ಟೌನ್‌ಶಿಪ್ ವಿರೋಧಿಸಿ ಪಾದಯಾತ್ರೆಗೆ ರೈತರ ನಿರ್ಧಾರ

| Published : Mar 12 2025, 12:50 AM IST

ಸಾರಾಂಶ

ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ವತಿಯಿಂದ ಟೌನ್‌ಶಿಪ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತಾಲೂಕಿನ ಬಿಡದಿ ಹೋಬಳಿ ಸುತ್ತಮುತ್ತಲಿನ ಗ್ರಾಮಸ್ಥರು ಬಿಡದಿಯಿಂದ ರಾಮನಗರದವರೆಗೆ ಬೃಹತ್ ಪಾದಯಾತ್ರೆ ನಡೆಸಲು ತೀರ್ಮಾನಿಸಿದರು.

ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ವತಿಯಿಂದ ಟೌನ್‌ಶಿಪ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತಾಲೂಕಿನ ಬಿಡದಿ ಹೋಬಳಿ ಸುತ್ತಮುತ್ತಲಿನ ಗ್ರಾಮಸ್ಥರು ಬಿಡದಿಯಿಂದ ರಾಮನಗರದವರೆಗೆ ಬೃಹತ್ ಪಾದಯಾತ್ರೆ ನಡೆಸಲು ತೀರ್ಮಾನಿಸಿದರು.

ಟೌನ್ ಶಿಪ್ ಯೋಜನೆ ವಿರೋಧಿಸಿ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಹೊಸೂರು ಗ್ರಾಮದ ಮದ್ದೂರಮ್ಮ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಹೋರಾಟದ ರೂಪುರೇಷೆಗಳ ಕುರಿತು ನಡೆಸಿದ ಸಭೆಯಲ್ಲಿ ಸುಮಾರು 9,600 ಎಕರೆ ಭೂ ಸ್ವಾಧೀನ ವಿರೋಧಿಸಿ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ರವರು ಶೀಘ್ರದಲ್ಲೇ ಭೈರಮಂಗಲದಿಂದ ಪಾದಯಾತ್ರೆ ನಡೆಸೋಣ. ಊರಿಗೆ ಎರಡು ಜನ ಸಮಿತಿಗೆ ಹೆಸರು ಕೊಡಬೇಕು ಎಂದು ಹೇಳಿದಾಗ ಸಭೆಯಲ್ಲಿ ಹಾಜರಿದ್ದವರು ಬೆಂಬಲ ವ್ಯಕ್ತಪಡಿಸಿದರು.

ಹೋರಾಟ ಸಮಿತಿ ರಚನೆ :

ಹೋರಾಟವನ್ನು ಪಕ್ಷಾತೀತವಾಗಿ ಹಾಗೂ ರಾಜಕೀಯ ರಹಿತವಾಗಿ ಮುನ್ನಡೆಸಲು ಜಿಬಿಡಿಎ ವ್ಯಾಪ್ತಿಗೆ ಸೇರಿಸಿರುವ ಪ್ರತಿ ಗ್ರಾಮಗಳಿಂದ ತಲಾ ಮೂವರನ್ನು ಒಳಗೊಂಡ ಹೋರಾಟ ಸಮಿತಿಯನ್ನು ರಚಿಸಲು ಮುಖಂಡರು ನಿರ್ಧರಿಸಿದರು. ಸಮಿತಿಯಲ್ಲಿ ಪ್ರತಿ ಹಂತದ ಸ್ವರೂಪ ಹೇಗಿರಬೇಕೆಂಬುದನ್ನು ಸಮಿತಿಯಲ್ಲಿ ಚರ್ಚಿಸಿ ಒಮ್ಮತದಿಂದ ಅಂಗೀಕರಿಸಿ ಮುಂದುವರಿಯಲು ತೀರ್ಮಾನಿಸಿದರು.

