ಕಾಳು ಮೆಣಸು ದರ ಕುಸಿತದಿಂದ ಸಂಕಷ್ಟದಲ್ಲಿ ಬೆಳೆಗಾರ

| Published : Oct 19 2024, 12:17 AM IST

ಕಾಳು ಮೆಣಸು ದರ ಕುಸಿತದಿಂದ ಸಂಕಷ್ಟದಲ್ಲಿ ಬೆಳೆಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಳು ಮೆಣಸು ಧಾರಣೆಯಲ್ಲಿ ನಿತ್ಯ ಕುಸಿತ ವ್ಯಾಪಾರಗಾರರು ಹಾಗೂ ಬೆಳೆಗಾರರನ್ನು ಹೌಹಾರುವಂತೆ ಮಾಡಿದೆ. ಹೌದು ಮೆಣಸು ಕೊಯ್ಲು ಮುಕ್ತಾಯಗೊಂಡು ತಿಂಗಳುಗಳು ಕಳೆದರೂ ಧಾರಣೆ ಏರಿಕೆಯಾಗುವ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಹಾಗೂ ಸ್ಥಳೀಯ ವ್ಯಾಪಾರಗಾರರಿಗೆ ಕಾಳು ಮೆಣಸು ದರ ಕುಸಿತ ಕೊಟ್ಯಂತರ ರು. ನಷ್ಟ ಹೊಂದುವಂತೆ ಮಾಡಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಕಾಳು ಮೆಣಸು ಧಾರಣೆಯಲ್ಲಿ ನಿತ್ಯ ಕುಸಿತ ವ್ಯಾಪಾರಗಾರರು ಹಾಗೂ ಬೆಳೆಗಾರರನ್ನು ಹೌಹಾರುವಂತೆ ಮಾಡಿದೆ. ಹೌದು ಮೆಣಸು ಕೊಯ್ಲು ಮುಕ್ತಾಯಗೊಂಡು ತಿಂಗಳುಗಳು ಕಳೆದರೂ ಧಾರಣೆ ಏರಿಕೆಯಾಗುವ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಹಾಗೂ ಸ್ಥಳೀಯ ವ್ಯಾಪಾರಗಾರರಿಗೆ ಕಾಳು ಮೆಣಸು ದರ ಕುಸಿತ ಕೊಟ್ಯಂತರ ರು. ನಷ್ಟ ಹೊಂದುವಂತೆ ಮಾಡಿದೆ.

