ಕಲಬುರಗಿ ಕೌಶಲ್ಯ ಕೇಂದ್ರಕ್ಕೆ ಒತ್ತು

| Published : Dec 21 2023, 01:16 AM IST

ಸಾರಾಂಶ

ಕಲಬುರಗಿಯನ್ನು ಕೌಶಲ್ಯ ಕೇಂದ್ರವಾಗಿಸುತ್ತೇವೆಂದ ಪ್ರಿಯಾಂಕ್‌ ಖರ್ಗೆ ಬೆಂಗಳೂರು ಹೊರತುಪಡಿಸಿ ಅದ್ಹೇಗೆ ಕೌಶಲ್ಯವನ್ನ ರಾಜ್ಯದ ಇತರೆ ನಗರಗಳಿಗೆ ಕೊಂಡೊಯ್ಯುವ ಸಾಧ್ಯಾಸಾಧ್ಯತೆಗಳನ್ನೆಲ್ಲ ಪರಿಶೀಲಿಸಿ ಸಲಹೆ. ಸೂಚನೆ ನೀಡುವುದಕ್ಕೇ ಕೌಶಲ್ಯ ಸಲಹಾ ಪರಿಷತ್ತನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೌಶಲ್ಯ ಕರ್ನಾಟಕ ತಮ್ಮ ಸರಕಾರದ ಸಂಕಲ್ಪವೆಂದು ಪ್ರತಿಪಾದಿಸಿರುವ ಕೌಶಲ್ಯಾಭಿವೃದ್ಧಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಮತ್ತು ಐಟಿಬಿಟಿ, ಆರ್‌ಡಿಪಿಆರ್‌ ಸಚಿವ ಪ್ರಿಯಾಂಕ್‌ ಖರ್ಗೆ ಇದಕ್ಕಾಗಿ ಕೌಶಲ್ಯ ಸಲಹಾ ಪರಷತ್ತು (ಸ್ಕಿಲ್‌ ಅಡ್ವೈಸರಿ ಕೌನ್ಸಿಲ್‌) ರಚಿಸಲಾಗಿದೆ ಎಂದು ಹೇಳಿದ್ದಾರೆ.

ಕಲಬುರಗಿಯಲ್ಲಿರುವ ಆದರ್ಶ ಶಿಕ್ಷಣ ಸಂಸ್ಥೆಯ ಪ್ರೊ. ಪಿ.ಎಸ್. ಚೌಧರಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯ ಘಟಿಕೋತ್ಸವ ಕಾರ್ಯಕ್ರಮ‌ದಲ್ಲಿ ಭಾಗವಹಿಸಿ ಸಚಿವದ್ವಯರು ಮಾತನಾಡಿದರು.

ಕಲಬುರಗಿಯನ್ನು ಕೌಶಲ್ಯ ಕೇಂದ್ರವಾಗಿಸುತ್ತೇವೆಂದ ಪ್ರಿಯಾಂಕ್‌ ಖರ್ಗೆ ಬೆಂಗಳೂರು ಹೊರತುಪಡಿಸಿ ಅದ್ಹೇಗೆ ಕೌಶಲ್ಯವನ್ನ ರಾಜ್ಯದ ಇತರೆ ನಗರಗಳಿಗೆ ಕೊಂಡೊಯ್ಯುವ ಸಾಧ್ಯಾಸಾಧ್ಯತೆಗಳನ್ನೆಲ್ಲ ಪರಿಶೀಲಿಸಿ ಸಲಹೆ. ಸೂಚನೆ ನೀಡುವುದಕ್ಕೇ ಕೌಶಲ್ಯ ಸಲಹಾ ಪರಿಷತ್ತನ್ನು ರಚಿಸಲಾಗಿದೆ ಎಂದರು.

