ಸಾರಾಂಶ
ರೈತರು, ವೃದ್ಧರು, ಮಹಿಳೆಯರು ಹೇಳುವ ಸಮಸ್ಯೆ ನಿಜವಾಗಿರುತ್ತದೆ. ಅವರನ್ನು ಕಣ್ಣೀರು ಹಾಕಿಸಬೇಡಿ. ಸತ್ಯಕ್ಕೆ ನಿಧಾನವಾಗಿಯಾದರೂ ಜಯ ಸಿಗುತ್ತದೆ. ಅಧಿಕಾರಿಗಳು ಸ್ಪಂದಿಸಿ ಶೀಘ್ರದಲ್ಲಿ ಸಮಸ್ಯೆ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮರವರು ಅಧಿಕಾರಿಗಳಿಗೆ ಸೂಚಿಸಿದರು.
ಆಲೂರು : ರೈತರು, ವೃದ್ಧರು, ಮಹಿಳೆಯರು ಹೇಳುವ ಸಮಸ್ಯೆ ನಿಜವಾಗಿರುತ್ತದೆ. ಅವರನ್ನು ಕಣ್ಣೀರು ಹಾಕಿಸಬೇಡಿ. ಸತ್ಯಕ್ಕೆ ನಿಧಾನವಾಗಿಯಾದರೂ ಜಯ ಸಿಗುತ್ತದೆ. ಅಧಿಕಾರಿಗಳು ಸ್ಪಂದಿಸಿ ಶೀಘ್ರದಲ್ಲಿ ಸಮಸ್ಯೆ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮರವರು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಇಡಿ ಜಿಲ್ಲೆಯಲ್ಲಿ ಸರ್ವೆಯರ್ (ಮೋಜಿಣಿದಾರರು) ಮೇಲೆ ಅತ್ಯಧಿಕ ಒತ್ತಡವಿದೆ. ಸ್ವೀಕರಿಸಿರುವ ಅರ್ಜಿಗಳಿಗೆ ಒಂದು ತಿಂಗಳಿನಲ್ಲಿ ಪರಿಹಾರ ಕಲ್ಪಿಸಲಾಗುವುದು ಅಥವಾ ಹಿಂಬರಹ ನೀಡಲಾಗುವುದು ಎಂದರು.
ಶಾಸಕ ಸಿಮೆಂಟ್ ಮಂಜುರವರು ಮಾತನಾಡಿ, ತಾಲೂಕಿನಲ್ಲಿ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲ ಸಮಸ್ಯೆಗಳಿಗೆ ಜಿಲ್ಲಾಡಳಿತ ಪರಿಹಾರ ರೂಪಿಸುತ್ತದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನನಗೆ ನೇರವಾಗಿ ಅರ್ಜಿ ನೀಡಬಹುದು. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಪ್ರಯತ್ನಿಸುತ್ತೇನೆ ಎಂದರು. ಸ್ಮಶಾನ ಜಾಗವನ್ನು ಒತ್ತುವರಿ ಮಾಡಿರುವ ದೂರು ಹೆಚ್ಚಾಗಿ ದಾಖಲೆಯಾಗುತ್ತಿದೆ. ಪಿಡಿಒಗಳು ಕೂಡಲೆ ಸರ್ವೆ ಮಾಡಿ ಬಿಡಿಸಿ ನರೇಗಾ ಯೋಜನೆಯಲ್ಲಿ ತಂತಿ ಬೇಲಿ ಹಾಕಿ ೧೫ ದಿನಗಳಲ್ಲಿ ವರದಿ ಕೊಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮಾ ಸೂಚಿಸಿದರು.
