ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯಲ್ಲಿ ಮತ್ತೆ ಮಳೆ ಬಿರುಸುಗೊಂಡಿದ್ದು, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಮಳೆಯಾದಲ್ಲಿ ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಕಂದಾಯ, ಲೋಕೋಪಯೋಗಿ, ಪಂಚಾಯತ್ ರಾಜ್, ಅರಣ್ಯ, ಸೆಸ್ಕ್, ಅಗ್ನಿಶಾಮಕ ಹೀಗೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದು, ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿ ಉತ್ತಮವಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ರೀತಿಯ ಹಾನಿ ಆಗದಂತೆ ಅಗತ್ಯ ಮುನ್ನೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಜಲಾಶಯಗಳು, ಜಲಪಾತಗಳು, ಹಳ್ಳ ಕೊಳ್ಳ, ನದಿ ತೊರೆಗಳು ತುಂಬಿ ಹರಿಯುತ್ತಿವೆ. ಇದರಿಂದ ಅಂತರ್ಜಲವು ಸಹ ಹೆಚ್ಚಾಗಿದೆ. ಹೀಗಾಗಿ ಯಾವುದೇ ರೀತಿ ಹಾನಿ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಕಳೆದ 2018, 2019, 2020 ರಲ್ಲಿ ಆಗಸ್ಟ್ ತಿಂಗಳಲ್ಲಿಯೇ ಹೆಚ್ಚಿನ ಮಳೆಯಾಗಿದೆ. ಹಾಗಾಗಿ ಮತ್ತಷ್ಟು ಮುನ್ನೆಚ್ಚರ ವಹಿಸಬೇಕು, ಜನ-ಜಾನುವಾರು ರಕ್ಷಣೆಗೆ ಮುಂದಾಗಬೇಕು ಎಂದು ವೆಂಕಟ್ ರಾಜಾ ತಿಳಿಸಿದರು.ಹೆಚ್ಚಿನ ಮಳೆಯಾಗಿ ಶ್ರೀಮಂಗಲ-ಕುಟ್ಟ ರಸ್ತೆ, ಶಾಂತಳ್ಳಿ ರಸ್ತೆ ಹೀಗೆ ಹಲವು ರಸ್ತೆಗಳು ಹೆಚ್ಚಿನ ಹಾನಿಯಾಗಿದ್ದು, ಈ ಸಂಬಂದ ಮರಳು, ಜಲ್ಲಿಯನ್ನು ತುಂಬಿ ಸರಿಪಡಿಸುವ ಕಾರ್ಯವಾಗಬೇಕು. ಬ್ಯಾರಿಕೇಡ್ ಅಳವಡಿಸಬೇಕು. ಸಾರಿಗೆ ಸಂಚಾರಕ್ಕೆ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು ಎಂದು ಸೂಚಿಸಿದರು.
ತಹಸೀಲ್ದಾರರು, ತಾ.ಪಂ.ಇಒಗಳು, ಅರಣ್ಯ, ಸೆಸ್ಕ್, ಅಗ್ನಿಶಾಮಕ ದಳ, ಹೀಗೆ ಹಲವು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯತೆಯಿಂದ ಮುಂದಿನ ದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.24 ಗಂಟೆಗಳೊಳಗೆ ಪರಿಹಾರ:
ಮನೆ ಹಾನಿಗೆ ಸಂಬಂಧಿಸಿದಂತೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ 24 ಗಂಟೆಯೊಳಗೆ ಪರಿಹಾರ ವಿತರಿಸಬೇಕು. ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಪ್ರಾಕೃತಿಕ ವಿಕೋಪ ನಿರ್ವಹಿಸಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಲೋಕೋಪಯೋಗಿ, ಪಂಚಾಯತ್ ರಾಜ್, ಸೆಸ್ಕ್, ಅರಣ್ಯ, ಅಗ್ನಿಶಾಮಕ ಹೀಗೆ ಪ್ರತಿ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಉತ್ತಮವಾಗಿ ಸ್ಪಂದನೆ ಇದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಪ್ರವಾಹ ಪೀಡಿತ ಪ್ರದೇಶಗಳು, ನಗರ, ಪಟ್ಟಣ ಎಲ್ಲೆಡೆ ಡೆಂಘೀ ಸೇರಿದಂತೆ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಹೆಚ್ಚಿನ ಅರಿವು ಮೂಡಿಸಬೇಕು. ಡೆಂಘೀ ನಿಯಂತ್ರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಜಿಲ್ಲೆಯಲ್ಲಿ 14 ಕ್ರಿಯಾಶೀಲ ಪ್ರಕರಣಗಳು ಇವೆ. ಡೆಂಘೀ ನಿಯಂತ್ರಣಕ್ಕೆ ವಾರಕ್ಕೊಮ್ಮೆ ಲಾರ್ವ ಸಮೀಕ್ಷೆ ಮಾಡಲಾಗುತ್ತಿದೆ ಎಂದರು.
ಪೌರಾಡಳಿತ ಇಲಾಖೆಯ ಎಇಇ ಹೇಮಂತ್ ಕುಮಾರ್ ಅವರು ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ ಬಿರುಗಾಳಿ ಮಳೆಗೆ ಹೆಚ್ಚಿನ ಮನೆಗಳು ಹಾನಿಯಾಗುತ್ತಿದ್ದು, ಇಂತಹ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಜೊತೆಗೆ ಟಾರ್ಪಲ್ ವಿತರಣೆ ಮಾಡಲಾಗುತ್ತಿದೆ ಎಂದರು.ಲೋಕೋಪಯೋಗಿ ಇಲಾಖೆಯ ಇಇ ಸಿದ್ದೇಗೌಡ, ಪಂಚಾಯತ್ ರಾಜ್ ಎಂಜಿನಿಯರ್, ತಹಸೀಲ್ದಾರರಾದ ಪ್ರವೀಣ್ ಕುಮಾರ್, ನವೀನ್ ಕುಮಾರ್, ರಾಮಚಂದ್ರ, ತಾ.ಪಂ.ಇಒ ಗಳಾದ ಶೇಖರ್, ಅಪ್ಪಣ್ಣ, ಇತರರು ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಆನಂದ ಪ್ರಕಾಶ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಬಸಪ್ಪ, ಐಟಿಡಿಪಿ ಇಲಾಖೆ ಅಧಿಕಾರಿ ಹೊನ್ನೇಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ರಂಗಧಾಮಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳ, ಪೌರಾಯುಕ್ತರಾದ ವಿಜಯ್, ಇತರರು ಹಲವು ಮಾಹಿತಿ ನೀಡಿದರು.