ಸಂಗ್ರಹ: ಕಾಳು ಮೆಣಸು ಕೊಯ್ಲು ನಡೆಯುವ ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಕಾಳು ಮೆಣಸಿನ ದರ ಪ್ರತಿ ಕೆ.ಜಿಗೆ 510ರಿಂದ 600 ರು.ಗಳವರಗೆ ಇದ್ದರೆ ಏಪ್ರಿಲ್ ತಿಂಗಳ ನಂತರ ಕಾಳು ಮೆಣಸು ಧಾರಣೆ ನಿಧಾನಗತಿಯಲ್ಲಿ ಏರಿಕೆಯಾಗಲಾರಂಭಿಸಿದ್ದು, ಜೂನ್ ಮಧ್ಯಭಾಗದ ವೇಳೆಗೆ 700 ರು. ಗಳನ್ನು ತಲುಪುವ ಮೂಲಕ ದಾಖಲೆ ನಿರ್ಮಿಸಿತ್ತು. ತದನಂತರ ಅಲ್ಪ ಇಳಿಕೆ ಕಂಡ ಧಾರಣೆ ಹಲವು ದಿನಗಳ ಕಾಲ ಯಾವುದೇ ಬದಲಾವಣೆ ದಾಖಲಿಸದಾಯಿತು. ಈ ಸಂದರ್ಭದಲ್ಲಿ ಮಾರುಕಟ್ಟೆ ತಜ್ಞರು ಮುಂದಿನ ದಿನಗಳಲ್ಲಿ ಕಾಳು ಮೆಣಸಿನ ದರ 700 ರು. ಗಳ ಗಡಿದಾಟಿ ಮುನ್ನೆಡೆಯಲಿದೆ ಎಂದು ಅಂದಾಜಿಸಿದ್ದರು. ಇದರಿಂದ ದರ ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಸಾಕಷ್ಟು ಸ್ಥಳೀಯ ವ್ಯಾಪಾರಿಗಳು ಹಾಗೂ ಶ್ರೀಮಂತ ಕಾಫಿ ಬೆಳೆಗಾರರು ಸಾಕಷ್ಟು ಮೆಣಸನ್ನು 600 ರು.ಗಳಿಂದ 650 ರು.ಗಳಲ್ಲಿ ಕೊಂಡಿಟ್ಟಿದ್ದರೆ ಹಲವು ಬೆಳೆಗಾರರು ಕೊಯ್ಲು ನಡೆಸಿದ ಮೆಣಸನ್ನು ಹೆಚ್ಚಿನ ದರ ನಿರೀಕ್ಷೆಯಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಇದರಿಂದ ತಾಲೂಕಿನಲ್ಲಿ ಬೆಳೆದಿರುವ ಮೆಣಸು ಮಾರಾಟವಾಗಿರುವುದಕ್ಕಿಂತ ಹೆಚ್ಚಾಗಿ ಸಂಗ್ರಹಿಡಲಾಗಿದೆ ಎಂಬ ಮಾತುಗಳಿದೆ. ಆದರೆ, ಜೂನ್ ಮದ್ಯಭಾಗದ ನಂತರ ನಿಧಾನಗತಿಯಲ್ಲಿ ದರ ಕುಸಿಯಲಾರಂಭಿಸಿದೆ. ಸೆಪ್ಟಂಬರ್‌ ಮೊದಲ ವಾರದ ವೇಳೆಗೆ 600 ರು.ಗಳಿಂದ 610 ರು.ಗಳಿಗೆ ಕುಸಿದರೆ, ಸೆಪ್ಟಂಬರ್ ತಿಂಗಳ ಮಧ್ಯಭಾಗದ ವೇಳೆಗೆ 580ರಿಂದ 590 ರು.ಗಳಿಗೆ ಕುಸಿದಿದೆ. ತಿಂಗಳೊಂದರಲ್ಲೆ ಪ್ರತಿ ಕೆ.ಜಿ ಕಾಳು ಮೆಣಸಿನ ಧಾರಣೆ ನೂರು ರು.ಗಳಷ್ಟು ಕುಸಿದಿರುವುದು ಕೊಂಡು ಸಂಗ್ರಹಿಸಿಟ್ಟಿದ್ದ ವ್ಯಾಪಾರಿಗಳ ಜಂಘಾಬಲ ಉಡುಗುವಂತೆ ಮಾಡಿದೆ.

