ಸಾರಾಂಶ
ಹಾವೇರಿ: ಜಿಲ್ಲೆಯಲ್ಲಿ ಕೆರೆ ತುಂಬಿಸುವ ಯೋಜನೆ ಸಾಕಾರಗೊಳ್ಳಲು ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎರಡನೇ ಅತಿದೊಡ್ಡ ಕೆರೆ ಎಂಬ ಖ್ಯಾತಿ ಹೊಂದಿರುವ ಇಲ್ಲಿಯ ಹೆಗ್ಗೇರಿ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಲಿದ್ದಾರೆ. ಮುಖ್ಯಮಂತ್ರಿಯೊಬ್ಬರು ಇದೇ ಮೊದಲ ಬಾರಿಗೆ ಹೆಗ್ಗೇರಿ ಕೆರೆಗೆ ಬಾಗಿನ ಅರ್ಪಿಸುತ್ತಿರುವುದು ವಿಶೇಷವಾಗಿದೆ.
ತುಂಗಭದ್ರ ನದಿಯಿಂದ ಯುಟಿಪಿ ಕಾಲುವೆ ಮೂಲಕ ಹೆಗ್ಗೇರಿ ಕೆರೆಯನ್ನು ತುಂಬಿಸಲಾಗಿದೆ. ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ ಸಿಎಂ ಆಗಿದ್ದಾಗ ಜಿಲ್ಲೆಯಲ್ಲಿ ಯುಟಿಪಿ ಕಾಲುವೆ ಮೂಲಕ ಕೆರೆ ತುಂಬಿಸುವ ಯೋಜನೆ ಅನುಷ್ಠಾನಗೊಳಿಸಿದ್ದರು. ಅದರಂತೆ ಹೆಗ್ಗೇರಿ ಕೆರೆಯನ್ನು ಕೂಡ ತುಂಬಿಸುವ ಕಾರ್ಯ ಶುರು ಮಾಡಲಾಗಿತ್ತು. ಕಳೆದ ಬೇಸಿಗೆಯಲ್ಲಿ ನಗರದ ಜನತೆಗೆ ಆಸರೆಯಾಗಿದ್ದ ಹೆಗ್ಗೇರಿ ಕೆರೆ ತುಂಬಿಸಲು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕ ರುದ್ರಪ್ಪ ಲಮಾಣಿ ಹೆಚ್ಚು ಮುತುವರ್ಜಿ ವಹಿಸಿದ್ದರಿಂದ ತುಂಗಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿದು ಬರಲು ಸಾಧ್ಯವಾಗಿದೆ.ಐತಿಹಾಸಿಕ ಕೆರೆ:ಹೆಗ್ಗೆರೆಕೆರೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಶಾಸನವೊಂದರಲ್ಲಿ `ಹರಿವಹನೀರ್ಗೇ ಯಡಂಬರಲು ರಗಂಕಂಡು ನಳನದಂ ಕಟ್ಟಸೆ ಹಾವೇರಿಯಂದು ಪರಮಾರ್ತ್ಥನಾಮ ಮಾದುದಾ ಕೃತಯುಗದೊಳ್'''''''' ಎಂದು ಉಲ್ಲೇಖಿಸಲಾಗಿದೆ. ಹರಿಯುವ ನೀರಿಗೆ ಹಾವೊಂದು ಅಡ್ಡಲಾಗಿ ಬಂದಿದ್ದರಿಂದ ಈ ಪವಿತ್ರವಾದ ಕ್ಷೇತ್ರದಲ್ಲಿ ನಳಚಕ್ರವರ್ತಿಯು ಒಂದು ಕೆರೆಯನ್ನು ಕಟ್ಟಿಸಿ ಕೃತಾಯುಗದಲ್ಲಿ ಹಾವೇರಿಯೆಂದು ನಾಮಾಂಕಿತವನ್ನು ಕೊಟ್ಟನು. ಕ್ರಿ.ಶ ೧೧೩೪ ರ ಶಾಸನದಲ್ಲಿ ಹೆಗ್ಗೆರಿಯನ್ನು ನಲ್ಲಹಳಕೆರೆ ಎಂದು ಕರೆಯಲಾಗಿದೆ. ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಸೂಳೆ ಕೆರೆ ನಂತರ ಇಲ್ಲಿನ ಹೆಗ್ಗೇರಿ ಕೆರೆ ರಾಜ್ಯದ ಎರಡನೇ ಅತಿ ದೊಡ್ಡ ಕೆರೆ ಎನ್ನುವ ಖ್ಯಾತಿ ಪಡೆದಿದೆ. ಸುಮಾರು ೬೮೯ಎಕರೆ ವಿಸ್ತೀರ್ಣ ಹೊಂದಿರುವ ಹೆಗ್ಗೇರಿ ಕೆರೆಯನ್ನು ಹಾವೇರಿನಗರದ ಜನತೆಗೆ ಕುಡಿಯುವ ನೀರು ಪೂರೈಸುವ ಬಗ್ಗೆ ಹಾಗೂ ಸುತ್ತ-ಮುತ್ತಲಿನ ಕೊಳವೆಬಾವಿಗಳಲ್ಲಿ ಅಂತರ್ ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸುವುದು ಅವಶ್ಯವಿದೆ. ೨೦೦೯-೧೦ರಲ್ಲಿ ಹಾವೇರಿ ನಗರದ ಜನತೆಗೆ ಕುಡಿಯುವ ನೀರಿಗಾಗಿ ನಗರಸಭೆಗೆ ಹಸ್ತಾಂತರಗೊಂಡಿದೆ. ನಿರ್ವಹಣೆ ಜವಾಬ್ದಾರಿಯಿಂದ ಮುಕ್ತವಾಗಿದ್ದರೂ ಕುಡಿಯುವ ನೀರು ಹೊರತುಪಡಿಸಿ ಇನ್ನಿತರ ಚಟುವಟಿಕೆ ಕೈಗೊಳ್ಳಬೇಕಿದ್ದಲ್ಲಿ ಸಣ್ಣ ನೀರಾವರಿ ಇಲಾಖೆ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.ಹೆಗ್ಗೇರಿಯಲ್ಲಿ ವಿದೇಶಿ ಹಕ್ಕಿಗಳ ಕಲರವ:ಈ ಹೆಗ್ಗೆರೆಕೆರೆಗೆ ಪ್ರತಿ ವರ್ಷ ದೂರದ ಆಸ್ಟ್ರೇಲಿಯಾ, ಮಂಗೋಲಿಯಾ, ಶ್ರೀಲಂಕಾ, ಜಿಂಬಾಬೆ, ನ್ಯೂಜಿಲಾಂಡ್ ಸೇರಿದಂತೆ ಮತ್ತಿತರ ದೇಶಗಳಿಂದ ಹಾಗೂ ಬೇರೆ ರಾಜ್ಯಗಳಿಂದ ಬಾರ್ ಹೆಡೆಡ್‌ಗೂಸ್, ಸ್ಯಾಂಡ್ ಗ್ರೊಜ್, ಗುಲಾಬಿ ಬಣ್ಣದ ಕಬ್ಬಕ್ಕಿಗಳು, ಕ್ರೌಂಚಪಕ್ಷಿಗಳು, ಪೆಂಟಂಡ್ ಸ್ಪಾರ್ಕ, ಸ್ಪೂನ್‌ಬೆಲ್, ಹಾವುಹಕ್ಕಿ, ನೀರುಕಾಗೆ, ಜಕನಾ, ಜಾತಕಪಕ್ಷಿ ಹಾಗೂ ಅಪರೂಪದ ನೀರುನಾಯಿಗಳು ಹೀಗೆ ತರೇವಾರಿ ಪಕ್ಷಿಗಳು, ಪ್ರಾಣಿಗಳು ಇಲ್ಲಿಗೆ ವಲಸೆ ಬರುತ್ತವೆ. ಪ್ರಾಣಿ-ಪಕ್ಷಿಗಳ ಸುರಕ್ಷತೆ ಇಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ. ಹೀಗಾಗಿ ಅನೇಕ ಅಪರೂಪದ ಪ್ರಾಣಿ-ಪಕ್ಷಿಗಳು ಬೇಟೆಗಾರರಿಗೆ ಬಲಿಯಾಗುತ್ತುವೆ. ಆದ ಕಾರಣ ಐತಿಹಾಸಿಕ ಹೆಗ್ಗೆರೆಕೆರೆಯನ್ನು ರಂಗನತಿಟ್ಟು ಮಾದರಿಯಲ್ಲಿ ಪಕ್ಷಿಧಾಮವನ್ನಾಗಿ, ಗದಗ ಜಿಲ್ಲೆಯ ಮಾಗಡಿ ಕರೆಯ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.ಹೆಗ್ಗೇರಿಯ ಜೀವ ವೈವಿಧ್ಯತೆಗಳನ್ನು ಅವಲೋಕಿಸಿ ಇದನ್ನು "ಜೀವ ವೈವಿಧ್ಯಗಳ ತಾಣ " ಎಂದು ಘೋಷಣೆ ಮಾಡಲಾಗಿದೆ. ಇದು ಕೇವಲ ಕಾಗದಲ್ಲಿ ಮಾತ್ರ ಉಳಿದಿದೆ. ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲರು ಐತಿಹಾಸಿಕ ಹೆಗ್ಗೆರೆಕೆರೆಯ ಬಗ್ಗೆ ಪ್ರೀತಿ-ಕಾಳಜಿ ತೋರಿಸುವ ಮೂಲಕ ಇದರ ಅಭಿವೃದ್ಧಿಗೆ ಹಾಗೂ ಪಕ್ಷಿಧಾಮವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಪಕ್ಷಿಪ್ರೇಮಿ ಮಾಲತೇಶ ಅಂಗೂರು ಹೇಳಿದರು.ಹಾವೇರಿ ನಗರದ ಜನತೆಗೆ ಕುಡಿಯುವ ನೀರು ಪೂರೈಸಲು ಆಸರೆಯಾಗಿರುವ ಹೆಗ್ಗೇರಿ ಕೆರೆ ಸಾಕಷ್ಟು ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಿ ಹದ್ದುಬಸ್ತ್ ಮಾಡುವುದು ಅಗತ್ಯವಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ಹೇಳಿದರು.