ಮತ್ತೆ ವಿದ್ಯುತ್‌ ದರ ಏರಿಕೆ ಪ್ರಸ್ತಾಪ: ತೀವ್ರ ಆಕ್ಷೇಪ

| Published : Feb 13 2024, 12:47 AM IST

ಮತ್ತೆ ವಿದ್ಯುತ್‌ ದರ ಏರಿಕೆ ಪ್ರಸ್ತಾಪ: ತೀವ್ರ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ಮೆಸ್ಕಾಂ ಭವನದಲ್ಲಿ ಸೋಮವಾರ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯ ಎಂ.ಡಿ. ರವಿ ಅವರು ವಿದ್ಯುತ್‌ ದರ ಪರಿಷ್ಕರಣೆ ಕುರಿತು ಸಾರ್ವಜನಿಕ ವಿಚಾರಣೆ ನಡೆಸಿದರು. ಆಯೋಗದ ಅಧ್ಯಕ್ಷ ಪಿ. ರವಿಕುಮಾರ್‌ ವರ್ಚುವಲ್‌ ವಿಧಾನದ ಮೂಲಕ ಭಾಗವಹಿಸಿದ್ದರು. ವಿವಿಧ ಸಂಘಟನೆಗಳು, ಕೈಗಾರಿಕೆಗಳು, ಸಾರ್ವಜನಿಕರು ದರ ಏರಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ವಿದ್ಯುತ್‌ನ ಪ್ರತಿ ಯೂನಿಟ್‌ಗೆ ಸರಾಸರಿ 59 ಪೈಸೆ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗಕ್ಕೆ ಮೆಸ್ಕಾಂ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.ನಗರದ ಮೆಸ್ಕಾಂ ಭವನದಲ್ಲಿ ಸೋಮವಾರ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯ ಎಂ.ಡಿ. ರವಿ ಅವರು ವಿದ್ಯುತ್‌ ದರ ಪರಿಷ್ಕರಣೆ ಕುರಿತು ಸಾರ್ವಜನಿಕ ವಿಚಾರಣೆ ನಡೆಸಿದರು. ಆಯೋಗದ ಅಧ್ಯಕ್ಷ ಪಿ. ರವಿಕುಮಾರ್‌ ವರ್ಚುವಲ್‌ ವಿಧಾನದ ಮೂಲಕ ಭಾಗವಹಿಸಿದ್ದರು. ಸಭೆಯಲ್ಲಿ ವಿವಿಧ ಸಂಘಟನೆಗಳು, ಕೈಗಾರಿಕೆಗಳು, ಸಾರ್ವಜನಿಕರು ದರ ಏರಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಲಾಭ ಇರುವಾಗ ದರ ಏರಿಕೆ ಏಕೆ:

ಉಡುಪಿ ಭಾರತೀಯ ಕಿಸಾನ್ ಸಂಘದ ಸತ್ಯನಾರಾಯಣ ಉಡುಪ ಮಾತನಾಡಿ, ಮೆಸ್ಕಾಂ ನೀಡಿರುವ ವರದಿ ಪ್ರಕಾರ ಕಳೆದ ಆರ್ಥಿಕ ವರ್ಷದಲ್ಲಿ ಎಚ್‌ಟಿ (ಹೈಟೆನ್ಶನ್‌) ಬಳಕೆದಾರರು ಹೆಚ್ಚಾಗಿದ್ದು, ಗೃಹ ಬಳಕೆ ವಿದ್ಯುತ್‌ ಬಳಕೆ ಕಡಿಮೆಯಾಗಿದೆ. ಅಲ್ಲದೆ ಗೃಹ ಬಳಕೆಯಲ್ಲಿ ಮೆಸ್ಕಾಂ ಲಾಭವನ್ನೂ ತೋರಿಸಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಗೃಹ ಬಳಕೆಯ ವಿದ್ಯುತ್‌ ದರ ಏರಿಕೆ ಮಾಡಬಾರದು ಎಂದು ಒತ್ತಾಯಿಸಿದರು.ಎಂಎಸ್‌ಇಝೆಡ್‌ನ ಕೈಗಾರಿಕೆಗಳಿಗೆ ದರ ಏರಿಕೆ ಮಾಡದೆ ಕೇವಲ ಸಣ್ಣ ಗ್ರಾಹಕರಿಗೆ ಮಾತ್ರ ಏಕೆ ಹೊರೆ ಹಾಕುತ್ತೀರಿ ಎಂದು ಪ್ರಶ್ನಿಸಿದ ಉಡುಪ, 23 ವರ್ಷಗಳ ಬಳಿಕವಾದರೂ ಗ್ರಾಹಕರ ಪರವಾದ ತೀರ್ಪನ್ನು ಆಯೋಗ ನೀಡಬೇಕು ಎಂದು ಮನವಿ ಮಾಡಿದರು.