ಪಟ್ಟಣದಲ್ಲಿರುವ ಮಿನಿ ವಿಧಾನಸೌಧ ಕಚೇರಿಗೆ ಲಿಫ್ಟ್ ಅಳವಡಿಕೆ, ಒಳಚರಂಡಿ, ಪಾರ್ಕಿಂಗ್, ಹಳೆ ಪೊಲೀಸ್ ನಿವೇಶನ ಜಾಗವನ್ನು ನೆಲಸಮಗೊಳಿಸಬೇಕು, ಮಗ್ಗೆ ಗ್ರಾಮದಲ್ಲಿ ಪೊಲೀಸ್ ಠಾಣೆ ತೆರೆಯಬೇಕು. ದಡದಹಳ್ಳಿ ಕೆರೆ ಕೋಡಿ ನಿರ್ಮಾಣವಾಗಬೇಕು, ಪಟ್ಟಣ ವ್ಯಾಪ್ತಿಗೆ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು, ಎಂ.ಯು.ಎಸ್.ಎಸ್. ಸ್ಟೇಷನ್ ನಿರ್ಮಾಣವಾಗಬೇಕು, ಬೂದನಹಳ್ಳಿ ದಲಿತರಿಗೆ ಮಂಜೂರಾಗಿರುವ ಜಮೀನು ಬಿಡಿಸಿಕೊಡಬೇಕು, ವಾಟೆಹೊಳೆ ಇಲಾಖೆಯಿಂದ ೨೦೧೫ ರಲ್ಲಿ ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು, ವಾಟೆಹೊಳೆ ನಾಲೆ ಹೂಳೆತ್ತಬೇಕು, ಕ್ರೀಡಾಂಗಣಕ್ಕೆ ಮೂಲಭೂತ ಸೌಕರ್ಯ ಒದಗಿಸಬೇಕು, ಕದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಆಲೂರು ಸೆಸ್ಕ್ ಇಲಾಖೆಗೆ ಸೇರಿಸಬೇಕು, ಮಿನಿ ವಿಧಾನಸೌಧ ಕಚೇರಿಯಲ್ಲಿ ಮದ್ಯವರ್ತಿಗಳ ಹಾವಳಿ ತಪ್ಪಿಸಬೇಕು, ಪಟ್ಟಣದ ಮುಖ್ಯ ರಸ್ತೆಯಂಚಿನ ಪಾದಚಾರಿ ರಸ್ತೆಯಲ್ಲಿಟ್ಟಿರುವ ಅಂಗಡಿಗಳನ್ನು ತೆರವುಗೊಳಿಸಬೇಕು, ಬ್ಯಾಬ ಫಾರೆಸ್ಟ್ ಜಮೀನು ದುರಸ್ತಿಯಾಗಬೇಕು, ಅಬಕಾರಿ ಇಲಾಖೆ ನಿರ್ಲಕ್ಷ್ಯದಿಂದ ಎಲ್ಲೆಂದರಲ್ಲಿ ಮದ್ಯ ಮಾರಾಟವಾಗುತ್ತಿರುವುದನ್ನು ತಡೆಯಬೇಕು ಎಂದು ಕೋರಿ ಹಲವರು ಅರ್ಜಿಗಳನ್ನು ಸಲ್ಲಿಸಿದರು.
ಪ್ರತಿ ಅರ್ಜಿಗಳನ್ನು ಖುದ್ದಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ದೂರುದಾರರು ಮತ್ತು ಸಂಬಂಧಿಸಿದ ಅಧಿಕಾರಿಗಳಿಂದ ಸ್ಥಳದಲ್ಲೆ ಮಾಹಿತಿ ಪಡೆದು ಕೆಲ ಅರ್ಜಿಗಳನ್ನು ಇತ್ಯರ್ಥಪಡಿಸಿದರು. ಕೆಲ ಸಮಸ್ಯೆಗಳನ್ನು ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು. ಅರ್ಜಿದಾರರಿಗೆ ಒಂದು ತಿಂಗಳಿನಲ್ಲಿ ಉತ್ತರ ಸಿಗದಿದ್ದರೆ ನೇರವಾಗಿ ನಮ್ಮ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಲು ಅವಕಾಶವಿದೆ ಎಂದು ತಿಳಿಸಿದರು.ಹಳೆ ಪೊಲೀಸ್ ನಿವೇಶನ ಜಾಗವನ್ನು ಅತಿ ಶೀಘ್ರದಲ್ಲಿ ನೆಲಸಮಗೊಳಿಸಿ ಶುಚಿತ್ವ ಕಾಪಾಡಲಾಗುವುದು ಎಂದು ಡಿವೈಎಸ್ಪಿ ಪ್ರಮೋದ್ ಕುಮಾರ್ ತಿಳಿಸಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ಶೃತಿ, ಸಹಾಯಕ ಜಿಲ್ಲಾಧಿಕಾರಿ ಶಕುಂತಲಾ, ಡಿಡಿಎಲ್‌ಆರ್ ಸುಜಯ್ ಕುಮಾರ್, ಜಿ. ಪಂ. ಉಪ ಕಾರ್ಯದರ್ಶಿ ಚಂದ್ರಶೇಖರ್, ಮುಖ್ಯ ಲೆಕ್ಕಾಧಿಕಾರಿ ತಬ್ಜಲ್ ಹುಸೇನ್, ತಹಸೀಲ್ದಾರ್ ನಂದಕುಮಾರ್, ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಪಿ. ಶ್ರೀನಿವಾಸ್, ಪೊಲೀಸ್ ಇನ್ಸ್‌ಪೆಕ್ಟರ್ ಗಂಗಾಧರ್ ಮತ್ತು ಜಿಲ್ಲೆ ಮತ್ತು ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.