ಕಾಮಗಾರಿ ಪೂರ್ತಿಗೂ ಮುನ್ನವೇ ಸೀಳಿದ ಹೆದ್ದಾರಿ, ಬಿರಿದ ತಡೆಗೋಡೆ!

| Published : Sep 29 2024, 01:50 AM IST

ಸಾರಾಂಶ

ಪೆರಿಯಶಾಂತಿ-ಅಡ್ಡಹೊಳೆ ನಡುವಿನ ನೆರಿಯ, ಶಿರಾಡಿ, ಅಡ್ಡಹೊಳೆ, ಲಾವತ್ತಡ್ಕ, ಪೆರಿಯಶಾಂತಿಗಳಲ್ಲಿ ಗುಡ್ಡ ಹಾಗೂ ಮೀಸಲು ಅರಣ್ಯ ಬಳಿ ನಿರ್ಮಿಸಿರುವ ಬೃಹತ್‌ ಕಾಂಕ್ರಿಟ್‌ ತಡೆಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಕೆಲವು ಬೀಳುವ ಸ್ಥಿತಿಯಲ್ಲಿ ಇವೆ. ಇದು ಹೆದ್ದಾರಿಯಲ್ಲಿ ಗುಡ್ಡ ಕುಸಿತದ ಆತಂಕ ತಂದೊಡ್ಡಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ರಾಷ್ಟ್ರೀಯ ಹೆದ್ದಾರಿ -75ರಲ್ಲಿ ಪೆರಿಯಶಾಂತಿ-ಅಡ್ಡಹೊಳೆ ಚತುಷ್ಪಥ ಕಾಮಗಾರಿ ಅಂತಿಮ ಹಂತದಲ್ಲಿದೆ. ಇನ್ನೂ ಕಾಮಗಾರಿ ಪೂರ್ತಿಯಾಗುವುದಕ್ಕೆ ಮುನ್ನವೇ ಕಾಂಕ್ರಿಟ್‌ ಹೆದ್ದಾರಿಯ ಅಲ್ಲಲ್ಲಿ ಮಧ್ಯೆ ಸೀಳು ಕಾಣಿಸಿದೆ. ಮಾತ್ರವಲ್ಲ ತಡೆಗೋಡೆ ಕೂಡ ಬಿರುಕು ಬಿಟ್ಟು ಗುಡ್ಡ ಕುಸಿತ ಆತಂಕ ತಂದೊಡ್ಡಿದೆ.

ಪೆರಿಯಶಾಂತಿ-ಅಡ್ಡಹೊಳೆ ನಡುವೆ 15 ಕಿ.ಮೀ.ಗಳ ಚತುಷ್ಪಥ ಕಾಂಕ್ರಿಟ್ ಕಾಮಗಾರಿ ಮುಕ್ತಾಯಕ್ಕೆ ತಲುಪುತ್ತಿದೆ. ಸುಮಾರು 317 ಕೋಟಿ ರು. ವೆಚ್ಚದ ಈ ಕಾಮಗಾರಿಯಲ್ಲಿ ಇನ್ನು ಎರಡು ಕಡೆ ಸೇತುವೆ ರಚನೆ ಮಾತ್ರ ಬಾಕಿ ಉಳಿದಿದೆ. ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ ಇದೇ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಇಂಗಿತವನ್ನು ಗುತ್ತಿಗೆದಾರ ಸಂಸ್ಥೆ ಇರಿಸಿಕೊಂಡಿದೆ. ಆದರೆ ಅಲ್ಲಲ್ಲಿ ಕಂಡುಬಂದಿರುವ ರಸ್ತೆ ಸೀಳು, ತಡೆಗೋಡೆ ಬಿರುಕುಗಳು ಕಾಮಗಾರಿಯ ಗುಣಮಟ್ಟವನ್ನೇ ಪ್ರಶ್ನಿಸುವಂತೆ ಮಾಡಿದೆ.

