ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ:
ಉತ್ತರ ಕರ್ನಾಟಕ ಭಾಗದಲ್ಲಿಯೇ ರೈತರು ವಾಣಿಜ್ಯ ಬೆಳೆಯನ್ನಾಗಿಸಿಕೊಂಡಿರುವ ತೊಗರಿ ಬೆಳೆಯು ಕಳಪೆ ಬೀಜದಿಂದ ಶೇ.೮೦ ರಷ್ಟು ಹಾನಿಯಾಗಿದ್ದು, ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಡಿ.೯ರಂದು ತಾಳಿಕೋಟೆ ನಗರದಲ್ಲಿ ಸುಮಾರು ೧೦ ರಿಂದ ೧೫ ಸಾವಿರ ರೈತರೊಂದಿಗೆ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.ಪಟ್ಟಣದ ಶ್ರೀ ವಿಠ್ಠಲ ಮಂದಿರ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಡಿ.೩ ರಂದು ಮುದ್ದೇಬಿಹಾಳದಲ್ಲಿ ಹೋರಾಟದ ಸಂದರ್ಭದಲ್ಲಿ ಅಧಿಕಾರಿಗಳು ಹಾನಿಯ ಬಗ್ಗೆ ಸರ್ವೇ ಮಾಡಲು ಕಾಲಾವಕಾಶ ಕೇಳಿದ್ದರು. ಆದರೆ ಅವರ ಕಾಲಾವಕಾಶ ಮುಗಿಯುತ್ತಾ ಬಂದರೂ ಇನ್ನೂ ಸರ್ವೇ ಕಾರ್ಯ ಪ್ರಾರಂಭಿಸಿಲ್ಲ. ವಿಮಾ ಕಂಪನಿಯವರಿಂದಲೂ ಸರ್ವೇ ಮಾಡಿಸುತ್ತ. ಇದಕ್ಕೆ ಕಾರಣ ಕಳಪೆ ಬೀಜ ಪೂರೈಸಿದ ಖಾಸಗಿ ಕಂಪನಿಯ ಏಜೆನ್ಸಿಯವರನ್ನು ರಕ್ಷಣೆ ಮಾಡಲು ಜಿಲ್ಲಾಧಿಕಾರಿಗಳು ಮತ್ತು ಕೃಷಿ ಇಲಾಖೆಯ ಜೆಡಿ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಕೇವಲ ಬಿಜೆಪಿ-ಜೆಡಿಎಸ್ ಹೋರಾಟ ಮಾಡುತ್ತಿಲ್ಲ. ವಿವಿಧ ರೈತಪರ ಸಂಘಟನೆಯವರು, ಕನ್ನಡಪರ ಸಂಘಟನೆಯವರು ಸಹ ಹೋರಾಟ ಮಾಡಿದ್ದಾರೆ. ಕರ್ನಾಟಕ ಲೋಕಾಯುಕ್ತರು ವಿಜಯಪುರ ಜಿಪಂ ಸಭಾಂಗಣದಲ್ಲಿ ಸಭೆ ಮಾಡಿ ಕಳಪೆ ಬೀಜದ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ಕೊಡುವಂತೆ ಹೇಳಿದ್ದಾರೆ. ಮತ್ತು ಹಾನಿಗೀಡಾದ ರೈತರಿಗೆ ಪರಿಹಾರ ಒದಗಿಸಲು ಸರ್ವೇ ಕಾರ್ಯ ಪ್ರಾರಂಭಿಸಿ ಎಂದು ಹೇಳಿದ್ದಾರೆ. ಅಧಿಕಾರಿಗಳು ಸರ್ವೆ ಮಾಡಿಸ್ತೀವಿ ಎಂದು ಜಾರಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
೫.೩೪ ಲಕ್ಷ ಹೆಕ್ಟೇರ್ ತೊಗರಿ ಬೆಳೆ ಹಾನಿ:ಕಳಪೆ ಬೀಜದಿಂದಾಗಿ ಮತ್ತು ತೊಗರಿ ಬೆಳೆಯ ಹಾನಿಯ ಬಗ್ಗೆ ಅಧಿಕಾರಿಗಳೇ ಹೇಳುವ ಹಾಗೆ ಮಂಜಿನಿಂದ ಹಾನಿ ಸಂಭವಿಸಿದೆ ಎಂದು ಹೇಳುತ್ತಿದ್ದಾರೆ. ಒಟ್ಟಾರೆ ತಾಲೂಕಿನಲ್ಲಿ ೧.೨೪ ಲಕ್ಷ ಹೆಕ್ಟೇರ್ ತೊಗರಿ ಬೆಳೆ ನಷ್ಟವಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ೫.೩೪ ಲಕ್ಷ ಹೆಕ್ಟೇರ್ ಪ್ರದೇಶ ಎಕರೆಗಳಲ್ಲಿ ಅಂದರೆ ೧೫ ಲಕ್ಷ ಎಕರೆ ತೊಗರಿ ಬೆಳೆ ನಷ್ಟವಾಗಿದೆ. ಇಷ್ಟಾದರೂ ಉಸ್ತುವಾರಿ ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ. ಅವರೇನು ಜಿಲ್ಲೆಯಲ್ಲಿ, ರಾಜ್ಯದಲ್ಲಿ ಇದ್ದಾರೋ ಗೊತ್ತಿಲ್ಲ. ಇನ್ನೊಬ್ಬರು ಮಂತ್ರಿ ಇದ್ದಾರೆ ಅವರ ಹೇಳಿಕೆಯೂ ಬರುತ್ತಿಲ್ಲ. ಆಡಳಿತ ಪಕ್ಷದ ಇಬ್ಬರು ಶಾಸಕರು ಮಾತ್ರ ಧ್ವನಿ ಎತ್ತಿದ್ದಾರೆ. ಜಿಲ್ಲೆಯಲ್ಲಿ ವಿಮೆ ಕಟ್ಟಿದ ರೈತರು ಶೇ.೨೦ರಷ್ಟಿದ್ದು, ಬೆಳೆ ಹಾನಿಯಾಗಿದ್ದು ಶೇ.೮೦ರಷ್ಟು. ಬಿಜೆಪಿ ಸರ್ಕಾರವಿದ್ದಾಗ ಡೋಣಿ ಪ್ರವಾಹ ಬಂದಾಗ ಒಂದೇ ವಾರದಲ್ಲಿ ಸಮೀಕ್ಷೆ ಮಾಡಿ ₹೨೫ ಸಾವಿರ ಹೆಕ್ಟರ್‌ಗೆ ಪರಿಹಾರ ಕೊಟ್ಟಿದ್ದಾರೆ. ಈ ಸರ್ಕಾರದ ಖಜಾನೆ ಖಾಲಿಯಾಗಿದೆಯೇ ಎಂದು ಪ್ರಶ್ನಿಸಿದರು.
೧೦ಸಾವಿರ ಕೇಸು ದಾಖಲು:ಸೋಮವಾರದಿಂದ ಹೊಸ ಅಭಿಯಾನ ಪ್ರಾರಂಭವಾಗಲಿದೆ. ಕಳಪೆ ಬೀಜ ವಿತರಣೆಯ ಬಗ್ಗೆ ಜಿಲ್ಲಾಧಿಕಾರಿಗಳ ಮೇಲೆ, ಕೃಷಿ ಇಲಾಖೆಯ ಜೆಡಿ ಮತ್ತು ಬೀಜ ಪೂರೈಸಿದ ಖಾಸಗಿ ಕಂಪನಿಗಳ ಮೇಲೆ ಲೋಕಾಯುಕ್ತರ ಬಳಿ ಪ್ರತ್ಯೇಕವಾಗಿ ಕೇಸುಗಳನ್ನು ದಾಖಲಿಸಲಾಗುವುದು. ಒಂದು ಕಡೆ ಹೋರಾಟ ಇನ್ನೊಂದು ಅವರ ಮೇಲೆ ದೂರು ದಾಖಲಿಸಲಾಗುವುದು. ಸುಮಾರು ೮ ರಿಂದ ೧೦ ಸಾವಿರ ರೈತರು ಪ್ರತ್ಯೇಕವಾಗಿ ಕೇಸನ್ನು ದಾಖಲಿಸಲಿದ್ದಾರೆ ಎಂದು ಮಾಜಿ ಶಾಸಕ ನಡಹಳ್ಳಿ ತಿಳಿಸಿದರು.
ತೊಗರಿಗೆ ತೇವಾಂಶ ಕೊರತೆಯಾಗಿದೆ ಎಂದು ವಿಜ್ಞಾನಿಯೊಬ್ಬರು ಇಂಡಿಯಲ್ಲಿ ಹೇಳಿದ್ದಾರೆ. ಇನ್ನೊಂದು ವಿಷಯ ತೊಗರಿ ಇಕ್ಕಲವಾಗಿ ಬಿತ್ತಿದ್ದಾರೆ. ಹೀಗಾಗಿ ಗಿಡಗಳಿಗೆ ಉಸಿರಾಟದ ತೊಂದರೆಯಿಂದ ಹೀಗಾಗಿದೆ ಎಂದು ರೈತರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ. ಸುಮಾರು ೫೦ ರಿಂದ ೬೦ ವರ್ಷಗಳಿಂದಲೂ ರೈತರು ತೊಗರಿ ಬಿತ್ತನೆ ಮಾಡುತ್ತಿದ್ದಾರೆ. ರೈತರಿಗಿಂತ ವಿಜ್ಞಾನಿ ಬುದ್ದವಂತನಾಗಲು ಹೋಗಿದ್ದಾನೆ. ಕಳಪೆ ಬೀಜ ಸಪ್ಲಾಯಿ ಮಾಡುವ ದೊಡ್ಡ ಮಾಫಿಯಾ ರಾಜ್ಯದಲ್ಲಿದೆ. ಅಂತವರಿಂದ ಕೋಟ್ಯಾಂತರ ರೂಪಾಯಿ ಲೂಟಿ ಹೊಡೆದ ಅಧಿಕಾರಿಗಳು, ಖಾಸಗಿ ಕಂಪನಿಯವರನ್ನು ರಕ್ಷಣೆ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.ಜಿಲ್ಲಾಧಿಕಾರಿಗಳಿಗೆ, ಕೃಷಿ ಜಂಟಿ ಕೃಷಿ ನಿರ್ದೇಶಕರಿಗೆ ಸ್ಪಷ್ಟವಾಗಿ ಹೇಳುತ್ತೇನೆ. ಭ್ರಷ್ಟರನ್ನು ರಕ್ಷಣೆ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ಶೀಘ್ರವೇ ಬಂಡವಾಳ ಹೊರಬರಲಿದೆ. ನಿಮ್ಮ ಮೇಲೆ ರೈತರು ಪ್ರಕರಣ ದಾಖಲಿಸುವ ಕೆಲಸ ನಡೆಯಲಿದೆ. ರೈತರ ಹಿತದೃಷ್ಠಿಯಿಂದ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ. ಈ ಹೋರಾಟಕ್ಕೆ ಅಧಿಕಾರಿಗಳು ಬೆಲೆ ತೆರಬೇಕಾಗುತ್ತದೆ ಎಂದು ನಡಹಳ್ಳಿ ಎಚ್ಚರಿಸಿದರು.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಮುಖಂಡರಾದ ಎಂ.ಎಸ್.ಪಾಟೀಲ(ನಾಲತವಾಡ), ಕಾಶಿನಾಥ ಮುರಾಳ, ಕಾಶಿರಾಯ ಮೋಹಿತೆ, ಡಿ.ವ್ಹಿ.ಪಾಟೀಲ, ಡಿ.ಕೆ.ಪಾಟೀಲ, ಬಸು ಕಶೆಟ್ಟಿ, ವಾಸುದೇವ ಹೆಬಸೂರ, ಮುದಕಪ್ಪ ಬಡಿಗೇರ, ರಾಜಣ್ಣ ಸೊಂಡೂರ, ರಾಮು ಜಗತಾಪ, ಮಲ್ಲು ಮೇಟಿ, ಈಶ್ವರ ಹೂಗಾರ, ರಾಘವೇಂದ್ರ ಮಾನೆ, ವಿಠ್ಠಲ ಮೋಹಿತೆ, ನಿಂಗಣ್ಣ ಕುಂಟೋಜಿ, ಮಹಾಂತೇಶ ಮುರಾಳ, ಪ್ರಕಾಶ ಹಜೇರಿ, ಕಕ್ಕುಸಾ ರಂಗ್ರೇಜ್, ನದೀಂ ಕಡು, ಪ್ರಭುಗೌಡ ಬಿರಾದಾರ, ಕಾಶಿನಾಥ ಸಜ್ಜನ, ಎಂ.ಎಸ್.ಸರಶೆಟ್ಟಿ, ಮೊದಲಾದವರು ಇದ್ದರು.-------ಕೋಟ್ಡಿ.೯ರಂದು ತಾಳಿಕೋಟೆಯಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯುತ್ತದೆ. ಸಾವಿರಾರು ರೈತರು ಟ್ರ್ಯಾಕ್ಟರ್ ಮೂಲಕ ಆಗಮಿಸುತ್ತಾರೆ. ಈ ಹೋರಾಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳು ಬಂದು ಸರ್ವೇ ಕಾರ್ಯಕ್ಕೆ ಆದೇಶ ಮಾಡುವವರೆಗೂ ಹೋರಾಟ ಮುಂದುವರೆಯಲಿದೆ. ಈ ಹೋರಾಟದ ಬಗ್ಗೆ ಅಧಿವೇಶನದಲ್ಲಿ ಗಮನ ಸೆಳೆಯುವ ಕೆಲಸವನ್ನು ಉತ್ತರ ಕರ್ನಾಟಕ ಭಾಗದ ಶಾಸಕರು ಮಾಡಲಿದ್ದಾರೆ.
ಎ.ಎಸ್.ಪಾಟೀಲ (ನಡಹಳ್ಳಿ), ಮಾಜಿ ಶಾಸಕ