ಇಎಲ್‌ಐ ಯೋಜನೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ

| Published : Jul 09 2025, 12:18 AM IST

ಇಎಲ್‌ಐ ಯೋಜನೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಎಂಪ್ಲಾಯ್‌ಮೆಂಟ್‌ ಲಿಂಕ್ಡ್‌ ಇನ್ಸೆಂಟಿವ್‌- ಇಎಲ್‌ಐ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20ರಿಂದ 25 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪ್ರಾದೇಶಿಕ ಆಯುಕ್ತ ರಾಜೀಬ್‌ ಮುಖರ್ಜಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವ ಉದ್ಯೋಗ ಸಂಬಂಧಿತ ಪ್ರೋತ್ಸಾಹಧನ (ಎಂಪ್ಲಾಯ್‌ಮೆಂಟ್‌ ಲಿಂಕ್ಡ್‌ ಇನ್ಸೆಂಟಿವ್‌- ಇಎಲ್‌ಐ) ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20ರಿಂದ 25 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪ್ರಾದೇಶಿಕ ಆಯುಕ್ತ ರಾಜೀಬ್‌ ಮುಖರ್ಜಿ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಈ ನೂತನ ಯೋಜನೆಯಡಿ ಜಿಲ್ಲೆಯಲ್ಲಿ 2.5ರಿಂದ 3 ಸಾವಿರದಷ್ಟು ಸಂಸ್ಥೆಗಳ ನೋಂದಣಿ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ಮೂಲಕ 25 ಸಾವಿರದಷ್ಟು ಉದ್ಯೋಗಿಗಳಿಗೆ ಇದರ ಲಾಭ ದೊರೆಯುವ ನಿರೀಕ್ಷೆಯಿದೆ ಎಂದರು.

ಪ್ರಮುಖವಾಗಿ ಉತ್ಪಾದನಾ ವಲಯ ಸೇರಿದಂತೆ ಎಲ್ಲ ವಲಯಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಬೆಂಬಲಿಸಲು, ಉದ್ಯೋಗಾವಕಾಶದೊಂದಿಗೆ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಈ ಯೋಜನೆಯಿಂದ ಸಾಧ್ಯವಾಗಲಿದೆ. ಯೋಜನೆಯ ಕುರಿತು ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರಲ್ಲಿ ಜಾಗೃತಿ ಮೂಡಿಸಲು ಭವಿಷ್ಯನಿಧಿ ಸಂಘಟನೆಯ ಪ್ರಾದೇಶಿಕ ಕಚೇರಿಯಿಂದ ಜಿಲ್ಲೆಯ ವಿವಿಧೆಡೆ ಶಿಬಿರಗಳನ್ನು ಆಯೋಜಿಸುತ್ತಿದೆ. ಪ್ರತಿ ತಿಂಗಳು ಎರಡು ಶಿಬಿರಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ರಾಜೀಬ್‌ ಮುಖರ್ಜಿ ವಿವರಿಸಿದರು.

ಯೋಜನೆ ಪ್ರಯೋಜನವೇನು?:

ಇಎಲ್‌ಐ ಯೋಜನೆಯಡಿ ಉದ್ಯೋಗಕ್ಕೆ ಮೊದಲ ಬಾರಿ ಸೇರುವವರಿಗೆ ಒಂದು ತಿಂಗಳ ವೇತನ (ವಾರ್ಷಿಕ 15,000 ರು.ವರೆಗೆ- 2 ಕಂತು) ಪ್ರೋತ್ಸಾಹಧನ ರೂಪದಲ್ಲಿ ದೊರೆಯುತ್ತದೆ. ಅದೇ ರೀತಿ ಉದ್ಯೋಗದಾತರಿಗೆ ಒಂದು ಅಥವಾ ಎರಡು ವರ್ಷಗಳ ಅವಧಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಉತ್ಪಾದನಾ ವಲಯಕ್ಕೆ ಹೆಚ್ಚುವರಿ 2 ವರ್ಷಗಳವರೆಗೆ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

2024-25ರ ಕೇಂದ್ರ ಬಜೆಟ್‌ನಲ್ಲಿ ಯೋಜನೆ ಘೋಷಣೆಯಾಗಿದ್ದು, ಅ.1ರಿಂದ ಕಾರ್ಯಾರಂಭವಾಗಲಿದೆ. ದೇಶದ 4.1 ಕೋಟಿ ಯುವಕರಿಗೆ ಉದ್ಯೋಗವಕಾಶ ಸೃಷ್ಟಿಸುವ ಈ ಪ್ಯಾಕೇಜ್‌ಗಾಗಿ 2 ಲಕ್ಷ ಕೋಟಿ ರು. ಅನುದಾನ ಮೀಸಲಿರಿಸಲಾಗಿದೆ. ಇದರಲ್ಲಿ 99,446 ಕೋಟಿ ರು. ವೆಚ್ಚದೊಂದಿಗೆ 2 ವರ್ಷಗಳಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.

ಕನಿಷ್ಠ ವೇತನದಿಂದ 1 ಲಕ್ಷ ರು.ವರೆಗೆ ವೇತನ ಪಡೆಯುವ ಉದ್ಯೋಗಿಗಳು ಈ ಯೋಜನೆಯಡಿ ನೋಂದಾಯಿಸಲು ಅರ್ಹರಾಗಿರುತ್ತಾರೆ. ಈ ಎಲ್ಲ ಉದ್ಯೋಗಿಗಳಿಗೆ ಹಾಗೂ ಉದ್ಯೋಗದಾತರಿಗೂ ನಿಗದಿತ ಪ್ರೋತ್ಸಾಹಧನ ಸಿಗಲಿದೆ. ಉಳಿದೆಲ್ಲ ವಲಯಗಳಿಗೆ ಗರಿಷ್ಠ 2 ವರ್ಷ ಪ್ರೋತ್ಸಾಹಧನ ನೀಡಿದರೆ, ಉತ್ಪಾದನಾ ವಲಯಕ್ಕೆ ಮಾತ್ರ 3- 4 ವರ್ಷಗಳವರೆಗೆ ಯೋಜನೆಯ ಲಾಭ ದೊರೆಯಲಿದೆ ಎಂದು ಮುಖರ್ಜಿ ತಿಳಿಸಿದರು.

ಅಕೌಂಟ್ಸ್‌ ಆಫೀಸರ್‌ ಯು.ಪಾಂಡುರಂಗ ಕಿಣಿ, ಅಧಿಕಾರಿಗಳಾದ ನಾಗೇಂದ್ರ ಬಾಬು ಗುಟ್ಟಿ, ಬೆನ್ನಿ ಲೋಬೊ, ಅನಿತಾ ಆರ್‌. ಇದ್ದರು.