ಅಂಚೀಪುರ ಗ್ರಾಮದ ನಾಗರಾಜ್ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ನಮ್ಮ ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದಿರುವ ಜಮೀನನ್ನು ಯಾರೋ ಬಂದು ಕಿತ್ತುಕೊಳ್ಳಲು ಬಿಡಬಾರದು.. ನಮ್ಮ ಆಸ್ತಿ ಮಾರಿದರೆ ನಮ್ಮ ಹೆಣ ಎಲ್ಲಿ ಹೂಡುತ್ತಾರೆ. ನಮ್ಮ ಹಿರಿಯರ ಸಮಾಧಿಗಳ ಮೇಲೆ ಮನೆಗಳು ಮತ್ತು ಕಟ್ಟಡಗಳು ನಿರ್ಮಾಣವಾಗುತ್ತದೆ ಎಂದರು.

ಹೊಸೂರಿನ ಎಚ್.ಸಿ.ಆನಂದ ಮಾತನಾಡಿ, ನಮ್ಮಲ್ಲಿ ಒಗ್ಗಟ್ಟು ಇದ್ದರೆ ನಮ್ಮ ಭೂಮಿ ನಮಗೆ ಉಳಿಯುತ್ತದೆ. ನಮ್ಮ ನಡುವೆ ಒಡಕುಂಟಾದರೆ ನಮ್ಮ ಭೂಮಿ ಕೈ ತಪ್ಪಲಿದೆ. ಕಡೆಗೆ ನಾವು ಬೀದಿ ಪಾಲಾಗಲಿದ್ದೇವೆ. ಅಂಬೇಡ್ಕರ್ ತೋರಿಸಿರುವ ಕಾನೂನಾತ್ಮಕ ಹೋರಾಟದ ಹಾದಿ ಹಿಡಿದು ನಮ್ಮ ಭೂಮಿ ಉಳಿಸಿಕೊಳ್ಳೋಣ ಎಂದು ಹೇಳಿದರು.

ಹೊಸೂರಿನ ನಾಗರಾಜ್ ಮಾತನಾಡಿ, ಹಿಂದೆ ಏನಾಗಿತ್ತು ಎಂಬುದು ಬೇಡ. ಮುಂದೇನು ಮಾಡಬೇಕು ಎಂದು ಯೋಚಿಸಬೇಕು. ಭೂ ಸ್ವಾಧೀನದ ಹಿಂದೆ ಕೆಲವರ ಸ್ವಾರ್ಥವಿದೆ‌. ಈಗಾಗಲೇ ಬಿಡಿಎ ವಶಪಡಿಸಿಕೊಂಡಿರುವ ಭೂಮಿಯಲ್ಲಿ ಇನ್ನೂ ಮನೆಗಳು ನಿರ್ಮಾಣವಾಗಿಲ್ಲ. ಹೀರುವಾಗ ನಮ್ಮ ಭೂಮಿ ವಶಪಡಿಸಿಕೊಳ್ಳಲು ಬಂದಿದ್ದಾರೆ. 2013ರ ಕಾಯ್ದೆಯ ಪ್ರಕಾರ ಶೇ 60ರಷ್ಟು ರೈತರು ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದರೆ ಅದನ್ನು ಕೈ ಬಿಡಬೇಕಿದೆ ಎಂದು ತಿಳಿಸಿದರು.

ಮುಖಂಡ ಇಟ್ಟಮಡು ಗೋಪಾಲ್ ಮಾತನಾಡಿ, ಹೋರಾಟದ ದಿಕ್ಕು ತಪ್ಪಿಸಲು ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಾರೆ. ಅದರ ಬಗ್ಗೆ ಎಚ್ವರಿಕೆ ವಹಿಸೋಣ. ಮೋಸ ಮಾಡುವವರನ್ನು ಹಿಮ್ಮೆಟ್ಟಿಸೋಣ. ಇಡೀ ಬಿಡದಿ ಹೋಬಳಿ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಗ್ರಾಮವಾರು ಮುಖಂಡರು ತಮ್ಮ ಅಭಿಪ್ರಾಯ ಹಂಚಿಕೊಂಡರು. ‘ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡುವವರೆಗೆ ಹೋರಾಟ ನಿಲ್ಲಿಸಬಾರದು’ ಎಂದು ಸಾಮೂಹಿಕವಾಗಿ ನುಡಿದ ಮುಖಂಡರು, ಕಡೆಗೆ ‘ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ’ದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಬಿಡಿಎ ವ್ಯಾಪ್ತಿಗೆ ಸೇರಿರುವ ಭೈರಮಂಗಲ ಪಂಚಾಯಿತಿ ಗ್ರಾಮಗಳಾದ ಭೈರಮಂಗಲ, ಬನ್ನಿಗಿರಿ, ಮಂಡಲಹಳ್ಳಿ, ಕಂಚುಗಾರನಹಳ್ಳಿ ಪಂಚಾಯಿತಿಯ ಕಂಚುಗಾರನಹಳ್ಳಿ, ಕಂಚುಗಾರನಹಳ್ಳಿ ಕಾವಲು, ಕೆಂಪಯ್ಯನಪಾಳ್ಯ, ಹೊಸೂರು, ಅರಾಳುಸಂದ್ರ, ಕೆ.ಜೆ. ಗೊಲ್ಲರಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು, ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳ ಸದಸ್ಯರು, ರೈತ ಸಂಘದ ಮುಖಂಡರು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರು ಸಭೆಯಲ್ಲಿ ಭಾಗವಹಿಸಿದ್ದರು.