ಐಟಿಬಿಟಿ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಪರಿಣಿತರು, 51 ಕಂಪನಿಗಳು ಸೇರಿದಂತೆ ವಿವಿಧ ವಿಷಯಗಳ ಮೇಲಿನ 9 ಗುಂಪುಗಳನ್ನು ಮಾಡಲಾಗಿದ್ದು, ಈ ಪರಿಷತ್ತು ಅದಾಗಲೇ ಕಾರ್ಯತತ್ಪರವಾಗಿದ್ದು, ಜನೇವರಿ ಅಂತ್ಯದೊಳಗೆ ತನ್ನ ವರದಿ ಸಲ್ಲಿಸುವ ನಿರೀಕ್ಷೆ ಇದೆ. ಮುಂದಿನ ಪಂಚ ವರ್ಷಗಳಲ್ಲಿ ಕೌಶಲ್ಯ ಕರ್ನಾಟಕ ರಚನೆಗೆ ಏನೆಲ್ಲಾ ನೀಲ ನಕಾಶೆ ಬೇಕೋ ಅದೆಲ್ಲವೂ ಈ ವರದಿ ಹೊಂದಿರಲಿದೆ. ಇದನ್ನ ಸಾರ್ವಜನಿಕವಾಗಿಯೂ ಚರ್ಚೆಗೆ ಲಭ್ಯವಾಗಿಸುತ್ತೇವೆಂದು ಖರ್ಗೆ ಹೇಳಿದರು.

ಮಾನವ ಸಂಪನ್ಮೂಲ‌ ಈ ದೇಶದ ಪ್ರಬಲ ಆಸ್ತಿ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ, ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯ ತರಬೇತಿ ನೀಡುವ ಮೂಲಕ ಯುವಕರನ್ನು ಸಮರ್ಪಕ ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸಬೇಕು. ಬಲಿಷ್ಠ ಸಮಾಜ‌ ನಿರ್ಮಾಣ ಮಾಡುವಲ್ಲಿ ಇದು ಸಹಕಾರಿಯಾಗಲಿದೆ. ವಿದೇಶದಲ್ಲಿ ಭಾರತ ಸಂಪನ್ಮೂಲ ಅದರಲ್ಲೂ ಕರ್ನಾಟಕ ಕೌಶಲ್ಯ ತರಬೇತಿ ಹೊಂದಿದ ಮಾನವ ಸಂಪನ್ಮೂಲಕ್ಕೆ ಭಾರಿ ಬೇಡಿಕೆ ಇದೆ. ಇತ್ತೀಚೆಗೆ ಅಮೇರಿಕಾಕ್ಕೆ ತಾವು ಭೇಟಿ ನೀಡಿದಾಗ ಅಲ್ಲಿನ ಉದ್ಯಮಿಗಳು ತಮಗೆ ರಾಜ್ಯದ ಕೌಶಲ್ಯ‌ ತರಬೇತುದಾರರನ್ನು ಒದಗಿಸಿ ಎನ್ನುವ ಬೇಡಿಕೆ ಇಟ್ಟಿದ್ದಾರೆ ಎಂದರು.

ಇದೀಗ ಅಪ್ ಸ್ಕಿಲ್ಲಿಂಗ್‌ಗೆ ಹೆಚ್ಚು ಒತ್ತು‌ ನೀಡುತ್ತಿದೆ. ಐಟಿಐ ಮುಗಿಸಿದ ವಿದ್ಯಾರ್ಥಿಗಳು ರೀ ಸ್ಕಿಲ್ಲಿಂಗ್, ಅಪ್ ಸ್ಕಿಲ್ಲಿಂಗ್ ಆಗುವ ಮೂಲಕ ವಿದೇಶಕ್ಕೆ ಬೇಕಾಗುವ ತರಬೇತಿ ಹೊಂದಿದ ಯುವಕರನ್ನು ಒದಗಿಸಲು ಅನುಕೂಲವಾಗುತ್ತದೆ. ಬೆಂಗಳೂರಿನಲ್ಲಿ ಐ-ಫೋನ್ ತಯಾರಿಕ ಘಟಕ ಸ್ಥಾಪನೆ ಮಾಡುತ್ತಿದೆ. ಅದಕ್ಕೆ 48,000 ಜನ ತರಬೇತಿ ಹೊಂದಿದ‌ ಯುವಕರು ಬೇಕಾಗುತ್ತದೆ ಎಂದು ಕಂಪನಿ ಬೇಡಿಕೆ ಇಟ್ಟಿದೆ. ಒಂದು ಪ್ರಮುಖ ಅಂಶವೆಂದರೆ‌ ಈ ತರಹದ ಹೊಸ ಆವಿಷ್ಕಾರಗಳಿಗೆ ಚೀನಾ ನಮ್ಮ ದೇಶಕ್ಕಿಂತ ಮುಂದಿದೆ. ನಾವೂ ಕೂಡಾ ಈ ವಿಷಯದಲ್ಲಿ ಅವರಂತೆ ಆಧುನಿಕ ಜಗತ್ತಿಗೆ ಅನುಕೂಲವಾಗುವಂತ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಉತ್ಪನ್ನ ಮಾಡಿದಾಗ ಮಾತ್ರ ಚೀನಾಗೆ ಸರಿಗಟ್ಟಬಹುದು ಎಂದರು.