ಸಣ್ಣ ಕೈಗಾರಿಕೆಗಳಿಗೆ ಸಮಸ್ಯೆ:

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ಕೊರೋನಾ ಬಳಿಕ ತೀವ್ರ ಸಂಕಷ್ಟಕ್ಕೆ ಒಳಗಾಗಿರುವುದರಿಂದ ವಿದ್ಯುತ್‌ ದರ ಹೆಚ್ಚಳ ಮಾಡಿದರೆ ಇನ್ನಷ್ಟು ತೊಂದರೆ ಆಗಲಿದೆ. ಅಲ್ಲದೆ, ದಂಡ ವಿಧಿಸುವ ಪದ್ಧತಿಯನ್ನೂ ನಿಲ್ಲಿಸಬೇಕು ಎಂದು ಎಂಎಸ್‌ಎಂಇ ಪ್ರತಿನಿಧಿಗಳು ಒತ್ತಾಯಿಸಿದರು. ಪ್ರೀಪೇಯ್ಡ್‌ ಮೀಟರ್‌ ಕಡ್ಡಾಯ ಮಾಡಬೇಕು ಎಂಬ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್‌, ಯಾರೇ ಕೇಳಿದರೂ ಮೀಟರ್ ನೀಡುವಂತೆ ಈಗಾಗಲೇ ಆದೇಶ ಮಾಡಲಾಗಿದೆ ಎಂದರು.

ದರ ಏರಿಕೆ ನಿಲ್ಲೋದ್ಯಾವಾಗ:

ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಮಾತನಾಡಿ, ಆಯೋಗವು ನಿರಂತರವಾಗಿ ಸಾರ್ವಜನಿಕ ಸಭೆ ನಡೆಸುತ್ತಿದ್ದರೂ ದರ ಏರಿಕೆ ಮಾತ್ರ ನಿಂತಿಲ್ಲ ಎಂದು ಆಕ್ಷೇಪಿಸಿದರು. ಹಿಂದೆ ಇದ್ದ ಸ್ಲ್ಯಾಬ್‌ವೈಸ್‌ ದರ ವಸೂಲಿ ಪದ್ಧತಿಯನ್ನೇ ಮುಂದುವರಿಸಬೇಕು. ಕೈಗಾರಿಕೆಗಳಿಗೆ ಕಡಿಮೆ ದರದಲ್ಲಿ ವಿದ್ಯುತ್ ನೀಡಲು ಸಾಧ್ಯ ಆಗುವಾಗ ಮನೆಗಳಿಗೂ ಕಡಿಮೆ ಬೆಲೆಗೆ ನೀಡಲು ಏಕೆ ಸಾಧ್ಯವಿಲ್ಲ? ಈಗಾಗಲೇ ಬಾಕಿ ಉಳಿದ ಕೋಟ್ಯಂತರ ರು.ಗಳನ್ನು ಮೆಸ್ಕಾಂ ವಸೂಲಿ ಮಾಡುವುದರೊಂದಿಗೆ ವಿತರಣಾ ವೆಚ್ಚವನ್ನು ಸರಿದೂಗಿಸಲಿ. ಹೀಗೆ ಮಾಡಿದರೆ ವಿದ್ಯುತ್‌ ದರ ಏರಿಸುವ ಅಗತ್ಯ ಬರಲ್ಲ ಎಂದು ಹೇಳಿದರು.ದ.ಕ., ಉಡುಪಿಯಲ್ಲಿ ವಿದ್ಯುತ್‌ ಬಿಲ್‌ನ್ನು ಗ್ರಾಹಕರು ಕಾಲಕಾಲಕ್ಕೆ ಕಟ್ಟುತ್ತಿದ್ದು, ಸೋರಿಕೆ ಅತಿ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗಾದರೂ ದರ ಹೆಚ್ಚಳದಿಂದ ವಿನಾಯ್ತಿ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ. ಹೆಗಡೆ ಒತ್ತಾಯಿಸಿದರು.

