ಅಭಯಾರಣ್ಯದೊಳಗೆ ವನ್ಯ ಪ್ರಾಣಿಗಳ ವಾಸಕ್ಕೆ ಭಂಗ: ಪರಿಸರಾಸಕ್ತರ ಆರೋಪ

| Published : Feb 14 2025, 12:30 AM IST

ಸಾರಾಂಶ

ಚಿಕ್ಕಮಗಳೂರು, ವನ್ಯ ಜೀವಿಗಳ ಆವಾಸ ಸ್ಥಾನ, ಹುಲಿ ಸಂರಕ್ಷಿತ ಪ್ರದೇಶವೂ ಆಗಿರುವ ಭದ್ರಾ ಅಭಯಾರಣ್ಯ ಇತ್ತೀಚಿನ ವರ್ಷಗಳಲ್ಲಿ ಅವುಗಳಿಗೆ ಪೂರಕವಾದ ಕೆಲಸಗಳಿಗಿಂತ ನಿರಾತಂಕ ವಾಸಕ್ಕೆ ಭಂಗ ತರುವ ಕೆಲಸಗಳಿಗೆ ಆದ್ಯತೆ ನೀಡುವ ಸ್ಥಳವಾಗುತ್ತಿದೆ ಎಂದು ಪರಿಸರಾಸಕ್ತರು ಆರೋಪಿಸಿದ್ದಾರೆ.

ಭದ್ರಾ ಅಭಯಾರಣ್ಯದೊಳಗೆ ಕಟ್ಟಡ ನಿರ್ಮಾಣ, ಹಲವೆಡೆ ಅಭಿವೃದ್ಧಿ ಕಾರ್ಯ, ಮೂಲ ಸ್ವರೂಪಕ್ಕೆ ದಕ್ಕೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವನ್ಯ ಜೀವಿಗಳ ಆವಾಸ ಸ್ಥಾನ, ಹುಲಿ ಸಂರಕ್ಷಿತ ಪ್ರದೇಶವೂ ಆಗಿರುವ ಭದ್ರಾ ಅಭಯಾರಣ್ಯ ಇತ್ತೀಚಿನ ವರ್ಷಗಳಲ್ಲಿ ಅವುಗಳಿಗೆ ಪೂರಕವಾದ ಕೆಲಸಗಳಿಗಿಂತ ನಿರಾತಂಕ ವಾಸಕ್ಕೆ ಭಂಗ ತರುವ ಕೆಲಸಗಳಿಗೆ ಆದ್ಯತೆ ನೀಡುವ ಸ್ಥಳವಾಗುತ್ತಿದೆ ಎಂದು ಪರಿಸರಾಸಕ್ತರು ಆರೋಪಿಸಿದ್ದಾರೆ.

ಭದ್ರಾ ಅಭಯಾರಣ್ಯದಲ್ಲಿ ಹಲವು ರೀತಿ ಪ್ರಾಣಿಗಳ ರಕ್ಷಣೆಗೆ ಹೆಚ್ಚಿನ ಆಸಕ್ತಿ ಹಾಗೂ ಅಸ್ಥೆ ವಹಿಸದ ಕೆಲಸಗಳೇ ನಡೆಯು ತ್ತಿವೆ. ಲಕ್ಕವಳ್ಳಿ ವಿಭಾಗದ ಹಿನ್ನೀರಿನಲ್ಲಿ ಅವ್ಯಾಹತವಾಗಿ ಮತ್ಸ್ಯ ಬೇಟೆ ಅಭಯಾರಣ್ಯ ವ್ಯಾಪ್ತಿಯಲ್ಲೇ ನಡೆದರೂ ಸಹ ಈ ಬಗ್ಗೆ ಇಲಾಖೆ ಕಂಡೂ ಕಾಣದ ರೀತಿ ವರ್ತಿಸುತ್ತಿದೆ ಎಂದು ಭದ್ರಾ ವೈಲ್ಡ್ ಲೈಫ್ ಕನ್ಸರ್ವೇಶನ್ ಟ್ರಸ್ಟ್‌ನ ಡಿ.ವಿ. ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ. ಗಿರಿಜಾಶಂಕರ, ವೈಲ್ಡ್ ಕ್ಯಾಟ್-ಸಿ ಶ್ರೀದೇವ್ ಹುಲಿಕೆರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಣಿಗೆಬೈಲಿನಲ್ಲಿ ನೂರಾರು ತೇಗದ ಮರಗಳನ್ನು ಕಡಿದು ಕದ್ದೊಯ್ಯಲಾಗಿದ್ದು, ಇದರಲ್ಲಿ ಅರಣ್ಯಇಲಾಖೆ ಸಿಬ್ಬಂದಿ ಸಹಕರಿಸಿ ಸಾಗಿಸಿದ್ದಾರೆ. ನಂತರ ಇದೇ ವಿಭಾಗದ ಕುಂದೂರಿನಲ್ಲಿ ಬೇಟೆ ನಿಗ್ರಹ ಶಿಬಿರದ ಸುತ್ತಲಲ್ಲೇ ಮರಗಳನ್ನು ಕಡಿತಲೆ ಮಾಡಿರು ವುದು ಅರಣ್ಯಇಲಾಖೆ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆರೋಪಿಸಿದ್ದಾರೆ.

