ಸಾರಾಂಶ
ಯಾದಗಿರಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಪ್ರತಿಯೊಬ್ಬ ಮಹಿಳೆಯು ಸ್ವಂತ ದುಡಿಮೆಗೆ ಹೆಚ್ಚು ಒತ್ತು ನೀಡುವುದು ಹಾಗೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆದುಕೊಳ್ಳಲು ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರು ಮುಂದೆ ನಾನೇನು ಆಗಬೇಕೆಂಬುದನ್ನು ಈಗಲೇ ನಿರ್ಧಾರ ಮಾಡಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಹೇಳಿದರು.ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ತಾವು ಸ್ವಾವಲಂಬಿಗಳಾದ ನಂತರ ಮದುವೆ ಕಡೆ ಗಮನಹರಿಸಲು ತಿಳಿಸಿದರು.
ಎಲ್ಲರೂ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಣವು ಆಧುನಿಕ ಕಾಲದಲ್ಲಿ ಪ್ರತಿಯೊಬ್ಬರಿಗೂ ಒಂದು ಅಸ್ತ್ರವಿದ್ದಂತೆ, ಈ ಅವಕಾಶದಿಂದ ಯಾರು ವಂಚಿತರಾಗ ಕೂಡದು. ಒಂದು ವೇಳೆ ವಂಚಿತರಾದರೆ ಮುಂದೆ ಉದ್ಭವವಾಗಬಹುದಾದ ಸಮಸ್ಯೆಗಳ ಕುರಿತು ತಿಳಿಸಿದರು. ಸಮಾಜದಲ್ಲಿ ಹೆಣ್ಣು ಮಗಳನ್ನು ಅತ್ಯಂತ ಗೌರವದಿಂದ ಕಾಣಬೇಕಾದರೆ ಮಹಿಳೆಯರು ಸಬಲೀಕರಣಗೊಳ್ಳಬೇಕು. ಉದ್ಯೋಗವಂತರಾಗಬೇಕೆಂದರು. ವಿದ್ಯಾರ್ಥಿ ಜೀವನದ ಹಲವು ಘಟನೆ ಮೆಲುಕು ಹಾಕಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಸೆಲೆಯಾಗಿ ಒಬ್ಬ ಆದರ್ಶ ಐಎಎಸ್ ಅಧಿಕಾರಿಯಾಗಿ ಒಬ್ಬ ಆದರ್ಶ ಮಹಿಳೆಯಾಗಿ ಅವರು ತಿಳಿಹೇಳಿದರು.ಯಾದಗಿರಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ಸರ್ವೋದಯ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಾಗರ್ ಹೂಗಾರ್ ಸ್ವಾಗತಿಸಿದರು. ಡಾ. ಹರೀಶ್ ರಾಠೋಡ್ ನಿರೂಪಿಸಿದರು. ಡಾ. ಅನುಸೂಯಾ ಪಾಟೀಲ್ ವಂದಿಸಿದರು.