2 ವರ್ಷ ಕಳೆದರೂ ಬಿಡದಿ ಪುರಪಿತೃಗಳಿಗಿಲ್ಲ ಅಧಿಕಾರ!

| Published : Feb 09 2024, 01:46 AM IST

ಸಾರಾಂಶ

ರಾಮನಗರ: ಬಿಡದಿ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ತೊಡಕಿನಿಂದಾಗಿ ನೂತನ ಜನಪ್ರತಿನಿಧಿಗಳು ಆಯ್ಕೆಯಾಗಿ 2 ವರ್ಷ ಕಳೆದರೂ ಆಡಳಿತ ಯಂತ್ರದಿಂದ ದೂರವೇ ಉಳಿಯುವಂತಾಗಿದೆ.

ರಾಮನಗರ: ಬಿಡದಿ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ತೊಡಕಿನಿಂದಾಗಿ ನೂತನ ಜನಪ್ರತಿನಿಧಿಗಳು ಆಯ್ಕೆಯಾಗಿ 2 ವರ್ಷ ಕಳೆದರೂ ಆಡಳಿತ ಯಂತ್ರದಿಂದ ದೂರವೇ ಉಳಿಯುವಂತಾಗಿದೆ.

ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದಿರುವ ಕಾರಣ ಜನಸಾಮಾನ್ಯರ ಕೆಲಸ ಕಾರ್ಯಗಳೇ ಆಗುತ್ತಿಲ್ಲ. ನಾಗರಿಕರಿಗೆ ಮೂಲಸೌಕರ್ಯ ಕಲ್ಪಿಸುವುದು ಸವಾಲಿನ ಪ್ರಶ್ನೆಯಂತಾಗಿದೆ. ಅಧಿಕಾರಿಗಳಿಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ.

2021ರ ಜೂನ್ 20ರಂದು ಪುರಸಭೆಯಲ್ಲಿ ಜನಪ್ರತಿನಿಧಿಗಳ ಅವಧಿ ಪೂರ್ಣಗೊಂಡಿತ್ತು. ಇದಾದ 5 ತಿಂಗಳ ನಂತರ ಪುರಸಭೆಗೆ ಚುನಾವಣೆ ನಡೆದು ಡಿಸೆಂಬರ್ ನಲ್ಲಿಯೇ ಫಲಿತಾಂಶ ಪ್ರಕಟಗೊಂಡಿತು. ಕಳೆದ 2 ವರ್ಷಗಳಿಂದ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯೇ ನಿಗದಿಯಾಗಿಲ್ಲ. ನೂತನ ಜನಪ್ರತಿನಿಧಿಗಳು ಇದಕ್ಕೆ ಕಾರಣ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಪೌರಾಡಳಿತ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮೀಸಲಾತಿ ನಿಗದಿ ವಿಚಾರ ನ್ಯಾಯಾಲಯದಲ್ಲಿದೆ ಎಂದಷ್ಟೇ ಉತ್ತರಿಸುತ್ತಿದ್ದಾರೆ.

ಪುರಸಭೆ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಜನಪ್ರತಿನಿಧಿಗಳ ಆಡಳಿತಕ್ಕೆ ವಿಘ್ನಗಳು ಎದುರಾಗುತ್ತಲೇ ಇದೆ. ಪುರಸಭೆಗೆ ನಡೆದ ಮೊದಲ ಚುನಾವಣೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಜನಪ್ರತಿನಿಧಿಗಳು 30 ತಿಂಗಳು ಸುಸೂತ್ರವಾಗಿ ಅಧಿಕಾರ ನಡೆಸಿದ್ದರು. ಆನಂತರ ಎರಡನೇ ಅವಧಿಗೆ ಮೀಸಲಾತಿ ನಿಗದಿ ವಿಳಂಬವಾಗಿದ್ದರಿಂದ ಅಲ್ಪಾವಧಿ ಅಧಿಕಾರ ದೊರಕಿತು.

ಪುರಸಭೆ ವ್ಯಾಪ್ತಿಯಲ್ಲಿನ ಜನರು ಪ್ರತಿನಿತ್ಯ ಖಾತೆ ಮಾಡಿಸಿಕೊಳ್ಳಲು ಅಲೆದಾಡುತ್ತಿದ್ದಾರೆ. ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಇ - ಖಾತೆ ಸಮಸ್ಯೆಗೆ ಪರಿಹಾರ ಮಾತ್ರ ಸಿಗುತ್ತಿಲ್ಲ.

ತಮ್ಮ ವಾರ್ಡ್​ನಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಚುನಾಯಿತ ಸದಸ್ಯರಿಂದ ಆಗುತ್ತಿಲ್ಲ. ಅಧಿಕಾರಿಗಳನ್ನು ಪ್ರಶ್ನಿಸುವ ಸ್ಥಿತಿ ಸದಸ್ಯರಿಗೆ ಇಲ್ಲದಂತಾಗಿದೆ. ಆಡಳಿತಾಧಿಕಾರಿಯಾಗಿರುವ ರಾಮನಗರ ಉಪವಿಭಾಗಾಧಿಕಾರಿಗಳು ಸಹ ಅಧಿಕಾರಿಗಳ ಸಭೆ ನಡೆಸಿ ಪುರಸಭೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿಲ್ಲ.

ಇನ್ನು ಹಾಲಿ ಶಾಸಕ ಬಾಲಕೃಷ್ಣರವರು ಮಾಜಿ ಆಗಿದ್ದಾಗ ಅನುದಾನ ತಾರತಮ್ಯ ವಿಚಾರವನ್ನು ಮುಂದಿಟ್ಟುಕೊಂಡು ಪುರಸಭೆ ಆಡಳಿತದ ವಿರುದ್ಧ ಹೋರಾಟ ನಡೆಸಿದ್ದರು. ಈಗ ಅವರೇ ಶಾಸಕರಾಗಿದ್ದರು ಸಹ ಪುರಸಭೆ ಆಡಳಿತಕ್ಕೆ ವೇಗ ನೀಡುತ್ತಿಲ್ಲವೇಕೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.

ಚುನಾಯಿತರಾದ ದಿನದಿಂದಲೂ ನೂತನ ಸದಸ್ಯರು ಪುರಸಭೆಯೊಳಗೆ ಪ್ರವೇಶಿಸಲು ಕಾತರರಾಗಿದ್ದಾರೆ. ಹೀಗಾಗಿ ಮೀಸಲಾತಿ ಹಾಗೂ ಚುನಾವಣೆ ದಿನಾಂಕವನ್ನೇ ಎದುರು ನೋಡುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಮೀಸಲು ನಿಗದಿಗೆ ಒಲವು ತೋರುತ್ತಿಲ್ಲ. ಈ ಕಾರಣದಿಂದಾಗಿ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ.

ಬಾಕ್ಸ್ ..............

ಪಕ್ಷಗಳ ಬಲಾಬಲ:

ಪುರಸಭೆಯ 23 ವಾರ್ಡುಗಳ ಪೈಕಿ ಜೆಡಿಎಸ್ - 14 ಹಾಗೂ ಕಾಂಗ್ರೆಸ್ - 09 ವಾರ್ಡ್‌ಗಳಲ್ಲಿ ಗೆಲವು ಸಾಧಿಸಿದ್ದು, ಬಿಜೆಪಿ ಖಾತೆ ತೆರೆದಿಲ್ಲ. 14 ಸದಸ್ಯ ಬಲ ಹೊಂದಿರುವ ಜೆಡಿಎಸ್ ಅಧಿಕಾರದ ಗದ್ದುಗೆ ಹಿಡಿಯಲು ಸ್ಪಷ್ಟ ಬಹುಮತ ಹೊಂದಿದೆ. ಆದರೂ ಆಪರೇಷನ್ ಹಸ್ತದ ಮೂಲಕ ರಾಜಕೀಯ ದಾಳ ಉರುಳಿಸಿ ಪುರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೀಸಲು ನಿಗದಿಯಾಗಿ ಚುನಾವಣೆ ಘೋಷಣೆಯಾದ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ.ಬಾಕ್ಸ್ ..........

ಹೊಸ ಜನಪ್ರತಿನಿಧಿಗಳ ಗೋಳು:

ಅಧಿಕಾರವಿಲ್ಲ ಎಂದ ಮಾತ್ರಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಆಯ್ಕೆಯಾದವರ ಹೊಣೆಗಾರಿಕೆ ತಪ್ಪಿಲ್ಲ. ವಾರ್ಡಿನಲ್ಲಿ ತಲೆದೋರುವ ಪ್ರತಿಯೊಂದು ಸಮಸ್ಯೆ ಕುರಿತು ಜನರು ಕಾರ್ಪೋರೇಟರ್‌ಗಳ ಗಮನಕ್ಕೆ ತಂದು ಪರಿಹರಿಸುವಂತೆ ಒತ್ತಡ ಹೇರುತ್ತಿದ್ದಾರೆ. ಅಧಿಕಾರ ಇದ್ದಿದ್ದರೆ ಅಧಿಕಾರಿಗಳಿಂದ ಕೆಲಸ ಮಾಡಬಹುದಿತ್ತು. ಆದರೆ, ಈಗ ಅವರು ಕೂಡ ಜನಸಾಮಾನ್ಯರಂತೆ ಮೇಲಾಧಿಕಾರಿಗಳ ಬೆನ್ನಿಗೆ ಬಿದ್ದು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ ಜನರ ಆಕ್ರೋಶ ಎದುರಿಸುವುದು ಅನಿವಾರ್ಯವಾಗುತ್ತದೆ. ಒಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರ ಎಂಬುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾಲಿಗೆ ಬಿಸಿ ತುಪ್ಪದಂತಾಗಿದೆ.ಕೋಟ್ .................

ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣರವರು ಬಿಡದಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಅದನ್ನು ಕಾರ್ಯಗತಗೊಳಿಸಲು ಮುಂದಾಗಿದ್ದಾರೆ. ಅವರೊಂದಿಗೆ ಕೈ ಜೋಡಿಸಿ ವಾರ್ಡುಗಳಲ್ಲಿ ಕೆಲಸ ಮಾಡಲು ಪುರಸಭೆ ನೂತನ ಸದಸ್ಯರು ಉತ್ಸಾಹದಿಂದ ಇದ್ದಾರೆ. ಆದರೆ, ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಯದ ಕಾರಣ ಚುನಾಯಿತರಾಗಿದ್ದರೂ ಪ್ರಯೋಜನ ಇಲ್ಲದಂತಾಗಿದೆ. ಇನ್ನಾದರೂ ರಾಜ್ಯಸರ್ಕಾರ ಮೀಸಲು ನಿಗದಿಗೆ ಮುಂದಾಗಬೇಕು.

- ಸಿ. ಉಮೇಶ್, ನೂತನ ಸದಸ್ಯರು, ಬಿಡದಿ ಪುರಸಭೆ

8ಕೆಆರ್ ಎಂಎನ್ 1,2.ಜೆಪಿಜಿ

1.ಬಿಡದಿ ಪುರಸಭೆ

2.ಸಿ.ಉಮೇಶ್ , ಸದಸ್ಯರು, ಬಿಡದಿ ಪುರಸಭೆ