ತಾಪಂ ಮಾಜಿ ಸದಸ್ಯ ಹೊಸೂರು ಪ್ರಕಾಶ್‌, ಭೈರಮಂಗಲ ಹೇಮಂತ್‌, ಹೊಸೂರು ಶ್ರೀಧರ್, ರಾಧಾಕೃಷ್ಣ. ಅಳ್ಳಾಳುಸಂದ್ರ ಅಶ್ವಥ್. ಸೀನಪ್ಪ ಭೈರಮಂಗಲ. ನಾಗರಾಜು ಮಂಡಲಹಳ್ಳಿ. ಹೊಸದೊಡ್ಡಿ ಶೇಷಪ್ಪ. ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಬಿ.ಗೋಪಾಲ್. ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ವೆಂಕಟಾಚಲ ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್‌..........ಮಾತಿನ ಚಕಮಕಿ - ಪರಸ್ಪ‍ರ ತಳ್ಳಾಟ:ಸಭೆಯಲ್ಲಿ ಕೆಲ ಮುಖಂಡರ ಮಾತುಗಳಲ್ಲಿ ರಾಜಕೀಯ ಬೆರೆಸಿದ್ದರಿಂದ ಮಾತಿನ ಚಕಮಕಿ ನಡೆದು, ಕೈ–ಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಭೈರಮಂಗಲದ ಮುಖಂಡ ಸಿದ್ದರಾಜು , ‘ಹದಿನೆಂಟು ವರ್ಷವಾದರೂ ನಮ್ಮ ಭಾಗ ಕೆಂಪು ವಲಯದಲ್ಲಿದೆ. ಇದನ್ನು ತೆಗೆಸುವುದು ಯಾರು? ಈ ಅವಧಿಯಲ್ಲಿ ಮೂರೂ ಪಕ್ಷಗಳ ಸರ್ಕಾರ ಬಂದು ಹೋಗಿದೆ. ಹಿಂದೆ ನಾವು ಭೂ ಸ್ವಾಧೀನದ ಪರ ಇದ್ದು, ಈಗ ವಿರುದ್ಧ ನಿಲ್ಲಬೇಕಾದ ಸ್ಥಿತಿಯಲ್ಲಿದ್ದೇವೆ. ಈ ಸಭೆಯು ಭೂ ಸ್ವಾಧೀನದ ಪರವೋ ಅಥವಾ ವಿರುದ್ಧವೋ ಎಂಬುದು ಮೊದಲು ಸ್ಪಷ್ಟವಾಗಬೇಕು. ಹೋರಾಟಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವು ಸ್ಪಷ್ಟವಾಗಿರಬೇಕು’ ಎಂದು ಕೆಲ ರಾಜಕೀಯ ನಾಯಕರ ಹೆಸರು ಪ್ರಸ್ತಾಪಿಸಿದರು.ಆಗ ಕೆಲವರು ಸಭೆಯಲ್ಲಿ ರಾಜಕೀಯ ತರಬೇಡಿ ಎಂದು ವೇದಿಕೆಗೆ ಬಂದು ಆಕ್ಷೇಪ ವ್ಯಕ್ತಪಡಿಸಿದರು. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ, ಎರಡೂ ಕಡೆಯವರು ವೇದಿಕೆಯತ್ತ ಧಾವಿಸಿ ತಮ್ಮವರ ಪರ ಮಾತನಾಡಿದರು. ಈ ವೇಳೆ, ಪರಸ್ಪರ ತಳ್ಳಾಟ ನಡೆದು ಕೈ–ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಹಿರಿಯ ಮುಖಂಡರು ಎರಡೂ ಕಡೆಯವರನ್ನು ಸಮಾಧಾನಪಡಿಸಿದರು. ‘ಭೂ ಸ್ವಾಧೀನದ ವಿರುದ್ಧ ಈ ಸಭೆ ಆಯೋಜಿಸಲಾಗಿದೆ. ಆ ಆಶಯಕ್ಕೆ ಬದ್ಧರಾಗಿ ಎಲ್ಲರೂ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡು, ಮುಂದಿನ ಹೋರಾಟಕ್ಕೆ ಸಲಹೆ ನೀಡಬೇಕು’ ಎಂದು ಸ್ಪಷ್ಟಪಡಿಸಿದ ಬಳಿಕ, ಸಭೆ ಮುಂದುವರಿಯಿತು.

