2 ಸಾವಿರ ಪರಿಹಾರ ಕಡಿತಕ್ಕೆ ರೈತರ ಆಕ್ರೋಶ

| Published : May 24 2024, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಿಕೋಟಾಕೇಂದ್ರ ನೀಡಿರುವ ಪರಿಹಾರದಲ್ಲಿ ₹2 ಸಾವಿರ ಕಡಿತ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ಹಾಗೂ ಹೆಕ್ಟೇರ್‌ಗೆ ₹ 8500 ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತಿಕೋಟಾ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತಿಕೋಟಾಕೇಂದ್ರ ನೀಡಿರುವ ಪರಿಹಾರದಲ್ಲಿ ₹2 ಸಾವಿರ ಕಡಿತ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ಹಾಗೂ ಹೆಕ್ಟೇರ್‌ಗೆ ₹ 8500 ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತಿಕೋಟಾ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಸಂಗಮೆಶ ಸಗರ, ತಾಲೂಕಿನಲ್ಲಿ ಮುಂಗಾರು, ಹಿಂಗಾರು ಸಂಪೂರ್ಣ ವಿಫಲಗೊಂಡಿದೆ. ಪ್ರತಿ ಹೆಕ್ಟೇರ್‌ಗೆ ರಾಜ್ಯ ಮತ್ತು ₹ 8500 ಕೇಂದ್ರದ ಪರಿಹಾರ ಗರಿಷ್ಠ 2 ಹೆಕ್ಟೇರ್‌ಗೆ ಪರಿಹಾರ ನೀಡಬೇಕು. ಆದರೆ ಕೇಂದ್ರ ನೀಡಿರುವ ಪರಿಹಾರದಲ್ಲಿಯೇ ₹2000 ಕಡಿತ ಮಾಡಿರುವುದು ಖಂಡನೀಯ. ರಾಜ್ಯ ಮತ್ತು ಕೇಂದ್ರ ನೀಡಿದ 2000, 8500 ಸೇರಿಸಿ ಒಟ್ಟಾರೆ ₹10,500 ರೈತರ ಪ್ರತಿ ಹೆಕ್ಟೇರ್‌ಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಬರಗಾಲ ಪರಿಹಾರ ಸಮೀಕ್ಷೆಯನ್ನು ಸರಿಯಾಗಿ ಮಾಡದೇ, ಬೇಜವ್ದಾರಿಯಿಂದ ಹೊರಗುತ್ತಿಗೆ ಮೂಲಕ ಮನಸಿಗೆ ಬಂದ ಹಾಗೆ ಸರ್ವೇ ಮಾಡಲಾಗಿದೆ. ನಿಜವಾಗಿ ತಾಲೂಕಿನ ಎಲ್ಲ ನಷ್ಟಗೊಂಡ ರೈತರಿಗೆ ಪರಿಹಾರ ಒದಗಿಸಬೇಕು. ಅದನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ ಆಗಿರುವ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಹೇಳಿದರು.

ತಾಲೂಕಾಧ್ಯಕ್ಷ ಸಾತಲಿಂಗಯ್ಯ ಸಾಲಿಮಠ ಮಾತನಾಡಿ, ಮುಂಗಾರು ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತಿರುವುದರಿಂದ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಗುಣಮಟ್ಟದ, ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಹಾಗೂ ಯಂತ್ರೋಪಕರಣಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬೆಲೆಗೆ ಬಿತ್ತನೆ, ಬೀಜ, ಗೊಬ್ಬರ, ಕೀಟನಾಶಕಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ವಿಜೆಲೆನ್ಸ್ ತಂಡವನ್ನು ಜಾಗೃತಗೊಳಿಸಿ ಕಾರ್ಯರೂಪಕ್ಕೆ ಬರುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ಉಪಾಧ್ಯಕ್ಷ ಶಾನುರ ನಂದರಗಿ, ಹಿಂದಿನ ಸರ್ಕಾರ ವಿದ್ಯುತ್ ಇಲಾಖೆಯಡಿ ರೈತರ ಪಂಪ್‌ಸೆಟ್‌ಗಳಿಗೆ ₹25 ಸಾವಿರ ನೀಡುತ್ತಿತ್ತು. ಅದನ್ನು ಈಗ ನಿಲ್ಲಿಸಿದ್ದು, 2 ಲಕ್ಷ ಹಣ ಕಟ್ಟುವಂತೆ ಹೇಳುತ್ತಿದ್ದಾರೆ. ಇದು ರೈತರನ್ನು ದೀವಾಳಿ ಎಬ್ಬಿಸುವ ಯೋಜನೆಯಾಗಿದೆ. ಇದನ್ನು ನಿಲ್ಲಿಸುವಂತೆ ಒತ್ತಾಯಿಸಿದರು.