ರಸ್ತೆಯಲ್ಲಿ ಸೀಳು, ತಡೆಗೋಡೆಯಲ್ಲಿ ಬಿರುಕು!: ಕಳೆದ ಒಂದು ವರ್ಷದಿಂದ ಕಾಂಕ್ರಿಟ್‌ ರಸ್ತೆ ಕಾಮಗಾರಿ ನಡೆಯುತ್ತಿದೆ. ಮಹಾರಾಷ್ಟ್ರ ಮೂಲದ ಗುತ್ತಿಗೆ ಕಂಪನಿ ಕಾಮಗಾರಿ ನಡೆಸುತ್ತಿದೆ. ಕಾಂಕ್ರಿಟ್‌ ರಸ್ತೆ, ತಡೆಗೋಡೆ ಎಲ್ಲ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಇದೇ ವೇಳೆ ಪೂರ್ತಿಗೊಂಡ ಕಾಂಕ್ರಿಟ್‌ ರಸ್ತೆಯ ನಡುವೆ ಸೀಳು ಕಾಣಿಸಿದೆ. ಪೆರಿಯಶಾಂತಿಯಿಂದ ಅಡ್ಡಹೊಳೆ ಮಧ್ಯೆ ಸುಮಾರು 50ಕ್ಕಿಂತಲೂ ಅಧಿಕ ಕಡೆಗಳಲ್ಲಿ ಕಾಂಕ್ರಿಟ್‌ ರಸ್ತೆಯಲ್ಲಿ ಸೀಳು ಕಾಣಿಸಿದೆ. ಹೀಗಾಗಿ ಸೀಳನ್ನು ಮುಚ್ಚಲು ರಸ್ತೆಯನ್ನು ತುಂಡು ಮಾಡಿ ಮತ್ತೆ ಕಾಂಕ್ರಿಟ್‌ ತೇಪೆ ಹಾಕುವ ಕೆಲಸ ನಡೆಯುತ್ತಿದೆ. ಕಾಂಕ್ರಿಟ್‌ ಹಾಕಿದ ರಸ್ತೆಯ ಒಳಗಿನಿಂದ ಒತ್ತಡ ಉಂಟಾಗಿ ನೀರು ಗುಳ್ಳೆಯಿಂದ ಕಾಂಕ್ರಿಟ್‌ ಸೀಳು ಉಂಟಾಗಿರುವುದಾಗಿ ಗುತ್ತಿಗೆದಾರರು ಹೇಳುತ್ತಿದ್ದಾರೆ.

ಗುಡ್ಡ ಕುಸಿತ ಆತಂಕ: ಪೆರಿಯಶಾಂತಿ-ಅಡ್ಡಹೊಳೆ ನಡುವಿನ ನೆರಿಯ, ಶಿರಾಡಿ, ಅಡ್ಡಹೊಳೆ, ಲಾವತ್ತಡ್ಕ, ಪೆರಿಯಶಾಂತಿಗಳಲ್ಲಿ ಗುಡ್ಡ ಹಾಗೂ ಮೀಸಲು ಅರಣ್ಯ ಬಳಿ ನಿರ್ಮಿಸಿರುವ ಬೃಹತ್‌ ಕಾಂಕ್ರಿಟ್‌ ತಡೆಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಕೆಲವು ಬೀಳುವ ಸ್ಥಿತಿಯಲ್ಲಿ ಇವೆ. ಇದು ಹೆದ್ದಾರಿಯಲ್ಲಿ ಗುಡ್ಡ ಕುಸಿತದ ಆತಂಕ ತಂದೊಡ್ಡಿದೆ.

ಸುಮಾರು 20 ಮೀಟರ್‌ ಎತ್ತರಕ್ಕೆ ಹೆದ್ದಾರಿಯ ಸುಮಾರು ಐದು ಕಿ.ಮೀ. ದೂರಕ್ಕೆ ಇಕ್ಕೆಲಗಳಲ್ಲಿ ಕಾಂಕ್ರಿಟ್‌ ತಡೆಗೋಡೆ ರಚಿಸಲಾಗಿದೆ. ಎರಡು ಕಡೆಗಳಲ್ಲಿ ಆನೆ ಕಾರಿಡಾರ್‌ ನಿರ್ಮಾಣವಾಗಿದ್ದು, ಇತರೆ ಕಡೆಗಳಿಂದ ಕಾಡುಪ್ರಾಣಿಗಳು ಹೆದ್ದಾರಿ ಪ್ರವೇಶಿಸದಂತೆ ಈ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ನೇರವಾಗಿ ತಡೆಗೋಡೆ ನಿರ್ಮಿಸಿರುವ ಕಾರಣ ಇಲ್ಲಿ ಆಗಾಗ ಸುರಿಯುತ್ತಿರುವ ಭಾರಿ ಮಳೆಗೆ ಗುಡ್ಡದ ಮಣ್ಣು ಸಡಿಲಗೊಂಡು ತಡೆಗೋಡೆ ಬಿರುಕಿಗೆ ಕಾರಣವಾಗಿದೆ. ಗುಡ್ಡ ಜರಿದರೆ, ತಡೆಗೋಡೆಯೂ ಹೆದ್ದಾರಿಗೆ ಬೀಳುವ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಸ್ಥಳೀಯರು. ಅವೈಜ್ಞಾನಿಕ ಕಾಮಗಾರಿ ಕಾರಣ?

