ಗಣಿಗಾರಿಕೆಯಿಂದ ನೆಮ್ಮದಿ ಕಳೆದುಕೊಂಡ ಕೃಷಿಕರು

| Published : Oct 23 2024, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಲೋಕಾಪುರ ಸಮೀಪದ ಹಲಕಿ ರೈತರು ಹಲವು ವರ್ಷಗಳಿಂದ ಕೃಷಿ ಮಾಡುತ್ತಾ ನೆಮ್ಮದಿ ಜೀವನ ರೂಪಿಸಿಕೊಂಡಿದ್ದಾರೆ. ಆದರೆ ಕಳೆದ ಒಂದು ದಶಕದಿಂದ ಈಚೆಗೆ ಶುರುವಾದ ಗಣಿಭೂತದಿಂದ ದಶಕಗಳ ಕೃಷಿಗೆ ಪೆಟ್ಟು ನೀಡಿದೆ. ಹಲವು ಬಾರಿ ನ್ಯಾಯಕ್ಕಾಗಿ ಅಧಿಕಾರಿಗಳ ಸುತ್ತ ಸುತ್ತಾಡಿದ ರೈತರು ಇದೀಗ ದಯಾಮರಣದ ಹಾದಿ ಹಿಡಿದಿದ್ದಾರೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಸಮೀಪದ ಹಲಕಿ ರೈತರು ಹಲವು ವರ್ಷಗಳಿಂದ ಕೃಷಿ ಮಾಡುತ್ತಾ ನೆಮ್ಮದಿ ಜೀವನ ರೂಪಿಸಿಕೊಂಡಿದ್ದಾರೆ. ಆದರೆ ಕಳೆದ ಒಂದು ದಶಕದಿಂದ ಈಚೆಗೆ ಶುರುವಾದ ಗಣಿಭೂತದಿಂದ ದಶಕಗಳ ಕೃಷಿಗೆ ಪೆಟ್ಟು ನೀಡಿದೆ. ಹಲವು ಬಾರಿ ನ್ಯಾಯಕ್ಕಾಗಿ ಅಧಿಕಾರಿಗಳ ಸುತ್ತ ಸುತ್ತಾಡಿದ ರೈತರು ಇದೀಗ ದಯಾಮರಣದ ಹಾದಿ ಹಿಡಿದಿದ್ದಾರೆ.