ಅನಧಿಕೃತ ಐಪಿ ಸೆಟ್‌:

ಸಾಗರದ ವೆಂಕಟಗಿರಿ ಮಾತನಾಡಿ, ಅನೇಕ ಭಾಗಗಳಲ್ಲಿ ಅನಧಿಕೃತವಾಗಿ ಐಪಿ ಸೆಟ್‌ ಅಳವಡಿಸಲಾಗಿದ್ದರೂ ಮೆಸ್ಕಾಂ ಕಣ್ಮುಚ್ಚಿ ಕೂತಿದೆ. ಐಪಿ ಸೆಟ್‌ಗಳ ಬಗ್ಗೆ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ನೀಡಬೇಕು ಎಂದು ಆಗ್ರಹಿಸಿದರು.ಮಂಜುಗಡ್ಡೆ ಸ್ಥಾವರಗಳ ಸಂಘಟನೆ ಪ್ರಮುಖರು ಮಾತನಾಡಿ, ಕನಿಷ್ಠ 5, 10 ಪೈಸೆ ದರ ಏರಿಕೆ ಮಾಡಿದರೂ ಮಂಜುಗಡ್ಡೆ ಸ್ಥಾವರಗಳಿಗೆ ತೀವ್ರ ನಷ್ಟ ಉಂಟಾಗಲಿದೆ. ಮಂಜುಗಡ್ಡೆ ಸ್ಥಾವರಗಳಿಗೆ ವಿಶೇಷ ದರ 6 ರು. ನಿಗದಿ ಮಾಡಬೇಕು ಎಂದು ಮನವಿ ಮಾಡಿದರು. ಬಳಿಕ ಎಂಎಸ್‌ಇಝೆಡ್‌ನ ಅಹವಾಲನ್ನು ಆಯೋಗ ಸ್ವೀಕರಿಸಿತು.

-------------ಮೆಸ್ಕಾಂಗೆ 2024-25ನೇ ಸಾಲಿನಲ್ಲಿ 5281.94 ಕೋಟಿ ರು. ಕಂದಾಯ ಬೇಡಿಕೆ ಹಾಗೂ 4929.98 ಕೋಟಿ ರು. ಆದಾಯ ನಿರೀಕ್ಷಿಸಲಾಗಿದ್ದು, 351.96 ಕೋಟಿ ರು. ಕೊರತೆ ಉಂಟಾಗಲಿದೆ. ಪ್ರತಿ ಯುನಿಟ್‌ಗೆ ಸರಾಸರಿ 8.91 ರು. ವಿದ್ಯುತ್‌ ಸರಬರಾಜು ವೆಚ್ಚವಾಗಲಿದ್ದು, ಹಾಲಿ ದರಗಳಲ್ಲಿ ಸರಾಸರಿ 8.32 ರು. ಆದಾಯ ನಿರೀಕ್ಷಿಸಲಾಗಿದೆ. ಇದರಿಂದಾಗಿ 59 ಪೈಸೆ ದರ ಏರಿಕೆಯ ಅಗತ್ಯವಿದೆ ಎಂದು ಮೆಸ್ಕಾಂ ಎಂಡಿ ಪದ್ಮಾವತಿ ತಿಳಿಸಿದರು.