್ಲಿ ಏರುಪೇರು ಉಂಟಾಗಿದೆ. ಅದರಲ್ಲೂ ಮಂಗಳೂರಿನ ಹಾಟ್‌ಸ್ಪಾಟ್‌ಗಳಿಗೆ ವಲಸೆ ಹಕ್ಕಿಗಳ ಆಗಮನ ವಿಳಂಬವಾಗುತ್ತಿರುವುದು ಪಕ್ಷಿ ಪ್ರೇಮಿಗಳನ್ನು ಚಿಂತೆಗೀಡು ಮಾಡಿದೆ. ಈ ಬಗ್ಗೆ ಸೈಂಟ್ ಅಲೋಶಿಯಸ್ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ್ ವಟಿ ಕೆ. ಕಳವಳ ವ್ಯಕ್ತಪಡಿಸಿದ್ದಾರೆ.* ಕರಾವಳಿಯತ್ತ ಪಕ್ಷಿಗಳ ವಲಸೆ:
ಪ್ರತಿ ವರ್ಷ ನವೆಂಬರ್‌ನಿಂದ ಫೆಬ್ರವರಿ ಮೊದಲ ವಾರದಲ್ಲಿ ಹಕ್ಕಿಗಳು ಕರಾವಳಿಯತ್ತ ವಲಸೆ ಬರುವುದು ವಾಡಿಕೆ. ಫೆಬ್ರವರಿಯಲ್ಲಿ ಹಕ್ಕಿಗಳ ವೀಕ್ಷಣೆ ಹಾಗೂ ಎಣಿಕೆ ಕಾರ್ಯಕ್ಕೆ ಸೂಕ್ತ ಸಮಯವಾಗಿದೆ. ಹಕ್ಕಿಗಳು ಯುರೋಪ್, ಮಧ್ಯ ಏಷ್ಯಾ, ಉತ್ತರ ಏಷ್ಯಾ ಮತ್ತು ಹಿಮಾಲಯಗಳಿಂದ ಮಂಗಳೂರಿಗೆ ವಲಸೆ ಬರುತ್ತವೆ. ಆದರೆ ಈ ಬಾರಿ ಹಕ್ಕಿಗಳ ವಲಸೆಯಲ್ಲಿ ಭಾರಿ ಕುಸಿತವಾಗಿದೆ.* ಈ ಬಾರಿ ವಲಸೆ ತೀವ್ರ ಕುಸಿತ:
ಕರಾವಳಿ ಕರ್ನಾಟಕ ಪಕ್ಷಿ ವೀಕ್ಷಕರ ನೆಟ್‌ವರ್ಕ್‌ನ ಬರ್ಡರ್ ವಿವೇಕ್ ನಾಯಕ್ ಮಾಹಿತಿ ಪ್ರಕಾರ, ಹವಾಮಾನ ಬದಲಾವಣೆ, ಅತಿಯಾದ ಅಭಿವೃದ್ಧಿ ಕಾರ್ಯಗಳು, ಮಲಿನ ನೀರು ಪಕ್ಷಿಗಳ ವಲಸೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಪಕ್ಷಿಗಳ ಆವಾಸಸ್ಥಾನದ ನಷ್ಟವಾಗಿದೆ. 2023ರ ನವೆಂಬರ್‌ನಿಂದ 2024ರ ಮಾರ್ಚ್ ವರೆಗೆ, ಸುಮಾರು 60-65 ವಲಸೆ ಪ್ರಭೇದಗಳು ದಾಖಲಾಗಿದ್ದವು. ಈ ಬಾರಿ ಕೇವಲ 7-10 ಹಕ್ಕಿ ಪ್ರಭೇದಗಳು ಮಾತ್ರ ಕಾಣಿಸಿಕೊಂಡಿವೆ.* ಸಿಹಿ ನೀರಿನ ಪ್ರದೇಶಗಳೆ ವಲಸೆ ಹಕ್ಕಿಗಳ ಹಾಟ್‌ಸ್ಪಾಟ್:
ಸೈಂಟ್ ಅಲೋಶಿಯಸ್ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ್ ವಟಿ ಕೆ., ಹಕ್ಕಿಗಳ ವಲಸೆ ಋತುವಿನ ಸಂದರ್ಭದಲ್ಲಿ ಸರಾಸರಿ 70 ಜಾತಿಯ ಪಕ್ಷಿಗಳನ್ನು ದಾಖಲಿಸಿದ್ದಾರೆ. ಪಕ್ಷಿಗಳು ಹೆಚ್ಚಾಗಿ ಸಿಹಿನೀರಿನ ಜೌಗು ಪ್ರದೇಶಗಳಿಂದ ಆವೃತವಾಗಿರುವ ಮಂಜಲ್ಪಾದೆ, ಕೆಂಜಾರ್ ಮತ್ತು ಜೋಕಟ್ಟೆಯಂತಹ ಸಾಂಪ್ರದಾಯಿಕ ಸ್ಥಳಗಳಲ್ಲಿ ಕಾಣಿಸುತ್ತವೆ. ಸಿಹಿ ನೀರಿನ ಜೌಗು ಪ್ರದೇಶಗಳು, ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಮುಖ ಪರಿಸರ ವ್ಯವಸ್ಥೆಗಳಾಗಿವೆ. ಅವು ನೈಸರ್ಗಿಕ ಫಿಲ್ಟರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ನೀರನ್ನು ಶುದ್ಧೀಕರಿಸುತ್ತವೆ ಮತ್ತು ಮಾಲಿನ್ಯವನ್ನು ತಗ್ಗಿಸುತ್ತವೆ. ಈ ಪರಿಸರ ವ್ಯವಸ್ಥೆಗಳು ನಿರ್ಣಾಯಕ ಪ್ರವಾಹ ಬಫರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ, ಭಾರಿ ಮಳೆಯ ಸಮಯದಲ್ಲಿ ಹೆಚ್ಚುವರಿ ನೀರನ್ನು ಹೀರಿಕೊಳ್ಳುತ್ತವೆ ಮತ್ತು ಸವೆತದ ಪರಿಣಾಮವನ್ನು ತಗ್ಗಿಸುತ್ತವೆ. ಇದಲ್ಲದೆ ಅವು ಅಸಂಖ್ಯಾತ ಪಕ್ಷಿ ಪ್ರಭೇದಗಳನ್ನು ಒಳಗೊಂಡಂತೆ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ಅಗತ್ಯವಾದ ಆವಾಸಸ್ಥಾನಗಳನ್ನು ಒದಗಿಸುತ್ತವೆ.* ಅಪರೂಪವಾದ ವಲಸೆ ಹಕ್ಕಿಗಳು:
ಈ ಬಾರಿ ಬಾಯ್ ವೀವರ್, ಜಾಕೋಬಿನ್ ಕುಕ್ಕೂ, ಬಾಂಡೆಡ್ ಬೆ ಕುಕ್ಕೂ, ಬ್ಲೂ ಥ್ರೋಟ್ ಫೈಕ್ಯಾಚರ್, ಇಂಡಿಯನ್ ಬ್ಲಾಕ್ಬರ್ಡ್, ಇಂಡಿಯನ್ ಬ್ಲೂ ರಾಬಿನ್, ಏಷ್ಯನ್ ಓಪನ್ ಬಿಲ್, ಏಷಿಯಾನಾ ಔಉಲ್ಲಿ ನೆಕ್ ರೋಸಿ ಸ್ಟರ್ಲಿಂಗ್, ಅರೆಂಜ್ ಹೆಡೆಡ್ ಟ್ರಷ್, ಸ್ಟ್ರಾಕ್ ಬಿಲ್‌ಡ್ ಕಿಂಗ್ ಫಿಶರ್ ಮುಂತಾದ ವಲಸೆ ಹಕ್ಕಿಗಳು ಬರಿ ಅಪರೂಪದಲ್ಲಿ ಕಾಣಸಿಗುತ್ತಿವೆ ಎಂದು ಮಣಿಪಾಲದ ಪಕ್ಷಿ ವೀಕ್ಷಕರಾದ ಪಿಎಚ್‌ಡಿ ವಿದ್ಯಾರ್ಥಿ ಮಹೀಮ್ ಭಟ್ ತಿಳಿಸಿದ್ದಾರೆ.....................
ಸಿಹಿ ನೀರಿನ ಜೌಗು ಪ್ರದೇಶದಗಳಲ್ಲಿ ವಲಸೆ ಹಕ್ಕಿಗಳು ಹಾಗೂ ಸಾಂಪ್ರದಾಯಿಕ ಹಕ್ಕಿಗಳು ಕಾಣಿಸುತ್ತವೆ. ಸಿಹಿ ನೀರಿನ ಜೌಗು ಪ್ರದೇಶಗಳು ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಮುಖ ಪರಿಸರ ವ್ಯವಸ್ಥೆಗಳಾಗಿವೆ. ಈ ಬಾರಿ ಅತಿಯಾದ ಪರಿಸರದ ಮೇಲಿನ ಮಾನವ ಹಸ್ತಕ್ಷೇಪಗಳು ಹಾಗೂ ಮಲಿನತೆ, ಪರಿಸರ ಅಸಮತೋಲನದಿಂದ ವಲಸೆ ಪಕ್ಷಿಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ.। ಕಿರಣ್ ವಟಿ ಕೆ., ಸಹಾಯಕ ಪ್ರಾಧ್ಯಾಪಕ, ಪ್ರಾಣಿ ಶಾಸ್ತ್ರ ವಿಭಾಗ ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು.