ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಲೆನಾಡು ಕೃಷಿ ಸಮಸ್ಯೆ ನಿವಾರಗೆ ಹೆಚ್ಚಿನ ಸಂಶೋಧನೆ ನಡೆಸಿ ಕೃಷಿ ಕ್ಷೇತ್ರ ಸದೃಢಗೊಳಿಸಬೇಕಿದೆ ಎಂದು ಆನಂದಪುರ ಮುರುಘಾಮಠ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀ ಅಭಿಪ್ರಾಯಪಟ್ಟರು.ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಶುಕ್ರವಾರ ನವುಲೆ ಕೃಷಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ "ಪೌಷ್ಟಿಕ ಆಹಾರಕ್ಕಾಗಿ ವಿಕಸಿತ ಕೃಷಿ " ಎಂಬ ಧ್ಯೇಯ ವಾಕ್ಯಸ ಕೃಷಿ-ತೋಟಗಾರಿಕಾ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.ಇಂದು ಕೃಷಿ ಕ್ಷೇತ್ರ ಹೆಚ್ಚು ಚರ್ಚೆಗೆ ಒಳಪಬೇಕು. ಶರೀರಕ್ಕೆ ಅನ್ನ ಒದಗಿಸುವವನು ರೈತ. ಎಲ್ಲ ಮಠ ಮಾನ್ಯಗಳು ಕೃಷಿ, ಗೋ ಸಂರಕ್ಷಣೆ, ಅನ್ನ ದಾಸಹೋಹ, ಕೃಷಿ ಕಾಯಕ ಮಾಡುತ್ತಾ ಬಂದಿವೆ. ಇಂದಿನ ಕೃಷಿಯ ಸಂಕಷ್ಟಕ್ಕೆ ಕಾರಣ ಹಣದ ಹಪಾಹಪಿ. ಹಗಲಿರುಳು ಇನನ್ನೊಬ್ಬರಿಗಾಗಿ ಶ್ರಮಿಸುವ ವ್ಯಕ್ತಿ ಎಂದರೆ ಅದು ರೈತ. ಇವನಿಗೆ ಎಷ್ಟು ಋಣಿಯಾಗಿದ್ದರೂ ಕಡಿಮೆಯೇ. ಮಲೆನಾಡಿನ ಕೃಷಿ ಸಮಸ್ಯೆ ಕಡೆ ಸರ್ಕಾರ ವಿಶ್ವವಿದ್ಯಾಲಯಗಳು, ವಿಜ್ಞಾನಿಗಳು ಗಮನ ಹರಿಸಬೇಕು ಎಂದು ಸಲಹೆ ನೀಡಿದರು."ಪ್ರಗತಿಪರ ರೈತರ ಯಶೋಗಾಥೆ " ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ರೈತ ದೇಶದ ಆಸ್ತಿ. ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ರೈತರು ಅಭಿವೃದ್ಧಿ ಹೊಂದಬೇಕು. ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ತಂತ್ರಜ್ಞಾನ ಬೆಳೆದಿದೆ. ಭತ್ತದಲ್ಲಿ ಅನೇಕ ಹೊಸ ತಳಿ ಅಭಿವೃದ್ದಿಪಡಿಸಿದ್ದು, ಎಕರೆಗೆ 35 ಕ್ವಿಂಟಾಲ್ ಭತ್ತ ಬೆಳೆಯಬಹುದು. ಆದರೆ ಈಗ ಜನರು ತೋಟದ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದು, ಭತ್ತ ಬೆಳೆಯುತ್ತಿಲ್ಲ. 11ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯುತ್ತಿದ್ದು, ಭತ್ತದ ನಾಡು ಹೋಗಿ ಅಡಕೆ ಕಣಜ ಆಗಿದೆ ಎಂದರು.
ಯಾವುದೇ ರೈತ ಆತ್ಮಹತ್ಯೆ ಮಾಡಿಕೊಳ್ಳಲು ನಾವು ಬಿಡಬಾರದು. ಆದಾಯ ದುಪ್ಪಟ್ಟು ಮಾಡಬೇಕು. ಯಾವುದೇ ಸರ್ಕಾರ ರೈತರ ಧ್ವನಿಯಾಗಿ ಕೆಲಸ ಮಾಡಬೇಕು. ರೈತ ವಿಜ್ಞಾನಿಗಳು ಅಡಿಕೆ ಎಲೆಚುಕ್ಕಿ ರೋಗಕ್ಕೆ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬುಡಸಮೇತ ಕಿತ್ತುಹಾಕಬೇಕು. ಕೊಳೆ ರೋಗ ಸಹ ಹೆಚ್ಚಿದ್ದು, ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಪ್ರಾಕೃತಿಕ ವಿಕೋಪ ಬಾಧೆ ,ಇತರೆ ಕಾರಣಗಳಿಂದ ರೈತರು ಸಾಲದ ಸುಳಿಯಲ್ಲಿದ್ದಾರೆ. ಭಾರತ ದೇಶ ಆಹಾರ ಸ್ವಾವಲಂಬನೆ ಸಾಧಿಸಲು ಕಾರಣರಾದ ರೈತರ ಶ್ರಮವನ್ನು ಮರೆಯಬಾರದು. ರಾಷ್ಟ್ರದ ಆರ್ಥಿಕತೆಯಲ್ಲಿ ರೈತರ ಕೊಡುಗೆ ಅಪಾರ. ಕೃಷಿ ಸಂಶೋಧನೆ ಇನ್ನೂ ಸುಧಾರಣೆ ಆಗಬೇಕು . ವಿವಿಯಲ್ಲಿ ಸೌಲಭ್ಯ ಕೊರತೆ ಇದೆ. ವಿವಿ ಹಣಕಾಸಿನ ಕೊರತೆ ನೀಗಬೇಕು. ತಜ್ಞರ ನೇಮಕ ಆಗಬೇಕು ಎಂದರು.ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಎಲ್ಲರಿಗೆ ಆಹಾರ ಒದಗಿಸುವ ರೈತನಿಗೆ ಸರ್ಕಾರ ಎಲ್ಲ ರೀತಿಯ ಸೌಲಭ್ಯ ನೀಡಬೇಕು. ಕೃಷಿ ವಿಶ್ವವಿದ್ಯಾಲಯಗಳು ರೈತರ ಏಳ್ಗೆಗಾಗಿ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು.ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಸ ಕೋರ್ಸುಗಳನ್ನು ಆರಂಭಿಸಿದ್ದು, ರಾಷ್ಟದಲ್ಲೇ ಮೊದಲ ಬಾರಿಗೆ ಯುವ ರೈತರಿಗೆ ಡ್ರೋನ್ ತರಬೇತಿ ಆರಂಭಿಸಲಾಗಿದೆ ಎಂದರು.ಶಾಸಕಿ ಶಾರದಾ ಪೂರ್ಯಾನಾಯ್ಕ್, ರಾಜ್ಯ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ ಮಾತನಾಡಿದರು. ಆಡಳಿತ ಮಂಡಳಿ ಸದಸ್ಯಬಿ.ಕೆ. ಕುಮಾರಸ್ವಾಮಿ, ಕೃಷಿಕ ಸಮಾಜದ ಅಧ್ಯಕ್ಷ ನಾಗರಾಜ್, ಪಶು ಕಾಲೇಜ್ ಡೀನ್ ವೈ.ಎಚ್.ನಾಗರಾಜ್, ನಗರದ ಮಹಾದೇವಪ್ಪ ಅಧಿಕಾರಿಗಳು, ವಿವಿ ಆಡಳಿತ ಮಂಡಳಿ ಸದಸ್ಯರು ರೈತರು, ಉದ್ಯಮಿಗಳು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.
ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ರೈತ ಮಹಿಲೆಯರಿಗೆ ಶ್ರೇಷ್ಠ ರೈತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಾಗೂ ವಿವಿಧ ತಾಂತ್ರಿಕ ಕೈಪಿಡಿಗಳನ್ನು ಬಿಡುಗಡೆಗೊಳಿಸಲಾಯಿತು.ಶಿವಮೊಗ್ಗ: ನಗರದ ನವುಲೆಯಲ್ಲಿರುವ ಕೃಷಿ ಮತ್ತು ತೋಟಗಾರಿಕಾ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಕೃಷಿ-ತೋಟಗಾರಿಕಾ ಮೇಳದಲ್ಲಿ ಅವ್ಯವಸ್ಥೆಯೇ ಎದ್ದು ಕಾಣುತ್ತಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಸರುಮಯವಾದ ವಿವಿ ಆವರಣ: ಶುಕ್ರವಾರದಿಂದ ಸೋಮವಾರದವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಬೃಹತ್ ಕೃಷಿ-ತೋಟಗಾರಿಕಾ ಮೇಳ ಮೊದಲ ದಿನವೇ ಅನ್ನದಾತರ ಕೆಂಗಣಿಗೆ ಗುರಿಯಾಗಿದೆ. ವಿವಿ ಆವರಣವು ಮಳೆ ಸುರಿದು ಕೆಸರುಮಯವಾಗಿತ್ತು. ಕೃಷಿ ಕಾಲೇಜು ಆವರಣದಲ್ಲಿ ಕೊಳಚೆ ನೀರಿನ ವಾಸನೆ ಬರುತ್ತಿದ್ದ ಕಾರಣ ಮಹಿಳೆಯರು ಮೂಗು ಮುಚ್ಚಿಕೊಂಡು ತೆರಳುತ್ತಿದ್ದದ್ದು ಕಂಡು ಬಂತು. ಮಳೆಯ ಮುನ್ಸೂಚನೆ ಇದ್ದರೂ ಕೂಡ ಆಯೋಜಕರು ಅದನ್ನು ಸಮರ್ಥವಾಗಿ ನಿರ್ವಹಿಸಿಲ್ಲ. ಹೀಗಾಗಿ ಆವರಣ ಕೆಸರುಮಯವಾಗಿದ್ದು, ಗದ್ದೆಯಲ್ಲಿ ಓಡಾಡಿದ ಅನುಭವ ವಾಗುತ್ತಿದೆ. ಇಂದು ಕೂಡ ರಸ್ತೆಗಳ ರಿಪೇರಿ ಮಾಡುತ್ತಿದ್ದಾರೆ ಎಂದು ಸ್ವಾಲ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.ಮೇಳದಲ್ಲಿ 200ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ನಿರ್ಮಿಸಲಾಗಿದೆ. ಕೃಷಿ ಸಂಬಂಧಿಸಿದಂತೆ ವಿವಿಧ ತಳಿಗಳು ಕೃಷಿ ಉಪಕರಣಗಳು, ನೂತನ ಆವಿಷ್ಕಾರಗಳು, ರೈತರಿಗೆ ಬೇಕಾದ ಉಪಕರಣಗಳ ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ಇದರ ಜತೆಗೆ ಗೊಬ್ಬರ ಮತ್ತು ಕ್ರಿಮಿನಾಶಕಗಳ ಮಾಹಿತಿ ಕೇಂದ್ರ, ಹೈನುಗಾರಿಕೆ ಹಾಗೂ ಇತರೆ ವಿಷಯಗಳಿಗೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಾತ್ಯಕ್ಷತೆ ಕೂಡ ಮೇಳದಲ್ಲಿ ಇರಲಿದೆ.ಸಚಿವರು ಗೈರು: ನಗರದ ನವುಲೆ ಕೃಷಿ ಕಾಲೇಜು ಆವರಣದಲ್ಲಿ ಪೌಷ್ಟಿಕ ಆಹಾರಕ್ಕಾಗಿ ವಿಕಸಿತ ಕೃಷಿ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ್ದ ಕೃಷಿ-ತೋಟಗಾರಿಕಾ ಮೇಳದ ಉದ್ಘಾಟನೆ ಸಮಾರಂಭದಲ್ಲಿ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಬಿ.ಕೆ. ಸಂಗಮೇಶ್ ಸೇರಿ ಹಲವರು ಗೈರು ಹಾಜರಾಗಿದ್ದರು.
ಗಮನ ಸೆಳೆದ ವಿವಿಧ ಮಳಿಗೆಗಳುಕೃಷಿ ತೋಟಗಾರಿಕೆ ಮೇಳದಲ್ಲಿ ರಾಜ್ಯದಲ್ಲಿನ ಹಲವು ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆಗಳು ವಿಭಿನ್ನ ಮಳಿಗೆಗಳ ಮೂಲಕ ರೈತರನ್ನು ಗಮನ ಸೆಳೆದವು. ಕೀಟ ಪ್ರಪಂಚದಲ್ಲಿ ವಿಭಿನ್ನ ಶೈಲಿಯಲ್ಲಿ 30 ಪ್ರಭೇದ ರೇಷ್ಮೆ ಹುಳು ಗೂಡಿನ ತ್ಯಾಜ್ಯದಿಂದ ಮಾಡಿದ ಹಾರಗಳು ಗಮನ ಸೆಳೆದವು. ಕಾಲೇಜ್ ಆಪ್ ಅಗ್ರಿಕಲ್ಚರ್ ಮೂಡಿಗೆರೆ ಪೌಷ್ಟಿಕ ಆಹಾರಕ್ಕಾಗಿ ವಿಕಸಿತ ಕೃಷಿ ಮತ್ತು ಪೋಷಣ ವಿಭಾಗದಲ್ಲಿ ವಿಶಿಷ್ಟವಾಗಿ ಹಲಸಿನ ಹಣ್ಣು, ಬೀಜದ ಪುಡಿ, ಬಿಸ್ಕೆಟ್ ಮತ್ತು ವಿವಿಧ ತಿನಿಸುಗಳ ಮಳಿಗೆ ಹಾಕಿದ್ದರು. ವಿವಿಧ ರೀತಿಯ ಆಹಾರ ಉತ್ಪನ್ನ, ಸಮಗ್ರ ಜಲಾನಯನ ಅಭಿವೃದ್ಧಿ, ಜೇನು ಕೃಷಿ, ಅಣಬೆ ಕೃಷಿ, ಮೀನುಗಾರಿಕೆ ಮಳಿಗೆ, ಸಿರಿದಾನ್ಯ ಮಳಿಗೆ ವಿವಿಧ ರೀತಿಯ ಬಾಳೆ ಅಡಕೆ, ವಿವಿಧ ಯಂತ್ರೋಪಕರಣ, ಸಾವಯವ ಗೊಬ್ಬರಗಳು, ವಿವಿಧ ರೀತಿಯ ನರ್ಸರಿ ಸಸ್ಯ ತಳಿಗಳು ಪ್ರದರ್ಶನ ಗೊಂಡವು. ರೈತರು ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.