ಸ್ಥಳಾಂತರವಾಗದ ಮೀನು ಮಾರುಕಟ್ಟೆ, ಮುಂದುವರಿದ ಸಮಸ್ಯೆ

| Published : Jul 13 2025, 01:19 AM IST

ಸಾರಾಂಶ

ಮುಖ್ಯ ಕಡಲ ತೀರದಿಂದ ಊರಿನಿಂದ ಹೊರ ಹೋಗುವ ಮಾರ್ಗದ ತಾರಮಕ್ಕಿ ಮುಖ್ಯ ರಸ್ತೆಗೆ ಸೇರುವ ಬಳಿಯ ರಸ್ತೆ ಅಂಚಿನಲ್ಲಿ ಮೀನುಗಾರ ಮಹಿಳೆಯರು ಮೀನು ಮಾರಾಟ ಮಾಡುತ್ತಾರೆ.

ಗೋಕರ್ಣ: ಒಂದು ಕಡೆ ರಸ್ತೆಯಲ್ಲಿ ಹರಿಯುವ ಚರಂಡಿ ನೀರು, ಇನ್ನೊಂದು ಕಡೆ ಇಕ್ಕಟ್ಟಾದ ರಸ್ತೆಯ ಪಕ್ಕದಲ್ಲೇ ವ್ಯಾಪಾರ ವಹಿವಾಟು, ವಾಹನ ದಟ್ಟಣೆ, ಸಂಚಾರಕ್ಕೆ ತೊಡಕು... ಇದು ಇಲ್ಲಿನ ಮೀನು ಮಾರುಕಟ್ಟೆಯ ದುಃಸ್ಥಿತಿ.ಮುಖ್ಯ ಕಡಲ ತೀರದಿಂದ ಊರಿನಿಂದ ಹೊರ ಹೋಗುವ ಮಾರ್ಗದ ತಾರಮಕ್ಕಿ ಮುಖ್ಯ ರಸ್ತೆಗೆ ಸೇರುವ ಬಳಿಯ ರಸ್ತೆ ಅಂಚಿನಲ್ಲಿ ಮೀನುಗಾರ ಮಹಿಳೆಯರು ಮೀನು ಮಾರಾಟ ಮಾಡುತ್ತಾರೆ. ಇಕ್ಕಟ್ಟಾದ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ಪ್ರವಾಸಿ ಹಾಗೂ ಸ್ಥಳೀಯ ವಾಹನಗಳು ಸಂಚರಿಸುತ್ತದೆ. ಈ ವೇಳೆ ಜನರು ರಸ್ತೆಯಲ್ಲಿ ನಿಂತು ವ್ಯಾಪಾರ ಮಾಡುವುದರಿಂದ ವಾಹನ ದಟ್ಟಣೆ ಉಂಟಾಗಿ ಸಂಚಾರಕ್ಕೆ ತೊಡಕಾಗುತ್ತಿದೆ.

ಇನ್ನು ಮಳೆ ಬಂದರೆ ಈ ಸ್ಥಳ ನೀರು ತುಂಬಿ ಕೆರೆಯಾಗಿ ಮಾರ್ಪಡುತ್ತದೆ. ಹೊಲಸು ತ್ಯಾಜ್ಯದ ರಾಶಿ ಬೀಳುವುದರ ಜತೆ ಚರಂಡಿಯ ನೀರು ರಸ್ತೆಗೆ ಹರಿಯುತ್ತದೆ. ಇದೇ ಜಾಗದಲ್ಲಿ ಮೀನು ಮಾರಾಟ ಮಾಡುವ ಅನಿವಾರ್ಯತೆ ಇದ್ದು, ರೋಗ ರುಜಿನ ಹರಡುವ ಭೀತಿ ಎದುರಾಗಿದೆ. ಈ ಅವ್ಯವಸ್ಥೆ ಹಲವು ದಶಕಗಳಿಂದ ಇದ್ದರೂ ಸರಿಪಡಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಮಳೆ ಜತೆ ಹೊಲಸು ನೀರಿನ ಮಧ್ಯೆ ನಿಂತು ಮೀನು ಮಾರುವುದನ್ನು ತಪ್ಪಿಸಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಇಲ್ಲಿನ ಮುಖ್ಯಕಡಲತೀರದಲ್ಲಿ ಸೂಕ್ತ ವ್ಯವಸ್ಥೆಯುಳ್ಳ ಮೀನು ಮಾರುಕಟ್ಟೆ ನಿರ್ಮಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿದ ಈ ಕಟ್ಟಡಕ್ಕೆ ಇನ್ನು ಉದ್ಘಾಟನೆ ಭಾಗ್ಯ ಕಂಡಿಲ್ಲ. ಪ್ರಸ್ತುತ ಇದು ತುಕ್ಕು ಹಿಡಿದು ತುಂಡಾಗಿ ಬೀಳುತ್ತಿದೆ. ಲಕ್ಷಾಂತರ ವೆಚ್ಚದ ಈ ಕಟ್ಟಡ ಬೀಳುವ ಹಂತಕ್ಕೆ ತಲುಪುತ್ತಿದ್ದರೆ, ಅತ್ತ ಮಳೆಯಲ್ಲಿ ಛತ್ರಿ ಹಿಡಿದು ಮಹಿಳೆಯರು ಮೀನು ವಹಿವಾಟು ನಡೆಸುತ್ತಿರುವ ಪರಿಸ್ಥಿತಿ ಇದೆ.