ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಕನ್ನಡ ನಾಡಿಗೆ ಬರುವ ದಿನಗಳಲ್ಲಿ ಕನ್ನಡ ವಿದ್ವಾಂಸರ ಕೊರತೆ ಎದುರಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಕನ್ನಡ ವಿದ್ವಾಂಸರನ್ನು ತಯಾರು ಮಾಡಬೇಕಾದ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್‌ನಂತಹ ಸಂಘ-ಸಂಸ್ಥೆಗಳಿಗೆ ಇದೆ. ಈ ಕೈಂಕರ್ಯ ತುರ್ತಾಗಿ ಆಗಬೇಕಿದೆ. ಇಲ್ಲವಾದಲ್ಲಿ ಕನ್ನಡ ಭಾಷೆ, ಸಾಹಿತ್ಯ ಅವನತಿ ಹಾದಿ ಹಿಡಿಯುವ ಸಾಧ್ಯತೆ ಇದೆ ಎಂದು ವಿಶ್ರಾಂತ ಕುಲಪತಿ, ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಎಚ್ಚರಿಸಿದರು.ಇಲ್ಲಿಯ ಆಲೂರ ವೆಂಕಟರಾವ್ ಭವನದಲ್ಲಿ ಮಂಗಳವಾರ ನಡೆದ ಧಾರವಾಡ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಇಂಗ್ಲೀಷ ಮಾಧ್ಯಮದ ಹಾವಳಿಯಲ್ಲಿ ಕನ್ನಡದ ತರುಣರಲ್ಲಿ ಕನ್ನಡದ ಕಿಚ್ಚು, ಅಭಿಮಾನ ಮೂಡಿಸುವ ಕೆಲಸ ನಡೆಯಬೇಕಿದೆ ಎಂದರು.ಮೈಸೂರು-ಬೆಂಗಳೂರು ಭಾಗದಲ್ಲಿ ಕನ್ನಡ ಅವನತಿ ಹಾದಿಯಲ್ಲಿ ಸಾಗುತ್ತಿದೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಮಾತ್ರ ತುಸು ಕನ್ನಡ ಉಳಿದಿದೆ. ಧಾರವಾಡ ನೆಲದಲ್ಲಿ ಇನ್ನೂ ಕನ್ನಡ ಸಾಹಿತ್ಯ, ಸಮಾಜ, ಭಾಷಾ ಜಗತ್ತು ವ್ಯಾಪಕವಾಗಿದೆ. ಸಾಹಿತ್ಯಕ್ಕೆ ಧಾರವಾಡ, ಬೆಳಗಾವಿ, ಗದಗ ಕೊಡುಗೆ ಅಗಾಧವಾಗಿದ್ದು, ಕನ್ನಡ ಕಟ್ಟುವಲ್ಲಿ ಅತಿರಥ, ಮಹಾರಥರು ಇಲ್ಲಿಯವರೇ ಹೆಚ್ಚು ಎಂದು ಬಣ್ಣಿಸಿದ ಅವರು, ಮೈಸೂರಿಗರು ಪಠ್ಯಕೇಂದ್ರಿತ ಸಂಶೋಧಿಸಿದರೆ, ಮಂಗಳೂರಿಗರು ಯಕ್ಷಗಾನ ಕೇಂದ್ರೀಕೃತ ಸಂಶೋಧನೆ ಮಾಡಿದ್ದಾರೆ. ಇತಿಹಾಸ, ಶಾಸನ, ಕಲೆ, ಸಾಹಿತ್ಯ, ಸಂಗೀತ ಹೀಗೆ ಬಹುಮುಖ ಸಂಶೋಧನೆ ನೀಡಿದ ಕೀರ್ತಿ ಧಾರವಾಡಕ್ಕಿದೆ ಎಂದರು.
ಶ್ರೀಧರ ಗಸ್ತಿ ಅವರ ''''''''ಏನಾದವು ಆ ದಿನಗಳು'''''''' ಗ್ರಂಥ ಬಿಡುಗಡೆ ಮಾಡಿದ ಸಾಹಿತಿ ಡಾ. ವೀರಣ್ಣ ರಾಜೂರ, ನವೋದಯ, ನವ್ಯ, ದಲಿತ, ಬಂಡಾಯ ಅಂತಹ ಸಾಹಿತ್ಯಗಳೇ ನಮ್ಮ ಎದುರಿಗಿವೆ. ಸಾಹಿತ್ಯದಲ್ಲಿ ಹೊಸ ಪ್ರಕಾರದ ಸಾಧ್ಯತೆಗಳು ಕಾಣುತ್ತಿಲ್ಲ. ನಾವಿನ್ನೂ ಹೊಸದನ್ನು ಕಂಡುಕೊಳ್ಳುವ ಹಾದಿಯಲ್ಲಿದ್ದೇವೆ. ಸಾಹಿತ್ಯದ ಹೊಸ ಸೃಷ್ಟಿಯೂ ಇಲ್ಲ, ವಿಮರ್ಶೆಯೂ ಇಲ್ಲ. ಹೀಗಾಗಿ ಕಥೆ, ಕಾದಂಬರಿ, ವಿಮರ್ಶೆ ಮತ್ತು ನಾಟಕ ಕ್ಷೇತ್ರಗಳು ಸೊರಗಿವೆ. ಕಾವ್ಯ ಸಂಕಲನಗಳು ಮಾತ್ರ ಹೊರ ಬರುತ್ತಿವೆ ಎಂದ ಅವರು, ಧಾರವಾಡ ಸಾಹಿತ್ಯಿಕ, ಸಂಸ್ಕೃತಿವಾಗಿ ಸಮೃದ್ಧವಾದ ನೆಲ. ಈ ಸಮ್ಮೇಳನದಲ್ಲಿ ಕನಿಷ್ಠ 8-10 ಪುಸ್ತಕಗಳ ಬಿಡುಗಡೆ ನಿರೀಕ್ಷೆ ಇತ್ತು. ಆದರೆ, ಕೇವಲ ಒಂದೇ ಒಂದು ಪುಸ್ತಕ ಬಿಡುಗಡೆ ಆಗಿರುವುದು ಖೇದಕರ ಎಂದರು.ಸಮ್ಮೇಳನಾಧ್ಯಕ್ಷ ಡಾ. ಸಂತೋಷ ಹಾನಗಲ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಲೀಲಾ ಕಲಕೋಟಿ, ವ.ಚ. ಚೆನ್ನೇಗೌಡ, ಕಸಾಪ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಕೋಶಾಧ್ಯಕ್ಷ ಎಸ್.ಎಸ್. ದೊಡಮನಿ, ಶಂಕರ ಹಲಗತ್ತಿ ವೇದಿಕೆ ಮೇಲಿದ್ದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ ಸಮ್ಮೇಳನದ ಆಶಯ ನುಡಿದರು. ತಾಲೂಕಾಧ್ಯಕ್ಷ ಮಹಾಂತೇಶ ನೆರೇಗಲ್ಲ ಸ್ವಾಗತಿಸಿದರು. ಮೇಘಾ ಹುಕ್ಕೇರಿ ನಿರೂಪಿಸಿದರು. ಗೌರವ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಇದ್ದರು.
ಸಮ್ಮೇಳನಾಧ್ಯಕ್ಷ ಅದ್ದೂರಿ ಮೆರವಣಿಗೆಕನ್ನಡ ಸಾಹಿತ್ಯ ಪರಿಷತ್ ಧಾರವಾಡ ತಾಲೂಕು ಘಟಕದ 10ನೇ ಸಮ್ಮೇಳನಾಧ್ಯಕ್ಷ ಭವ್ಯ ಮೆರವಣಿಗೆ, ಕನ್ನಡಕ್ಕಾಗಿ ನಡಿಗೆ ವಾದ್ಯಮೇಳದೊಂದಿಗೆ ಅದ್ದೂರಿಯಾಗಿ ಮಂಗಳವಾರ ಜರುಗಿತು. ಅಲಂಕೃತ ತೆರದ ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಸಂತೋಷ ಹಾನಗಲ್ಲ ಹಾಗೂ ಕುಟುಂಬದವರ ಭವ್ಯ ಮೆರವಣಿಗೆಗೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಕನ್ನಡ ಬಾವುಟದ ಮೂಲಕ ಚಾಲನೆ ನೀಡಿದರು. ಕಡಪಾ ಮೈದಾನದಿಂದ ಆಲೂರು ವೆಂಕಟರಾವ್ ಭವನದ ವೇದಿಕೆಗೆ ಕರೆ ತಂದಿತು. ಮೆರವಣಿಗೆಯುದ್ಧಕೂ ಕನ್ನಡಪರ, ನಾಡು-ನುಡಿ ಜಯಘೋಷ ಮೊಳಗಿದವು. ಡೊಳ್ಳು ಕುಣಿತ, ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯಮೇಳಗಳು ಕನ್ನಡ ನುಡಿ ತೇರಿಗೆ ಮೆರವಣಿಗೆಗೆ ಮೆರಗು ತುಂಬಿದವು.
