ಜವಳಿ ಉದ್ಯಮಕ್ಕೆ ಗ್ರಹಣ ಮಹಿಳಾ ಉದ್ಯೋಗಿಗಳಲ್ಲಿ ತಲ್ಲಣ!

| Published : Feb 06 2025, 11:47 PM IST

ಸಾರಾಂಶ

ನೇಕಾರಿಕೆ ಉದ್ಯಮದಲ್ಲಿ ಉಪ ಉದ್ಯೋಗಗಳಲ್ಲಿ ಸಕ್ರಿಯವಾಗಿದ್ದ ಮಹಿಳೆಯರು ಇದೀಗ ಜವಳಿ ಉದ್ಯಮ ಅವನತಿಯ ಹಾದಿ ಹಿಡಿದಿರುವುದರಿಂದ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ. ಹೀಗಾಗಿ ಅನಿವಾರ್ಯವಾಗಿ ಕುಲಕಸುಬು ತೊರೆದು ಇತರೆ ಉದ್ಯೋಗಗಳತ್ತ ಮುಖ ಮಾಡಿದ್ದಾರೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನೇಕಾರಿಕೆ ಉದ್ಯಮದಲ್ಲಿ ಉಪ ಉದ್ಯೋಗಗಳಲ್ಲಿ ಸಕ್ರಿಯವಾಗಿದ್ದ ಮಹಿಳೆಯರು ಇದೀಗ ಜವಳಿ ಉದ್ಯಮ ಅವನತಿಯ ಹಾದಿ ಹಿಡಿದಿರುವುದರಿಂದ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ. ಹೀಗಾಗಿ ಅನಿವಾರ್ಯವಾಗಿ ಕುಲಕಸುಬು ತೊರೆದು ಇತರೆ ಉದ್ಯೋಗಗಳತ್ತ ಮುಖ ಮಾಡಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜವಳಿ ಕ್ಷೇತ್ರದತ್ತ ಕೊಂಚವೂ ಗಮನ ಹರಿಸದಿರುವುದು ಉತ್ತರ ಕರ್ನಾಟಕದಲ್ಲಿ ಜವಳಿ ಕ್ಷೇತ್ರದ ಪ್ರಮುಖ ಜಿಲ್ಲೆಯಾಗಿರುವ ಬಾಗಲಕೋಟೆಯ ವಿವಿಧ ಪ್ರದೇಶಗಳ ಅದರಲ್ಲೂ ಬಹುಮುಖ್ಯವಾಗಿ ರಬಕವಿ-ಬನಹಟ್ಟಿ ತಾಲೂಕು ಸೇರಿದಂತೆ ಅವಳಿ ನಗರದಲ್ಲಿ ನೇಕಾರಿಕೆ ಚರಮಸ್ಥಿತಿಗೆ ತಲುಪುವಂತಾಗಿದೆ.

ಸೀರೆ ಉತ್ಪಾದನೆಯಲ್ಲಿ ಪುರುಷರಷ್ಟೇ ಸಮಾನವಾಗಿ ಮಹಿಳೆಯರು ನೇಯ್ಗೆ ಸೇರಿದಂತೆ ಉಪ ಉದ್ಯೋಗಗಳಾದ ಕೋನ್ ವೈಂಡಿಂಗ್, ಕಂಡಿಕೆ, ನೂಲು ಸುತ್ತುವುದು ಮತ್ತಿತರ ಕೆಲಸ ನಿರ್ವಹಿಸುತ್ತಿದ್ದರು. ಕಳೆದೆರಡು ವರ್ಷಗಳಿಂದ ಮಹಿಳೆಯರಿಂದ ನಡೆಯುವ ವೈಂಡರ್ ಕೆಲಸ ಸಂಪೂರ್ಣ ನಿಂತಿದೆ. ಬೆರಳಣಿಕೆಯಷ್ಟು ವೈಂಡರ್‌ಗಳು ಮಾತ್ರ ಸದ್ಯ ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಾರುಕಟ್ಟೆ ವೈಫಲ್ಯದ ಹಿನ್ನೆಲೆ ಸೀರೆ ಉತ್ಪಾದನೆಯೇ ಐಸಿಯು ಘಟಕದಲ್ಲಿರುವುದರಿಂದ ಉಪ ಉತ್ಪನ್ನಗಳ ಕಾಯಕ ಕೇಳುವವರರ್‍ಯಾರು? ಇದರಿಂದ ನೇಕಾರ ಮಹಿಳೆಯರಿಗೆ ದೊರೆಯುತ್ತಿದ್ದ ಮಜೂರಿಗೆ ಕತ್ತರಿ ಬೀಳುತ್ತಿದ್ದು, ನಿಯಮಿತ ನೇಯ್ಗೆಗೆ ಮಾತ್ರ ಅವಕಾಶ ಸಿಗುತ್ತಿರುವುದರಿಂದ ಬದುಕಲು ಬವಣೆ ಪಡುತ್ತಿರುವ ಕುಟುಂಬಗಳ ಮಹಿಳೆಯರು ಕೆಲಸಕ್ಕಾಗಿ ಹರಸಾಹಸ ಮಾಡುವಂತಾಗಿದೆ.

