ಸಾರಾಂಶ
ಕೃಷಿ ವಿದ್ಯಾರ್ಥಿಗಳು ಪದವಿ ಶಿಕ್ಷಣ ಮುಗಿಸಿ ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿಬೇಕು. ಇದರಿಂದಾಗಿ ದೇಶದ ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ.
ರಾಯಚೂರು: ಕೃಷಿ ವಿದ್ಯಾರ್ಥಿಗಳು ಪದವಿ ಮುಗಿದ ಬಳಿಕ ಹೊಸ ಆವಿಷ್ಕಾರ-ತಂತ್ರಜ್ಞಾನದ ನೆರವಿನಿಂದ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ ಸಲಹೆ ನೀಡಿದರು.
ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಆಸ್ಥಾ ಫೌಂಡೇಷನ್‌ವತಿಯಿಂದ ಹಮ್ಮಿಕೊಂಡಿದ್ದ 8ನೇ ಅಂತರಾಷ್ಟ್ರೀಯ ಜಾಗತಿಕ ಸುಸ್ಥಿರ ಕೃಷಿ ಮತ್ತು ಕೃಷಿ ಸಂಬಂಧಿತ ಸಂಶೋಧನಾ ಉಪಕ್ರಮಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವ್ಯವಸಾಯದಲ್ಲಿ ತೊಡಗಬೇಕು ಮತ್ತು ಕೃಷಿ ಕೌಶಲ್ಯಗಳನ್ನು ಹಳ್ಳಿಗಳಲ್ಲಿ ಅಳವಡಿಸುವ ಮೂಲಕ ಕೃಷಿ ವಲಯವನ್ನು ಅಭಿವೃದ್ಧಿಗೊಳಿಸುವ ಅಗತ್ಯವಿದೆ ಎಂದರು. ದೇಶದಲ್ಲಿರುವ 75 ಕೃಷಿ ವಿಶ್ವವಿದ್ಯಾಲಯಗಳಿದ್ದು, ಅವುಗಳಲ್ಲಿ ನೀಡಲಾಗುವ ಗುಣಮಟ್ಟದ ಶಿಕ್ಷಣವನ್ನು ಪಡೆದು ಪ್ರತಿ ವರ್ಷವೂ 10 ಸಾವಿರ ವಿದ್ಯಾರ್ಥಿಗಳು ತೇರ್ಗಡೆ, ಎರಡು ಸಾವಿರಕ್ಕೂ ಹೆಚ್ಚಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ.
ಕೃಷಿ ಪದವಿಗಾಗಿ ಶೇ.50ರಷ್ಟು ವಿದ್ಯಾರ್ಥಿಗಳು ಕೃಷಿ ಮೀಸಲಾತಿಯಿಂದ ಪ್ರವೇಶ ಪಡೆದಿರುತ್ತಾರೆ ಆದರೆ ಪದವಿ ನಂತರ ಶೇ.5ಕ್ಕಿಂತಲೂ ಕಡಿಮೆ ಜನರು ವ್ಯವಸಾಯಕ್ಕೆ ಮರಳುತ್ತಾರೆ. ಇದರಿಂದ ಕೃಷಿ ವಲವು ಕ್ಷೀಣಿಸುತ್ತಾ ಹೋಗುತ್ತದೆ ಆದ್ದರಿಂದ ಕೃಷಿ ಮಾಡಿ ಆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪವಹಿಸಿದ್ದರು.
ಕೊಪ್ಪಳ ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ.ಎ ಚಂದ್ರಣ್ಣ, ಸೇಪಾಳದ ಚಿಟ್ವನ್ ಕೃಷಿ ಇಲಾಖೆಯ ಡಾ.ದಿಲಿಪ್ ಕುಮಾರ ಝಾ, ಬಾಂಗ್ಲಾದೇಶ ಸರ್ಕಾರದ ಅಂತರಾಷ್ಟ್ರೀಯ ಸಲಹೆಗಾರರು ಹಾಗೂ ನಿರ್ದೇಶಕರಾದ ಡಾ.ಬಿ.ಕೆ ಚಕ್ರಬೋರ್ತಿ, ಆಸ್ಥಾ ಫೌಂಡೇಷನ್ನ ಅಧ್ಯಕ್ಷ ಡಾ.ಎಸ್.ಪಿ ಸಿಂಗ್, ಸಮ್ಮೇಳನ ಆಯೋಜಕರಾದ ಡಾ.ಮಹೇಂದ್ರ ಡಾ.ಸಿಂಗ್, ಬಿ.ವಿ ತೆಂಬುರ್ನೆ, ಕೃಷಿ ವಿವಿಯ ಸ್ನಾಥಕೋತ್ತರ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಗುರುರಾಜ ಸುಂಕದ, ಕೃಷಿ ವಿವಿಯ ರಿಜಿಸ್ಟ್ರಾರ್ ಡಾ.ಎಂ ವೀರನಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.