ಕಲಬುರಗಿಯಲ್ಲಿ ಸ್ಕಿಲ್ಲಿಂಗ್‌ ಇನ್ನೋವೇಷನ್‌ ಸೆಂಟರ್‌:

ಸಮಾರಂಭದಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಕೌಶಲ್ಯಾಭಿವೃದ್ಧಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಅವರು, ಕಲಬುರಗಿಯಲ್ಲೇ ಸ್ಕಿಲ್ಲಿಂಗ್ ಇನ್ನೋವೇಷನ್ ಹಾಗೂ ಇನ್ಕ್ಯೂಬೇಷನ್ ಸೆಂಟರ್ ನಿರ್ಮಾಣ ಮಾಡುವ ಆಲೋಚನೆ ಇದ್ದು ಶೀಘ್ರವೇ ರೂಪರೇಷೆ ಸಿದ್ಧಪಡಿಸಲಾಗುತ್ತದೆ ಎಂದರು.

ಈಗಾಗಲೇ ಸ್ಕಿಲ್ ಅಡ್ವೈಸರಿ ಕಮಿಟಿ ಸ್ಥಾಪಿಸಲಾಗಿದೆ. ನಮ್ಮ ರಾಜ್ಯದಲ್ಲಿರುವ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಬಳಸಿಕೊಂಡು ಕರ್ನಾಟಕವನ್ನು ''''ಸ್ಕಿಲ್ ಕ್ಯಾಪಿಟಲ್'''' ಮಾಡುತ್ತೇವೆ ಎಂದು ಸಚಿವರು ಘೋಷಿಸಿದರು.

ಕೆಲ ವರ್ಷಗಳ ಹಿಂದೆ ಕೈಗಾರಿಕ ತಯಾರಿಕೆಗೆ ಒತ್ತು ನೀಡಲಾಗುತ್ತಿತ್ತು. ಈಗ ತಾಂತ್ರಿಕತೆ ಹಾಗೂ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಭಾರತದ ಮಾನವ ಸಂಪನ್ಮೂಲಕ್ಕೆ ಹೆಚ್ಚು ಬೇಡಿಕೆ ಇದೆ. ಸ್ಲೋವಾಕಿಯಾ ದೇಶದವರು 2000 ತರಬೇತಾದ ಐಟಿಐ ಪದವಿದರ ಬೇಡಿಕೆ ಇಟ್ಟಿದ್ದಾರೆ. ತರಬೇತಿ ನೀಡಿ 200 ಅಭ್ಯರ್ಥಿಗಳನ್ನು ಕಳಿಸಲಾಗುತ್ತದೆ, ಅವರಲ್ಲಿ ಕಲಬುರಗಿ ಯಿಂದ 20 ವಿದ್ಯಾರ್ಥಿಗಳು ಸೇರಿದ್ದಾರೆಂದರು.

ಉತ್ಪಾದಕರು ಐಟಿಐ, ಡಿಪ್ಲೋಮ, ಹಾಗೂ ಇಂಜೀನಿಯರ್ ಪಾಸಾದವರಿಗೆ ತರಬೇತಿ ನೀಡಿ ಕೆಲಸ ಕೊಡಿಸುವುದು ಸರ್ಕಾರದ ಈಗಿನ ಆದ್ಯ ಕರ್ತವ್ಯವಾಗಿದೆ. ಸಂಪರ್ಕ ಸೇರಿದಂತೆ ಹೆಚ್ಚುವರಿ ತರಬೇತಿ ನೀಡುವುದಕ್ಕೆ ಒತ್ತು ನೀಡಲಾಗುತ್ತಿದೆ. ಈ ಬಗ್ಗೆ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಎಂ.ಸಿ.ಸುಧಾಕರ್ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದೇವೆಂದರು.

ರಾಜ್ಯದಲ್ಲಿ 250 ಸರ್ಕಾರಿ ಐಟಿಐ ಕಾಲೇಜುಗಳು, 33 ಜಿಟಿಟಿಸಿ, ಕೆಜಿಟಿಟಿಐ ಸಂಸ್ಥೆಗಳಿವೆ. ಇಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಕಲಬುರಗಿ ಯಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಸೇರಿದಂತೆ ಇತರೆ ತಾಂತ್ರಿಕ ಸಂಸ್ಥೆಗಳ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿಯಾಗಿವೆ. ಜಿಮ್ಸ್, ಜಯದೇವ ಸಂಸ್ಥೆಯ ವಿಸ್ತರಣೆ, ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಜೊತೆಗೆ ತಾಯಿ ಮತ್ತು ಮಗು ಆಸ್ಪತ್ರೆ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ರಾಜ್ಯ ಸರ್ಕಾರದ ಐದನೆಯ ಗ್ಯಾರಂಟಿ ಯೋಜನೆ, ಯುವನಿಧಿ ಯನ್ನು ಜ.12 ರಂದು ವಿವೇಕಾನಂದ ಜಯಂತಿಯ ದಿನದಂದು ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸಚಿವರು ಹೇಳಿದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ವಿಭಾಗೀಯ ಜಂಟಿ ನಿರ್ದೇಶಕರಾದ ರವೀಂದ್ರನಾಥ ಬಾಳಿ, ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು ಇದ್ದರು.ಐಟಿಐ ಮಕ್ಕಳಿಗೆ ಬಿಸಿಯೂಟ- ಸೈಕಲ್‌ ಸವಲತ್ತು ಕೊಡಿ:

ಆದರ್ಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವಿಜಯ ಕಲ್ಮಣಕರ್‌ ಮಾತನಾಡಿ, ಐಟಿಐ ಮಕ್ಕಳಿಗೆ ಕೆಕೆಆರ್‌ಡಿಬಿ ಅನುದಾನದಲ್ಲಿ ಬಿಸಿಯೂಟ ವ್ಯವಸ್ಥೆ ಮಾಡಬೇಕು, ಇವರಿಗೂ ಬೈಸಿಕಲ್‌ ಉಚಿತವಾಗಿ ನೀಡುವ ಮೂಲಕ ಅವರ ಶಿಕ್ಷಣಕ್ಕೆ ಕೊಡುಗೆ ಕೊಡಬೇಕು ಎಂದು ಸಚಿವರ ಮುಂದೆ ಬೇಡಿಕೆ ಮಂಡಿಸಿದರು. ಐಟಐ ಓದುವ ಮಕ್ಕಳು ಕಡು ಬಡವರಾಗಿದ್ದಾರೆ. ಗ್ರಾಮೀಣ ಭಾಗದಿಂದ ಬರುತ್ತಾರೆ. ಇವರಿಗೆ ಕಾಲೇಜು ಅವಧಿಯಲ್ಲಿ ಮಧ್ಯಾಹ್ನದ ಬಿಸಿಯೂಟ ದೊರೆತಲ್ಲಿ, ಹೋಗಿ ಬರಲು ಸೈಕಲ್‌ ಸಿಕ್ಕಲ್ಲಿ ಇನ್ನೂ ಹಚ್ಚು ಅನುಕೂಲವಾಗಲಿದೆ ಎಂದರು. ತಮ್ಮ ಚೌಧರಿ ಐಟಿಐ ಕಾಲೇಜಲ್ಲೇ ವಾರ್ಷಿಕ 600 ಮಕ್ಕಳು ಪ್ರವೇಶ ಪಡೆಯುತ್ತಿದ್ದಾರೆ. ತಮ್ಮ ಕಾಲೇಜು 1980 ರಿಂದ ಶುರುವಾಗಿದ್ದು ಇದೀಗ ಕ್ಯಾಂಪಸ್‌ ಸೆಲೆಕ್ಷನ್‌ ಹಂತಕ್ಕೂ ತಲುಪಿದೆ. 8 ಟ್ರೇಡ್‌, 32 ಘಟಕಗಳೊಂದಿಗೆ ಹೆಚ್ಚಿನ ಉನ್ನತಿ ಸಾಧಿಸಿದೆ ಎಂದರು.