ವೈಂಡರ್ ಎಂದರೇನು?:ಸೀರೆ ತಯಾರಿಕಾ ಘಟಕದಲ್ಲಿನ ಮೊಟ್ಟ ಮೊದಲ ಕೆಲಸ ವೈಂಡರ್‌ದ್ದಾಗಿದೆ. ಕಚ್ಚಾ ನೂಲನ್ನು ಕೋನ್‌ಗಳನ್ನಾಗಿ ತಯಾರಿಸಿ ಮಗ್ಗಗಳ ಮೇಲೆ ಸೀರೆ ನೇಯ್ಗೆ ಮಾಡಲು ಭೀಮ್‌ಗಳ ತಯಾರಿಕೆ ಅತ್ಯಗತ್ಯವಾಗಿದೆ.

ಮಜೂರಿ ತೃಪ್ತಿದಾಯಕವಾಗಿಲ್ಲ : ನೂಲು ಸುತ್ತುವ (ವೈಂಡರ್) ಕಾಯಕ ಇಡೀ ದಿನ ಮಾಡಿದರೆ ₹೧೦೦ ರಿಂದ ₹೧೫೦ ಮಾತ್ರ ವೇತನ ಸಿಗುತ್ತದೆ. ನೂಲು ಸುತ್ತುವಿಕೆಯಲ್ಲಿ ಮಹಿಳೆಯರ ಪ್ರಧಾನ ಕಾಯಕವಾಗಿತ್ತು. ಇದೀಗ ನೇಕಾರಿಕೆಯೇ ದುಃಸ್ಥಿತಿಯಲ್ಲಿರುವ ಕಾರಣ ಸಂಪೂರ್ಣ ನೇಪಥ್ಯಕ್ಕೆ ಸರಿದಿದೆ.

ನೇಪಥ್ಯಕ್ಕೆ ಸರಿಯಲು ಕಾರಣ:

ಕಳೆದರಡು ವರ್ಷಗಳಿಂದ ದೊಡ್ಡ ದೊಡ್ಡ ಕಾರ್ಖಾನೆಗಳು ತಯಾರಿಸಿದ ಕೋನ್‌ಗಳೇ ಮಾರುಕಟ್ಟೆಯಲ್ಲಿವೆ. ಹೀಗಾಗಿ ನೇಕಾರ ಮಾಲೀಕರಿಗೆ ಮಜೂರಿಯೊಂದಿಗೆ ಕಿರಿಕಿರಿ ತಪ್ಪಿಸಲು ರೇಡಿಮೇಡ್‌ಗೆ ಮೊರೆ ಹೋಗುತ್ತಿದ್ದಾರೆ. ಸೀರೆ ಉತ್ಪಾದನೆ ಕುಸಿತದ ಕಾರಣ ಹೆಚ್ಚು ಬಂಡವಾಳ ಹೂಡಲು ಅಸಾಧ್ಯವಾಗಿದ್ದು, ಗುಣಮಟ್ಟವಿಲ್ಲದಿದ್ದರೂ ಬಹು ಬೇಗ ದೊರಕುತ್ತಿರುವುದು ಹಾಗೂ ಕಾರ್ಮಿಕರ ಅಗತ್ಯತೆಯೂ ಇಲ್ಲವಾಗಿದೆ.

ಅನ್ಯ ಉದ್ಯೋಗದತ್ತ ಮಹಿಳೆಯರು : ಈ ವೈಂಡರ್ ಕಾಯಕವನ್ನೇ ನಂಬಿದ್ದ ಮಹಿಳೆಯರಿಗೆ ಕೆಲಸ ದೊರಕದ ಕಾರಣ ಅಡುಗೆ ಬಡಿಸುವುದು, ಬಟ್ಟೆ ಅಂಗಡಿ, ಇನ್ನಿತರ ಚಿಕ್ಕಪುಟ್ಟ ವ್ಯಾಪಾರದಲ್ಲಿ ತೊಡಗಿಸಿಕೊಂಡು ಉಪಜೀವನ ನಡೆಸುವಂತಾಗಿದೆ.

