ಅಂಗನವಾಡಿ ಕೇಂದ್ರಗಳ ನ್ಯೂನತೆ ಸರಿಪಡಿಸಿ: ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ

| Published : Aug 10 2024, 01:32 AM IST

ಅಂಗನವಾಡಿ ಕೇಂದ್ರಗಳ ನ್ಯೂನತೆ ಸರಿಪಡಿಸಿ: ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಅಲ್ಲಿ ಸಾಕಷ್ಟು ನ್ಯೂನತೆಗಳು ಕಂಡು ಬಂದಿದ್ದು, ಅವುಗಳನ್ನು ಸರಿಪಡಿಸುವ ಕೆಲಸವಾಗಬೇಕು.

ಬಳ್ಳಾರಿ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಅಲ್ಲಿ ಸಾಕಷ್ಟು ನ್ಯೂನತೆಗಳು ಕಂಡು ಬಂದಿದ್ದು, ಅವುಗಳನ್ನು ಸರಿಪಡಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಹೇಳಿದರು.

ನಗರದ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮೂರನೇ ಮಹಡಿಯ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಅಂಗನವಾಡಿ ಶಾಲೆಗಳ ನೂನ್ಯತೆ ಕುರಿತಾಗಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ತಾಲೂಕುಗಳ ಅಂಗನವಾಡಿ ಕೇಂದ್ರಗಳಿಗೆ ಒದಗಿಸಿರುವ ಮೂಲ ಸೌಲಭ್ಯ, ಅವುಗಳ ಸ್ಥಿತಿಗತಿ ಕುರಿತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಈಗಾಗಲೇ ಭೇಟಿ ನೀಡಿರುವ ಅನೇಕ ಕೇಂದ್ರಗಳಲ್ಲಿ ಹಾಜರಾತಿ ಕೊರತೆ, ಕಾರ್ಯಕರ್ತರ ಗೈರು, ಶಿಥಿಲಗೊಂಡ ಕಟ್ಟಡಗಳು, ವೈದ್ಯಕೀಯ ಕಿಟ್ ಬಳಕೆ ಮಾಡದಿರುವುದು, ಕೆಲವೆಡೆ ನಕಲಿ ಹಾಜರಾತಿ ಕಂಡು ಬಂದಿದೆ. ಈ ಎಲ್ಲವನ್ನೂ ಸರಿಪಡಿಸುವಂತೆ ಇಲಾಖೆ ಅಧಿಕಾರಿಗಳಿಗೆ ನಿರ್ದೇರ್ಶನ ನೀಡಲಾಗಿದೆ ಎಂದರು.

ಉಚ್ಚ ನ್ಯಾಯಾಲಯದ ಆದೇಶದನ್ವಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹಾಗೂ ಅಪೌಷ್ಟಿಕತೆ ನಿವಾರಣಾ ರಾಜ್ಯ ಸಲಹಾ ಸಮಿತಿಯ ಅಧ್ಯಕ್ಷರೂ ಆದ ವೇಣುಗೋಪಾಲಗೌಡ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದೆ. ಸಮಿತಿಯ ಮೂಲಕ ಆಯಾ ಜಿಲ್ಲೆಯ ಅಂಗನವಾಡಿ ಕೇಂದ್ರಗಳ ಸ್ಥಿತಿ-ಗತಿಯ ಬಗ್ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಚರ್ಚಿಸಿ ಅಂಗನವಾಡಿಗಳಿಗೆ ಭೇಟಿ ನೀಡಿ ಅಲ್ಲಿಯ ಸ್ಥಿತಿ-ಗತಿಗಳ ಬಗ್ಗೆ ಮಾಹಿತಿ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರಗಳಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕಾಂಶಯುಕ್ತ ಆಹಾರ, ಕ್ರಿಯಾಶೀಲ ಚಟುವಟಿಕೆಗಳಿಗೆ ಆದ್ಯತೆ ನೀಡುವುದರ ಜೊತೆಗೆ ಅವರ ಸರ್ವತೋಮುಖ ಬೆಳವಣಿಗೆಗೆ ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳು ಸುಧಾರಣೆಯಾಗಬೇಕಿದೆ. ಬಳ್ಳಾರಿ ಜಿಲ್ಲೆಯಲ್ಲಿ 1358 ಮತ್ತು ವಿಜಯನಗರ ಜಿಲ್ಲೆಯಲ್ಲಿ 1590 ಅಂಗನವಾಡಿ ಕೇಂದ್ರಗಳಿದ್ದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳನ್ನೊಳಗೊಂಡಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಲಹಾ ಸಮಿತಿಯ ಅಧ್ಯಕ್ಷರ ಮೇರೆಗೆ ಈಗಾಗಲೇ ಪ್ರತಿ ತಾಲೂಕಿಗೆ ಸಂಬಂಧಿಸಿದಂತೆ ಕೆಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಕೇಂದ್ರಗಳಲ್ಲಿ ನ್ಯೂನತೆ ಹಾಗೂ ಮೂಲಸೌಕರ್ಯಗಳ ಅಭಾವ ಕಂಡು ಬಂತು ಎಂದರು.

ಅತಿಹೆಚ್ಚು ಮಕ್ಕಳಿರುವ ಒಂದು ಗುಂಪಿಗೆ ವಿಸ್ತಾರವಾದ ಕೊಠಡಿ ಬೇಕು. ಹಾಗೆಯೇ ಹೊರಾಂಗಣವೂ ಇರಬೇಕು. ಅಂಗನವಾಡಿ ಕೇಂದ್ರಗಳು ವೈಜ್ಞಾನಿಕವಾಗಿ ಮಕ್ಕಳನ್ನು ಆಕರ್ಷಿಸುವ ಕೇಂದ್ರವಾಗಿರಬೇಕು. ವಿಶಾಲವಾದ ಹಾಲ್, ಅಡುಗೆ ಮನೆ, ಶುದ್ಧ ಕುಡಿಯುವ ನೀರು, ವಿದ್ಯುತ್, ಪ್ರತ್ಯೇಕ ಶೌಚಾಲಯ, ಅಡುಗೆ ಮತ್ತು ಮಕ್ಕಳ ಆಟೋಟ ಸಾಮಗ್ರಿಗಳ ದಾಸ್ತಾನಿಗೆ ಪ್ರತ್ಯೇಕ ಕೊಠಡಿ ಇರಬೇಕು ಎಂದು ತಿಳಿಸಲಾಗಿದೆ ಎಂದರು.

ಅಂಗನವಾಡಿಗಳು ಇನ್ನು ಸುಧಾರಣೆ ಆಗಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ವೈದ್ಯರು ಅಂಗನವಾಡಿಗಳಿಗೆ ನಿಯಮಿತವಾಗಿ ಭೇಟಿ ನೀಡಿ ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ಪರೀಕ್ಷಿಸಬೇಕು. ಸುಧಾರಣೆಗೆ ಕ್ರಮ ವಹಿಸಿ ಮಕ್ಕಳಿಗೆ ಒಳ್ಳೆಯ ವಾತಾವರಣ, ಶುದ್ಧ ಕುಡಿಯುವ ನೀರು, ಶುಚಿ ರುಚಿಯಾದ ಊಟ ಕಲ್ಪಿಸಿ ಮಕ್ಕಳು ದಿನನಿತ್ಯ ಅಂಗನವಾಡಿಗೆ ಬರುವಂತೆ ವಾತಾವರಣ ಸೃಷ್ಟಿಸಬೇಕು ಎಂದು ಹೇಳಿದರು.

ಅಪೌಷ್ಟಿಕತೆಯನ್ನು ತಡೆಯಲು ಕ್ರಮ ವಹಿಸಬೇಕು. ಬಡ ಮಕ್ಕಳೇ ಅಂಗನವಾಡಿ ಕೇಂದ್ರಗಳಿಗೆ ಬರುತ್ತಾರೆ. ಆರೋಗ್ಯವಂತ, ಶಿಕ್ಷಣವಂತ ಮಕ್ಕಳನ್ನು ರೂಪಿಸುವಲ್ಲಿ ಮೂಲ ಬುನಾದಿ ಅಂಗನವಾಡಿ ಕೇಂದ್ರಗಳಾಗಿವೆ. ಸರ್ಕಾರದಿಂದ ಬರುವ ಸೌಲಭ್ಯಗಳು ಸದ್ಭಳಕೆಯಾಗಬೇಕು ಎಂದರು.

ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.