ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನಲ್ಲಿ ಪ್ರಸಕ್ತ ಶೈಕ್ಷಣಿಕ ೨೦೨೩-೨೪ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಅತ್ಯಂತ ಕಳಪೆ ಸಾಧನೆಯಾಗಿದ್ದು, ಇದು ಕಲಬುರಗಿ ಜಿಲ್ಲೆಯಲ್ಲಿಯೇ ಅತಿ ಕಡಿಮೆ ಪರೀಕ್ಷೆ ಫಲಿತಾಂಶ ಆಗಿರುವುದರಿಂದ ತಾಲೂಕಿನಲ್ಲಿ ಶಿಕ್ಷಣದ ಪ್ರಗತಿ ಮಕ್ಕಳಿ ಕಲಿಕೆ ಸಾಧನೆ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಫಲಿತಾಂಶವೇ ಸಾಕ್ಷಿ ಎನ್ನಬಹುದಾಗಿದೆ.ತಾಲೂಕಿನಲ್ಲಿ ಶಿಕ್ಷಕರ ಕೊರೆತೆ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳ ಅಕ್ಷರ ಕಲಿಕೆ ಸಾಧನೆ ಬಗ್ಗೆ ಯೋಚನೆ ಆಗುತ್ತಿಲ್ಲ. ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಿವಿಧ ವಿಷಯಗಳ ಶಿಕ್ಷಕರ ಹುದ್ದೆಗಳು ಖಾಲಿ ಇರುವುದು ತಾಲೂಕಿನಲ್ಲಿ. ಗಣಿತ, ವಿಜ್ಞಾನ ಇಂಗ್ಲಿಷ್, ಸಮಾಜ ವಿಜ್ಞಾನ, ಹಿಂದಿ, ಕನ್ನಡ ಭಾಷಾ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತಿದೆ.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ೧೬೭೫ ಬಾಲಕರು, ೧೬೫೩ ಬಾಲಕಿಯರು ಒಟ್ಟು ೩೩೨೮ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದಿದ್ದಾರೆ. ಇದರಲ್ಲಿ ೪೨೩ ಬಾಲಕರು ೭೭೧ ಬಾಲಕಿಯರು ಒಟ್ಟು ೧೧೯೪ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ತಾಲೂಕಿನ ಒಟ್ಟು ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.೩೫.೮೭ರಷ್ಟಾಗಿದೆ. ಇದರಲ್ಲಿ ಶೇ.೨೫.೨೫ರಷ್ಟು ಬಾಲಕರು, ಶೇ.೪೬.೬೪ ಬಾಲಕಿಯರು ಆಗಿದ್ದಾರೆ. ತಾಲೂಕಿನಲ್ಲಿ ಅನೇಕ ಪ್ರತಿಷ್ಟಿತ ಖಾಸಗಿ ಸಂಸ್ಥೆಗಳ ಶಾಲೆಗಳ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಕುಸಿತವಾಗಿದೆ.ತಾಲೂಕಿನಲ್ಲಿ ೩೩ ಸರ್ಕಾರಿ ಪ್ರೌಢ ಶಾಲೆ, ೪ ಅನುದಾನಿತ, ೨೨ ಅನುದಾನ ರಹಿತ ಪ್ರೌಢಶಾಲೆಗಳು ಸೇರಿದಂತೆ ಒಟ್ಟು ೫೯ ಪ್ರೌಢಶಾಲೆಗಳಿವೆ. ತೆಲಂಗಾಣ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವ ಚಿಂಚೋಳಿ ತಾಲೂಕಿನಲ್ಲಿ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಗುಣಮಟ್ಟ ಕುಸಿಯುತ್ತಿದೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ ಹಾಸ್ಟೆಲ್ ಮಕ್ಕಳಿಗೆ ಪಾಠ ಭೋಧನೆ ವಿಶೇಷ ತರಗತಿಗಳು ನಡೆಸುವುದಿಲ್ಲ ಇದು ಸಹಾ ಫಲಿತಾಂಶದ ಕುಸಿತಕ್ಕೆ ಕಾರಣವಾಗಿದೆ.ತಾಲೂಕಿನಲ್ಲಿ ಅನೇಕ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಶಿಕ್ಷಣ ಇಲಾಖೆಯಲ್ಲಿ ಬಿಇಓ ಅಧಿಕಾರಿಗಳ ವರ್ಗಾವಣೆ, ಕಳೆದ ನಾಲ್ಕು ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಚೆನ್ನಾಗಿತ್ತು. ಸಾಕಷ್ಟು ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ತಾಲೂಕಿನಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿಗೊಳಿಸುವಂತೆ ಕಲಬುರಗಿ ಶಿಕ್ಷಣ ಆಯುಕ್ತರಿಗೆ ಮತ್ತು ಡಿಡಿಪಿಐ ಅವರಿಗೆ ಭೇಟಿ ಮಾಡಿ ಸಮಸ್ಯೆ ತಿಳಿಸಿದ್ದೇನೆ. ಆದರೆ ಶಿಕ್ಷಕರ ಹುದ್ದೆಗಳು ಭರ್ತಿಗೊಳಿಸಿಲ್ಲ. ಡಾ.ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಗಡಿಪ್ರದೇಶಕ್ಕೆ ಶಿಕ್ಷಣಕ್ಕೆ ಸರಕಾರ ಹೆಚ್ಚು ಒತ್ತು ಕೊಡಬೇಕು. ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಕುಸಿಯಲು ಈಗಿನ ಸರಕಾರವೇ ಮುಖ್ಯಕಾರಣವಾಗಿದೆ
ಡಾ. ಅವಿನಾಶ ಜಾಧವ್, ಶಾಸಕ ಚಿಂಚೋಳಿತಾಲೂಕಿನಲ್ಲಿ ಅನೇಕ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆ ಮತ್ತು ಇರುವ ಶಿಕ್ಷಕರು ಶಾಲೆಗೆ ಚಕ್ಕರ್ ಊಟಕ್ಕೆ ಹಾಜರ್ ಎಂಬಂತೆ ಶಿಕ್ಷಕರಲ್ಲಿ ಇರುವ ನಿರಾಸಕ್ತಿಯೇ ಮುಖ್ಯಕಾರಣವಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಮುಂಜಾನೆ ಪ್ರಾರ್ಥನೆಗಳಿಗೂ ಹಾಜರಾಗುವುದಿಲ್ಲ. ಸಮಯ ಪಾಲನೆ ಎನ್ನುವುದೇ ಇಲ್ಲವೆಂಬತಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ವಿಶೇಷ ತರಗತಿಗಳು ನಡೆಸಲಿಲ್ಲ.
ವೀರಶೆಟ್ಟಿ ಪಾಟೀಲ, ಶಿಕ್ಷಣ ಪ್ರೇಮಿ