ವಿಶೇಷ ಸಂದರ್ಭಗಳಲ್ಲಿ ಮುಂಗಡ ಟಿಕೆಟ್‌ ಇದ್ದರೆ ಮಾತ್ರ ರೈಲು ನಿಲ್ದಾಣದೊಳಗೆ ಪ್ರವೇಶ?

| Published : Mar 20 2025, 01:18 AM IST

ವಿಶೇಷ ಸಂದರ್ಭಗಳಲ್ಲಿ ಮುಂಗಡ ಟಿಕೆಟ್‌ ಇದ್ದರೆ ಮಾತ್ರ ರೈಲು ನಿಲ್ದಾಣದೊಳಗೆ ಪ್ರವೇಶ?
Share this Article
  • FB
  • TW
  • Linkdin
  • Email

ಸಾರಾಂಶ

ರಶ್‌ ಆಗುವಂತಹ ವಿಶೇಷ ಸಂದರ್ಭಗಳಲ್ಲಿ ಬರೀ ಮುಂಗಡ ಟಿಕೆಟ್‌ ಪಡೆದವರನ್ನಷ್ಟೇ ನಿಲ್ದಾಣದೊಳಗೆ ಬಿಡಲು ಕ್ರಮ ಕೈಗೊಳ್ಳುವುದು. ಯಾವ್ಯಾವ ನಿಲ್ದಾಣಗಳಲ್ಲಿ ಈ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಗಂಭೀರ ಚಿಂತನೆ ನಡೆದಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಮಹಾಕುಂಭ ಮೇಳದ ವೇಳೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಂಥ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಲು ರೈಲ್ವೆ ಮಂಡಳಿ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ. ರಶ್‌ ಆಗುವಂತಹ ವಿಶೇಷ ಸಂದರ್ಭಗಳಲ್ಲಿ ಬರೀ ಮುಂಗಡ ಟಿಕೆಟ್‌ ಪಡೆದವರನ್ನಷ್ಟೇ ನಿಲ್ದಾಣದೊಳಗೆ ಬಿಡಲು ಕ್ರಮ ಕೈಗೊಳ್ಳುವುದು. ಯಾವ್ಯಾವ ನಿಲ್ದಾಣಗಳಲ್ಲಿ ಈ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಗಂಭೀರ ಚಿಂತನೆ ನಡೆದಿದೆ.

ಈ ಪ್ರಶ್ನೆಗಳಿಗೆ ಹೌದು ಎಂಬ ಉತ್ತರ ರೈಲ್ವೆ ಇಲಾಖೆ ಮೂಲಗಳಿಂದ ಬರುತ್ತದೆ.

ರೈಲು ಸಾಮೂಹಿಕ ಸಾರಿಗೆಯ ಪ್ರಮುಖ ವ್ಯವಸ್ಥೆ. ವಿಶೇಷ ಸಂದರ್ಭದಲ್ಲಿ ವಿಶೇಷ ರೈಲು ಓಡಿಸಲಾಗುತ್ತದೆ. ಆಗ ಸಹಜವಾಗಿ ರಶ್‌ ಆಗುತ್ತದೆ. ಎಷ್ಟರ ಮಟ್ಟಿಗೆ ರಶ್‌ ಎಂದರೆ ರೈಲುಗಳಲ್ಲಿ ಕುಳಿತುಕೊಳ್ಳಲು ಜಾಗ ಸಿಗದು. ಟಾಯ್ಲೆಟ್‌ ಬದಿಯಲ್ಲೋ, ಬಾಗಿಲು ಸಂದಿಗೊಂದಿಗಳಲ್ಲೂ ಜನರು ಮಲಗಿ ಪ್ರಯಾಣಿಸುವುದನ್ನು ನೋಡುತ್ತೇವೆ. ಆಗ ರೈಲ್ವೆ ಏರಿ ಸೀಟು ಹಿಡಿಯಬೇಕೆಂಬ ಉಮೇದಿಯಲ್ಲಿ ಪ್ರಯಾಣಿಕರ ನಡುವೆ ನೂಕು ನುಗ್ಗಾಟ ನಡೆಯುವುದೂ ಮಾಮೂಲು. ಮಹಾಕುಂಭ ಮೇಳದ ವೇಳೆ ದೆಹಲಿ ನಿಲ್ದಾಣದಲ್ಲಿ ಕಾಲ್ತುಳಿತ ಆಗಿರುವುದು ಇದೇ ಕಾರಣಕ್ಕೆ. ಆ ಕಾಲ್ತುಳಿತದ ವೇಳೆ 18 ಜನ ಮೃತಪಟ್ಟಿದ್ದರು. ಈ ಘಟನೆ ರೈಲ್ವೆ ಮಂಡಳಿಯನ್ನು ದಿಟ್ಟ ಹೆಜ್ಜೆ ಇಡುವಂತೆ ಮಾಡಿದೆ.

