ಸಾರಾಂಶ
ಕಾಲ ಹರಣದಿಂದಲೇ ನಮಗೆ ಹಿನ್ನಡೆ. ನಮ್ಮಲ್ಲಿರುವ ಪ್ರತಿಭೆ ಒರೆಗೆ ಹಚ್ಚುವ ಇಚ್ಛೆ ಹೊಂದಿರಬೇಕು.
ಹಾನಗಲ್ಲ: ಶೈಕ್ಷಣಿಕ ಸ್ಪರ್ಧೆಗಳು ನಮ್ಮ ಬುದ್ಧಿ ಮನೋವಿಕಾಸಕ್ಕೆ ಸಹಕಾರಿಯಾಗಿದ್ದು, ಇಂದಿನ ಅಂತರ್ಜಾಲ ಯುಗದಲ್ಲಿರುವ ನಾವು ಅದೇ ವೇಗದ ಸ್ಪರ್ಧೆ ಎದುರಿಸಿ ಯಶಸ್ಸು ಸಾಧಿಸುವ ಇಚ್ಛಾಶಕ್ತಿ ಉಳ್ಳವರಾಗಬೇಕು ಎಂದು ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.
ಇಲ್ಲಿನ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಿಜ್ಞಾನ ಗೋಷ್ಠಿ, ವಿಜ್ಞಾನ ನಾಟಕ, ವಸ್ತುಪ್ರದರ್ಶದ ತಾಲೂಕು ಮಟ್ಟದ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ಕಾಲ ಹರಣದಿಂದಲೇ ನಮಗೆ ಹಿನ್ನಡೆ. ನಮ್ಮಲ್ಲಿರುವ ಪ್ರತಿಭೆ ಒರೆಗೆ ಹಚ್ಚುವ ಇಚ್ಛೆ ಹೊಂದಿರಬೇಕು. ನಮ್ಮ ಪರಿಸರದಲ್ಲಿಯೇ ನಾವು ಕಲಿಯುವ ಅನೇಕ ಒಳ್ಳೆಯ ಸಂಗತಿಗಳಿವೆ. ಎಲ್ಲದರಲ್ಲಿಯೂ ವೈಜ್ಞಾನಿಕ ಸಂಗತಿ ಅರಿಯುವ ಪ್ರಯತ್ನ ನಡೆಯಬೇಕು. ಗುರುಗಳು ಹಿರಿಯರನ್ನು ಅರಿತು ಅನುಸರಿಸಿದರೆ,ಅವರ ಅನುಭವ ನಮ್ಮ ಅನುಭವವನ್ನಾಗಿ ಮಾಡಿಕೊಳ್ಳಲು ಸಾಧ್ಯವಾದರೆ ನಮ್ಮ ಓದಿಗೆ ಇನ್ನಷ್ಟು ವೇಗ ಸಾಧ್ಯ. ಪ್ರಾಮಾಣಿಕ ಪ್ರಯತ್ನವಿರಲಿ. ಆದರಿಂದ ಸಾಧನೆ ಖಚಿತ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಣ ಸಂಯೋಜಕ ಬಿ.ಎನ್. ಸಂಗೂರ, ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆ ಹತ್ತು ಹಲವು ಬಗೆಯ ಮಾರ್ಗದರ್ಶನ, ಸ್ಪರ್ಧೆ ನೀಡಿ ವಿದ್ಯಾರ್ಥಿಗಳನ್ನು ಭವಿಷ್ಯದ ಬದುಕಿಗೆ ಸಿದ್ಧಗೊಳಿಸುವ ಕಾರ್ಯ ಮಾಡುತ್ತಿದೆ.ಇದರಿಂದ ಮಕ್ಕಳಲ್ಲಿ ಸ್ಪರ್ಧಾತ್ಮಕ ಶಕ್ತಿ ವೃದ್ಧಿಸುತ್ತದೆ. ನಮ್ಮ ಉದ್ದೇಶವೂ ಇದರಿಂದ ಈಡೇರುತ್ತದೆ ಎಂದರು.
ಶಿಕ್ಷಣ ಸಂಯೋಜಕ ವಿ.ಟಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಿದ್ದು ಗೌರಣ್ಣನವರ, ಕುಮಾರ ಗುಡದಳ್ಳಿ, ಆರ್. ಪ್ರಭಾಕರ, ಗುರುನಗೌಡ ಪಾಟೀಲ, ಲಕ್ಷ್ಮೀ ಹೆಗಡೆ, ಎಂ.ಆರ್. ರುದ್ರಪ್ಪ, ಲಕ್ಷ್ಮೀ ಡಂಬೇರ, ಸಿದ್ದಲಿಂಗೇಶ ಕಾಯಕದ, ಕೆ. ರಾಘವೇಂದ್ರ ಅಥಿತಿಗಳಾಗಿದ್ದರು.ಸ್ಪರ್ಧಾ ವಿಜೇತರು: ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ನಾಗರಾಜ ಕುರಡಿ ಪ್ರಥಮ, ಅಕ್ಷತಾ ಕುರುಬರ ದ್ವಿತೀಯ, ಸಂಜಯ ಗಿಂಡೇರ ತೃತಿಯ ಸ್ಥಾನ ಪಡೆದರು.
ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಆಕಾಶ ಸಂಗಡಿಗರು ಪ್ರಥಮ, ನೇಹಾ ಸಂಗಡಿಗರು ದ್ವಿತೀಯ, ಕೃತಿಕಾ ಸಂಗಡಿಗರು ತೃತೀಯ ಸ್ಥಾನ ಪಡೆದರು.ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತನು ಬೆಟದೂರ ಹಾಗೂ ಆಶ್ವತಾ ಸುಬ್ಬಣ್ಣನವರ ಪ್ರಥಮ, ರವಿಕುಮಾರ ಓಲೇಕಾರ ದ್ವಿತೀಯ, ಆಕಾಶ ಲಮಾಣಿ ತೃತೀಯ ಸ್ಥಾನ ಪಡೆದರು.