ರಾಜ್ಯದಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಸಿಇಟಿ ವಾರ್ಷಿಕ ಪರೀಕ್ಷೆಯಲ್ಲಿ ನಡೆದ ಅವಾಂತರಗಳು ಹಾಗೂ ಪ್ರಸ್ತುತ ಶಿಕ್ಷಣ ಇಲಾಖೆಯಲ್ಲಿನ ಇತರೆ ಅವಾಂತರಗಳನ್ನು ಸರಿಪಡಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ರಾಜ್ಯದಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಸಿಇಟಿ ವಾರ್ಷಿಕ ಪರೀಕ್ಷೆಯಲ್ಲಿ ನಡೆದ ಅವಾಂತರಗಳು ಹಾಗೂ ಪ್ರಸ್ತುತ ಶಿಕ್ಷಣ ಇಲಾಖೆಯಲ್ಲಿನ ಇತರೆ ಅವಾಂತರಗಳನ್ನು ಸರಿಪಡಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದಿದ್ದಾರೆ.

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾಗಿ ಫಲಿತಾಂಶ ಶೇ. 40ಕ್ಕೂ ಕಡಿಮೆಯಾಗಿದೆ, ಎಂದು ಅಧಿಕಾರಿಗಳು ಹಾಗೂ ಶಿಕ್ಷಣ ಸಚಿವರು ಸಮಜಾಯಿಸಿ ನೀಡಿರುವುದು ಆತಂಕಕಾರಿಯಾಗಿದೆ. ಇವರ ಹೇಳಿಕೆಯನ್ನು ಗಮನಿಸಿದರೆ ನಮ್ಮ ರಾಜ್ಯದಲ್ಲಿ ಇಷ್ಟು ವರ್ಷಗಳ ಕಾಲ ಬಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಅಕ್ರಮವೇ ಎಂದು ಅವರು ಬಹಿರಂಗದಲ್ಲಿ ಪ್ರಶ್ನಿಸಿದ್ದಾರೆ.

ಸರ್ಕಾರ ಅಥವಾ ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶೇ. 20 ಕೃಪಾಂಕ ನೀಡಿರುವುದು ಅಕ್ಷಮ್ಯ ಅಪರಾಧ. ಈ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು ಸರ್ಕಾರದ ಹೊಣೆಗಾರಿಕೆಯಾಗಿದೆ. ರಾಜ್ಯ ಪಠ್ಯಕ್ರಮ ಕಲಿಯುತ್ತಿರುವ ಮಕ್ಕಳಿಗೆ ಯಾವ ರೀತಿಯ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ, ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಲ್ಲವೇ, ಈ ಕುರಿತು ಆಳವಾದ ಅಧ್ಯಯನ ಮಾಡಿ, ವರದಿ ನೀಡಲು ತಜ್ಞರ ಸಮಿತಿಯನ್ನು ನೇಮಕ ಮಾಡುವ ಬಗ್ಗೆ ಚಿಂತನೆ ನಡೆಸುವಂತೆ ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್‌ನಿಂದ ಛೀಮಾರಿ: ವಿವೇಚನಾ ರಹಿತವಾಗಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಗೆ ವಿರುದ್ಧವಾಗಿ 5, 8, 9ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು ಫಲಿತಾಂಶವನ್ನು ತಡೆ ಹಿಡಿದು ಮಕ್ಕಳ ಹಾಗೂ ಪೋಷಕರನ್ನು ಅತಂತ್ರಕ್ಕೀಡು ಮಾಡಿರುವುದು ಸರಿಯೇ. ಈ ಬಗ್ಗೆ ಪರಾಮರ್ಶಿಸಿ ಎಂದು ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.

ರಜೆ ಸಹಿತ ಶಿಕ್ಷಕರನ್ನು ಬೇಸಿಗೆ ರಜೆ ಅವಧಿಯಲ್ಲಿ ಲೋಕಸಭಾ ಚುನಾವಣಾ ಕಾರ್ಯ, ನಂತರ 5,8,9 ನೇ ತರಗತಿಗಳ ಮೌಲ್ಯಮಾಪನ, ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿಗಳ ಮೌಲ್ಯ ಮಾಪನ ಇತ್ಯಾದಿ ನಿರಂತರ ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳಿಗೆ ಮಕ್ಕಳನ್ನು ತಯಾರಿ ಮಾಡಲು ಶಾಲೆ, ಕಾಲೇಜುಗಳಿಗೆ ಹಾಜರಾಗಲು ಆದೇಶ ನೀಡಿ, ತದನಂತರ ಆದೇಶವನ್ನು ಮುಂದೂಡಲಾಗಿದೆ. ವಿಶ್ರಾಂತಿಯಿಲ್ಲದೇ ನಿರಂತರವಾಗಿ ಶಿಕ್ಷಕರು ವರ್ಷದ 12 ತಿಂಗಳು ದುಡಿದರೆ ಅವರ ಕಾರ್ಯ ಕ್ಷಮತೆ ಕುಗ್ಗುವುದಿಲ್ಲವೇ, ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವೆ. ಹಾಗಾದರೆ ಶಿಕ್ಷಕರ ಹುದ್ದೆಗಳನ್ನು ರಜಾ ರಹಿತ ಹುದ್ದೆಗಳನ್ನಾಗಿ ಏಕೆ ಪರಿವರ್ತಿಸಬಾರದು ಎಂದು ಪತ್ರದಲ್ಲಿ ಹೇಳಿದ್ದಾರೆ.

ಎಸ್ಸೆಸ್ಸೆಲ್ಸಿಯಲ್ಲಿ ಮೂರು ಪರೀಕ್ಷೆಗಳನ್ನು ಮಾಡುವುದು ವೈಜ್ಞಾನಿಕವೇ, ಮಕ್ಕಳಿಗೆ ನಿರಂತರ ಬೋಧನೆ, ಕಲಿಕೆ ಮುಖಾಂತರ ಗುಣಮಟ್ಟದ ಶಿಕ್ಷಣ ನೀಡದ ಹೊರತು ಎಷ್ಟು ಪರೀಕ್ಷೆಗಳನ್ನು ಮಾಡಿದರೂ ಅದು ಕೇವಲ ವ್ಯರ್ಥ ಪ್ರಯತ್ನವಾಗುತ್ತದೆ. ಈ ಪದ್ದತಿಯನ್ನು ತೆಗೆದು ಹಾಕಿ, ಹಿಂದಿನಂತೆ ಎರಡು ಪರೀಕ್ಷೆಗಳನ್ನು ಮಾತ್ರ ನಡೆಸುವ ಕುರಿತು ಪರಾಮರ್ಶಿಸುವಂತೆ ಮನವಿ ಮಾಡಿದ್ದಾರೆ.

ಸಾಮಾಜಿಕ ನ್ಯಾಯ, ಸಮಾಜವಾದಿ ಸಿದ್ದಾಂತ, ಸರ್ವರಿಗೂ ಸಮಪಾಲು-ಸಮಬಾಳು ಎಂಬ ವಿಷಯಗಳ ಬಗ್ಗೆ ಮಾತನಾಡುವ ತಾವುಗಳು ದುಸ್ಥಿತಿಯಲ್ಲಿರುವ ರಾಜ್ಯದ ಸುಮಾರು 50 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಹೊಸದಾಗಿ ಪುನರ್ ನಿರ್ಮಾಣ ಮಾಡಿ ಎಲ್ಲ ಮೂಲಭೂತ ಸೌಲಭ್ಯ ನೀಡಬೇಕು. ಶಿಕ್ಷಕರನ್ನು ನೇಮಿಸಿ ಸುಮಾರು 46 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಗ್ಯಾರಂಟಿ ನೀಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಕೆಇಎ ಅಧಿಕಾರಿ ವಿರುದ್ಧ ಕ್ರಮವಾಗಲಿ: ಕೆಇಎ ಪರೀಕ್ಷಾ ಮಂಡಳಿಯ ನಿರ್ದೇಶಕಿ ರಮ್ಯ ಅವರು ಸಿಇಟಿ ಪರೀಕ್ಷೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಅಂಕಗಳ ಪ್ರಶ್ನೆಗಳು ಪಠ್ಯಕ್ರಮದಿಂದ ಹೊರಗಿನ ಪ್ರಶ್ನೆಗಳಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನು ಗಮನಿಸಿದರೆ ಕೆಇಎಗೆ ಇಂಜಿನಿಯರಿಂಗ್, ಮೆಡಿಕಲ್, ಪ್ಯಾರಾಮೆಡಿಕಲ್ ಮತ್ತು ಇತರ ವಿಭಾಗಗಳ ಶಿಕ್ಷಣಕ್ಕೆ ಮಾನದಂಡವಾಗಿರುವ ಪರೀಕ್ಷೆಯನ್ನು ಇಲಾಖೆ ಎಷ್ಟು ಬೇಜವಾಬ್ದಾರಿಯಿಂದ ನಡೆಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಕೆಇಎ ಪರೀಕ್ಷಾ ಮಂಡಳಿ ಎಷ್ಟು ಲಕ್ಷ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡಿದೆ. ಇದರ ಹೊಣೆ ಹೊತ್ತ ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗ ಮಾಡಿದರಷ್ಟೇ ಸಾಲದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪತ್ರ ಮೂಲಕ ಒತ್ತಾಯಿಸಿದ್ದಾರೆ.