ಕುದೂರಿನಲ್ಲಿ ಮರೆಯಾಗುತ್ತಿರುವ ಕೈ ಮಗ್ಗಗಳು!

| Published : Jan 01 2024, 01:15 AM IST

ಸಾರಾಂಶ

ಕುದೂರು: ರಾಮನಗರ ಜಿಲ್ಲೆಯಲ್ಲಿ ಮಾಗಡಿ ತಾಲೂಕು ಕುದೂರು ಪಟ್ಟಣವನ್ನು ರೇಷ್ಮೆ ಸೀರೆ ನೇಯುವ ಪಟ್ಟಣ ಎಂದೇ ಕರೆಯುತ್ತಾರೆ. ಇರುವ ಆರೇಳು ಸಾವಿರ ಮನೆಗಳಲ್ಲಿ ಒಂದು ಸಾವಿರ ಮಗ್ಗದ ಮನೆಗಳೇ ಇವೆ. ಎಲ್ಲಿ ನೋಡಿದರೂ ಮಗ್ಗದ ಲಾಳಿಯ ಲಟಪಟ ಲಟಪಟ ಶಬ್ಧವೇ ತುಂಬಿರುತ್ತಿತ್ತು. ಇಲ್ಲಿ ನೇಕಾರಿಕೆ ಮಾಡಲು ದೂರದ ದೊಡ್ಡಬಳ್ಳಾಪುರ, ಬೆಂಗಳೂರು, ನೆಲಮಂಗಲ, ತಿಪಟೂರು ಕಡೆಗಳಿಂದ ನೌಕರರು ಕೆಲಸವನ್ನರಸಿ ಕುದೂರು ಗ್ರಾಮಕ್ಕೆ ಬರುತ್ತಿದ್ದರು.

ಕುದೂರು: ರಾಮನಗರ ಜಿಲ್ಲೆಯಲ್ಲಿ ಮಾಗಡಿ ತಾಲೂಕು ಕುದೂರು ಪಟ್ಟಣವನ್ನು ರೇಷ್ಮೆ ಸೀರೆ ನೇಯುವ ಪಟ್ಟಣ ಎಂದೇ ಕರೆಯುತ್ತಾರೆ. ಇರುವ ಆರೇಳು ಸಾವಿರ ಮನೆಗಳಲ್ಲಿ ಒಂದು ಸಾವಿರ ಮಗ್ಗದ ಮನೆಗಳೇ ಇವೆ. ಎಲ್ಲಿ ನೋಡಿದರೂ ಮಗ್ಗದ ಲಾಳಿಯ ಲಟಪಟ ಲಟಪಟ ಶಬ್ಧವೇ ತುಂಬಿರುತ್ತಿತ್ತು. ಇಲ್ಲಿ ನೇಕಾರಿಕೆ ಮಾಡಲು ದೂರದ ದೊಡ್ಡಬಳ್ಳಾಪುರ, ಬೆಂಗಳೂರು, ನೆಲಮಂಗಲ, ತಿಪಟೂರು ಕಡೆಗಳಿಂದ ನೌಕರರು ಕೆಲಸವನ್ನರಸಿ ಕುದೂರು ಗ್ರಾಮಕ್ಕೆ ಬರುತ್ತಿದ್ದರು.

ಇಂತಹ ಗ್ರಾಮದಲ್ಲಿಂದು ಅಲ್ಲೊಂದು ಇಲ್ಲೊಂದು ಎನ್ನುವಂತೆ ಮಗ್ಗದ ಲಾಳಿ ಶಬ್ಧ ಕೇಳಿಸುತ್ತಿದೆ. ಮಾರುಕಟ್ಟೆಯಲ್ಲಿ ಕರ್ನಾಟಕದಲ್ಲಿ ನೇಯುವ ಸೀರೆಗಳಿಗೆ ಮಾರುಕಟ್ಟೆ ಬೇಡಿಕೆ ಇಲ್ಲದಂತಾಗಿದೆ. ಇದರಿಂದಾಗಿ ನೇಕಾರಿಕೆ ಕೆಲಸ ದಿನೇ ದಿನೇ ಕಡಿಮೆಯಾಗುತ್ತಿದೆ. ಮಗ್ಗವನ್ನೆ ನಂಬಿಕೊಂಡು ಜೀವನ ಮಾಡುತ್ತಿರುವವರು ಇಂದು ರಸ್ತೆ ಬದಿಗಲಲ್ಲಿ ತಳ್ಳೋಗಾಡಿಗಳಲ್ಲಿ ಹೋಟೆಲ್, ವಡೆ ಬೋಂಡದ ಅಂಗಡಿಗಳನ್ನು ಇಟ್ಟುಕೊಂಡು ಜೀವನ ಮಾಡುವಂತಹ ಸ್ಥಿತಿ ತಲುಪಿದ್ದಾರೆ.