ವಿವಿಧ ಗೋಷ್ಠಿಉಪನ್ಯಾಸ ಗೋಷ್ಠಿಯಲ್ಲಿ ಸಾಹಿತ್ಯದಲ್ಲಿ ರಾಷ್ಟ್ರೀಯ ಪ್ರಜ್ಞೆ ಕುರಿತು ಡಾ. ಅಮೃತ ಮಡಿವಾಳ ಹಾಗೂ ಕನ್ನಡ ಸಾಹಿತ್ಯದಲ್ಲಿ ತಾಯಿ ಕುರಿತು ಡಾ. ಶರಣಮ್ಮ ಗೊರೇಬಾಳ ವಿಷಯ ಮಂಡಿಸಿದರು. ಡಾ. ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಡಾ. ಚನ್ನಪ್ಪ ಅಂಗಡಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ರಾಣಿಚೆನ್ನಮ್ಮ ವಿವಿ ಇಂಗ್ಲೀಷ ವಿಭಾಗದ ಮುಖ್ಯಸ್ಥರಾದ ಡಾ. ಕವಿತಾ ಕುಸುಗಲ್ ಕಾವ್ಯ ರಚನೆ ಕುರಿತು ಮಾತನಾಡಿದರು. 30ಕ್ಕೂ ಅಧಿಕ ಹೊಸ ಮತ್ತು ಹಳೆ ತಲೆಮಾರಿನ ಕವಿಗಳು ಕವನ ವಾಚಿಸಿದರು. ಸಂಜೆ ಸರ್ವಾಧ್ಯಕ್ಷರೊಂದಿಗೆ ಸಂವಾದ, ಸಮಾರೋಪ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಮ್ಮೇಳನಕ್ಕೆ ಕನ್ನಡದ ಅಭಿಮಾನಿಗಳ ಕೊರತೆ ಎದ್ದು ಕಂಡಿತು. ಉದ್ಘಾಟನೆ ವೇಳೆ ಬಿಇಡಿ ವಿದ್ಯಾರ್ಥಿಗಳು ಆಗಮಿಸಿದರೂ ಗೋಷ್ಠಿ ಸಮಯದಲ್ಲಿ ಕುರ್ಚಿಗಳು ಖಾಲಿಯಾಗಿದ್ದವು.
ಕನ್ನಡಕ್ಕೆ ದುರ್ಗತಿ ಕಟ್ಟಿಟ್ಟ ಬುತ್ತಿ: ಡಾ. ಹಾನಗಲ್ರಾಜ್ಯ ಸರ್ಕಾರ ನೂರಾರು ಸುತ್ತೋಲೆ ಹಾಗೂ ಆದೇಶಗಳನ್ನು ಹೊರಡಿಸಿದರೂ ಪ್ರಯೋಜನವಾಗುತ್ತಿಲ್ಲ. ಕರ್ನಾಟಕದಲ್ಲಿ ಸರಿಯಾಗಿ ಕನ್ನಡ ಅನುಷ್ಠಾನ ಆಗದಿದ್ದರೆ ಕನ್ನಡಕ್ಕೆ ದುರ್ಗತಿ ಕಟ್ಟಿಟ್ಟ ಬುತ್ತಿ ಎಂದು ಧಾರವಾಡ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಸಂತೋಷ ಹಾನಗಲ್ಲ ಎಚ್ಚರಿಸಿದರು.
