ದೇವರ ಆಭರಣ ಕಳುವು, ಪೊಲೀಸರಿಂದ ಪರಿಶೀಲನೆ

| Published : Dec 01 2023, 12:45 AM IST

ಸಾರಾಂಶ

ಶಿರಹಟ್ಟಿ ತಾಲೂಕಿನ ಶ್ರೀಮಂತಗಡದ ಹೊಳಲಮ್ಮ ದೇವಿ ದೇವಸ್ಥಾನದಲ್ಲಿ ತಡರಾತ್ರಿ ದೇವಿಯ ಗರ್ಭಗುಡಿಯ ಬೀಗ ಮುರಿದು ದೇವಿ ಮೈಮೇಲಿದ್ದ ಚಿನ್ನದ ಸರ, ಆಭರಣಗಳನ್ನು ಕಳುವು ಮಾಡಿದ ಘಟನೆ ನಡೆದಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕಳ್ಳರು ದೇವಸ್ಥಾನದ ಕೀಲಿ ಮುರಿದು ಹೊಳಲಮ್ಮ ದೇವಿಯ ಕಿರೀಟ ಹಾಗೂ ಆಭರಣ ಕಳ್ಳತನ ಮಾಡಿದ್ದಾರೆ.

ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ಶ್ರೀಮಂತಗಡದ ಹೊಳಲಮ್ಮ ದೇವಿ ದೇವಸ್ಥಾನದಲ್ಲಿ ತಡರಾತ್ರಿ ದೇವಿಯ ಗರ್ಭಗುಡಿಯ ಬೀಗ ಮುರಿದು ದೇವಿ ಮೈಮೇಲಿದ್ದ ಚಿನ್ನದ ಸರ, ಆಭರಣಗಳನ್ನು ಕಳುವು ಮಾಡಿದ ಘಟನೆ ನಡೆದಿದೆ.

ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕಳ್ಳರು ದೇವಸ್ಥಾನದ ಕೀಲಿ ಮುರಿದು ಹೊಳಲಮ್ಮ ದೇವಿಯ ಕಿರೀಟ ಹಾಗೂ ಆಭರಣ ಕಳ್ಳತನ ಮಾಡಿದ್ದಾರೆ.

ಹೊಳಲಮ್ಮ ದೇವಿಯ ಮೇಲಿನ ಸುಮಾರು ೨೦ ಗ್ರಾಂ ಚಿನ್ನದ ಸರಗಳು, ಬೆಳ್ಳಿಯ ಕಿರೀಟ, ಚಂದ್ರಿಕೆ, ಪಾದುಕೆ ಸೇರಿ ಒಟ್ಟು ೧ ಕೆಜಿಗೂ ಅಧಿಕ ಬೆಳ್ಳಿ ಕಳುವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಜತೆಗೆ ಕಾಣಿಕೆ ಹುಂಡಿ ಹೊತ್ತೊಯ್ದು ಹೊರಗಡೆ ಬಂದು ಮುರಿದು ಅದರಲ್ಲಿ ಹಣ ಕೂಡ ಕಳ್ಳತನ ಮಾಡಿದ ಪ್ರಕರಣ ನಡೆದಿದೆ.

ಘಟನಾ ಸ್ಥಳಕ್ಕೆ ಡಿಎಸ್ಪಿ ಮಡಿವಾಳಪ್ಪ ಸಂಕದ, ಸೈಬರ್ ಕ್ರೈಂನ ಎಸ್.ಎಂ. ಸಿರುಗುಪ್ಪಿ, ಫಿಂಗರ್ ಪ್ರಿಂಟ್ಸ್ ಸಿಪಿಐ ಚಂದ್ರಪ್ಪ, ಶಿರಹಟ್ಟಿ ಸಿಪಿಐ ನಾಗರಾಜ ಮಾಡಳ್ಳಿ, ಮುಳಗುಂದ ಸಿಪಿಐ ಸಂಗಮೇಶ ಶಿವಯೋಗಿ, ಲಕ್ಷ್ಮೇಶ್ವರ ಕ್ರೈಂನ ಪಿಎಸ್‌ಐ ವಿ.ಜಿ. ಪವಾರ್, ಶಿರಹಟ್ಟಿ ಪಿಎಸ್‌ಐ ಈರಪ್ಪ ರಿತ್ತಿ, ಶಿರಹಟ್ಟಿ ಕ್ರೈಂ ಪಿಎಸ್‌ಐ ವಿಜಯಕುಮಾರ ತಳವಾರ, ಶ್ವಾನದಳ ಫಿಂಗರ್ ಪ್ರಿಂಟ್ಸ್ ದಳ, ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.