ಕುಸಿತವೇಕೆ: ಶ್ರೀಲಂಕಾ ದೇಶದಿಂದ ವಿಯಟ್ನಾಂ ದೇಶದ ಕಳಪೆ ಕಾಳು ಮೆಣಸು ಒಳನುಗ್ಗುತ್ತಿರುವುದೆ ಭಾರತದ ಆಂತರಿಕ ಮಾರುಕಟ್ಟೆಯಲ್ಲಿ ಕಾಳು ಮೆಣಸಿನ ದರ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಭಾರತ,ಶ್ರೀಲಂಕಾ, ಪಾಕಿಸ್ತಾನ, ಮ್ಯಾನ್ಮರ್, ಬಾಂಗ್ಲಾದೇಶ, ಭೂತಾನ್, ನೇಪಾಳ ದೇಶಗಳನ್ನೊಳಗೊಂಡ ಶಾರ್ಕ್ ರಾಷ್ಟಗಳ ನಡುವೆ ಸಂಬಾರ ಪದಾರ್ಥಗಳ ವಿನಿಮಯಕ್ಕೆ ಹೆಚ್ಚಿನ ಶುಲ್ಕವಿಧಿಸುವಂತಿಲ್ಲ ಎಂಬ ನಿಯಮವಿದೆ. ಆದರೆ, ಶ್ರೀಲಂಕಾ ದೇಶ ದಕ್ಷಿಣ ಏಷ್ಯಾದ ಮುಕ್ತ ವ್ಯಾಪಾರ ಸದಸ್ಯ ರಾಷ್ಟ್ರವಾಗಿದ್ದು ಶ್ರೀಲಂಕಾ ದೇಶ ಪ್ರತಿನಿಧಿಸುವ ಸಾಫ್ಟ್‌ ಎಂಬ ಒಕ್ಕೂಟದಲ್ಲಿ ವಿಯಟ್ನಾ,ಇಂಡೊನೇಷ್ಯಾಗಳ ಮೆಣಸು ಬೆಳೆಯುವ ರಾಷ್ಟ್ರಗಳಿವೆ. ಈ ಎರಡು ರಾಷ್ಟ್ರಗಳಲ್ಲಿ ಬೆಳೆಯುವ ಮೆಣಸ ರಸಾಯನಿಕಯುಕ್ತವಾಗಿದ್ದು, ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ಯೂರೋಪ್ ರಾಷ್ಟ್ರಗಳಿಗೆ ರಪ್ತುಮಾಡಲು ಅಸಾಧ್ಯವಾಗಿದೆ. ಇದರಿಂದಾಗಿ ಇಲ್ಲಿನ ಕಳಪೆ ಗುಣಮಟ್ಟದ ರಸಾಯನಿಕಯುಕ್ತಗೊಂಡಿರುವ ಮೆಣಸನ್ನು ಶ್ರೀಲಂಕ ದೇಶಕ್ಕೆ ಕಡಿಮೆ ದರಕ್ಕೆ ಕಳುಹಿಸಲಾಗುತ್ತಿದ್ದು, ಶ್ರೀಲಂಕಾ ದೇಶ ಇಂಡೋನೇಷ್ಯಾ ಹಾಗೂ ವಿಯಟ್ನಾಂ ದೇಶದಿಂದ ಆಮದು ಮಾಡಿಕೊಳ್ಳುವ ಮೆಣಸನ್ನು ನಮ್ಮ ದೇಶದ ಮೆಣಸು ಎಂದು ಭಾರತಕ್ಕೆ ಪ್ರತಿ ಕೆ.ಜಿಗೆ 500 ರು.ಗಳಂತೆ ರಪ್ತು ಮಾಡುತ್ತಿದೆ. ಇದು ಸ್ಥಳೀಯ ಮಾರುಕಟ್ಟೆಯಲ್ಲಿ ದರ ಕುಸಿಯಲು ಕಾರಣ ಎನ್ನಲಾಗುತ್ತಿದೆ. ಹೀಗೆ ಆಮದು ಮಾಡಿಕೊಳ್ಳುವ ಕಳಪೆ ಗುಣಮಟ್ಟದ ಮೆಣಸನ್ನು ವ್ಯಾಪಾರಿಗಳು ತಮ್ಮ ದೇಶದ ಆಂತರಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿ ನಮ್ಮ ದೇಶದ ಅತ್ಯುತ್ತಮ ಗುಣಮಟ್ಟದ ಮೆಣಸನ್ನು ರಪ್ತು ಮಾಡುತ್ತಿದೆ. ಇದರಿಂದಾಗಿ ಉತ್ತಮ ಗುಣಮಟ್ಟದ ಮೆಣಸನ್ನು ನಾವೇ ಬೆಳೆದರು ನಾವು ಉಪಯೋಗಿಸುತ್ತಿರುವುದು ಕಳಪೆ ಗುಣಮಟ್ಟದ ರಸಾಯನಿಕ ಯುಕ್ತ ಮೆಣಸು ಎಂಬುದು ವಿಷಯ ತಜ್ಞ ಕೆಸಗಾನಹಳ್ಳಿ ಸುರೇಂದ್ರ ಅವರದ್ದು.

