ಸತ್ಯಾಸತ್ಯತೆ ತಿಳಿಯಲು ಟ್ರಯಲ್ ಬ್ಲಾಸ್ಟ್ ಮಾಡುವಂತೆ ರೈತ ಸಂಘದಿಂದ ಪ್ರತಿಭಟನೆ

| Published : Jul 04 2024, 01:07 AM IST

ಸತ್ಯಾಸತ್ಯತೆ ತಿಳಿಯಲು ಟ್ರಯಲ್ ಬ್ಲಾಸ್ಟ್ ಮಾಡುವಂತೆ ರೈತ ಸಂಘದಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಟ್ರಯಲ್ ಬ್ಲಾಸ್ಟ್ ಆಗದಿದ್ದಲ್ಲಿ ಕನ್ನಂಬಾಡಿ ಅಣೆಕಟ್ಟೆಯ ಸುತ್ತ-ಮುತ್ತಲಿನ ಕಲ್ಲು ಗಣಿಗಾರಿಕೆಗಳಿಂದ ಅಣೆಕಟ್ಟೆಗೆ ನಿಜವಾಗಿಯೂ ಧಕ್ಕೆಯುಂಟಾಗಲಿದೆಯೋ ಇಲ್ಲವೋ ಎಂಬುದು ಗೊತ್ತಾಗುವುದಿಲ್ಲ. ಸತ್ಯಾಸತ್ಯತೆ ಅರಿಯಲು ಕನ್ನಂಬಾಡಿಗೆ ಕಟ್ಟೆಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಅವಕಾಶ ನೀಡಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಅಣೆಕಟ್ಟೆ ಸಾಮರ್ಥ್ಯ ತಿಳಿಯಬೇಕಾದರೆ ಟ್ರಯಲ್ ಬ್ಲಾಸ್ಟ್ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ (ರೈತ ಬಣ)ದ ನೂರಾರು ಕಾರ್ಯಕರ್ತರು ತಾಲೂಕಿನ ಕೆಆರ್‌ಎಸ್ ಪೊಲೀಸ್ ಠಾಣೆಯಿಂದ ಕಾವೇರಿ ನೀರಾವರಿ ಇಲಾಖೆ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಂಘಟನೆ ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಇ.ಎನ್.ಕೃಷ್ಣೇಗೌಡ ನೇತೃತ್ವದಲ್ಲಿ ಇಲಾಖೆ ಎದುರು ಕೆಲ ಕಾಲ ಧರಣಿ ಕುಳಿತ ಪ್ರತಿಭಟನಾಕಾರರು ಟ್ರಯಲ್ ಬ್ಲಾಸ್ಟ್ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ವರದಿ ನೀಡಿ ಅಣೆಕಟ್ಟೆ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಇ.ಎನ್.ಕೃಷ್ಣೇಗೌಡ ಮಾತನಾಡಿ, ಅಣೆಕಟ್ಟೆ ನಾಡಿನ ಜನರ ಸ್ವತ್ತು. ಅದರ ರಕ್ಷಣೆ ನಮ್ಮೆಲ್ಲರ ಹೊಣೆ ಮತ್ತು ಜವಾಬ್ದಾರಿ. ಆದರೆ, ಟ್ರಯಲ್ ಬ್ಲಾಸ್ಟ್‌ನ ವರದಿಯು ತಿಳಿಯುವ ಮೊದಲೇ ನಾವ್ಯಾರೂ ಅದರ ಬಗ್ಗೆ ತೀರ್ಮಾನ ಕೈಗೊಳ್ಳಲು ಅಸಾಧ್ಯ ಎಂದರು.

ಟ್ರಯಲ್ ಬ್ಲಾಸ್ಟ್ ಆಗದಿದ್ದಲ್ಲಿ ಕನ್ನಂಬಾಡಿ ಅಣೆಕಟ್ಟೆಯ ಸುತ್ತ-ಮುತ್ತಲಿನ ಕಲ್ಲು ಗಣಿಗಾರಿಕೆಗಳಿಂದ ಅಣೆಕಟ್ಟೆಗೆ ನಿಜವಾಗಿಯೂ ಧಕ್ಕೆಯುಂಟಾಗಲಿದೆಯೋ ಇಲ್ಲವೋ ಎಂಬುದು ಗೊತ್ತಾಗುವುದಿಲ್ಲ. ಸತ್ಯಾಸತ್ಯತೆ ಅರಿಯಲು ಕನ್ನಂಬಾಡಿಗೆ ಕಟ್ಟೆಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ನಮಗೆ ಹುಷಾರಿಲ್ಲದೆ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸುತ್ತೇವೆ. ನಮ್ಮನ್ನು ಪರೀಕ್ಷಿಸದೆ ಯಾವ ಖಾಯಿಲೆ ಇದೆ, ಯಾವ ಔಷಧಿ ಕೊಡಬೇಕು ಎಂಬುದು ವೈದ್ಯರಿಗೆ ಹೇಗೆ ಗೊತ್ತಾಗಬೇಕು. ಹಾಗಾಗಿ ಟ್ರಯಲ್ ಬ್ಲಾಸ್ಟ್ ನಡೆಯಲಿ. ನಿಜವಾಗಿಯೂ ಕನ್ನಂಬಾಡಿ ಅಣೆಕಟ್ಟೆಗೆ ಕಲ್ಲು ಗಣಿಗಾರಿಕೆಯಿಂದ ಅಪಾಯವಿದೆ ಎಂದಾದರೆ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಲಿ. ಇಲ್ಲ ಎಂದಾದರೆ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಲಿ ಎಂದು ಒತ್ತಾಯಿಸಿದರು.

ಈ ಭಾಗದ ಭೂಮಿ ಕೃಷಿಗೆ ಯೋಗ್ಯವಾಗಿಲ್ಲ. ಹಾಗಾಗಿ ಸಣ್ಣ-ಪುಟ್ಟ ಕ್ವಾರಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಕಲ್ಲು ಗಣಿಗಾರಿಕೆಯಿಂದ ಅಪಾಯ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸದೆಯೇ ಯಾವ ತೀರ್ಮಾನಕ್ಕೂ ಬರಬಾರದು ಎಂದು ಆಗ್ರಹಿಸಿದರು.

ಜಿಲ್ಲೆಯ ಜನರು, ರೈತರಿಗೆ ಅನುಮಾನ ದೂರವಾಗಲು ಟ್ರಯಲ್ ಬ್ಲಾಸ್ಟ್ ನಡೆಸಿಯೇ ತೀರಬೇಕು ಎಂದು ಒತ್ತಾಯಿಸಿ ನೀರಾವರಿ ಇಲಾಖೆ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಂಡ್ಯ ಜಿಲ್ಲಾಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್, ಮೈಸೂರು ಜಿಲ್ಲಾಧ್ಯಕ್ಷ ಮಾಲೀಕ್, ಕೆಆರ್‌ಎಸ್ ರಾಮೇಗೌಡ, ಬೇಬಿ ಕುಮಾರಸ್ವಾಮಿ, ಕೆಆರ್‌ಎಸ್ ಹರೀಶ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.