ಪವರ್ ಲೂಂ ಬಂದು ಹ್ಯಾಂಡ್ ಲೂಂ ನುಂಗಿತು:

ಮೊದಲೆಲ್ಲಾ ಕೈಮಗ್ಗದಲ್ಲಿ ರೇಷ್ಮೆ ಸೀರೆಗಳನ್ನು ನೇಯುತ್ತಿದ್ದರು. ನಂತರ ವಿದ್ಯುತ್ ಮಗ್ಗಗಳು ಬಂದ ನಂತರ ನೋಡ ನೋಡುತ್ತಿದ್ದಂತೆ ಕೈಮಗ್ಗ ಮರೆಯಾಗಿಯೇ ಹೋದವು. ಕುದೂರು ಗ್ರಾಮದಲ್ಲಿ ನೂರಾರು ಕೈಮಗ್ಗಗಳಿದ್ದವು. ಆದರೆ ಇಂದು ಕೇವಲ ಎಂಟತ್ತು ಮಗ್ಗಗಳು ಮಾತ್ರ ಉಳಿದುಕೊಂಡಿವೆ.

ವಿದ್ಯುತ್ ಮಗ್ಗಗಳಲ್ಲಿ ನಿತ್ಯ ಎರಡು ಮೂರು ಸೀರೆ ನೇಯಬಹುದು. ಆದರೆ ಕಂಪ್ಯೂಟರಿಗೊಂಡ ರೇಪಿಯರ್ ಮಗ್ಗಗಳು ಬಂದು ಹತ್ತು ಮಗ್ಗಗಳು ಮಾಡುವ ಕೆಲಸವನ್ನು ಒಂದೇ ಮಗ್ಗ ಮಾಡುತ್ತದೆ. ಇದರಿಂದ ಹತ್ತು ಮಗ್ಗಗಳನ್ನು ನೋಡಿಕೊಳ್ಳುವ ನೌಕರ ಒಂದೇ ಮಗ್ಗವನ್ನು ನೋಡಿಕೊಳ್ಳಬಲ್ಲ. ಇದರಿಂದ ಕೂಲಿ ಕಡಿಮೆಯಾಯಿತು. ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ನೇಯುವಂತಾಗುತ್ತದೆ. ಹಾಗೂ ಕಂಪ್ಯೂಟರ್ ಮೂಲಕ ಮಗ್ಗ ನಿಯಂತ್ರಣ ಮಾಡುವುದರಿಂದ ವಿವಿಧ ವಿನ್ಯಾಸಗಳಲ್ಲಿ ಸೀರೆ ಮಾರುಕಟ್ಟೆಗೆ ಬರುವ ಕಾರಣ ಸ್ಥಳೀಯ ಸೀರೆಗಳಿಗೆ ಬೇಡಿಕೆ ಕಡಿಮೆಯಾಗಿದೆ.