ಮುಂಜಾಗ್ರತಾ ಕ್ರಮ

ದೆಹಲಿ ಘಟನೆ ನಡೆದ ಮರುದಿನದಿಂದ ಕಾಯ್ದಿರಿಸದ ಟಿಕೆಟ್‌ಗಳನ್ನೆಲ್ಲ ರದ್ದು ಮಾಡಿದ ರೈಲ್ವೆ ಇಲಾಖೆ, ಮುಂಗಡ ಟಿಕೆಟ್‌ ಪಡೆದುಕೊಂಡೇ ಹೊರಡಬೇಕು. ಜತೆಗೆ ಯಾರು ಟಿಕೆಟ್‌ ಕಾಯ್ದಿರಿಸಿರುತ್ತಾರೋ ಅವರಿಗಷ್ಟೇ ರೈಲ್ವೆ ನಿಲ್ದಾಣಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಅದೇ ಮಾದರಿಯನ್ನು ವಿಶೇಷ ಸಂದರ್ಭದಲ್ಲಿ ಎಲ್ಲಕಡೆ ಅನುಸರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆಯ ಉನ್ನತ ಮಟ್ಟದಲ್ಲಿ ಚರ್ಚೆ ಕೂಡ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

ಯಾವ್ಯಾವ ವಲಯಗಳಲ್ಲಿ ಎಷ್ಟೆಷ್ಟು ನಿಲ್ದಾಣಗಳಿವೆ? ಫುಟ್‌ ಫಾಲ್‌ ಎಷ್ಟಿದೆ. ಅಂದರೆ ಯಾವ್ಯಾವ ನಿಲ್ದಾಣಗಳಲ್ಲಿ ಸಾಮಾನ್ಯ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಎಷ್ಟಿರುತ್ತದೆ. ಹಬ್ಬ ಹರಿದಿನಗಳ ವೇಳೆಗಳಲ್ಲಿ ಈ ಸಂಖ್ಯೆ ಎಷ್ಟು ಪಟ್ಟು ಹೆಚ್ಚಾಗುತ್ತದೆ. ಆ ಸಂದರ್ಭದಲ್ಲಿ ನೂಕು ನುಗ್ಗಾಟ ಆಗುವಂತಹ ನಿಲ್ದಾಣಗಳು ಎಷ್ಟು? ಎಂಬುದರ ಲೆಕ್ಕವನ್ನು ಮಂಡಳಿ ಹಾಕುತ್ತಿದೆ. ಅದರ ಆಧಾರದ ಮೇಲೆ ಕಾಲ್ತುಳಿತ ಆಗದಂತೆ ಏನೇನು ಮಾಡಬಹುದು ಎಂಬುದರ ಚರ್ಚೆ ನಡೆದಿದೆ.

ನೂಕು ನುಗ್ಗಾಟ ಆಗುವಂತಹ ನಿಲ್ದಾಣಗಳಲ್ಲಿ ವಿಶೇಷ ಸಂದರ್ಭದಲ್ಲಿ ಕಾಯ್ದಿರಸದ ಟಿಕೆಟ್‌ ರದ್ದು ಮಾಡಿ ಅಡ್ವಾನ್ಸ್‌ ಬುಕ್ಕಿಂಗ್‌ ಮಾಡಿದವರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಬೇಕು. ಜತೆಗೆ ಅವರಿಗಷ್ಟೇ ನಿಲ್ದಾಣದೊಳಗೆ ಪ್ರವೇಶ ನೀಡಬೇಕು. ಇದರಿಂದ ನೂಕು ನುಗ್ಗಾಟ ಆಗಲ್ಲ. ಆಗ ಕಾಲ್ತುಳಿತ ಆಗುವ ಸಾಧ್ಯತೆಯೇ ಇರಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.

ಜತೆ ಜತೆಗೆ ವಿಶೇಷ ರೈಲುಗಳು ಬರುವ ಹಳಿಗಳಲ್ಲೇ, ಅಥವಾ ಫ್ಲಾಟ್‌ಫಾರಂನಲ್ಲೇ ಬೇರೆ ರೈಲುಗಳು ಅಂದರೆ ಅನ್‌ರಿಸರ್ವಡ್‌ ಟ್ರೈನ್‌ಗಳೂ ಬರುವ ಸಾಧ್ಯತೆ ಇರುತ್ತದೆ. ಆಗ ಆ ರೈಲುಗಳನ್ನು ಏನು ಮಾಡಬೇಕು? ಅಲ್ಲಿನ ಪ್ರಯಾಣಿಕರನ್ನು ಹೇಗೆ ನಿಭಾಯಿಸಬೇಕು? ಎಂಬುದರ ಕುರಿತು ಪ್ರಶ್ನೆ ಎದ್ದಿದೆ. ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉನ್ನತ ಮಟ್ಟದಲ್ಲೇ ಚರ್ಚೆ ನಡೆದಿದ್ದು, ರೈಲ್ವೆ ಏನಾದರೂ ಕ್ರಮ ಕೈಗೊಳ್ಳುವುದು ಖಚಿತ ಎಂಬುದು ನೈರುತ್ಯ ರೈಲ್ವೆ ವಲಯದ ಮೂಲಗಳು ತಿಳಿಸುತ್ತವೆ.

