ಕನ್ನಡಗರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು: ಡಾ.ಪದ್ಮಪ್ರಸಾದ್

| Published : Feb 02 2024, 01:00 AM IST

ಸಾರಾಂಶ

ರಾಜ್ಯದಲ್ಲಿ ವಿವಿಧ ಉದ್ದಿಮೆಗಳಲ್ಲಿ ಕನ್ನಡಗರಿಗೆ ಉದ್ಯೋಗವಕಾಶ ಕಲ್ಪಿಸುವ ಕುರಿತು ಡಾ.ಸರೋಜಿನಿ ಮಹಿಷಿ ವರದಿ ಪ್ರಕಟವಾಗಿ 40 ವರ್ಷಗಳೇ ಕಳೆದಿವೆ. ಆದರೆ, ಇದರ ಪರಿಣಾಮ ಮಾತ್ರ ಶೂನ್ಯ. ಇದಕ್ಕೆ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯೇ ಮುಖ್ಯ ಕಾರಣ. ಪರನಾಡಿನವರು ಇಲ್ಲಿ ಸ್ಥಾಪಿಸಿರುವ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಕ್ಕಿರುವುದು ಕೇವಲ ಶೇ.20ರಷ್ಟು ಮಾತ್ರ. ಅದು ಸಾಫ್ಟ್‌ವೇರ್‌ ಉದ್ದಿಮೆಗಳಲ್ಲಿ. ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿ ಮೇಲೆ ಆಗುತ್ತಿರುವ ಆಕ್ರಮಣ ಎಂದು ಶಿವಮೊಗ್ಗ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೆಳನದ ಸಮ್ಮೇಳನಾಧ್ಯಕ್ಷ ಡಾ. ಎಸ್.ಪಿ. ಪದ್ಮಪ್ರಸಾದ್ ವಿಷಾದ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯದಲ್ಲಿ ವಿವಿಧ ಉದ್ದಿಮೆಗಳಲ್ಲಿ ಕನ್ನಡಗರಿಗೆ ಉದ್ಯೋಗವಕಾಶ ಕಲ್ಪಿಸುವ ಕುರಿತು ಡಾ.ಸರೋಜಿನಿ ಮಹಿಷಿ ವರದಿ ಪ್ರಕಟವಾಗಿ 40 ವರ್ಷಗಳೇ ಕಳೆದಿವೆ. ಆದರೆ, ಇದರ ಪರಿಣಾಮ ಮಾತ್ರ ಶೂನ್ಯ ಎಂದು ಶಿವಮೊಗ್ಗ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೆಳನದ ಸಮ್ಮೇಳನಾಧ್ಯಕ್ಷ ಡಾ. ಎಸ್.ಪಿ. ಪದ್ಮಪ್ರಸಾದ್ ವಿಷಾದ ವ್ಯಕ್ತಪಡಿಸಿದರು.

ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗುರುವಾರ ಆಯೋಜಿಸಿದ್ದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಅವರು ಮಾತನಾಡಿ, ಇದಕ್ಕೆ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯೇ ಮುಖ್ಯ ಕಾರಣ. ಪರನಾಡಿನವರು ಇಲ್ಲಿ ಸ್ಥಾಪಿಸಿರುವ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಕ್ಕಿರುವುದು ಕೇವಲ ಶೇ.20ರಷ್ಟು ಮಾತ್ರ. ಅದು ಸಾಫ್ಟ್‌ವೇರ್‌ ಉದ್ದಿಮೆಗಳಲ್ಲಿ. ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿ ಮೇಲೆ ಆಗುತ್ತಿರುವ ಆಕ್ರಮಣ ಎಂದು ಬೇಸರ ವ್ಯಕ್ತಪಡಿಸಿದರು.

ಇಂಗ್ಲಿಷ್‌ ವ್ಯಾಮೋಹದಿಂದ ಕನ್ನಡ ಶಾಲೆಗಳಿಗೆ ಕುತ್ತು:

ಕರ್ನಾಟಕದಲ್ಲಿ ಕನ್ನಡವನ್ನು ದುರ್ಬಲಗೊಳಿಸುವಲ್ಲಿ ಕನ್ನಡಿಗರ ಪಾತ್ರವೂ ಇದೆ. ಇದರಿಂದಲೇ ಕನ್ನಡ ಶಾಲೆಗಳು ಸೊರಗಿವೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ನಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯ ಎಂಬ ಭ್ರಮೆಯಲ್ಲಿ ಪೋಷಕರಿದ್ದಾರೆ. ಇದರಿಂದಾಗಿ ಕನ್ನಡ ಶಾಲೆಗಳಿಗೆ ಕುತ್ತುಬಂದಿದೆ ಎಂದರು.

ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ 43 ಕನ್ನಡ ಶಾಲೆಗಳು ಮುಚ್ಚಿಹೋಗಿವೆ. ಇದು ಅತ್ಯಂತ ವಿಷಾದದ ಸಂಗತಿಯಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು ಈ ಬಗ್ಗೆ ಮನವಿ ಮಾಡಿದ್ದಾರೆ ನಿಜ. ಆದರೆ, ಇಲಾಖೆಯವರು ಯಾರನ್ನು ಬಲವಂತ ಮಾಡಲು ಬರುವುದಿಲ್ಲ. ಹೀಗೆಯೇ ರಾಜ್ಯಾದ್ಯಂತ ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿವೆ. ಇದರ ನಡುವೆಯೂ ಸರ್ಕಾರಿ ಶಾಲೆಗಳ ಉನ್ನತೀಕರಣ ಸಮಾಧಾನದ ವಿಷಯ ಎಂದು ಹೇಳಿದರು.

ಪಾಂಡಿತ್ಯ ಪ್ರತಿಭೆ ಎನ್ನುವುದು ದಿನದಿನಕ್ಕೂ ಕ್ಷೀಣಿಸುತ್ತಿದೆ. ಇತಿಹಾಸವನ್ನು ನಾವು ಮರೆಯುತ್ತಿದ್ದೇವೆ. ನಮ್ಮ ಶಿಕ್ಷಣ ವ್ಯವಸ್ಥೆ ಹಳೆಗನ್ನಡ, ಛಂದಸ್ಸು, ವ್ಯಾಕರಣ, ಶಾಸನ ಶಾಸ್ತ್ರ ಹೀಗೆ ಹಲವು ವಿಷಯಗಳನ್ನು ಮರೆತುಬಿಟ್ಟಿದೆ. ಪರಭಾಷೆಗಳ ಮುನ್ನುಗ್ಗುವಿಕೆ, ಶಿಕ್ಷಕರ ನಿರ್ಲಕ್ಷ್ಯ, ಕನ್ನಡ ಮಾಧ್ಯಮದ ಪೋಷಕರ ಅನಾದರ ಇವೆಲ್ಲವೂ ಕನ್ನಡಕ್ಕೆ ಶಕ್ತಿ ತುಂಬಲು ಸಾಧ್ಯವಿಲ್ಲವಾಗಿದೆ. ಕನ್ನಡವೇ ನಮ್ಮ ಅಸ್ಮಿತೆ. ಆದರೆ, ಅದರ ಅನಾದರ ಸಲ್ಲದು ಎಂದರು.

ಸಮಸ್ಯೆಗಳ ಸಾಲಿನಲ್ಲಿ ಮಲೆನಾಡು:

ಪ್ರತಿಯೊಂದು ಜಿಲ್ಲೆಗೂ ಸಮಸ್ಯೆಗಳು ಇರುವಂತೆ ಶಿವಮೊಗ್ಗ ಜಿಲ್ಲೆಯನ್ನೂ ಕೆಲ ಸಮಸ್ಯೆಗಳು ಬಾಧಿಸುತ್ತಿವೆ. ಮುಳುಗಡೆಯಿಂದ ಬದುಕು ಕಳೆದುಕೊಂಡಿರುವ ಕುಟುಂಬಗಳಿಗೆ ಇನ್ನೂ ನೆಲೆ ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಅಡಕೆ ಕೊಳೆರೋಗ, ಕೆಎಫ್‌ಡಿ ಕಾಯಿಲೆ ರೋಗ ಪದೇಪದೆ ಬಾಧಿಸುತ್ತಿದೆ. ಈ ಸಮಸ್ಯೆಗಳಿಗೆ ಉತ್ತರ ಸಿಗಬೇಕಾಗಿದೆ. ಇದರ ನಡುವೆಯೂ ಒಂದಿಷ್ಟು ಪ್ರಗತಿಪರ ಕೆಲಸಗಳು ಆಗಿವೆ. ಕಾಲೇಜುಗಳ ಸಂಖ್ಯೆ ಹೆಚ್ಚಿದೆ, ರಸ್ತೆಗಳ ಸ್ಥಿತಿ ಉತ್ತಮಗೊಂಡಿದೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯುತ್ತಿವೆ ಎಂಬುದಷ್ಟೇ ಸಮಾಧಾನ ಎಂದರು.