ಮೂಲ ಕಾಯಕ ಮಾಯ : ಒಟ್ಟಾರೆ ತಲೆತಲಾಂತರದಿಂದ ಬಂದಿದ್ದ ವೈಂಡರ್ ಕಾಯಕಕ್ಕೆ ಸಂಪೂರ್ಣ ಇತಿಶ್ರೀ ಹಾಡುವಲ್ಲಿ ಕಾರಣವಾಗಿದ್ದು, ಮೂಲ ಕಾಯಕದಿಂದ ಬಹುತೇಕ ಕುಟುಂಬಗಳು ದೂರ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ನೇಕಾರಿಕೆ ಉಳಿದರೆ ಮಾತ್ರ ಇತರೆ ಉಪ ಉದ್ಯೋಗಗಳ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡದೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಣ್ಮುಚ್ಚಿ ಕುಳಿತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಾಡಿಯಿಸಿದೆ.

ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ಹಿನ್ನೆಲೆ ಸೀರೆಗಳ ಉತ್ಪಾದನೆ ಕುಂಠಿತವಾಗಿದೆ. ಲಕ್ಷಾಂತರ ಮೊತ್ತ ಬಂಡವಾಳ ಹೂಡಿಕೆ ಮತ್ತು ಕಚ್ಚಾವಸ್ತುಗಳ ಮಿತಿಮೀರಿದ ಬೆಲೆ ಏರಿಕೆಯಿಂದ ಜವಳಿ ಕ್ಷೇತ್ರ ತತ್ತರಗೊಂಡಿದೆ. ನೆರೆಯ ರಾಜ್ಯಗಳಲ್ಲಿ ನೇಕಾರಿಕೆಗೆ ನೀಡಿರುವ ಉತ್ತೇಜಕ ಕ್ರಮಗಳನ್ನುರಾಜ್ಯ ಸರ್ಕಾರವೂ ನೀಡಿದರೆ ಮಾತ್ರ ಜವಳಿ ಉದ್ಯಮ ಚೇತರಿಸಿಕೊಳ್ಳಲಿದೆ. ನೇಕಾರಿಕೆ ಪೂರಕ ಚಟುವಟಿಕೆಗಳಾದ ವೈಂಡಿಂಗ್, ನೂಲು ಸುತ್ತುವ ಕೆಲಸಗಳಿಗೆ ಬಂಡವಾಳ ಹೂಡಲು ಸಾಧ್ಯವಾಗದಿರುವುದು ಮತ್ತು ಬೇಡಿಕೆ ಇಲ್ಲದ್ದರಿಂದ ಕಡಿಮೆ ಉತ್ಪಾದನೆ ಇರುವುದರಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿದ್ಧ ವಸ್ತುಗಳ ಬಳಕೆ ಅನಿವಾರ್ಯವಾಗಿದೆ.

-ರವಿ. ದೇಸಾಯಿ, ಪ್ರಶಾಂತ ಪಾಲಭಾಂವಿ. ಮಾಲೀಕರು ಪಾಲ್‌ಗಿರಿ ಟೆಕ್ಸ್ಟೈಲ್ಸ್, ವಿದ್ಯಾನಗರ ರಬಕವಿ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜವಳಿ ಕ್ಷೇತ್ರದತ್ತ ತೋರುತ್ತಿರುವ ಅನಾದರಕ್ಕೆ ಕರ್ನಾಟಕದ ಮ್ಯಾಂಚೇಸ್ಟರ್ ಖ್ಯಾತಿಯ ಅವಳಿ ನಗರಗಳ ನೇಕಾರಿಕೆ ಉದ್ಯಮ ಜರ್ಝರಿತವಾಗಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಮಾರುಕಟ್ಟೆಯಲ್ಲಿ ಸೀರೆಗೆ ಬೇಡಿಕೆ ಕಡಿಮೆಯಾಗಿರುವುದು, ಕಂಡಿಕೆ, ವಾಂಡರ್ ಘಟಕಗಳಿಗೆ ಬೇಕಾದ ವಸ್ತುಗಳು ನೇರ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಣಖಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ನಿರುದ್ಯೋಗಿಗಳಾಗಿದ್ದು, ಕುಟುಂಬ ನಿರ್ವಹಣೆಗಾಗಿ ಬೇರೆ ಉದ್ಯೋಗದಲ್ಲಿ ತಡಗಿಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ನೇಕಾರಿಕೆ ಸಂಪೂರ್ಣ ಕಣ್ಮರೆಯಾಗುವ ಆತಂಕ ಮೂಡಿದೆ.

-ಶಿವಲಿಂಗ ಟಿರಕಿ. ಅಧ್ಯಕ್ಷರು, ಕರ್ನಾಟಕ ರಾಜ್ಯ ನೇಕಾರ ಸೇವಾ ಕೇಂದ್ರ.