ಕೋಟ್‌..........ಹೋರಾಟಕ್ಕೆ ನಮ್ಮ ಸಂಘದ ಬೆಂಬಲವಿದೆ. ಇತ್ತೀಚೆಗೆ‌ ಹೂಡಿಕೆದಾರರ ಸಮಾವೇಶ ಮಾಡಿರುವ ಸರ್ಕಾರ ಬಂಡವಾಳ ಹೂಡಿಕೆದಾರರಿಗೆ 25 ಸಾವಿರ ಎಕರೆ ಭೂಮಿ ನೀಡುವ ಭರವಸೆ ನೀಡಿದೆ. ಹತ್ತು ಸಾವಿರ ಕೋಟಿ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದೆ. 2013ರ ಭೂ ಸ್ವಾಧೀನ ಕಾಯ್ದೆ ಪ್ರಕಾರ ಈ ಭಾಗದ ಜಮೀನು ವಶಪಡಿಸಿಕೊಳ್ಳುವಂತಿಲ್ಲ. ಹೋರಾಟ ನಿರಂತರವಾಗಿ ನಡೆಯಬೇಕು. ರೈತರು ಮುನ್ನುಗ್ಗಿದರೆ ಸರ್ಕಾರ ಬಾಗಲಿದೆ‌. ನಾವು ಭಿನ್ನಾಭಿಪ್ರಾಯ ಬದಿಗೊತ್ತಿ ಸಾಗಬೇಕು. ಇದರಲ್ಲಿ ರಾಜಕೀಯ ತರುವವರು ಬೇಡ. ನೈಸ್ ಸಂಸ್ಥೆ ಅಶೋಕ ಖೇಣಿಯಂತೆ ಇವರು ವಶಪಡಿಸಿಕೊಳ್ಳುವ ಭೂಮಿಯನ್ನು ಅಭಿವೃದ್ಧಿ ಬದಲು ರಿಯಲ್ ಎಸ್ಟೇಟ್ ಗೆ ಬಳಸುತ್ತಾರೆ. ನೈಸ್ ಕಂಪನಿ ವಶಪಡಿಸಿಕೊಂಡಿರುವ 45 ಸಾವಿರ ಎಕರೆ ಭೂಮಿಯನ್ನು ರೈತರಿಗೆ ವಾಪಸ್ ಕೊಡಬೇಕಾದ ಸ್ಥಿತಿ ಬಂದಿದೆ.

-ವೆಂಕಟಾಚಲಪ್ಪ, ಉಪಾಧ್ಯಕ್ಷರು, ಕರ್ನಾಟಕ ಪ್ರಾಂತ ರೈತ ಸಂಘ

11ಕೆಆರ್ ಎಂಎನ್ 4,5.ಜೆಪಿಜಿ

4.ಹೊಸೂರು ಗ್ರಾಮದ ಮದ್ದೂರಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತಿನ ಚಕಮಕಿಯಲ್ಲಿ ತೊಡಗಿರುವ ಗ್ರಾಮಸ್ಥರು

5.ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು.