ಫ್ರುಟ್ಸ್‌ ತಂತ್ರಾಂಶದಲ್ಲಿ ಬೆಳೆ ತಿದ್ದುಪಡಿ ಮಾಡಿದ್ರೆ ಎಫ್ ಐಆರ್

| Published : Dec 01 2023, 12:45 AM IST

ಫ್ರುಟ್ಸ್‌ ತಂತ್ರಾಂಶದಲ್ಲಿ ಬೆಳೆ ತಿದ್ದುಪಡಿ ಮಾಡಿದ್ರೆ ಎಫ್ ಐಆರ್
Share this Article
  • FB
  • TW
  • Linkdin
  • Email

ಸಾರಾಂಶ

ಫ್ರುಟ್ಸ್ ತಂತ್ರಾಂಶದಲ್ಲಿ ರೈತರ ಬೆಳೆ ನಮೂದನ್ನು ಅಕ್ರಮವಾಗಿ ತಿದ್ದುಪಡಿ ಮಾಡುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಎಫ್‍ಐಆರ್ ದಾಖಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಎಚ್ಚರಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಖರೀದಿ ಕೇಂದ್ರ ತೆರೆಯುವ ಬಗ್ಗೆ ಪೂರ್ವಸಿದ್ಧತೆಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ರಾಗಿಯನ್ನು ಖರೀದಿ ಮಾಡಲು ರೈತರ ನೋಂದಣಿ ಪ್ರಕ್ರಿಯೆಯನ್ನು ಶೀಘ್ರ ಪ್ರಾರಂಭಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ದಿವ್ಯಾಪ್ರಭು ಎಚ್ಚರಿಕೆ । ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಶೀಘ್ರ ನೋಂದಣಿ ಆರಂಭ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಫ್ರುಟ್ಸ್ ತಂತ್ರಾಂಶದಲ್ಲಿ ರೈತರ ಬೆಳೆ ನಮೂದನ್ನು ಅಕ್ರಮವಾಗಿ ತಿದ್ದುಪಡಿ ಮಾಡುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಎಫ್‍ಐಆರ್ ದಾಖಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಎಚ್ಚರಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಖರೀದಿ ಕೇಂದ್ರ ತೆರೆಯುವ ಬಗ್ಗೆ ಪೂರ್ವಸಿದ್ಧತೆಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ರಾಗಿಯನ್ನು ಖರೀದಿ ಮಾಡಲು ರೈತರ ನೋಂದಣಿ ಪ್ರಕ್ರಿಯೆಯನ್ನು ಶೀಘ್ರ ಪ್ರಾರಂಭಿಸಲಾಗುವುದು ಎಂದರು.

ರಾಗಿಗೆ 3846 ರು. ಬೆಂಬಲ ಬೆಲೆ:

ಸರ್ಕಾರ ಪ್ರಸಕ್ತ ಸಾಲಿಗೆ ರಾಗಿ ಬೆಳೆಗೆ ಪ್ರತಿ ಕ್ವಿಂಟಾಲ್‍ಗೆ 3846 ರು ಬೆಂಬಲ ಬೆಲೆ ಘೋಷಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಗರಿಷ್ಠ 20 ಕ್ವಿಂ. ರಾಗಿ ಖರೀದಿಸಲು ಅವಕಾಶವಿದೆ. ಕಳೆದ ವರ್ಷ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಸಂದರ್ಭದಲ್ಲಿ ಉಂಟಾದ ಗೊಂದಲ, ಅಕ್ರಮ ಹಾಗೂ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಅಂತಹ ತಪ್ಪುಗಳು ಹಾಗೂ ಗೊಂದಲ ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಿಲ್ಲಾದ್ಯಂತ 6 ಖರೀದಿ ಕೇಂದ್ರ ಆರಂಭ

