ಸಾರಾಂಶ
ಯಾದಗಿರಿ : ಯಾದಗಿರಿ ಪಿಎಸ್‌ಐ ಪರಶುರಾಮ (34) ಅವರು ಶುಕ್ರವಾರ ಸಂಜೆ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ತಮ್ಮ ಪತಿಯ ಸಾವಿಗೆ ಸ್ಥಳೀಯ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಹಾಗೂ ಪಂಪನಗೌಡ (ಸನ್ನಿಗೌಡ) ಅವರ ಪುತ್ರನ ಕಿರುಕುಳ ಕಾರಣ. ವರ್ಗಾವಣೆಗೆ ಅವರು 30 ಲಕ್ಷ ರು. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಜಾತಿ ನಿಂದನೆ ಕೂಡ ಮಾಡಿದ್ದರು ಎಂದು ಪಿಎಸ್‌ಐ ಪತ್ನಿ ಶ್ವೇತಾ ದೂರು ನೀಡಿದ್ದಾರೆ. ಈ ಸಂಬಂಧ 15 ತಾಸು ಪ್ರತಿಭಟನೆ ನಡೆದ ಬಳಿಕ ಶಾಸಕ, ಪುತ್ರನ ವಿರುದ್ಧ ಯಾದಗಿರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪಿಎಸ್‌ಐ ಕುಟುಂಬದ ಪ್ರತಿಭಟನೆ ಹಾಗೂ ಪ್ರಕರಣದ ಗಂಭೀರತೆ ಅರಿತ ಸರ್ಕಾರ ಪಿಎಸ್‌ಐ ನಿಗೂಢ ಸಾವಿನ ಕೇಸ್ ಅನ್ನು ಸಿಐಡಿಗೆ ವಹಿಸಿದೆ. ಈ ನಡುವೆ, ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಪುತ್ರನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಸಂಶಯಾಸ್ಪದ ಸಾವು:
ಯಾದಗಿರಿ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಪರಶುರಾಮ ಅವರು ಶುಕ್ರವಾರ ಸಂಜೆ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆಕ್ರೋಶಕ್ಕೆ ಕಾರಣವಾಗಿತ್ತು. ತಮ್ಮ ಪತಿಯ ಸಾವಿಗೆ ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಪುತ್ರ ಕಾರಣ. ಅವರು ಹಣಕ್ಕಾಗಿ ನಿರಂತರ ಕಿರುಕುಳ ನೀಡುತ್ತಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿ ಪತಿ ಸಾವನ್ನಪ್ಪಿದ್ದಾರೆ. ಶಾಸಕರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಅವರ ಪತ್ನಿ ಶ್ವೇತಾ ಅವರು, ಯಾದಗಿರಿ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.
ಶಾಸಕರ ವಿರುದ್ಧ ಪ್ರಕರಣ ದಾಖಲಿಸುವವರೆಗೂ ಪತಿಯ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದಿದ್ದರು. ವಿವಿಧ ಸಂಘಟನೆಗಳು ಕೂಡ ಅವರಿಗೆ ಬೆಂಬಲ ನೀಡಿ, ಕಲಬುರಗಿ-ಯಾದಗಿರಿ ಹೆದ್ದಾರಿ ಬಂದ್ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದವು. ಕೊನೆಗೂ ಪ್ರತಿಭಟನೆಗೆ ಮಣಿದ ಪೊಲೀಸರು, ಘಟನೆ ನಡೆದ ಸುಮಾರು 15 ಗಂಟೆಗಳ ಬಳಿಕ, ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಪುತ್ರನ ವಿರುದ್ಧ ಜಾತಿನಿಂದನೆ ಹಾಗೂ ಲಂಚಕ್ಕೆ ಬೇಡಿಕೆ ಇಟ್ಟ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ಕೇಸ್ ದಾಖಲಿಸಿದ ಬಳಿಕ ಯಾದಗಿರಿಯ ಯಿಮ್ಸ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಬಳಿಕ, ಶನಿವಾರ ಸಂಜೆ 6 ಗಂಟೆಗೆ ಅವರ ಮೃತದೇಹವನ್ನು ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮಕ್ಕೆ ಒಯ್ಯಲಾಯಿತು. ಗ್ರಾಮದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮತ್ತಿತರ ಗಣ್ಯರು ಅವರ ಅಂತಿಮ ದರ್ಶನ ಪಡೆದರು. ಬಳಿಕ, ಗ್ರಾಮದಲ್ಲಿ ಇರುವ ಅವರ ಸ್ವಂತ ಜಮೀನಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು. ಘಟನೆ ಖಂಡಿಸಿ ಸೋಮನಾಳದಲ್ಲಿಯೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.