ಕರ್ನಾಟಕದ ಮಾರುಕಟ್ಟೆಗೆ ಗುಜರಾತಿನ ಸೂರತ್ ನಿಂದ ಸೀರೆಗಳು ಬರುತ್ತಿವೆ. ಇಲ್ಲಿನ ಸೀರೆಗಳಿಗಿಂತ ಸೂರತ್ ಸೀರೆಗಳಿಗೆ ಬೆಲೆ ಕಡಿಮೆ ಇರುತ್ತದೆ. ರೇಪಿಯರ್ ಮಗ್ಗಗಳಿಂದ ನೇಯ್ದಿರುವ ಕಾರಣ ಹತ್ತು ಜನರು ನಿಭಾಯಿಸುವ ಕೆಲಸವನ್ನು ಒಬ್ಬನೇ ನೌಕರ ನಿಭಾಯಿಸುವ ಕಾರಣ ಒಂಬತ್ತು ಜನರ ಕೂಲಿ ಉಳಿಯುತ್ತದೆ. ಮತ್ತು ಹತ್ತು ಮಗ್ಗಗಳು ಒಂದು ದಿನ ಮಾಡುವ ಕೆಲಸವನ್ನು ಒಂದೇ ಒಂದು ರೇಪಿಯರ್ ಮಗ್ಗ ಮಾಡುತ್ತದೆ. ಇದರಿಂದಾಗಿ ಇಲ್ಲಿನ ಸೀರೆಗಳಿಗೆ ಮಾರುಕಟ್ಟೆ ಇಲ್ಲದಂತಾಗಿದೆ.

ನೌಕರರು ಕರ್ನಾಟಕದವರಲ್ಲ :

ರೇಪಿಯರ್ ಮಗ್ಗವನ್ನು ನೇಯುವ ನೌಕರರು ಕರ್ನಾಟಕದವರಲ್ಲ ಬದಲಿಗೆ ನೇಯ್ಗೆ ಅನುಭವವಿರುವ ಸೂರತ್ ನ ನೌಕರರನ್ನು ಕರೆಸುತ್ತಾರೆ. ಈಗಾಗಲೇ ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಸೀರೆ ನೇಯಲು ರೇಪಿಯರ್ ಮಗ್ಗಗಳು ತಮ್ಮ ಜಾಗವನ್ನು ಮಾಡಿಕೊಂಡಿವೆ.

ಗ್ರಾಮೀಣ ಜನರಿಗೆ ತೊಂದರೆ :

ಮಾರುಕಟ್ಟೆ ಬಿದ್ದು ಹೋದ ಕಾರಣ ಗ್ರಾಮಾಂತರ ಪ್ರದೇಶದಲ್ಲಿ ಸಾಲ ಮಾಡಿ ಬಂಡವಾಳ ಹೂಡಿದ್ದವರು ಕೆಲಸವಿಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ನೌಕರರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ ಇರುವ ಕಚ್ಚಾ ರೇಷ್ಮೆ ಬಳಸಿಕೊಂಡು ಸಾವಿರಾರು ಸೀರೆಗಳನ್ನು ನೇಯ್ದಿದ್ದಾರೆ. ಆದರೆ ಅದನ್ನು ಮಾರುಕಟ್ಟೆಯಲ್ಲಿ ಹೋಲ್ ಸೇಲ್ ಅಂಗಡಿಯವರು ಕೊಂಡುಕೊಳ್ಳುತ್ತಿಲ್ಲ. ಅಕಸ್ಮಾತ್ ಕೊಂಡರು ಕಡಿಮೆ ಬೆಲೆಗೆ ಕೇಳುತ್ತಾರೆ. ಇದರಿಂದ ನೇಯ್ದ ಮಾಲೀಕನಿಗೆ ನಷ್ಟವಾಗುತ್ತದೆ. ಉದಾಹರಣೆಗೆ ಪಾಲೀಷ್ ಮಾಡಿರುವ ಒಂದು ಸೀರೆ ಕನಾಟಕದಲ್ಲಿ ನೇಯ್ದದ್ದು 1 ಸಾವಿರ ರು. ಆದರೆ ಸೂರತ್ ನಿಂದ ಬಂದ ಸೀರೆಗೆ 750 ರು. ಆಗುತ್ತದೆ. ಸಹಜವಾಗಿ ಜನರು ಕಡಿಮೆ ಬೆಲೆಯ ಸೀರೆಯ ಕಡೆಗೆ ವಾಲುತ್ತಾರೆ. ಹಾಗಾಗಿ ಇಲ್ಲಿನ ಸೀರೆಗಳಿಗೆ ಮಾರುಕಟ್ಟೆ ಇಲ್ಲದಂತಾಗಿದೆ. ಆದರೆ ಗುಣಮಟ್ಟದಲ್ಲಿ ಕರ್ನಾಟಕದಲ್ಲಿ ನೇಯ್ದ ಸೀರೆಗಳು ಎಂದಿಗೂ ರಾಜಿ ಮಾಡಿಕೊಂಡಿಲ್ಲ.