ಒತ್ತಡ: ಕರ್ನಾಟಕ ಬೆಳೆಗಾರರ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ಒಂದಾಗಿ ಕ್ಯಾಪ್ಕೂ ಎಂಬ ಒಕ್ಕೂಟದ ಮೂಲಕ ಕಳಪೆ ಗುಣಮಟ್ಟದ ಮೆಣಸು ದೇಶಕ್ಕೆ ಆಮದಾಗುತ್ತಿರುವ ಬಗ್ಗೆ ಹೋರಾಟ ನಡೆಸಿ ಕೇಂದ್ರ ವಾಣಿಜ್ಯ ಸಚಿವರಿಗೆ ಮನವಿ ಸಲ್ಲಿಸಿದ್ದರು. ಪರಿಣಾಮ 250ರಿಂದ 300 ರು.ಗಳಿಗೆ ಆಮದಾಗುತ್ತಿದ್ದ ಮೆಣಸಿಗೆ ಸದ್ಯ 500 ರು.ಗಳ ದರವನ್ನು ಕೇಂದ್ರ ವಾಣಿಜ್ಯ ಸಚಿವಾಲಯ ನಿರ್ಧರಿಸಿದೆ. ಇದರಿಂದಾಗಿ ಸ್ಥಳೀಯ ಕಾಳು ಮೆಣಸಿನ ದರ ಬಾರಿ ಪ್ರಮಾಣದಲ್ಲಿ ಕುಸಿಯುವುದು ತಪ್ಪಿದಂತಾಗಿದೆ. ಕಳಪೆ ಆಮದಿನಲ್ಲಿ ಪ್ರಭಾವಿಗಳು: ಶ್ರೀಲಂಕಾ ದೇಶ ಕಾಳು ಮೆಣಸು ಬೆಳೆಯುವ ಪ್ರಮಾಣಕ್ಕಿಂತ ಭಾರತಕ್ಕೆ ಆಮದು ಮಾಡುವ ಪ್ರಮಾಣವೇ ಹೆಚ್ಚಿದೆ. ಇದು ಕೇರಳದ ಕೊಚ್ಚಿನಲ್ಲಿರುವ ಸಂಬಾರ ಮಂಡಳಿಯ ಪ್ರತಿಯೊಬ್ಬ ಹಿರಿಯ ಅಧಿಕಾರಿಗಳಿಗೆ ತಿಳಿದಿದೆ. ಆದರೆ, ಆಮದು ಸಾಲಿನಲ್ಲಿ ಸಂಬಾರ ಮಂಡಳಿಯ ನಿವೃತ್ತ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಪ್ರಭಾವಿಗಳ ಕೈವಾಡ ಇರುವುದರಿಂದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬಾಂತಾಗಿದೆ.ಕಳಪೆ ಗುಣಮಟ್ಟದ ಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಬೆಳೆಗಾರ ಸಂಘಟನೆಗಳು ಧ್ವನಿ ಎತ್ತಿದ ವೇಳೆ ಸಂಬಾರ ಮಂಡಳಿಯ ನಿವೃತ್ತ ಅಧಿಕಾರಿಗಳ ಸಮಿತಿ ರಚಿಸಿ ಸರ್ಕಾರ ಕೈತೊಳೆದುಕೊಳ್ಳುತ್ತಿದ್ದು, ಕುರಿ ಕಾಯಲು ತೋಳ ನೇಮಿಸಿದಂತಾಗಿದೆ. ಸಮಿತಿ ರಚನೆ ಎಂಬ ವಿಷಾದದ ಮಾತುಗಳು ಬೆಳೆಗಾರರ ವಲಯದಲ್ಲಿ ಕೇಳಿ ಬರುತ್ತಿವೆ. *ಹೇಳಿಕೆ1:

ಕಳಪೆ ಗುಣಮಟ್ಟದ ಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಹಲವು ಬಾರಿ ದೂರ ಸಲ್ಲಿಸಿದ್ದೇವೆ. ಆದರೆ ಸರ್ಕಾರ ಸಮಿತಿ ರಚಿಸಿ ಕೈತೊಳೆದುಕೊಳ್ಳುತ್ತಿದೆ.

- ಮೋಹನ್ ಕುಮಾರ್, ಅಧ್ಯಕ್ಷ, ಕರ್ನಾಟಕ ಬೆಳೆಗಾರರ ಒಕ್ಕೂಟ

*ಹೇಳಿಕೆ 2:

ರಾಷ್ಟ್ರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಸ್ಥಳೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ. ಇದು ಸ್ಥಳೀಯ ಮಾರುಕಟ್ಟೆಯಲ್ಲಿ ಕಾಳು ಮೆಣಸಿನ ದರ ಕುಸಿತಕ್ಕೆ ಒಂದು ಕಾರಣವಾಗಿದೆ. - ಸತ್ಯಮೂರ್ತಿ, ಉಪಾಧ್ಯಕ್ಷರು, ಭಾರತೀಯ ಸಾಂಬಾರ ಮಂಡಳಿ.