ಸಾರಾಂಶ
ಅಫಜಲ್ಪುರ ಪಟ್ಟಣದ ಸಿದ್ದರಾಮೇಶ್ವರ ದೇವಸ್ಥಾನದ ಆವರಣದಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘ ತಾಲೂಕು ಘಟಕ ಮತ್ತು ಜಿಲ್ಲಾ ಘಟಕದ ಸಭೆ ನಡೆಸಿ, ಡಿ.23ರ ರೈತ ದಿನದಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ರೈತ ಮಹಾ ಅಧಿವೇಶನ ನಿಮಿತ್ತ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಹೋಗಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಪಟ್ಟಣದ ಸಿದ್ದರಾಮೇಶ್ವರ ದೇವಸ್ಥಾನದ ಆವರಣದಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘ ತಾಲೂಕು ಘಟಕ ಮತ್ತು ಜಿಲ್ಲಾ ಘಟಕದ ಸಭೆ ನಡೆಸಿ, ಡಿ.23ರ ರೈತ ದಿನದಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ರೈತ ಮಹಾ ಅಧಿವೇಶನ ನಿಮಿತ್ತ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಹೋಗಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ಮಾತನಾಡಿ, ಕಳೆದು ಮೂರು ವರ್ಷಗಳಿಂದ ತಾಲೂಕಿನಲ್ಲಿ ಬರಗಾಲಕ್ಕೆ ತುತ್ತಾದ ಎಲ್ಲಾ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಸಾಲ ಪಡೆದ ರೈತರು ಬೆಳೆ ಬೆಳೆಯಲು ಹೂಡಿಕೆ ಮಾಡಿದ್ದಾರೆ. ಬೆಳೆ ನಾಶವಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗಾರಿಕೆ ಉದ್ಯಮಗಳಿಗೆ ಸಂಕಷ್ಟದ ನೆರವು ಎಂದು ₹12 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ರೀತಿ ರೈತರ ಸಾಲ ಮನ್ನಾಮಾಡಬೇಕು ಎಂದರು.
ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು. ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಪ್ರಧಾನಿಯವರು ರೈತರಿಗೆ ಭರವಸೆ ನೀಡಿದಂತೆ ಕೇಂದ್ರ ಸರ್ಕಾರ ಕೂಡಲೇ ಜಾರಿ ಮಾಡಬೇಕು. ಬರಗಾಲದ ಸಂಕಷ್ಟದಿಂದ ರೈತರು ಸತ್ತರು ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ರಾಜಕೀಯ ಚೆಲ್ಲಾಟವಾಡುತ್ತಿವೆ. ಬರ ಪರಿಹಾರ ಕೇವಲ ಭಿಕ್ಷೆಯ ರೂಪದಲ್ಲಿ 2000 ಕೊಡುತ್ತೇವೆ ಎಂದಿರುವುದು ಸಮರ್ಪಕ ನಿರ್ಧಾರವಲ್ಲ. ನಮಗೇನು ನೀವು ಭಿಕ್ಷೆ ಕೊಡಬೇಡಿ, ಎಕರೆಗೆ ಕನಿಷ್ಠ 25000 ರುಪಾಯಿ ಬರ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕು. ಕಬ್ಬಿನ ಬೆಳೆಯನ್ನು ಎನ್‌ಡಿಆರ್‌ಎಫ್ ಮಾನದಂಡಕ್ಕೆ ಸೇರಿಸಬೇಕು, ಬರಗಾಲ ಪರಿಹಾರ ಕಬ್ಬಿನ ಬೆಳೆಗೂ ಸಿಗುವಂತಾಗಬೇಕು. ಎಲ್ಲಾ ಕೃಷಿ ಬೆಳೆಗಳಿಗೂ ಕಡ್ಡಾಯವಾಗಿ ಬೆಳೆ ವಿಮೆ ಜಾರಿಗೊಳಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್ ತಪ್ಪಿಸಲು ವಿದ್ಯುತ್ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ಹಗಲು ವೇಳೆ 10 ಗಂಟೆ ವಿದ್ಯುತ್ ನೀಡಬೇಕು. ರೈತರ ತೋಟದ ಮನೆಗಳಿಗೆ ರಾತ್ರಿ ಹೊತ್ತು ಬೆಳಕಿನ ಸಲುವಾಗಿ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಹದೇವಪ್ಪ ಶೇರಿಕರ, ಲಕ್ಷ್ಮಿ ಪುತ್ರ ಮನಮಿ, ಬಸವರಾಜ ವಾಳಿ, ಬಸವರಾಜ ಹಳಿಮನಿ, ದೊರೆಪ್ಪ ಡಾಂಗೆ, ಲಕ್ಷ್ಮಿ ಪುತ್ರ ಮ್ಯಾಳೆಸಿ, ಸಿದ್ದಪ್ಪ ಡಾಂಗೆ, ಭಾಗಣ್ಣ ಕುಂಬಾರ, ಗುರುಶಾಂತ ಬಿಲ್ಲಾಡ, ಭೀಮನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಪ್ರಕಾಶ ಪುಲಾರಿ, ಸಾಯಬಣ್ಣ ಪೂಜಾರಿ ಸೇರಿದಂತೆ ಹಲವಾರು ರೈತ ಮುಖಂಡರಿದ್ದರು.