ಅಭಯಾರಣ್ಯದಲ್ಲಿ ಹುಲಿ ಗಣತಿಗೆ ಇಲಾಖೆಯಿಂದಲೇ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಕಳ್ಳಬೇಟೆ ನಡೆಸುವವರಿಗೆ ಸಹಾಯಕವಾಗುವಂತೆ ಈ ಕ್ಯಾಮರಾಗಳೇ ಕಳವಾದವು. ಆ ಬಗ್ಗೆ ಸಹ ಇಲಾಖೆ ಕೂಲಂಕುಷವಾಗಿ ತನಿಖೆ ನಡೆಸದೆ, ಯಾರನ್ನೂ ಹೊಣೆಗಾರರನ್ನಾಗೂ ಮಾಡದೆ ಮೌನ ವ್ರತಕ್ಕೆ ಜಾರಿದ್ದು ಅನೇಕ ಸಂಶಯಗಳಿಗೆ ಕಾರಣವಾಗಿದೆ.

ಇತ್ತೀಚೆಗೆ ಆನೆಯೊಂದು ಸಾವನ್ನಪ್ಪಿದ್ದು, ದಂತಗಳು ಕಣ್ಮರೆಯಾಗಿವೆ. ಈ ಪ್ರಕರಣವನ್ನೂ ಸಹ ಅರಣ್ಯ ಇಲಾಖೆ ಗಂಭೀರ ವಾಗಿ ತೆಗೆದುಕೊಂಡು ತನಿಖೆ ನಡೆಸಲು ಮುಂದಾಗಿಲ್ಲ. ಈ ಹಿಂದೆ 2018 ರಲ್ಲಿ ತಣಿಗೆಬೈಲು ವಲಯದಲ್ಲಿ ಸಾವನ್ನಪ್ಪಿದ್ದ ಆನೆ ದಂತ ತೆಗೆದು ಅದನ್ನು ಮಾರಾಟ ಮಾಡಲು ಹೊರಟಿದ್ದ ದಂತ ಚೋರರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಅರಣ್ಯ ಇಲಾಖೆ ಈ ಪ್ರಕರಣದ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳಲು ಮುಂದಾಗಲಿಲ್ಲ ಎಂದು ದೂರಿದ್ದಾರೆ.

ಅಭಯಾರಣ್ಯದಲ್ಲಿ ಪ್ರಾಣಿ ರಕ್ಷಣೆ ಹಾಗೂ ಅವುಗಳ ವಾಸಕ್ಕೆ ಪೂರಕವಾದ ಕೆಲಸಗಳಿಗೆ ಒತ್ತು ನೀಡದೆ ರಸ್ತೆ ನಿರ್ಮಾಣ, ಚರಂಡಿ ಮಾಡುವುದು, ಹೊಸ ಕಟ್ಟಡಗಳನ್ನು ನಿರ್ಮಿಸುವುದು, ಈ ರೀತಿ ಅನವಶ್ಯಕ ಕೆಲಸಗಳಿಗೆ ಹೆಚ್ಚಿನ ಗಮನವನ್ನು ಇಲಾಖೆ ನೀಡುತ್ತಿದೆ. ಅಭಯಾರಣ್ಯದಲ್ಲಿರುವ ಪುರಾತನ ಬೃಹತ್‌ ತೇಗದ ಮರದ ಸುತ್ತ ಜೆಸಿಬಿ ಬಳಸಿ ವೃತ್ತಾಕಾರವಾಗಿ ರಸ್ತೆ ಮಾಡಲಾಗಿದೆ. ಕೇಳಿದರೆ, ಪ್ರವಾಸಿಗರ ವೀಕ್ಷಣೆಗಾಗಿ ಎಂದು ಅರಣ್ಯ ಇಲಾಖೆಯವರು ಉತ್ತರ ನೀಡುತ್ತಿದ್ದಾರೆ.

ಅಭಯಾರಣ್ಯದೊಳಗಿನ 13 ಗ್ರಾಮಗಳು ಯಶಸ್ವಿಯಾಗಿ ಸ್ಥಳಾಂತರಗೊಂಡರೂ ಅಭಯಾರಣ್ಯಕ್ಕೇ ಸೇರಿದ ಪರದೇಶಪ್ಪನ ಮಠದ ಪ್ರದೇಶದಲ್ಲಿದ್ದ ನಿವಾಸಿಗಳಿಗೆ ಪರಿಹಾರ ನೀಡಿದರೂ ಪುನರ್ವಸತಿ ಪ್ರಕ್ರಿಯೆ 23 ವರ್ಷಗಳ ನಂತರವೂ ಪೂರ್ಣಗೊಂಡಿಲ್ಲ.

ಒಟ್ಟಿನಲ್ಲಿ ಅಭಯಾರಣ್ಯದ ಮೂಲ ಉದ್ದೇಶವನ್ನೇ ಅಧಿಕಾರಿಗಳು ಬದಿಗೆ ಸರಿಸಿ ಬೇಡದ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

13 ಕೆಸಿಕೆಎಂ 1ಅಭಯಾರಣ್ಯದಲ್ಲಿ ಅರಣ್ಯ ಇಲಾಖೆ ನಿರ್ಮಾಣ ಮಾಡಿರುವ ಕಟ್ಟಡ.

-

13 ಕೆಸಿಕೆಎಂ 2ಅಭಯಾರಣ್ಯದಲ್ಲಿ ನಿರ್ಮಾಣ ಮಾಡಲಾಗಿರುವ ಚರಂಡಿ.