ಸಾರಾಂಶ
ಸ್ಥಳೀಯ ಚುನಾವಣೆಯಲ್ಲಿ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಮೈತ್ರಿ ಗಟ್ಟಿಯಾಗಿದ್ದು, ಮುಂದುವರೆಯುತ್ತದೆ ಎಂದು ಈಗಾಗಲೇ ದೇವೇಗೌಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ, ಗೌಡರು ಗಟ್ಟಿ ನಿಲುವಿಂದ ಮೈತ್ರಿಗೆ ಒಪ್ಪಿಗೆ ನೀಡಿದ್ದಾರೆ.
ಕೋಲಾರ : ದೀಪಾವಳಿ ಕೊಡುಗೆ ಕೊಡುತ್ತಿದ್ದೇವೆ ಎಂದು ರಾಜ್ಯ ಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ಎ ಖಾತಾ ನೆಪದಲ್ಲಿ ೧೫,೦೦೦ ಕೋಟಿ ಸುಲಿಗೆ ಮಾಡಿ ಬೆಂಗಳೂರು ಗುಂಡಿಗಳನ್ನು ಮುಚ್ಚಲು ಹಣ ಸುಲಿಗೆ ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮುಳಬಾಗಿಲು ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯ ನಿಖಿಲ್ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡುವ ಅರ್ಜಿಗೆ ೫೦೦ ರೂಪಾಯಿ ಶುಲ್ಕ ವಿಧಿಸಲಾಗಿದೆ. ಆ ಶುಲ್ಕದ ಹೆಸರಿನಲ್ಲಿಯೇ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡುತ್ತಿದೆ ಎಂದು ಟೀಕಿಸಿದರು.
೩೦/೪೦ ನಿವೇಶನಕ್ಕೆ ೪ರಿಂದ ೮ ಲಕ್ಷ ರೂ.ವರೆಗೂ ಕಿತ್ತುಕೊಳ್ಳುತ್ತಿದ್ದಾರೆ. ಮೊದಲು ೧೦ರಿಂದ ೧೩ ಸಾವಿರ ರೂಪಾಯಿ ಅಷ್ಟನ್ನೇ ಕಟ್ಟಬೇಕಿತ್ತು. ಈಗ ಎ ಖಾತಾ ಮೂಲಕ ೧೫,೦೦೦ ಕೋಟಿ ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಹೇಳಿದರು.ಜೆಡಿಎಸ್- ಬಿಜೆಪಿ ಮೈತ್ರಿ ಗಟ್ಟಿ ಸ್ಥಳೀಯ ಚುನಾವಣೆಯಲ್ಲಿ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಮೈತ್ರಿ ಗಟ್ಟಿಯಾಗಿದ್ದು, ಮುಂದುವರೆಯುತ್ತದೆ ಎಂದು ಈಗಾಗಲೇ ದೇವೇಗೌಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ, ಗೌಡರು ಗಟ್ಟಿ ನಿಲುವಿಂದ ಮೈತ್ರಿಗೆ ಒಪ್ಪಿಗೆ ನೀಡಿದ್ದಾರೆ. ಮೈತ್ರಿಯಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ವಾತಾವರಣ ಸೃಷ್ಟಿಯಾಗುವುದಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ನಮ್ಮ ಮೈತ್ರಿ ಗಟ್ಟಿಯಾಗಿ ಮುಂದುವರೆಯುತ್ತೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ತಿಳಿಸಿದರು.
ರಾಜ್ಯದಲ್ಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಜೆಡಿಎಸ್, ಬಿಜೆಪಿ ಶಾಸಕರಿಗೆ ಅನುದಾನ ನೀಡಿಲ್ಲ, ಈ ಬಗ್ಗೆ ಹೋರಾಟ ಮಾಡುತ್ತೇವೆ. ಸದನದಲ್ಲಿ ಕುಮಾರಣ್ಣ ಅಂತಹ ನಾಯಕರ ಕೊರತೆ ಕಾಡುತ್ತಿದೆ.
ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯರಾಜ್ಯ ಸಚಿವ ಸಂಪುಟ ವಿಚಾರ ಅದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟ ವಿಚಾರ, ಸಚಿವ ಸಂಪುಟ ಪುನರ್ ರಚನೆಯಿಂದ ರಾಜ್ಯದ ಅಭಿವೃದ್ಧಿ ಆಗಲ್ಲ. ಈಗಿರುವ ಸಚಿವ ಸಂಪುಟದಲ್ಲಿ ಇರುವವರನ್ನು ಕೈಬಿಟ್ಟು ಹೊಸ ಮುಖಗಳಿಗೆ ನೀಡಿದರೂ ಕೂಡ, ರಾಜ್ಯದಲ್ಲಿ ಅಭಿವೃದ್ದಿ ಶೂನ್ಯ. ಸಂಪೂರ್ಣವಾಗಿ ಕುಂಠಿತವಾಗಿದೆ ಎಂದರು. ಆರೆಸ್ಸೆಸ್ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ಸಂಘಟನೆ ನೂರು ವರ್ಷ ಪೂರೈಸಿದೆ. ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಸಮಸ್ಯೆ ಉಂಟಾಗಿಲ್ಲ. ಶಿಸ್ತು ಬದ್ದವಾಗಿ ಸಮಾಜ ಕಟ್ಟುವ ಕೆಲಸ ಮತ್ತು ಚಿಂತನೆ ಮಾಡಿದೆ. ಕಾಂಗ್ರೆಸ್‌ನ ಕೆಲ ವ್ಯಕ್ತಿಗಳು ವಿಚಾರವನ್ನು ಡೈರಕ್ಷನ್ ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದವರು.
ಗೂಗಲ್ ಹಬ್ ಆಂಧ್ರಕ್ಕೆ:ಗೂಗಲ್ ಹಬ್ ಬೆಂಗಳೂರಿನಿಂದ ಆಂಧ್ರಕ್ಕೆ ಹೋಗಿದೆ. ಇದರಿಂದ ರಾಜ್ಯಕ್ಕೆ ನಷ್ಟವಾಗಿದೆ. ಬೆಂಗಳೂರಿಗೆ ಐಟಿ ಸೆಕ್ಟರ್‌ಗಳನ್ನು ತಂದವರು ದೇವೇಗೌಡರು. ಇದರ ಬಗ್ಗೆ ಚರ್ಚೆ ಮಾಡದೆ ಆರ್‌ಎಸ್‌ಎಸ್ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದೆ. ಕುಮಾರಣ್ಣ ಕೇಂದ್ರದಲ್ಲಿ ಸಚಿವರಾಗಿರುವ ಕಾರಣ ರಾಜ್ಯದಲ್ಲಿ ಜೆಡಿಎಸ್ ಮಂಕಾಗಿಲ್ಲ. ರಾಜ್ಯದ ವಿಚಾರಗಳ ಬಗ್ಗೆ ಕುಮಾರಣ್ಣ ಸ್ಪಂದಿಸುತ್ತಾ, ಪ್ರತಿ ವಿಚಾರದ ಬಗ್ಗೆಯೂ ಚರ್ಚೆ ಮಾಡ್ತಿದ್ದಾರೆ ಎಂದು ಹೇಳಿದರು.
ಮೊದಲು ಗ್ರಾಪಂ ಚುನಾವಣೆ
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ಮುಂಚೆ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದೆ, ಕುಮಾರಸ್ವಾಮಿ ರಾಜ್ಯದಲ್ಲಿ ಕಳೆದರೆಡು ದಿನಗಳಿಂದ ಇದ್ದು, ಶಾಸಕರ ಜೊತೆ ಮಾತನಾಡುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಶಾಸಕ ಸಮೃದ್ಧಿ ಮಂಜುನಾಥ್, ಎಂಎಲ್ಸಿ ಇಂಚರ ಗೋವಿಂದರಾಜು, ಮಾಜಿ ಎಂಎಲ್ಸಿ ತೂಪಲ್ಲಿ ಚೌಡರೆಡ್ಡಿ, ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಇದ್ದರು.
ಜೆಡಿಎಸ್ ಪಕ್ಷ ದೀಪಾವಳಿ ಬಂಪರ್ ಆಫರ್‌ನ್ನು ರಾಜ್ಯದ ಜನತೆ ಮುಂದೆ ಗುರುವಾರ ಬಿಡುಗಡೆ ಮಾಡಲಿದೆ.
--- ನಿಖಿಲ್ ಕುಮಾರಸ್ವಾಮಿ, ಯುವ ಜೆಡಿಸ್ ಅಧ್ಯಕ್ಷ