ಬಾಲಕಾರ್ಮಿಕ ಪಿಡುಗು ನಿರ್ಮೂಲನೆಗೆ ಎಲ್ಲರ ಸಹಕಾರ ಮುಖ್ಯ: ನ್ಯಾಯಾಧೀಶ ನಾಗೇಂದ್ರ

| Published : Jun 16 2024, 01:51 AM IST

ಬಾಲಕಾರ್ಮಿಕ ಪಿಡುಗು ನಿರ್ಮೂಲನೆಗೆ ಎಲ್ಲರ ಸಹಕಾರ ಮುಖ್ಯ: ನ್ಯಾಯಾಧೀಶ ನಾಗೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲಕಾರ್ಮಿಕರು ಅಪಾಯದ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದು, ಅವರ ರಕ್ಷಣೆಗೆ ಸರ್ಕಾರ ಮತ್ತು ವಿವಿಧ ಸಂಘಟನೆಗಳು ಮುಂದಾದಾಗ ಮಾತ್ರ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯ ಎಂದು ಜೆಎಂಎಪ್‌ಸಿ ನ್ಯಾಯಾಲಯದ ಕಿರಿಯ ನ್ಯಾಯಾಧೀಶ ನಾಗೇಂದ್ರ ಹೇಳಿದರು. ಹಾಸನದಲ್ಲಿ ಹಮ್ಮಿಕೊಂಡ ಬಾಲಕಾರ್ಮಿಕ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವ ಬಾಲಕಾರ್ಮಿಕರ ದಿನ । ಕಾನೂನು ಅರಿವು ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬೇಲೂರು

ವಿಶ್ವದಾಧ್ಯಂತ ೧೨೨ ಬಿಲಿಯನ್ ಬಾಲ ಕಾರ್ಮಿಕರು ಅಪಾಯದ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದು, ಅವರ ರಕ್ಷಣೆಗೆ ಸರ್ಕಾರ ಮತ್ತು ವಿವಿಧ ಸಂಘಟನೆಗಳು ಮುಂದಾದಾಗ ಮಾತ್ರ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯ ಎಂದು ಜೆಎಂಎಪ್‌ಸಿ ನ್ಯಾಯಾಲಯದ ಕಿರಿಯ ನ್ಯಾಯಾಧೀಶ ನಾಗೇಂದ್ರ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನೆ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾರ್ಮಿಕ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಪಟ್ಟಣದ ಹೊಯ್ಸಳ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ‘ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ’ ಹಾಗೂ ಉಚಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಮಕ್ಕಳು ದೇಶದ ಆಸ್ತಿಯಾಗಿದ್ದು ಅವರ ರಕ್ಷಣೆಯೊಂದಿಗೆ ಅವರಿಗೆ ಆರೋಗ್ಯ ಶಿಕ್ಷಣ ಕೊಡಿಸುವುದು ಸರ್ಕಾರ ಮತ್ತು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಹೇಳಿದರು.

‘೬ ವರ್ಷದಿಂದ ೧೪ ವರ್ಷದೊಳಗಿನ ಮಕ್ಕಳನ್ನು ಬಾಲಕಾರ್ಮಿಕರೆಂದು ಗುರುತಿಸಿದ್ದು, ಈ ಮಕ್ಕಳಿಂದ ಉದ್ಯಮ ಸೇರಿದಂತೆ ಯಾವುದೇ ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡಿಸಬಾರದೆಂಬ ಉದ್ದೇಶದಿಂದ ೧೯೮೬ರಲ್ಲಿ ದೇಶದಲ್ಲಿ ಬಾಲಕಾರ್ಮಿಕರ ವಿರೋಧಿ ಕಾನೂನು ಜಾರಿಗೆ ಬಂದಿದ್ದು ಇದರ ಅನುಷ್ಠಾನಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು. ವಿಶ್ವದೆಲ್ಲೆಡೆ ೨೦೦೨ರಲ್ಲಿ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಆಚರಣೆ ಜಾರಿಗೆ ಬಂದಿದೆ’ ಎಂದು ತಿಳಿಸಿದರು.

ಬಾಲಕಾರ್ಮಿಕರ ದುಡಿಮೆಗೆ ಕಡಿವಾಣ ಹಾಕಲು ಅವರ ಪೋಷಕರಲ್ಲಿ ಅರಿವು ನೀಡಬೇಕಾದ ಅವಶ್ಯಕತೆ ಇದ್ದು, ಅವರ ಕುಟುಂಬಕ್ಕೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸರ್ಕಾರಗಳು ಸಹಕಾರ ನೀಡಬೇಕು. ಸಾರ್ವಜನಿಕ ಉದ್ದಿಮೆ, ಕಾರ್ಖಾನೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಬಾಲಕಾರ್ಮಿಕರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಂಡು ಬಂದಲ್ಲಿ ತಕ್ಷಣ ಸಂಬಂಧಿಸಿದ ಇಲಾಖೆ ಅಧಿಕಾರಿಗೆ ದೂರು ನೀಡುವಂತೆ ತಿಳಿಸಿದರು.

ಹೊಯ್ಸಳ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಪ್ರಕಾಶ್ ಆರ್. ಮಾತನಾಡಿ, ಭಾರತದ ಸಂವಿಧಾನ ಹಲವಾರು ಹಕ್ಕುಗಳೊಂದಿಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವ ನೀತಿಯನ್ನು ರೂಪಿಸಿದೆ. ಅದರಂತೆ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಮಾಜದ ಆಸ್ತಿಯಾಗಿ ಬೆಳೆಸಬೇಕಾದ ಅವಶ್ಯಕತೆ ಇದೆ. ಆದರೆ ಇತ್ತೀಚಿನ ದಿನಗಳಲ್ಲೂ ಇನ್ನೂ ಬಾಲಕಾರ್ಮಿಕ ಪದ್ಧತಿ ಜಾರಿಯಲ್ಲಿರುವುದು ಅತ್ಯಂತ ಅಮಾನುಷವಾಗಿದ್ದು ಇದನ್ನು ಎಲ್ಲರೂ ಖಂಡಿಸಬೇಕಾಗಿದೆ ಎಂದರು.