18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಎಲ್.ಎನ್. ಮುಕುಂದರಾಜ್, ಪ್ರಭುತ್ವ ಮತ್ತು ಸಾಹಿತ್ಯದ ನಡುವೆ ತಿಕ್ಕಾಟಗಳು ನಡೆಯುತ್ತಿವೆ. ಇದಕ್ಕೆ ತಿಲಾಂಜಲಿ ಇಡಬೇಕಾಗಿದೆ. ಪ್ರಭುತ್ವವನ್ನು ಹೆಗಲ ಮೇಲೆ ಹೊತ್ತು ಕೂರುವ ಅವಶ್ಯಕತೆ ಇಲ್ಲ. ನಮ್ಮ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಸಂಘರ್ಷವನ್ನು ತರುತ್ತಾರೆ. ರಾಜಕಾರಣಿಗಳಿಗೆ ಈ ದೇಶ ಸುಭೀಕ್ಷಾವಾಗಿ ಇರುವುದು ಇಷ್ಟವಿಲ್ಲ. ಸಂವಿಧಾನವನ್ನು ಬಿಟ್ಟು ದೇವರು, ಧರ್ಮ, ಜಾತಿ, ಕೋಮುವಾದಗಳನ್ನು ನಡುವೆ ತಂದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಗ್ರಾಮ ಸುಮಾರು ₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದಕ್ಕೆ ಇನ್ನೂ ₹2.5 ಕೋಟಿ ಹಣ ಬೇಕಾಗಿದೆ. ಸರ್ಕಾರ ಸಹಾಯಕ್ಕೆ ಮುಂದಾಗಬೇಕು ಎಂದರು.

ಸಾಹಿತ್ಯ ಕ್ರಮಗಳಿಂದ ರಾಜಕಾರಣಿಗಳು ದೂರವಿರುತ್ತಾರೆ. ಸಾಹಿತ್ಯವೆಂದರೇ, ಅವರಿಗೆ ಅಸಡ್ಡೆಯಾಗಿದೆ. ಇಂದಿನ ಕಾರ್ಯಕ್ರಮಕ್ಕೆ ಯಾವ ರಾಜಕಾರಣಿಗಳು ಬಂದಿಲ್ಲ. ಆರ್.ಎಂ. ಮಂಜುನಾಥ್‍ ಗೌಡರೇ ನಮಗೆ ರಾಜಕಾರಣಿ ಆಗಿದ್ದಾರೆ. ನಮ್ಮ ಕೆಲವು ಬೇಡಿಕೆಗಳನ್ನು ಅವರೇ ಸರ್ಕಾರಕ್ಕೆ ಮುಟ್ಟಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಸಮೇಳಾನಾಧ್ಯಕ್ಷ ಲಕ್ಷ್ಮಣ ಕೊಡಸೆ ಅವರು ಸಮ್ಮೇಳಾನಾಧ್ಯಕ್ಷ ಡಾ. ಎಸ್.ಪಿ.ಪದ್ಮಾಪ್ರಸಾದ್ ಅವರಿಗೆ ಧ್ವಜ ಹಸ್ತಾಂತರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹಲಾಡಿ, ಪ್ರಮುಖರಾದ ಆಂಜನಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಡಾ. ಕೆ.ಆರ್. ಶ್ರೀಧರ್, ಶಂಕರ ನಾಯ್ಕ, ಹುಚ್ರಾಯಪ್ಪ, ಸ್ವಾಮಿ, ಗಣೇಶ್, ರಘು, ರಮೇಶ್‍ಶಟ್ಟಿ, ನವೀನ್‍ಕುಮಾರ್ ಮತ್ತಿತರರು ಇದ್ದರು. ಸಿ.ಎಂ.ನೃಪತುಂಗ ನಿರೂಪಿಸಿದರು. ಮಹಾದೇವಿ ಸ್ವಾಗತಿಸಿದರು.

- - - ಬಾಕ್ಸ್...