ಆಲೂರು ವೆಂಕಟರಾವ್ ಭವನದಲ್ಲಿ ಮಂಗಳವಾರ ನಡೆದ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ ಅವರು, ಚೀನಾ, ಜಪಾನ್, ಜರ್ಮನಿ ಮುಂತಾದ ದೇಶಗಳು ಇಂಗ್ಲಿಷ್ ವಿರುದ್ಧ ಹೇಗೆ ತಮ್ಮ ಭಾಷೆ ಉಳಿಸಿಕೊಂಡು, ಜಾಗತಿಕವಾಗಿ ಸ್ಪರ್ಧೆ ನೀಡುತ್ತಿವೆ ಎಂಬುದು ಕನ್ನಡಿಗರು ಗಮನಿಸಬೇಕಿದೆ. ಕನ್ನಡ ಬರೀ ಕಾಗದದ ಮೇಲಿದ್ದರೆ ಸಾಲದು, ಸರ್ಕಾರದ ಆಡಳಿತದಲ್ಲಿ ಕನ್ನಡವೇ ಅಗ್ರಸ್ಥಾನವಾಗಬೇಕು. ಕನ್ನಡ ನಾಡಿನ ನೆಲ-ಜಲ ಸವಲತ್ತು ಪಡೆದು ಹೆಮ್ಮರವಾಗಿರುವ ಕೈಗಾರಿಕೆ ಹಾಗೂ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಸಿಂಹಪಾಲು ಉದ್ಯೋಗ ದೊರೆಯುವಂತಾಗಬೇಕು. ಇದಕ್ಕಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳೇಕು. ಕನ್ನಡ ಜನತೆ ಹಾಗೂ ಸರ್ಕಾರ ಮನಸ್ಸು ಮಾಡಿದರೆ, ಸಂಪೂರ್ಣ ಕನ್ನಡ ಬಳಕೆ ಮತ್ತು ಅನುಷ್ಠಾನ ಸಾಧ್ಯ ಎಂದರು. ಸರ್ಕಾರ ಪ್ರತಿವರ್ಷ ಕೋಟಿ ಕೋಟಿ ಹಣವನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಖರ್ಚು ಮಾಡುತ್ತಿದೆ. ಆದರೆ, ಈ ಕಾಲಕ್ಕೆ ಬೇಕಾದ ಕನ್ನಡ ಮಾಧ್ಯಮ ಶಾಲೆ ಕಟ್ಟುವ ಕೆಲಸ ಮಾಡುತ್ತಿಲ್ಲ ಎಂದು ವಿಷಾದಿಸಿದರು. ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾಧ್ಯಮ ಶಾಲೆ ಆಕರ್ಷಕವಾಗಿ ಕಾಣುತ್ತಿವೆ. ಈ ಶಾಲೆಗೆ ಪೈಪೋಟಿ ನೀಡಲು ಕನ್ನಡ ಶಾಲೆಗಳನ್ನು ಗಟ್ಟಿಯಾಗಿ ಕಟ್ಟಬೇಕಿದೆ. ಪ್ರತಿ ವ್ಯಕ್ತಿ ಕನ್ನಡ ಬಳಕೆ ಪ್ರತಿಜ್ಞೆ ಮಾಡಲು ಹೇಳಿದರು.ಸರ್ಕಾರದ ಆಡಳಿತದಲ್ಲಿ ಕನ್ನಡ ಅಗ್ರಪಂಕ್ತಿ ಪಡೆಯಬೇಕು. ಕನ್ನಡ ಶಾಲೆಗಳು ಆದರ್ಶವಾಗಿ ಕಟ್ಟಿದರೆ, ನಮ್ಮ ಮಕ್ಕಳು ಸ್ಥಳೀಯ ಭಾಷೆ ಕಲಿತು ಜಾಗತಿಕವಾಗಿ ಹೊರಹೊಮ್ಮಲು ಸಾಧ್ಯ ಎಂದರು ಡಾ. ಸಂತೋಷ ಹಾನಗಲ್.