ಬರ ಪರಿಹಾರಕ್ಕಾಗಿ ರೈತರ ಪ್ರತಿಭಟನೆ

| Published : Dec 19 2023, 01:45 AM IST

ಸಾರಾಂಶ

ಸರ್ಕಾರ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿ 3 ತಿಂಗಳು ಕಳೆದರೂ ಪರಿಹಾರ ನೀಡಿಲ್ಲ. ರೈತರು ಪರಿಹಾರ ಬೇಡಿಕೆ ಇಟ್ಟರೆ ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ.

ಹೂವಿನಹಡಗಲಿ: ಬರ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಅಖಂಡ ಕರ್ನಾಟಕ ರೈತ ಸಂಘ ಪ್ರತಿಭಟನೆ ಮಾಡಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ, ಸರ್ಕಾರ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿ 3 ತಿಂಗಳು ಕಳೆದರೂ ಪರಿಹಾರ ನೀಡಿಲ್ಲ. ರೈತರು ಪರಿಹಾರ ಬೇಡಿಕೆ ಇಟ್ಟರೆ ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ಈ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ರೈತರ ಸಂಕಷ್ಟ ಕೇಳೋರಿಲ್ಲದಂತಾಗಿದೆ ಎಂದು ದೂರಿದರು.

ಆಡಳಿತ ವರ್ಗದ ನಿರ್ಲಕ್ಷ್ಯದಿಂದಾಗಿ ರೈತರ ಕುಟುಂಬಗಳು ಮತ್ತು ಕೂಲಿ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಗುಳೆ ಹೋಗುತ್ತಿದ್ದಾರೆ. ಬರದಲ್ಲಿ ರೈತರಿಗೆ ಸರ್ಕಾರ ಕೂಡಲೇ ಆಸರೆಯಾಗಬೇಕಿದೆ. ಖಷ್ಕಿ ಜಮೀನು ಹೆಕ್ಟೇರ್‌ಯೊಂದಕ್ಕೆ ₹8500, ನೀರಾವರಿ ಪ್ರದೇಶಕ್ಕೆ ₹17500 ಹಾಗೂ ಬಹುವಾರ್ಷಿಕ ಬೆಳೆಗೆ ₹22500 ಪರಿಹಾರವನ್ನು ಸರ್ಕಾರ ಕೂಡಲೇ ಜಾರಿ ಮಾಡಬೇಕೆಂದು ಒತ್ತಾಯಿಸಿದರು.

ಜೆಸ್ಕಾಂ ಇಲಾಖೆಯಿಂದ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿರುವ 1150 ರೈತ ಫಲಾನುಭವಿಗಳಿಗೆ ಯಾವುದೇ ವಿದ್ಯುತ್ ಸಂಪರ್ಕ ನೀಡಿಲ್ಲ. ತಕ್ಷಣ ಈ ಯೋಜನೆಯ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ ಇಲಾಖೆ ಮುಂದೆ ರೈತರು ಧರಣಿ ಮಾಡಲು ಮುಂದಾಗುತ್ತೇವೆಂದು ಎಚ್ಚರಿಕೆ ನೀಡಿದರು.

ಜಿಲ್ಲಾಧ್ಯಕ್ಷ ವಿ.ಬಿ. ಸೋಮಶೇಖರಪ್ಪ ಹಾಗೂ ತಾಲೂಕು ಉಪಾಧ್ಯಕ್ಷ ಕೆ. ಶಂಕರಗೌಡ ಮಾತನಾಡಿದರು.

ಪ್ರತಿಭಟನೆಯಲ್ಲಿ ಶಿವಕುಮಾರ, ಹೂವಣ್ಣ, ಶಿವರಾಜ, ವಿ.ಬಿ. ಚೆನ್ನಬಸಪ್ಪ, ಎಚ್‌. ದುರುಗಪ್ಪ ಸೇರಿದಂತೆ ರೈತರು, ಉಪತಹಸೀಲ್ದಾರ್‌ ಮಲ್ಲಿಕಾರ್ಜುನ ಅವರಿಗೆ ಮನವಿ ಪತ್ರ ಸಲ್ಲಿಸಿದರು.