ತೆರೆದ ಜೀಪಿನಲ್ಲಿ ಮೆರವಣಿಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಎಸ್.ಪಿ. ಪದ್ಮಪ್ರಸಾದ್ ಅವರನ್ನು ಗೋಪಾಳದ ಆನೆ ಪ್ರತಿಮೆ ವೃತ್ತದಿಂದ ಸಾಹಿತ್ಯ ಗ್ರಾಮದವರಿಗೆ ಜಾನಪದ ಕಲಾ ತಂಡದೊಂದಿಗೆ ರಾಜಬೀದಿ ಉತ್ಸವ ಮೂಲಕ ಕರೆತರಲಾಯಿತು. ಮೆರವಣಿಗೆಯಲ್ಲಿ ಆದಿಚುಂಚನಗಿರಿ ಹಾಗೂ ರಾಮಕೃಷ್ಣ ವಿದ್ಯಾನಿಕೇತನ ಶಾಲೆ ಮ್ಕಕಳು ಭಾಗಿದ್ದರು. ಡೊಳ್ಳು ಕುಣಿತ, ನಾದಸ್ವರ ಜೊತೆಗೆ ತೆರದ ಜೀಪಿನಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.

ಸಾಹಿತ್ಯ ಸಮ್ಮೇಳನ ಅಂಗವಾಗಿ ಸಾಹಿತ್ಯ ಗ್ರಾಮದ ಆವರಣದಲ್ಲಿ ದೇಶಿಯ ಬಟ್ಟೆ. ರಾಗಿಯ ವಿವಿಧ ಬಗೆಯ ಖಾದ್ಯಗಳು, ವಿವಿಧ ಆಹಾರ ಮಳಿಗೆ, ಪುಸ್ತಕ, ಗೃಹಪಯೋಗಿ ಸೇರಿದಂತೆ ಇತರೆ ವಸ್ತುಗಳ ಸುಮಾರು 25 ಮಳಿಗೆಗಳು ನಿರ್ಮಿಸಲಾಗಿದ್ದು, ಮಳಿಗೆಗಳಿಗೆ ಸಾರ್ವಜನಿಕರು ಭೇಟಿ ನೀಡಿ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

- - - -1ಎಸ್‌ಎಂಜಿಕೆಪಿ03:

ಶಿವಮೊಗ್ಗ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಗುರುವಾರ ಆಯೋಜಿಸಿದ್ದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿಕಟಪೂರ್ವ ಸಮೇಳಾನಾಧ್ಯಕ್ಷ ಲಕ್ಷ್ಮಣ ಕೊಡಸೆ ಅವರು ಸಮ್ಮೇಳಾನಾಧ್ಯಕ್ಷ ಡಾ. ಎಸ್.ಪಿ.ಪದ್ಮಾಪ್ರಸಾದ್ ಅವರಿಗೆ ಧ್ವಜ ಹಸ್ತಾಂತರಿಸಿದರು.

- - - -1ಎಸ್‌ಎಂಜಿಕೆಪಿ04:

ಶಿವಮೊಗ್ಗ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಗುರುವಾರ ಆಯೋಜಿಸಿದ್ದ 18ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳಾನಾಧ್ಯಕ್ಷ ಡಾ. ಎಸ್.ಪಿ.ಪದ್ಮಾಪ್ರಸಾದ್ ಅವರನ್ನು ತೆರದ ಜೀಪಿನಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. - - - -1ಎಸ್‌ಎಂಜಿಕೆಪಿ05:

ಶಿವಮೊಗ್ಗ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಗುರುವಾರ ಆಯೋಜಿಸಿದ್ದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಮಿಸಲಾಗಿದ್ದ ಪುಸ್ತಕ ಮಳಿಗೆಗಳಲ್ಲಿ ಪುಸ್ತಕ ಖರೀದಿಸುತ್ತಿರುವ ವಿದ್ಯಾರ್ಥಿ.

- - - -1ಎಸ್‌ಎಂಜಿಕೆಪಿ06:

ಶಿವಮೊಗ್ಗ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗುರುವಾರ ಆಯೋಜಿಸಿದ್ದ 18ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳಾನಾಧ್ಯಕ್ಷ ಡಾ. ಎಸ್.ಪಿ. ಪದ್ಮಾಪ್ರಸಾದ್ ಉದ್ಘಾಟಿಸಿದರು.