ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ರೈತರು ಒಂದೇ ಬೆಳೆ ಬೆಳೆಯದೆ ತಮ್ಮ ಜಮೀನಿನಲ್ಲಿ ಮಣ್ಣಿನ ಫಲವತ್ತತೆಗೆ ಅನುಗುಣವಾಗಿ ಲಾಭದಾಯಕ ಬೆಳೆ ಬೆಳೆಯುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಸಲಹೆ ನೀಡಿದರು.ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತೋಟಗಾರಿಕೆ ಇಲಾಖೆಯಿಂದ ಹಾಗೂ 2025-26 ನೇ ಸಾಲಿನ ಜಿಲ್ಲಾ ಪಂಚಾಯ್ತಿ ಯೋಜನೆಯಡಿ ನಡೆದ ಪ್ರಗತಿಪರ ರೈತರಿಗೆ ಸಮಗ್ರ ಕೃಷಿ ಪದ್ಧತಿ, ಹನಿ ನೀರಾವರಿ ಅಳವಡಿಕೆ ಹಾಗೂ ವಿವಿಧ ಬೆಳೆಗಳ ಕೋಯ್ಲೋತ್ತರ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಣ್ಣಿನ ಫಲವತ್ತತೆ, ನೀರಿನ ಸೌಲಭ್ಯ ಉತ್ತಮವಾಗಿದೆ. ಇದರ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬ ರೈತರು ಒಂದೇ ರೀತಿಯ ಬೆಳೆಗಳನ್ನು ಬೆಳೆಯದೆ ಇತರೆ ಲಾಭದಾಯಕ ಬೆಳೆಗಳನ್ನು ಸಹ ಬೆಳೆಯುವಂತೆ ಕಿವಿಮಾತು ಹೇಳಿದರು.ರೈತರು ಉದ್ದಿಮೆದಾರರಾಗಬೇಕು, ಆರ್ಥಿಕವಾಗಿ ಸದೃಢರಾಗುವಂತೆ ಮಾಡಲು ಕಾರ್ಯಾಗಾರ ಆಯೋಜಿಸಲಾಗಿದೆ. ಯಾವ ಮಣ್ಣಿಗೆ ಯಾವ ಬೆಳೆ ಬೆಳೆಯಬೇಕು, ಯಾವ ವರ್ತಮಾನದಲ್ಲಿ ಯಾವ ಬೆಳೆ ಉತ್ತಮ, ಯಾವುದು ಲಾಭದಾಯಕ ಎಂಬುದನ್ನು ಅರಿತು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರೈತರು ಒಂದೇ ಬೆಳೆಗೆ ಅಂಟಿಕೊಳ್ಳದೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಭತ್ತ, ಕಬ್ಬು ಬೆಳೆಗಳ ಜೊತೆಗೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ವ್ಯವಸಾಯದಲ್ಲಿ ಹೊಸ ಪದ್ಧತಿ ಅಳವಡಿಸಿಕೊಳ್ಳಬೇಕಿದೆ ಎಂದರು.ಮೀನು ಅರೋಗ್ಯಕರ ಆಹಾರ. ಆದರೆ, ಜಿಲ್ಲೆಯಲ್ಲಿ ಮೀನುಗಾರಿಕೆ ಹಾಗೂ ಮೀನು ಮಾರಾಟ ಕಡಿಮೆಯಿದೆ. ರೈತ ಮಹಿಳೆಯರಿಗೆ ಸ್ವ-ಸಹಾಯ ಸಂಘಗಳ ಮೂಲಕ ಮೀನುಗಾರಿಕೆ ಕುರಿತು ತರಬೇತಿ ನೀಡಿ ಹಾಗೂ ಮೀನು ಮಾರಾಟ ಮಳಿಗೆಗಳನ್ನು ತೆರೆಯಲು ಲೈಸನ್ಸ್ ಸೇರಿದಂತೆ ಇತರೆ ಸಹಾಯಗಳನ್ನು ದೊರಕಿಸಿಕೊಡಲು ಮುಂದಾಗುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಮಗ್ರ ಕೃಷಿ ಎಂದರೆ ವ್ಯವಸಾಯದ ಒಟ್ಟಿಗೆ ಮೀನುಗಾರಿಕೆ, ತೋಟಗಾರಿಕೆ ಹಾಗೂ ಪಶುಸಂಗೋಪನೆ ಎಲ್ಲವನ್ನು ಒಳಗೊಂಡಿದೆ. ಕೋಳಿ, ಹಸು ಹಾಗೂ ಕುರಿ ಸಾಕಾಣಿಕೆ ಪದ್ಧತಿಗಳನ್ನು ಅಳವಡಿಸಿಕೊಂಡು ಲಾಭದಾಯಕವಾಗಿ ಮುಂದುವರಿಯುವಂತೆ ಸಲಹೆ ನೀಡಿದರು.ಬೆಂಗಳೂರು ಜಿಲ್ಲಾ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ, ರೈತರ ಕಷ್ಟವನ್ನು ನೀಗಿಸಲು ಮತ್ತು ರೈತರು ಉದ್ದಿಮೆದಾರರಾಗಲು ಸಲಹೆಗಳನ್ನು ನೀಡಿ ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ತೋಟಗಾರಿಕೆ, ಮೀನುಗಾರಿಕೆ ಹಾಗೂ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ವ್ಯವಸಾಯದಲ್ಲಿ ಒಂದೇ ಹಾದಿಯಲ್ಲಿ ಸಾಗಿದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಸಮಗ್ರ ಕೃಷಿ ಪದ್ಧತಿಯೊಂದಿಗೆ ವ್ಯವಸಾಯ ಮಾಡಲು ಒಮ್ಮೆ ಪ್ರಯತ್ನಿಸಬೇಕು ಎಂದು ರೈತರಿಗೆ ಹೇಳಿದರು.ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಹಿತ್ತಲಮಣಿ ಮಾತನಾಡಿ, ರೈತರು ದೇಶದ ಜನರು ಹಸಿವು ನೀಗಿಸುವವರು. ಅವರನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನಾಗರಾಜು, ರೇಷ್ಮೆ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ, ವಿಜ್ಞಾನಿಗಳಾದ ಮಮತಾ, ಆಂಜನಪ್ಪ ಮತ್ತು ವಿಜಯಲಕ್ಷ್ಮಿ ಸೇರಿದಂತೆ ಹಲವು ಇದ್ದರು.