ಕಾಂಕ್ರಿಟ್‌ ಹೆದ್ದಾರಿ ಸೀಳುವುದು ಹಾಗೂ ತಡೆಗೋಡೆ ಬಿರುಕಿಗೆ ಅವೈಜ್ಞಾನಿಕ ಕಾಮಗಾರಿ ಕಾರಣ ಎನ್ನುವುದು ಸ್ಥಳೀಯರ ಆರೋಪ. ಈ ಹೆದ್ದಾರಿ ಕಾಮಗಾರಿಯನ್ನು ವಹಿಸಿಕೊಂಡ ಗುತ್ತಿಗೆ ಕಂಪನಿ ಪ್ರತಿಯೊಂದು ಕೆಲವನ್ನು ಉಪ ಗುತ್ತಿಗೆಗೆ ನೀಡಿರುವುದೇ ಇಷ್ಟೆಲ್ಲ ಗೊಂದಲಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕಾಮಗಾರಿಯ ವಿನ್ಯಾಸ, ಕಚ್ಚಾ ವಸ್ತುಗಳ ಬಳಕೆ, ಹೆದ್ದಾರಿ ಹಾಗೂ ತಡೆಗೋಡೆ ರಚನೆ ಸೇರಿದಂತೆ ಪ್ರತಿಯೊಂದು ಕೆಲಸವನ್ನು ಓರ್ವನೇ ನಿರ್ವಹಿಸಿದರೆ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತದೆ. ಇಲ್ಲಿ ಒಂದೊಂದು ಕೆಲಸವನ್ನು ಒಬ್ಬೊಬ್ಬರು ನಿರ್ವಹಿಸಿದ್ದಾರೆ. ಹೀಗಾಗಿ ಯಾರು ಏನು ಮಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಮರಳಿಗೆ ಮಣ್ಣು ಮಿಶ್ರಣಗೊಂಡಿರುವುದೇ ಹೆದ್ದಾರಿ ಸೀಳಿಗೆ ಕಾರಣ ಎನ್ನುತ್ತಾರೆ ಸ್ಥಳೀಯರು. ಕಾಂಕ್ರಿಟ್‌ ರಸ್ತೆ ಅಲ್ಲಲ್ಲಿ ಸೀಳಿದೆ. ಅದನ್ನು ಈಗ ಪ್ಯಾಚ್‌ಅಪ್‌ ಮಾಡುತ್ತಿದ್ದಾರೆ. ತಡೆಗೋಡೆ ತುಂಬ ಕಡೆಗಳಲ್ಲಿ ಬಿರುಕು ಬಿಟ್ಟಿದ್ದು, ಅವೈಜ್ಞಾನಿಕ ಕಾಮಗಾರಿಗೆ ಸಾಕ್ಷಿಯಾಗಿದೆ. ತಡೆಗೋಡೆ ಯಾವುದೇ ಸಂದರ್ಭದಲ್ಲಿ ಹೆದ್ದಾರಿಗೆ ಕುಸಿದು ಬೀಳುವ ಅಪಾಯ ಇದೆ. ಇದನ್ನು ಮತ್ತೆ ನಿರ್ಮಿಸಬೇಕಾದರೆ ಅನವಶ್ಯಕ ವೆಚ್ಚ ಮಾಡಬೇಕಾಗುತ್ತದೆ. ಇದನ್ನು ಸರಿಪಡಿಸದಿದ್ದರೆ ಹೋರಾಟ ಅನಿವಾರ್ಯ.

-ಕಿಶೋರ್ ಕುಮಾರ್‌ ಶಿರಾಡಿ, ಸಂಚಾಲಕರು, ಮಲೆನಾಡು ಜನಹಿತರಕ್ಷಣಾ ಸಮಿತಿ ವಿಪರೀತ ಮಳೆಯ ಕಾರಣ ನೀರಿನ ಗುಳ್ಳೆಗಳು ಎದ್ದು ಹೆದ್ದಾರಿಯ ಕಾಂಕ್ರಿಟ್‌ನಲ್ಲಿ ಸೀಳು ಉಂಟಾಗಿದ್ದು, ಸರಿಪಡಿಸುವ ಕೆಲಸ ನಡೆಯುತ್ತಿದೆ. ತಡೆಗೋಡೆಗಳನ್ನು ತಾತ್ಕಾಲಿಕವಾಗಿ ರಚಿಸಲಾಗಿದೆ. ಭೂಸ್ವಾಧೀನ ಕೆಲಸ ಬಾಕಿ ಇದ್ದು, ಜಿಲ್ಲಾಡಳಿತದೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಭೂಸ್ವಾಧೀನ ಬಳಿಕ ಮತ್ತೆ ಬಿರುಕುಬಿಟ್ಟ ತಡೆಗೋಡೆಗಳನ್ನು ಕೆಡವಿ ಇಳಿಜಾರು ಮಾದರಿಯಲ್ಲಿ ಪುನರ್‌ ನಿರ್ಮಿಸಲಾಗುವುದು.

-ಖಂಡೇಕರ್‌, ಸೈಟ್ ಎಂಜಿನಿಯರ್‌, ಗುತ್ತಿಗೆ ಕಂಪನಿ