ಜಾಥಾಗೆ ಬೆರಳಣಿಕೆಯಷ್ಟು ಮಂದಿ ಸ್ವಾಗತ: ಗ್ರಾಮಸ್ಥರ ಆಕ್ರೋಶ

| Published : Jan 30 2024, 02:06 AM IST

ಜಾಥಾಗೆ ಬೆರಳಣಿಕೆಯಷ್ಟು ಮಂದಿ ಸ್ವಾಗತ: ಗ್ರಾಮಸ್ಥರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗ್ರಾಪಂ ಸದಸ್ಯರ ಗೈರು ಹಾಜರಿಯಿಂದ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯನ್ನು ಭಾನುವಾರ ಅಲ್ಲಂಪುರ ಗ್ರಾಮದಲ್ಲಿ ಬೆರಳಣಿಕೆಯಷ್ಟು ಮಂದಿಯಿಂದ ಸ್ವಾಗತಿಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ ವಾಯಿತು.

ಅಲ್ಲಂಪುರ ಗ್ರಾಪಂನಲ್ಲಿ ನಿರ್ಲಕ್ಷ್ಯವಹಿಸಿ ಕಾಟಾಚಾರಕ್ಕೆ ಮಾಡಲಾಗಿದೆ: ವಕೀಲ ಅನಿಲ್‌

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗ್ರಾಪಂ ಸದಸ್ಯರ ಗೈರು ಹಾಜರಿಯಿಂದ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯನ್ನು ಭಾನುವಾರ ಅಲ್ಲಂಪುರ ಗ್ರಾಮದಲ್ಲಿ ಬೆರಳಣಿಕೆಯಷ್ಟು ಮಂದಿಯಿಂದ ಸ್ವಾಗತಿಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ ವಾಯಿತು.

ಈ ವೇಳೆ ಗ್ರಾಮದ ಮುಖಂಡ ಹಾಗೂ ವಕೀಲ ಅನಿಲ್‌ಕುಮಾರ್ ಮಾತನಾಡಿ, ಇದೇ ಜ.26ರಂದು ಸಂವಿಧಾನ ಜಾಗೃತಿ ಜಾಥಾಗೆ ಸಚಿವರು ಚಾಲನೆ ನೀಡಿದ್ದು, ಪ್ರತಿ ಗ್ರಾಪಂಗಳಿಗೆ ಭೇಟಿ ನೀಡಬೇಕು. ಸ್ಥಳೀಯ ಅಧಿಕಾರಿಗಳು ಸಮರ್ಪಕವಾಗಿ ತಯಾರಿ ನಡೆಸಿ ಸಂವಿಧಾನದ ಆಶಯ ತಿಳಿಸಬೇಕೆಂಬ ನಿಯಮವಿದ್ದರೂ ಅಲ್ಲಂಪುರ ಗ್ರಾಪಂನಲ್ಲಿ ನಿರ್ಲಕ್ಷ್ಯವಹಿಸಿ ಕಾಟಾಚಾರಕ್ಕೆ ಮಾಡಿದಂತಾಗಿದೆ ಎಂದರು.

ರಾಜ್ಯದಲ್ಲಿ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಜಾಥಾ ನಡೆಸಲು ಜಿಲ್ಲಾವಾರು ಅನುದಾನ ಬಿಡುಗಡೆಗೊಳಿಸಿದೆ. ಈ ಜಾಥಾ ಪ್ರತಿ ಗ್ರಾಪಂಗೆ ತೆರಳಿ ಸಂವಿಧಾನ ಆಶಯ, ಸರ್ಕಾರದ ಸವಲತ್ತು, ಕಲ್ಯಾಣ ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಬೇಕೆಂಬ ಆದೇಶವಿದ್ದರೂ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ದೂರಿದರು.

ಭಾನುವಾರ ಬೆಳಗ್ಗೆ ಅಲ್ಲಂಪುರ ಗ್ರಾಮಕ್ಕೆ ಜಾಗೃತಿ ಜಾಥಾ ಬಂದರೂ ಕೂಡಾ ಶಿಕ್ಷಣ ಇಲಾಖೆ ಸಿಬ್ಬಂದಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಜರಿರಲಿಲ್ಲ. ಕೇವಲ ಪಿಡಿಒ, ಮೂವರು ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಒಟ್ಟು 12 ಮಂದಿ ಮಾತ್ರ ಜಾಥಾದಲ್ಲಿ ಪಾಲ್ಗೊಂಡಿದ್ದು ಬೇಸರ ತರಿಸಿದೆ ಎಂದು ಅಸಮಾಧಾನ ಹೊರಹಾಕಿದರು.

ಜಾಥಾ ಗ್ರಾಮಕ್ಕೆ ಭೇಟಿ ನೀಡುತ್ತಿರುವ ಸಂಬಂಧ ಒಂದು ದಿನ ಮುಂಚಿತವಾಗಿ ಮೈಕ್ ಮುಖಾಂತರ ಪ್ರಚಾರ ಕೈಗೊಂಡಿಲ್ಲ. ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಿದ್ದರೂ ಕೂಡಾ ಶಿಕ್ಷಕರು, ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿಲ್ಲ. ಇಂತಹ ಅರ್ಥಪೂರ್ಣ ಕಾರ್ಯಕ್ರಮ ಗ್ರಾಪಂ ಅಧಿಕಾರಿ, ನೋಡಲ್ ಮತ್ತು ಶಿಕ್ಷಣ ಇಲಾಖೆ ಸಮರ್ಪಕವಾಗಿ ನಿಭಾಯಿಸದಿರುವ ಕಾರಣ ಸಾಮಾನ್ಯ ಕಾರ್ಯಕ್ರಮದಂತಾಗಿರುವುದು ನೋವುಂಟಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಲ್ಲಂಪುರ ಗ್ರಾಪಂ ಸದಸ್ಯರು, ಪಿಡಿಒ ಹಾಗೂ ಜಾಗೃತಿ ಜಾಥಾದ ಸಂಬಂಧಿಸಿದ ಅಧಿಕಾರಿ ಹಾಜರಿದ್ದರು.

-----

28 ಕೆಸಿಕೆಎಂ 4

ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾದ ರಥಯಾತ್ರೆಯಲ್ಲಿ ಭಾನುವಾರ ಬೆರಳೆಣಿಕೆಯಷ್ಟು ಮಾತ್ರ ಗ್ರಾಮಸ್ಥರು ಇದ್ದರು.