ರೈತರ ನೋಂದಣಿ ಸಂದರ್ಭದಲ್ಲಿಯೇ ಅವರಿಗೆ ರಾಗಿ ಬೆಳೆಯನ್ನು ಎಪಿಎಂಸಿ ಗೆ ತರುವ ದಿನಾಂಕ ಹಾಗೂ ಸಮಯವನ್ನು ನಮೂದಿಸಿ ಟೋಕನ್ ನೀಡುವ ವ್ಯವಸ್ಥೆ ತರಲಾಗುವುದು. ಈ ಬಾರಿ ಹೊಸದುರ್ಗದಲ್ಲಿ 2, ಶ್ರೀರಾಂಪುರದಲ್ಲಿ 2, ಚಿತ್ರದುರ್ಗ 1 ಹಾಗೂ ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರಿನಲ್ಲಿ 1 ಸೇರಿದಂತೆ ಒಟ್ಟು 6 ಖರೀದಿ ಕೇಂದ್ರಗಳನ್ನು ಎಪಿಎಂಸಿ ಗಳಲ್ಲಿ ಪ್ರಾರಂಭಿಸಲಾಗುವುದು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಜಿಲ್ಲೆಗೆ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಏಜೆನ್ಸಿಯಾಗಿ ಸರ್ಕಾರ ನಿಗದಿಪಡಿಸಿದೆ ಎಂದರು. ಫ್ರುಟ್ಸ್ ತಂತ್ರಾಂಶದ ಬೆಳೆ ಮಾಹಿತಿ ಆಧಾರದ ಮೇಲೆ ರಾಗಿ ಖರೀದಿಸಲಾಗುವುದು. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಫ್ರುಟ್ಸ್ ತಂತ್ರಾಂಶದಲ್ಲಿ ವಿವರ ನಮೂದಿಗೆ ಅವಕಾಶವಿದೆ. ಕಳೆದ ಬಾರಿ ರಾಗಿ ಬೆಳೆಯದಿರುವವರಿಗೂ ಫ್ರುಟ್ಸ್ ತಂತ್ರಾಂಶದಲ್ಲಿ ಬೆಳೆ ಬದಲಾವಣೆ ಮಾಡಿರುವುದು ಕಂಡುಬಂದಿದ್ದು, ಹೀಗಾಗಿ ಈ ಬಾರಿ ಬೆಳೆ ಸಮೀಕ್ಷೆ ಸಂದರ್ಭದಲ್ಲಿ ದಾಖಲಿಸಿಕೊಂಡಿರುವ ದತ್ತಾಂಶವನ್ನು ಪರಿಗಣಿಸಿಕೊಂಡು, ಬೆಳೆ ವಿವರ ಪರಿಶೀಲಿಸಲಾಗುವುದು. ಮನಬಂದಂತೆ ಫ್ರುಟ್ಸ್ ತಂತ್ರಾಂಶದಲ್ಲಿ ಯಾವುದೇ ಇಲಾಖೆಯ ಅಧಿಕಾರಿ, ಸಿಬ್ಬಂದಿ ಅಕ್ರಮವಾಗಿ ಬೆಳೆ ತಿದ್ದುಪಡಿ ಮಾಡಿರುವುದು ಕಂಡುಬಂದಲ್ಲಿ, ಅಂತಹ ಪ್ರಕರಣಗಳಲ್ಲಿ ಯಾರ ಲಾಗಿನ್ ನಿಂದ ಈ ತಿದ್ದುಪಡಿ ಆಗಿದೆ ಎಂಬುದನ್ನು ಗುರುತಿಸಿ, ಅಂತಹ ಅಧಿಕಾರಿ, ಸಿಬ್ಬಂದಿಯ ವಿರುದ್ಧ ಎಫ್‍ಐಆರ್ ದಾಖಲಿಸಿ ಅಮಾನತುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.484 ರೈತರ ಬಾಕಿ ಮೊತ್ತ ಶೀಘ್ರ ಪಾವತಿ: ಕಳೆದ ಬಾರಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಿದ ವಿವಿಧ ಸಮಸ್ಯೆಯ ಕಾರಣ ಸುಮಾರು 484ಕ್ಕೂ ಹೆಚ್ಚು ರೈತರಿಗೆ ಸುಮಾರು 1.28 ಕೋಟಿ ರು. ಹಣ ಪಾವತಿ ಬಾಕಿ ಇದ್ದು, ಈ ಬಗ್ಗೆ ಸಮಸ್ಯೆಯನ್ನು ಪರಿಹರಿಸಲಾಗಿದೆ. ಒಂದು ವಾರದ ಒಳಗಾಗಿ 484 ರೈತರ ಬಾಕಿ ಮೊತ್ತ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಪಾವತಿಯಾಗಲಿದೆ ಎಂದರು.18,285 ಟನ್ ರಾಗಿ ಉತ್ಪಾದನೆ:ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಬಾರಿ ಉತ್ತಮ ಮಳೆಯಾದ ಕಾರಣ 74,135 ಟನ್ ರಾಗಿ ಉತ್ಪಾದನೆಯಾಗಿತ್ತು. ಹೊಸದುರ್ಗ ತಾಲೂಕು ಒಂದರಲ್ಲೇ 47,540 ಟನ್ ರಾಗಿ ಉತ್ಪಾದನೆಯಾಗಿತ್ತು. ಅಲ್ಲದೆ ಬೆಂಬಲ ಬೆಲೆ ಯೋಜನೆಯಡಿ ಕಳೆದ ವರ್ಷ 2.17 ಲಕ್ಷ ಕ್ವಿಂ. ರಾಗಿ ಖರೀದಿಸಲಾಗಿತ್ತು. ಆದರೆ ಈ ಬಾರಿ ಮಳೆಯ ಕೊರತೆಯಿಂದಾಗಿ ಕೇವಲ 18,285 ಟನ್ ರಾಗಿ ಉತ್ಪಾದನೆಯಾಗಿರುವ ನಿರೀಕ್ಷೆ ಇದೆ. ಪ್ರಸಕ್ತ ಸಾಲಿಗೆ ರಾಗಿ ಬೆಳೆಗೆ ಪ್ರತಿ ಕ್ವಿಂಟಾಲ್‍ಗೆ 3,846 ರು. ಬೆಂಬಲ ಬೆಲೆ ಘೋಷಿಸಿದೆ. ಈ ಬಾರಿ ಬಯೋಮೆಟ್ರಿಕ್ ಆಧಾರದಲ್ಲಿ ರೈತರ ನೋಂದಣಿ ಮಾಡುವುದರಿಂದ ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರವೇ ರೈತರ ನೋಂದಣಿಯನ್ನು ಪ್ರಾರಂಭಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದರ್ ಕುಮಾರ್ ಮೀನಾ ಮಾತನಾಡಿ, ರಾಗಿ ಖರೀದಿ ಕೇಂದ್ರದ ಸುತ್ತಲೂ ಪೊಲೀಸ್ ಸಿಬ್ಬಂದಿ ಗಸ್ತು ತಿರುಗಲು ವ್ಯವಸ್ಥೆ ಮಾಡಲಾಗುವುದು. ಏನಾದರೂ ಸಮಸ್ಯೆ ಕಂಡುಬಂದಲ್ಲಿ 112 ಗೆ ಕರೆ ಮಾಡಿದಲ್ಲಿ ನಮ್ಮ ಪೊಲೀಸರು ತ್ವರಿತವಾಗಿ ಸ್ಪಂದಿಸುವರು ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್ ಚೌಧರಿ, ಎಪಿಎಂಸಿ ಸಹಾಯಕ ಕಾರ್ಯದರ್ಶಿ ವಾಣಿಶ್ರೀ, ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.