ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಗಣಿಗಾರಿಕೆಗೆ ಮಂಜೂರು ಕಲ್ಲುಗಣಿ ಗುತ್ತಿಗೆ ಪ್ರದೇಶಗಳ ಡ್ರೋನ್ ಸಮೀಕ್ಷೆಗೆ ಹೆದರಿ ತಾಲೂಕಿನ ಹಿರೀಕಾಟಿ ಸ.ನಂ.೧೦೮ ರಲ್ಲಿನ ಆಳ, ಅಗಲ ಹಾಗೂ ಒತ್ತುವರಿಗೆ ದುಪ್ಪಟ್ಟು ದಂಡ ಬೀಳುತ್ತದೆ ಎಂಬ ಆತಂಕದಲ್ಲಿ ಕೆಲ ಲೀಸ್‌ದಾರರು ಕ್ವಾರಿಗೆ ಎಂ.ಸ್ಯಾಂಡ್ ಸ್ಲರಿ ಸುರಿದು ಮುಚ್ಚಿ ಹಾಕಲು ಯತ್ನಿಸಿದ್ದಾರೆ.ಸರ್ಪೆಸ್ ಪ್ಲಾನ್ ತಯಾರಿಸಿ ರೆಡ್ಯೂಸ್ಡ್ ಲೆವಲ್ ಘನೀಕರಿಸಿ ಹಾಗೂ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ತೆಗೆದಿರುವ ಉಪ ಖನಿಜದ ಪರಿಮಾಣ (ವಾಲ್ಯೂ) ಅಂದಾಜಿಸಿ ದೃಢೀಕೃತ ವರದಿ ಸಲ್ಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕರ್ನಾಟಕ ಸ್ಟೇಟ್ ರಿಮೂಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ (ಕೆಎಸ್‌ಆರ್‌ಎಸ್‌ಎಸಿ)ಗೆ ಆದೇಶ ನೀಡಿತ್ತು. ಗಣಿ ಭೂ ವಿಜ್ಞಾನ ಇಲಾಖೆ ಸೂಚನೆಯಂತೆ ಕಲ್ಲು ಗಣಿ ಗುತ್ತಿಗೆ ಪ್ರದೇಶಗಳ ಡ್ರೋನ್ ಮೂಲಕ ಡಿಜಿಪಿಎಸ್ ಸಮೀಕ್ಷೆ ತಂಡ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಹೊರತು ಪಡಿಸಿ ಕ್ವಾರಿಗಳಲ್ಲಿ ಆಳ ಮತ್ತು ಆಗಲ, ಗಣಿ ಗುತ್ತಿಗೆಗಿಂತ ಹೆಚ್ಚು ಒತ್ತವರಿ ಹಾಗೂ ಅಕ್ರಮ ಸ್ಥಳ ಪರಿಶೀಲನೆ ನಡೆಸಿ, ಗಡಿ ಗುರುತಿಸಿ, ಮಾರ್ಕ್ ಮಾಡಿದ್ದಾರೆ. ಆದರೆ ಗುಂಡ್ಲುಪೇಟೆ ತಾಲೂಕಿನಲ್ಲಿ ಮಾತ್ರ ಡ್ರೋನ್ ಸರ್ವೆ ನಡೆದಿಲ್ಲ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಗಣಿ ಗುತ್ತಿಗೆ ಲೀಸ್ ಪಡೆದವರಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಒತ್ತವರಿ ಮಾಡಿರುವ ಕ್ವಾರಿ ಲೀಸ್‌ದಾರರಿಗೆ ಡ್ರೋನ್/ಡಿಜಿಪಿಎಸ್ ಸರ್ವೇಯಿಂದ ನಡುಕ ಹುಟ್ಟಿದ್ದು ಕೆಲ ಕ್ವಾರಿ ಮಾಲೀಕರು ಕ್ವಾರಿಗೆ ಎಂ.ಸ್ಯಾಂಡ್ ಸ್ಲರಿ ಹಾಗೂ ಮಣ್ಣು ಹಾಕಿ ಮುಚ್ಚುವ ಕೆಲಸ ತಾಲೂಕಿನ ಹಿರೀಕಾಟಿ ಬಳಿಯ ಕ್ವಾರಿಯಲ್ಲಿ ನಡೆಯುತ್ತಿದೆ. ಹಿರೀಕಾಟಿ ಗ್ರಾಮದ ಸ.ನಂ.೧೦೮ ಕ್ವಾರಿ ಲೀಸ್ ಪಡೆದ ಐದಾರು ಮಂದಿ ಲೀಸ್‌ದಾರರು ಅಕ್ರಮ ಹಾಗೂ ಒತ್ತುವರಿ ಮಾಡಿರುವ ಕ್ವಾರಿಯ ನೂರಾರು ಅಡಿ ಆಳವನ್ನು ಎಂ.ಸ್ಯಾಂಡ್ ಸ್ಲರಿಯಿಂದ ಮುಚ್ಚಿದ್ದಾರೆ. ಎಂ.ಸ್ಯಾಂಡ್ ಸ್ಲರಿಯನ್ನು ಮುಚ್ಚಲು ಅನುಮತಿ ಇಲ್ಲ. ಆದರೂ ಪರಿಸರ ಇಲಾಖೆ ಈ ವಿಚಾರದ ಬಗ್ಗೆ ಮೌನ ವಹಿಸಿದೆ.ಜಿಲ್ಲೆಯಲ್ಲಿ ಕ್ವಾರಿಗಳ ಸಮೀಕ್ಷೆ ಆರಂಭಿಸಲಾಗಿದೆ. ಆದರೆ ಗುಂಡ್ಲುಪೇಟೆ ತಾಲೂಕಿನಲ್ಲಿ ಡ್ರೋನ್ ಸರ್ವೇ ಮಾಡಿಲ್ಲ. ಈಗ ರಾಜ್ಯ ಸರ್ಕಾರ ೨೦೧೭ರ ಹಿಂದಿನ ಸರ್ವೇ ಆಧಾರಿಸಿ ಲೀಸ್‌ಗಿಂತ ಹೆಚ್ಚು ಕಲ್ಲು ತೆಗೆದಿದ್ದರೆ ಒಂದು ಪಟ್ಟು ದಂಡ, ಒತ್ತುವರಿ ಮಾಡಿ ಕಲ್ಲು ತೆಗೆದಿದ್ದರೆ ೨ ಪಟ್ಟು ದಂಡ ತಪ್ಪಿಸಿಕೊಳ್ಳಲು ಕೆಲ ಕ್ವಾರಿ ಲೀಸ್‌ದಾರರು ಸಮೀಕ್ಷೆ ದಿಕ್ಕು ತಪ್ಪಿಸಲು ಆಳ-ಅಗಲ ಮತ್ತು ಒತ್ತುವರಿ ಜೊತೆಗೆ ಹೆಚ್ಚುವರಿ ಅಕ್ರಮ ಕ್ವಾರಿಯ ಜಾಗಕ್ಕೆ ಮಣ್ಣು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜಿಲ್ಲಾ ಟಾಸ್ಕ್ ಫೋರ್ಸ್ ಗೊತ್ತಿಲ್ವ?:ಅಕ್ರಮ ಗಣಿಗಾರಿಕೆ ಬಂಡವಾಳ ಬಯಲಾಗುತ್ತದೆ ಎಂದು ಕೆಲ ಕ್ವಾರಿ ಲೀಸ್‌ದಾರರು ಸಮೀಕ್ಷೆಯಲ್ಲಿ ಅಕ್ರಮ ಕಂಡು ಬಂದರೆ ಭಾರಿ ಪ್ರಮಾಣದ ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಕ್ವಾರಿಗೆ ಎಂ.ಸ್ಯಾಂಡ್ ಸ್ಲರಿ ತುಂಬಿದ್ದಾರೆ/ತುಂಬುವ ಪ್ರಯತ್ನದಲ್ಲಿ ಇರುವುದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಗೆ ಗೊತ್ತಿಲ್ವವೇ? ಎಂದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಎದ್ದಿದೆ.
ಮಿನಿ ಬಳ್ಳಾರಿ ಎಂದೇ ಹೇಳಬಹುದಾದ ಹಿರೀಕಾಟಿ ಗ್ರಾಮದ ಬಳಿ ಸರ್ಕಾರಿ ೧೦೫ ಎಕರೆ ಜಾಗದಲ್ಲಿ ೨೦ ಎಕರೆಯಷ್ಟು ಲೀಸ್ ಪಡೆದು ಶೇ.೭೦ ರಷ್ಟು ಪ್ರದೇಶದಲ್ಲಿ ಗಣಿಗಾರಿಕೆ ನಡೆದಿದೆ. ಈ ಬಗ್ಗೆ ಏಕೆ ಜಿಲ್ಲಾಡಳಿತ ತನಿಖೆ ಮಾಡಿಸುತ್ತಿಲ್ಲ ಎಂದು ರೈತ ಕೂಲಿ ಸಂಗ್ರಾಮ ಸಮಿತಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ. ಆದರೂ ಕ್ರಮವಂತೂ ಆಗುತ್ತಿಲ್ಲ ಎಂಬ ಬೇಸರವನ್ನು ಸಮಿತಿ ಪದಾಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಸ.ನಂ.೧೦೮ ರ ಸರ್ಕಾರಿ ಜಾಗದಲ್ಲಿ ಪುರಾತನ ದೇವಾಲಯ, ದಲಿತ ಸ್ಮಶಾನ, ಕೃಷ್ಣಾಪುರಕ್ಕೆ ತೆರಳುವ ಸಂಪರ್ಕ ರಸ್ತೆ ಇದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಕುಮ್ಮಕ್ಕಿನಿಂದ ಇಲಾಖೆಗಳ ಎಲ್ಲಾ ನಿಯಮ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ.ಕ್ವಾರಿ ಆಳ ನೋಡಿದ್ರೆ ಭಯವಾಗುತ್ತೇ? ಹಿರೀಕಾಟಿ ಕ್ವಾರಿಯ ಆಳ ನೋಡಿದರೆ ಮೈ ಜುಮ್ಮೆನ್ನುತ್ತೆ. ಕಾರಣ ಕ್ವಾರಿ ಆಳ ಕನಿಷ್ಠ 100ರಿಂದ ೨೦೦ ಅಡಿಗೂ ಆಳವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತದಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಹಿರೀಕಾಟಿ ಕ್ವಾರಿಯಲ್ಲಿ ಆಳ ಹೆಚ್ಚಾಗಿದೆ. ಕ್ವಾರಿ ಕೆಳಗೆ ಕಣ್ಣಾಡಿಸಿದರೆ ಟಿಪ್ಪರ್‌ಗಳು ಬೆಂಕಿ ಪೊಟ್ಟಣದಂತೆ ಕಾಣುತ್ತಿದೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಕಲ್ಲು ದಂಧೆ ನಡೆಯುತ್ತಿದೆ ಜೊತೆಗೆ ಪ್ರತಿ ನಿತ್ಯ ಲಕ್ಷಾಂತರ ರಾಜಧನ ವಂಚನೆ ಕೂಡ ಆಗುತ್ತಿದೆ ಎಂದು ಹಿರೀಕಾಟಿ ಗ್ರಾಮದ ಯುವಕ ಪ್ರಸನ್ನ ದೂರಿದ್ದಾರೆ.