ಒಟ್ಟಿನಲ್ಲಿ ಕಾಲ್ತುಳಿತ ಆಗದಂತೆ ನೋಡಿಕೊಳ್ಳಲು ರೈಲ್ವೆ ಇಲಾಖೆ ಮುಂದಾಗಿರುವುದಂತೂ ಸತ್ಯ. ಆದರೆ, ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಅರಿಯಲು ಇನ್ನಷ್ಟು ದಿನ ಕಾಯುವುದು ಅನಿವಾರ್ಯ.ಮೂರು ವಿಭಾಗಗಳಾಗಿ ವಿಂಗಡನೆ

ನೈರುತ್ಯ ರೈಲ್ವೆ ವಲಯದಲ್ಲಿ 388 ರೈಲ್ವೆ ನಿಲ್ದಾಣಗಳಿವೆ. ಇವುಗಳನ್ನು ನಾನ್‌ ಸಬ್‌ಅರ್ಬನ್‌ ಸ್ಟೇಷನ್‌ (ಎನ್‌ಎಸ್‌ಜಿ), ಸಬ್‌ಅರ್ಬನ್‌ (ಎಸ್‌ಜಿ), ಹಾಲ್ಟ್‌ ಸ್ಟೇಷನ್‌ (ಎಚ್‌ಜಿ) ಹೀಗೆ ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.

ನಾನ್‌ ಸಬಅರ್ಬನ್‌ನಲ್ಲಿ ಆದಾಯದ ಆಧಾರದ ಮೇಲೆ ಮತ್ತೆ ಎನ್‌ಎಸ್‌ಜಿ1,2,3,4,5,6 ಹೀಗೆ ಆರು ವಿಭಾಗಗಳನ್ನಾಗಿ ಮಾಡಲಾಗಿದೆ. 388 ನಿಲ್ದಾಣಗಳ ಪೈಕಿ 271 ನಿಲ್ದಾಣಗಳು ಎನ್‌ಎಸ್‌ಜಿನಲ್ಲೇ ಬರುತ್ತವೆ. ಸಬ್‌ಅರ್ಬನ್‌ (ಎಸ್‌ಜಿ)ನಲ್ಲಿ ಯಾವ ನಿಲ್ದಾಣ ಇಲ್ಲ. ಆದರೆ ಹಾಲ್ಟ್‌ ಸ್ಟೇಷನ್‌ (ಎಚ್‌ಜಿ)ನಲ್ಲಿ ಎಚ್‌ಜಿ-1,ಎಚ್‌ಜಿ-2,ಎಚ್‌ಜಿ-3 ಹೀಗೆ ಮತ್ತೆ 3 ವಿಭಾಗಗಳನ್ನಾಗಿ ಮಾಡಲಾಗಿದ್ದು, ಇಲ್ಲಿ 117 ನಿಲ್ದಾಣಗಳು ಬರುತ್ತವೆ.

ಇದರಲ್ಲಿ ಅತಿ ಹೆಚ್ಚು ಪ್ರಯಾಣಿಕರ ಆಗಮನ, ನಿರ್ಗಮನ ಲೆಕ್ಕ ಹಾಕಿದರೆ ಎನ್‌ಎಸ್‌ಜಿ ಗ್ರೂಪ್‌ನಲ್ಲಿ ಬರುವ ನಿಲ್ದಾಣಗಳೇ ಸೇರಿವೆ. ಬೆಂಗಳೂರು (ಎಸ್‌ಬಿಸಿ) -2.48 ಕೋಟಿ, ಮೈಸೂರು- 97.33 ಲಕ್ಷ, ಯಶವಂತಪುರ- 96.21 ಲಕ್ಷ, ಹುಬ್ಬಳ್ಳಿ- 55.48 ಲಕ್ಷ, ಬಂಗಾರ ಪೇಟೆ- 53.58 ಲಕ್ಷ ಪ್ರತಿವರ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಇದರಂತೆ ಹತ್ತಾರು ನಿಲ್ದಾಣಗಳು ಸೇರಿವೆ. ಇನ್ನು ಹಬ್ಬ ಹರಿದಿನಗಳಲ್ಲಿ ಬೆಂಗಳೂರು, ಸೇರಿದಂತೆ ಒಂದೆರಡ್ಮೂರು ನಿಲ್ದಾಣಗಳಲ್ಲಿ ಅತಿ ಹೆಚ್ಚು ರಶ್‌ ಆಗುತ್ತದೆಯಂತೆ. ವಿಶೇಷ ಸಂದರ್ಭದಲ್ಲಿ ಮುಂಗಡ ಟಿಕೆಟ್‌ ಇದ್ದವರಿಗೆ ಮಾತ್ರ ಪ್ರವೇಶ ಎಂಬ ನಿಯಮ ಮಾಡಿದರೆ ವಲಯದ ಒಂದೆರಡು ನಿಲ್ದಾಣಗಳು ಸೇರುವ ಸಾಧ್ಯತೆ ಇದೆ.