ಸಾರಾಂಶ
ಮಾನಸಿಕ ಆರೋಗ್ಯ ಕುರಿತ ಸಂವಾದ ಕಾರ್ಯಕ್ರಮಕನ್ನಡಪ್ರಭ ವಾರ್ತೆ ತುಮಕೂರು
ಪ್ರತಿಯೊಬ್ಬರಿಗೂ ಸಮಸ್ಯೆಗಳು ಎದುರಾಗುತ್ತವೆ. ಆ ಸಮಸ್ಯೆಗಳ ಒಳಗೆ ಮುಳುಗಿ ಹೋಗುವ ಬದಲು, ಅದರಿಂದ ಹೊರಗೆ ಬರುವ ಮಾರ್ಗೋಪಾಯಗಳ ಬಗ್ಗೆ ಯೋಚಿಸಬೇಕು ಎಂದು ಮನೋವೈದ್ಯ ಲೋಕೇಶ್ ಬಾಬು ಸಲಹೆ ನೀಡಿದರು.ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಬದುಕಿನುದ್ದಕ್ಕೂ ಸಿಹಿ ಮತ್ತು ಕಹಿ ಘಟನೆಗಳು ಎದುರಾಗುತ್ತಲೇ ಹೋಗುತ್ತವೆ. ಸುಖ ಬಂದಾಗ ಹಿಗ್ಗುವುದು ಕಷ್ಟ ಬಂದಾಗ ಯೋಚಿಸುವುದು ಮಾಡುತ್ತಾ ಕುಳಿತರೆ ಮುಂದಿನ ಹಾದಿಗಳು ಮುಚ್ಚಿ ಹೋಗುತ್ತವೆ. ಅಷ್ಟರೊಳಗೆ ನಾವು ಮಾರ್ಗಗಳನ್ನು ಕಂಡುಕೊಳ್ಳಬೇಕು, ಬದುಕನ್ನು ಸುಖಮಯವಾಗಿಸಿಕೊಳ್ಳಬೇಕು ಎಂದರು.
ಕಡಿಮೆ ಅಂಕಗಳು ಬಂದಾಗ ವಿದ್ಯಾರ್ಥಿಗಳು ಯೋಚಿಸುತ್ತಾ ಕುಳಿತುಕೊಳ್ಳುವುದು, ಪ್ರೇಮ ವೈಫಲ್ಯದಿಂದ ಗಡ್ಡ ಬಿಟ್ಟುಕೊಂಡು ಓಡಾಡುವುದು, ಕುಟುಂಬದಲ್ಲಿ ಸಣ್ಣ ಪುಟ್ಟ ವಿಷಯಗಳಿಗೆಲ್ಲ ಗಲಾಟೆ ಮಾಡಿಕೊಳ್ಳುವುದು, ಎಲ್ಲವನ್ನೂ ನಕಾರಾತ್ಮಕ ದೃಷ್ಟಿಕೋನದಿಂದ ನೋಡುವುದು, ಇವೆಲ್ಲವೂ ಉತ್ತಮ ಬೆಳವಣಿಗೆಗಳಲ್ಲ, ಇದರಿಂದ ಹೊರಬರುವ ಯೋಚನೆಗಳಿಗೆ ಮನಸ್ಸು ಕೊಟ್ಟಾಗ ಸಮಸ್ಯೆಗಳು ಸಹಜವಾಗಿಯೇ ದೂರವಾಗುತ್ತವೆ. ಅಂತಹ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.ಇತ್ತಿಚಿನ ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಮೊಬೈಲ್ ಅಡಿಕ್ಷನ್ ಎಂಬ ಹೊಸ ರೋಗ ಹುಟ್ಟಿಕೊಂಡಿದೆ. ಎರಡು ಮೂರು ಗಂಟೆ ಕಾಲ ಮೊಬೈಲ್ ನೋಡುವಲ್ಲಿ ನಿರತರಾಗಿದ್ದರೆ ಅದನ್ನು ಮೊಬೈಲ್ ಅಡಿಕ್ಷನ್ ಎಂದು ಕರೆಯಲಾಗುತ್ತದೆ. ಒಮ್ಮೆ ಇಂತಹ ಅಭ್ಯಾಸಕ್ಕೆ ಬಿದ್ದುಬಿಟ್ಟರೆ ಅದರಿಂದ ಹೊರ ಬರುವುದು ಕಷ್ಟ. ಕೆಲವರು ರಾತ್ರಿ ಮಲಗುವಾಗಲೂ ಮೊಬೈಲ್ ನೋಡುತ್ತಲೇ ಮಲಗುತ್ತಾರೆ. ಇವೆಲ್ಲ ಅತ್ಯಂತ ಅಪಾಯಕಾರಿ ಅಭ್ಯಾಸಗಳು ಎಂದು ಎಚ್ಚರಿಸಿದರು.
ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷ ಎಂ.ಸಿ. ಲಲಿತಾ ಮಾತನಾಡಿ, ಬದುಕಿನಲ್ಲಿ ಎದುರಾಗುವ ಕೆಲವು ಸಂಗತಿಗಳಿಂದ ಮಾನಸಿಕವಾಗಿ ಕುಗ್ಗಿ ಹೋಗುವ ಜನ ಅತೀಂದ್ರಿಯ ಶಕ್ತಿಗಳಿಗೆ ಮಾರು ಹೋಗುತ್ತಾರೆ. ದೇವರು, ದೆವ್ವ, ಮಾಟ ಮಂತ್ರ ಇತ್ಯಾದಿಗಳ ಹೆಸರಿನಲ್ಲಿ ಮಾನಸಿಕವಾಗಿ ಮತ್ತಷ್ಟು ಭಯ ಹುಟ್ಟಿಸುವ ಕೆಲಸ ಮಾಡಲಾಗುತ್ತದೆ. ಈ ವೈಜ್ನಾನಿಕ ಯುಗದಲ್ಲಿಯೂ ಇಂತಹ ಮಾಟ ಮಂತ್ರಗಳಿಗೆ ಮನಸೋತು ಜೀವನ ಹಾಳು ಮಾಡಿಕೊಳ್ಳುವ ಮಂದಿ ಇರುವುದನ್ನು ನೋಡಿದರೆ ನಾವಿನ್ನೂ ಯಾವ ಶತಮಾನದಲ್ಲಿ ಇದ್ದೇವೆ ಎಂದು ಸೋಜಿಗವಾಗುತ್ತದೆ. ಕೆಲವರು ಇದನ್ನೆ ಬಂಡವಾಳ ಮಾಡಿಕೊಂಡು ಶೋಷಣೆಗಿಳಿದಿದ್ದಾರೆ ಎಂದರು.ದೈಹಿಕ ಆರೋಗ್ಯದ ಬಗ್ಗೆ ಕೊಟ್ಟಷ್ಟು ಕಾಳಜಿಯನ್ನು ಮಾನಸಿಕ ಆರೋಗ್ಯಕ್ಕೆ ಕೊಡುತ್ತಿಲ್ಲ, ಮನೋ ವೈದ್ಯರ ಬಳಿ ಹೋಗಿ ಹೇಳಿಕೊಳ್ಳಲು ಹಿಂಜರಿಯುವವರೇ ಹೆಚ್ಚು ಇದರಿಂದ ತೊಂದರೆಗಳು ತಪ್ಪಿದ್ದಲ್ಲ ಎಂದರು.
ಪ್ರಾಂಶುಪಾಲ ಎಚ್. ವಿ. ಚಂದ್ರಶೇಖರ ಆರಾಧ್ಯ ಮಾತನಾಡಿ, ಜೀವನದಲ್ಲಿ ಜಿಗುಪ್ಸೆ , ಬೇಸರ ಬರುವುದು ಸಹಜ. ಇಂತಹ ಸಂದರ್ಭದಲ್ಲಿ ಇತರೆ ಆತ್ಮೀಯರ ಜೊತೆ ಮಾತನಾಡಬೇಕು, ವಿಷಯಗಳನ್ನು ಹಂಚಿಕೊಳ್ಳಬೇಕು. ಆಗ ಮನಸ್ಸು ಹಗುರವಾಗುತ್ತದೆ. ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಸಮಾರಂಭದಲ್ಲಿ ವರದಕ್ಷಿಣೆ ವಿರೋಧಿ ವೇದಿಕೆ ಪದಾಧಿಕಾರಿಳಾದ ರಾಜೇಶ್ವರಿ, ಗಂಗಲಕ್ಷ್ಮೀ, ಚೆಲುವರಾಜು, ಸಾಂತ್ವನ ಕೇಂದ್ರದ ಪಾರ್ವತಮ್ಮ, ಯುವರಾಣಿ, ಉಪನ್ಯಾಸಕರಾದ ನಟರಾಜು, ಗೋವಿಂದರಾಜು, ದೀಪ ಉಪಸ್ಥಿತರಿದ್ದರು.