ಈ ಗಣಿ ಪ್ರದೇಶವು ಹಲಕಿ-ನಿಂಗಾಪುರ-ಮುದ್ದಾಪುರ ಬಳಿ ಇರುವ ಜೆ.ಕೆ.ಸಿಮೆಂಟ್ಸ್ ಕಂಪನಿ ಸಮೀಪದ ಒಟ್ಟು ೨೫ ಎಕರೆ ಫಲವತ್ತಾದ ಭೂಮಿಯಾಗಿದೆ. ಸರ್ವೆ ನಂ.೧೫ರಲ್ಲಿ ಕಳೆದ ಹಲವು ವರ್ಷಗಳಿಂದ ಕಲ್ಲು ಗಣಿಗಾರಿಕೆಯದ್ದೆ ಸದ್ದು ಹೆಚ್ಚಾಗಿದೆ. ಇದರಿಂದಾಗಿ ಕೃಷಿಯನ್ನೇ ನಂಬಿಕೊಂಡಿದ್ದ ರೈತರು, ಸಾರ್ವಜನಿಕರು ಗ್ರಾಮ ತೊರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಲ್ಲು ಗಣಿಗಾರಿಕೆಯ ಕ್ವಾರಿಗಳು ಹಲವು ವರ್ಷಗಳಿಂದ ಕೃಷಿ ಮಾಡಿ ಜೀವನ ಮಾಡುತ್ತಿದ್ದ ಅನ್ನದಾತರ ಜೀವನ ಬರಿದಾಗುವಂತೆ ಮಾಡಿದೆ. ಗಣಿಗಾರಿಕೆಯಲ್ಲಿ ಜಿಲೆಟಿನ್‌ಗಳನ್ನು ಬಳಸಿ ಮಾಡುತ್ತಿರುವ ಬ್ಲಾಸ್ಟಿಂಗ್‌ನಿಂದ ಸುತ್ತಮುತ್ತಲಿನ ಗ್ರಾಮಗಳಾದ ಹಲಕಿ-ನಿಂಗಾಪುರ, ಮುದ್ದಾಪುರ ಸಾಕಷ್ಟು ಮನೆಗಳು ಬಿರುಕು ಬಿಟ್ಟಿವೆ. ಮನೆಗಳು ಕುಸಿದು ಬಿದ್ದರೆ ಯಾರು ಹೊಣೆ ಎಂದು ಗಣಿಗಾರಿಕೆ ವಿರುದ್ಧ ನೊಂದ ರೈತ ಕೃಷ್ಣಪ್ಪ ಅಪ್ಪಣ್ಣವರ ಆಕ್ರೋಶ ಹೊರ ಹಾಕಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸ್ಥಳೀಯ ಜಿಲ್ಲಾಡಳಿತಕ್ಕೂ ದೂರು ನೀಡಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸಾಕಷ್ಟು ಬಾರಿ ಕಚೇರಿ ಸುತ್ತಾಡಿ ಸುಸ್ತಾಗಿರುವ ಗ್ರಾಮಸ್ಥರು ಇದೀಗ ಇತ್ತ ಕೃಷಿಯನ್ನೂ ಮಾಡಲಾಗದೆ ಗಣಿಗಾರಿಕೆ ಸ್ಫೋಟದಿಂದ ಮನೆಗಳಲ್ಲಿ ಇರಲೂ ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಮ್ಮ ಜಮೀನು ಮನೆ ಗಣಿಗಾರಿಕೆಗೆ ತೆಗೆದುಕೊಂಡು ಬಿಡಿ ಎಂದು ಜ್ಯೋತಿ ಕೃಷ್ಣಪ್ಪ ಅಪ್ಪಣ್ಣವರ ಅಳಲು ತೋಡಿಕೊಂಡಿದ್ದಾರೆ.ಸರ್ಕಾರದಿಂದ ಅನುಮತಿ ಪಡೆದಿದ್ದೇವೆ ಎಂದು ಜೆ.ಕೆ.ಸಿಮೆಂಟ್ ಕಂಪನಿಯವರು ನೂರಾರು ಅಡಿಗಳ ಆಳಕ್ಕೆ ಮೈನಿಂಗ್‌ ಮಾಡುತ್ತಿದ್ದಾರೆ. ಯಾವಾಗ ಏನಾಗುತ್ತೋ ಎನ್ನುವ ಭೀತಿ ಜನರನ್ನು ಕಾಡುತ್ತಿದೆ. ಇನ್ನು ಈ ಬಗ್ಗೆ ಅಧಿಕಾರಿಗಳು ಮತ್ತು ಜೆ.ಕೆ.ಕಂಪನಿಯವರನ್ನು ಕೇಳಲು ಹೋದರೆ ರೈತರ ಮೇಲೆ ಕೆಲವರನ್ನು ಬಿಟ್ಟು ದೌರ್ಜನ್ಯ ಮಾಡಿ ಕೇಸ್ ಹಾಕಿಸುತ್ತಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.ಗಣಿಗಾರಿಕೆ ವಿರುದ್ಧ ಸಾಕಷ್ಟು ವರ್ಷಗಳಿಂದ ಹೋರಾಟ ಮಾಡಿ ಸುಸ್ತಾಗಿರುವ ಒಂದಷ್ಟು ಜನ ರೈತರು ಇದೀಗ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ತಮಗೆ ಗಣಿಗಾರಿಕೆಯಿಂದ ಮುಕ್ತಿಕೊಡಿ. ಇಲ್ಲವೇ ದಯಾ ಮರಣಕೊಡಿ ಎಂದು ಪತ್ರ ಬರೆದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹಲಕಿ, ನಿಂಗಾಪುರ ಕೂದಲಳತೆ ದೂರದಲ್ಲಿದೆ. ಇತ್ತೀಚೆಗೆ ಸಾಕಷ್ಟು ಬ್ಲಾಸ್ಟಿಂಗ್‌ನಿಂದ ಭೂಮಿ ಬೋರ್‌ವೆಲ್‌ಗಳು ಹಾಳಾಗಿ ಹೋಗಿದ್ದು ನೀರಿಲ್ಲ ಎಂಬ ಕೂಗು ಇದೆ. ಸುತ್ತಲೂ ನಡೆಯುತ್ತಿರುವ ಗಣಿಗಾರಿಕೆಯೇ ಇದಕ್ಕೆ ಕಾರಣ ಎನ್ನುವ ಆರೋಪವಿದೆ.

ಸ್ಫೋಟಕದ ಕಲ್ಲು ಗಣಿಗಾರಿಕೆಯಿಂದ ತಮ್ಮ ಊರು ಮನೆ ಮತ್ತು ಜಮೀನು ಉಳಿಸಿಕೊಂಡು ಕೃಷಿ ಮುಂದುವರೆಸುವುದಕ್ಕೆ ರೈತರು ಹರಸಹಾಸ ಪಡುತ್ತಿದ್ದಾರೆ. ಆದರೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ರೈತರಿಗೆ ಶಾಪವಾಗಿ ಪರಿಣಮಿಸಿದೆ. ಇನ್ನಾದರೂ ಸರ್ಕಾರ ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ ನೂರಾರು ಅಡಿಗಳ ಆಳದವರೆಗೂ ನಡೆದಿರುವ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುವ ಮೂಲಕ ಗಣಿಗಾರಿಕೆ ಶಾಪದಿಂದ ರೈತರಿಗೆ ಮುಕ್ತಿಕೊಡಿಸುವ ಕೆಲಸ ಮಾಡಬೇಕಿದೆ. ಕೋಟ್‌...

ನಿಯಮ ಉಲ್ಲಂಘನೆ ಮಾಡಿ ಗಣಿಗಾರಿಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು, ರೈತರು ಮತ್ತು ಗಣಿ ಉದ್ದಿಮೆದಾರರು ಯಾರೇ ಆಗಿರಲಿ ಕಾನೂನು ಎಲ್ಲರಿಗೂ ಒಂದೇ.ರೇಷ್ಮಾ, ಉಪನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ.----