ಹೊನವಾಡ ಗ್ರಾಮ ಅಧ್ಯಕ್ಷ ಹಣಮಂತ ಬ್ಯಾಡಗಿ ಮಾತನಾಡಿ, ಫಸಲ್ ಬಿಮಾ ಯೋಜನೆಯಡಿ ಸಾಕಷ್ಟು ಮೋಸ ಆಗುತ್ತಿದ್ದು, ಅದನ್ನು ಕೂಡಲೇ ಪರಿಶೀಲಿಸಬೇಕು. ಕೆಲವೊಬ್ಬರಿಗೆ ವಿಮೆ ಬಂದಿದ್ದ, ಬಹಳಷ್ಟು ರೈತರಿಗೆ ಬಂದಿಲ್ಲ. ನಷ್ಟಗೊಂಡ ಎಲ್ಲ ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ತಾಲೂಕು ತಹಸೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು.

ಈ ವೇಳೆ ಗೌರವಾಧ್ಯಕ್ಷ ಗಿರೀಶ ಕುಲಕರ್ಣಿ, ಮಹಿಳಾ ಅಧ್ಯಕ್ಷೆ ಸಂಗೀತಾ ರಾಠೋಡ, ಜಿಲ್ಲಾ ಸಂಚಾಲಕ ನಜೀರ ಚಂದರಗಿ, ತಾ. ಸಂಚಾಲಕ ಮಹಾದೇವ ಕದಮ, ಕಲಕೇರಿ ಹೋಬಳಿ ಅಧ್ಯಕ್ಷ ಮಹಿಬೂಬ ಬಾಷಾ ಮನಗೂಳಿ, ಹೊನವಾಡ ಸಂಚಾಲಕ ಖಾದರ ವಾಲಿಕಾರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗುಗ್ಗರಿ, ಕಾಶೀನಾಥ ದೇವನಾಯಕ, ಮಲ್ಲಿಕಾರ್ಜುನ ಗುಗ್ಗರಿ, ಸಿದ್ದಪ್ಪ ಕೊಟ್ಟಲಗಿ, ಸುಧಾಕರ ನಲವಡೆ, ಆಮೀನಸಾಬ ತಿಕೋಟ, ವಿಲಾಸ ಮಾನವ, ಅರ್ಜುನ ಸಾಳ್ವಂಕೆ, ಉಮೇಶ ಕದಮ, ಗಂಗಾರಾಮ ಪವಾರ, ಶ್ರೀಕಾಂತ ಪವಾರ, ಸಿದ್ದರಾಯ ಗಗನಮಾಲಿ ಸೇರಿದಂತೆ ಅನೇಕರು ಇದ್ದರು.

------

ಕೋಟ್‌

ತಾಲೂಕಿನಲ್ಲಿ ಮುಂಗಾರು, ಹಿಂಗಾರು ಸಂಪೂರ್ಣ ವಿಫಲಗೊಂಡಿದೆ. ಪ್ರತಿ ಹೆಕ್ಟೇರ್‌ಗೆ ರಾಜ್ಯ ಮತ್ತು ₹ 8500 ಕೇಂದ್ರದ ಪರಿಹಾರ ಗರಿಷ್ಟ 2 ಹೆಕ್ಟೇರ್‌ಗೆ ಪರಿಹಾರ ನೀಡಬೇಕು. ಆದರೆ ಕೇಂದ್ರ ಸರ್ಕಾರ ನೀಡಿರುವ ಪರಿಹಾರದಲ್ಲಿಯೇ ₹ 2000 ಕಡಿತ ಮಾಡಿರುವುದು ಖಂಡನೀಯ. ರಾಜ್ಯ ಮತ್ತು ಕೇಂದ್ರ ನೀಡಿದ 2000+8500 ಸೇರಿಸಿ ಒಟ್ಟಾರೆ ₹ 10500 ರೈತರ ಪ್ರತಿ ಹೆಕ್ಟೇರ್‌ಗೆ ಪರಿಹಾರ ನೀಡಬೇಕು.

- ಸಂಗಮೆಶ ಸಗರ, ರೈತ ಸಂಘದ ಜಿಲ್ಲಾಧ್ಯಕ್ಷ.