ತರಬೇತಿ ಅಗತ್ಯವಿದೆ :

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾಲದಿಂದ ಕಾಲಕ್ಕೆ ಬದಲಾಗಬೇಕು. ಹಾಗಾಗಿ ರೇಪಿಯರ್ ಮಗ್ಗಗಳು ಗ್ರಾಮಾಂತರ ಪ್ರದೇಶದಲ್ಲಿ ಅಳವಡಿಸಲು ಸರ್ಕಾರ ನೇಕಾರರಿಗೆ ಸಾಲ ಸೌಲಭ್ಯ ನೀಡಬೇಕು ಮತ್ತು ಅದನ್ನು ನಿರ್ವಹಿಸಲು. ಕಂಪ್ಯೂಟರ್ ಅಳವಡಿಸಿ ಮಾಡಿರುವ ರೇಪಿಯರ್ ಮಗ್ಗಗಳಲ್ಲಿ ಸೀರೆ ನೇಯುವ ತರಬೇತಿಯನ್ನು ಇಲ್ಲಿನ ಯುವಕರಿಗೆ ನೀಡಬೇಕು. ಇದರಿಂದಾಗಿ ಗ್ರಾಮಾಂತರ ಪ್ರದೇಶದ ತರುಣರಿಗೆ ಉದ್ಯೋಗ ದೊರೆತಂತಾಗುತ್ತದೆ ಎಂಬುದು ಪ್ರಜ್ಞಾವಂತ ಜನರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೋಟ್‌.............ಗುಣಮಟ್ಟದಲ್ಲಿ ಕೈಮಗ್ಗದ ರೇಷ್ಮೆ ಸೀರೆ ಅತ್ಯಂತ ಕಲಾತ್ಮಕವಾಗಿರುತ್ತದೆ. ನಂತರ ಪವರ್ ಲೂಂನಿಂದ ನೇಯ್ದ ಸೀರೆಗಳು ಕೂಡಾ ಮಾರುಕಟ್ಟೆಗೆ ಹೊಂದಿಕೊಂಡವು. ಆದರೆ ಹೊರರಾಜ್ಯಗಳಿಂದ ಬರುತ್ತಿರುವ ಸೀರೆಗಳಿಂದ ಇಲ್ಲಿನ ಸೀರೆಗಳಿಗೆ ನ್ಯಾಯವಾದ ಬೆಲೆ ಸಿಗದೆ ಮಾಲೀಕ ನಷ್ಟಕ್ಕೆ ಒಳಗಾಗುತ್ತಿದ್ದಾನೆ. ಇದರಿಂದಾಗಿ ಮಾರುಕಟ್ಟೆ ಯಾವಾಗ ಸುಧಾರಿಸುತ್ತದೆಯೋ ಅಲ್ಲಿಯ ತನಕ ಕರ್ನಾಟಕದ ನೇಕಾರರಿಗೆ ನೆಮ್ಮದಿ ಇಲ್ಲ .-ಪದ್ಮನಾಭ ನೇಕಾರ, ಕುದೂರು

31ಕೆಆರ್ ಎಂಎನ್‌ 6,7,8.ಜೆಪಿಜಿ

6. ಕುದೂರಿನಲ್ಲಿ ನೇಯ್ದ ಗುಣಮಟ್ಟದ ರೇಷ್ಮೆ ಸೀರೆಗಳು

7. ಮಗ್ಗ ನಿಲ್ಲಿಸಿ ನಿರಾಶೆಯಿಂದ ನಿಂತ ನೇಕಾರ

8. ಕಂಪ್ಯೂಟರ್ ನಿಯಂತ್ರಿತ ರೇಪಿಯರ್ ಮಗ್ಗ