ಸರ್ಕಾರದ ನಿಯಮ ಪಾಲಿಸದ ನ್ಯಾಯಬೆಲೆ ಅಂಗಡಿಗಳು

| Published : Mar 16 2024, 01:49 AM IST

ಸರ್ಕಾರದ ನಿಯಮ ಪಾಲಿಸದ ನ್ಯಾಯಬೆಲೆ ಅಂಗಡಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ನಿಯಮಾನುಸಾರ ನಿಗದಿತ ವೇಳೆಗೆ ಅಂಗಡಿ ಬಾಗಿಲು ತೆರೆಯದ ನ್ಯಾಯಬೆಲೆ ಅಂಗಡಿಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕುರಿತು ಲೋಕಾಯುಕ್ತಕ್ಕೆ ಸುಳ್ಳು ದಾಖಲೆ ನೀಡಿರುವ ಆಹಾರ ಶಿರಸ್ತೇದಾ‌ರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಯುವ ಸಂಚಲನ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ದೊಡ್ಡಬಳ್ಳಾಪುರ: ನಿಯಮಾನುಸಾರ ನಿಗದಿತ ವೇಳೆಗೆ ಅಂಗಡಿ ಬಾಗಿಲು ತೆರೆಯದ ನ್ಯಾಯಬೆಲೆ ಅಂಗಡಿಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕುರಿತು ಲೋಕಾಯುಕ್ತಕ್ಕೆ ಸುಳ್ಳು ದಾಖಲೆ ನೀಡಿರುವ ಆಹಾರ ಶಿರಸ್ತೇದಾ‌ರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಯುವ ಸಂಚಲನ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಸರ್ಕಾರಿ ಆದೇಶದ ಪ್ರಕಾರ ಮಂಗಳವಾರ ಮತ್ತು ಸರ್ಕಾರಿ ರಜಾದಿನ ಹೊರತುಪಡಿಸಿ ಎಲ್ಲಾ ನ್ಯಾಯ ಬೆಲೆ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 8ಗಂಟೆವರೆಗೆ ತೆರೆಯಬೇಕು. ಆದರೆ ತಾಲೂಕಿನ ಯಾವುದೇ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ಸಮಯವನ್ನು ಪಾಲನೆ ಮಾಡದೆ ತಿಂಗಳಲ್ಲಿ ನಾಲೈದು ದಿನಕ್ಕೆ ಬಾಗಿಲು ಹಾಕುತ್ತಿದ್ದಾರೆ. ಇದರಿಂದ ಪಡಿತರದಾರರು ಸಾಲಿನಲ್ಲಿ ನಿಲ್ಲಬೇಕಿರುವುದರಿಂದ ಮುಖ್ಯವಾಗಿ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ, ಮಹಿಳೆಯರಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಯುವ ಸಂಚಲನ ಅಧ್ಯಕ್ಷ ಚಿದಾನಂದ ಮಾತನಾಡಿ, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಲೋಕಾಯುಕ್ತರು ವರದಿ ಕೇಳಿದಾಗ ನ್ಯಾಯಬೆಲೆ ಅಂಗಡಿಗಳು ಸರಿಯಾದ ಸಮಯಕ್ಕೆ ಬಾಗಿಲು ತೆರೆಯುವ ಮೂಲಕ ಸರ್ಕಾರದ ಆದೇಶ ಪಾಲಿಸುತ್ತಿವೆ. ದೂರುದಾರರೇ ದುರುದ್ದೇಶದಿಂದ ದೂರು ನೀಡಿದ್ದಾರೆಂದು ಸುಳ್ಳು ದಾಖಲೆ ನೀಡಿರುವ ಆಹಾರ ಶಿರಸ್ತೇದಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ಮಾತನಾಡಿ, ದೂರುಗಳಿಗೆ ಸ್ಪಂದಿಸಬೇಕಿರುವ ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಧಿಕಾರಿಗಳು ಕೆಲಸದ ವೇಳೆ ಹೊರಗೆ ಹೋಗಬೇಕಾದರೆ ಕಚೇರಿಯ ಫಲಕದಲ್ಲಿ ನಮೂದಿಸಬೇಕು. ಆದರೆ ಇಲ್ಲಿ ಯಾವ ನಿಯಮಗಳೂ ಪಾಲನೆಯಾಗುತ್ತಿಲ್ಲ. ಪಡಿತರ ವಿತರಣೆ ವೇಳೆಯ ಅವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳು ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಮನವಿ ಸ್ವೀಕರಿಸಿದ ಆಹಾರ ನಿರೀಕ್ಷಕ ರಾಜು ಸಬಾಸ್ಟಿನ್ ಮಾತನಾಡಿ, ನಿಯಮ ಪಾಲನೆ ಮಾಡದ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಮನವಿಯನ್ನು ತಹಶೀಲ್ದಾರ್ ಗಮನಕ್ಕೆ ತರಲಾಗುವುದು ಎಂದರು.

ಯುವ ಸಂಚಲನದ ಎನ್.ಪಿ.ಗಿರೀಶ್, ದಿವಾಕರ್, ನಾಗರಾಜ್, ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಗೌಡ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ.ವೆಂಕಟೇಶ್, ರಘುಕುಮಾ‌ರ್, ನಟರಾಜ್, ವೆಂಕಟೇಶ್ ಇದ್ದರು.15ಕೆಡಿಬಿಪಿ7-

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನ್ಯಾಯಬೆಲೆ ಅಂಗಡಿಗಳ ಅಸಮರ್ಪಕ ಕಾರ್ಯನಿರ್ವಹಣೆ ಖಂಡಿಸಿ ಯುವ ಸಂಚಲನ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.