ಸಾರಾಂಶ
ಬೇಡಿಕೆಗಳನ್ನು ಈಡೇರಿಸದಿದ್ದರೆ ಹಾಲು ಬಂದ್ ಚಳವಳಿಗೆ ನಿರ್ಧಾರಕನ್ನಡಪ್ರಭ ವಾರ್ತೆ ಚಾಮರಾಜನಗರ
ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ಎನ್‌ಡಿಡಿಇಯಿಂದ ಅಳವಡಿಸಿರುವ ಏಕರೂಪ ತಂತ್ರಾಂಶ ಗೊಂದಲದಿಂದ ಕೂಡಿದ್ದು ಇದನ್ನು ಸರಿಪಡಿಸಿ, ನಮ್ಮ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಈಡೇರಿಸದಿದ್ದರೆ ಹಾಲು ಬಂದ್ ಚಳವಳಿ ನಡೆಸುವುದಾಗಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ಪಿ. ಶಾಂತು ಆಗ್ರಹಿಸಿದರು.ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏಕರೂಪ ತಂತ್ರಾಂಶವನ್ನು ಒಕ್ಕೂಟಗಳು ಮತ್ತು ಕೆಎಂಎಫ್ ತಮ್ಮ ಇಲಾಖೆಯಿಂದ ಅಭಿವೃದ್ಧಿಪಡಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅಳವಡಿಸಲು ಕ್ರಮ ಕೈಗೊಳ್ಳಬೇಕಾಗಿತ್ತು. ಏಕರೂಪ ತಂತ್ರಾಂಶ ಅಳವಡಿಸಿದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಲಸ ಮಾಡುವ ನೌಕರರಿಗೂ ಮತ್ತು ಉತ್ಪಾದಕರಿಗೂ ಹಾಲು ಶೇಖರಣೆ ಸಮಯದಲ್ಲಿ ಗಲಾಟೆಗಳು ನಡೆಯುವಂತಾಗಿದೆ ಎಂದರು.ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನೌಕರರಿಗೆ ಒಕ್ಕೂಟಗಳಿಂದ ಸರಿಯಾದ ಮಾಹಿತಿ ಇರುವುದಿಲ್ಲ. ಚಾಮುಲ್ ಒಕ್ಕೂಟವು ಕಳುಹಿಸಿರುವ ಹಾಲಿನ ದರ ವ್ಯತ್ಯಾಸದ ಬಗ್ಗೆ ಉತ್ಪಾದಕರು ಗಲಾಟೆ ನಡೆಸುತ್ತಿದ್ದು ಕೆಲವು ಗ್ರಾಮಗಳಲ್ಲಿ ಖಾಸಗಿ ಡೈರಿಗಳಿಗೆ ಉತ್ಪಾದಕರು ಹಾಲನ್ನು ಸರಬರಾಜು ಮಾಡುತ್ತಿದ್ದಾರೆ. ಸ್ಥಳೀಯವಾಗಿ ಹಾಲು ಶೇಖರಣೆ ಮಾಡಲು ನೌಕರರಿಗೆ ತುಂಬಾ ತೊಂದರೆ ಆಗಿದೆ ಎಂದರು.
ಉಪಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಒಕ್ಕೂಟಗಳು ಅಧ್ಯಕ್ಷರು ಮತ್ತು ನೌಕರರ ಸಭೆ ಕರೆದು ಇದರ ಬಗ್ಗೆ ಚರ್ಚಿಸಬೇಕಾಗಿತ್ತು, ಹಾಲು ಹಾಕುವ ಸದಸ್ಯರಿಗೆ ಉತ್ತರ ನೀಡಲು ಕಷ್ಟವಾಗಿದೆ. ಒಕ್ಕೂಟದ ಆದೇಶದ ಪ್ರಕಾರ ಉತ್ಪಾದಕರಿಗೆ ಸರ್ಕಾರದಿಂದ ೫ ರು. ಪ್ರೋತ್ಸಾಹ ಧನ ಕೂಡಲು ಈ ತಂತ್ರಾಂಶ ಅಳವಡಿಸುವಂತೆ ಆದೇಶ ಮಾಡಿರುತ್ತದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರನ್ನು ಸರ್ಕಾರದ ಎಲ್ಲ ಕೆಲಸಗಳನ್ನು ಮಾಡುವುದರಿಂದ ಅವರನ್ನು ಸರ್ಕಾರಿ ನೌಕರರೆಂದು ಅಥವಾ ಒಕ್ಕೂಟದ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ಕರ್ನಾಟಕ ಸರ್ಕಾರವು ನೌಕರರಿಗೆ ಹತ್ತು ಪೈಸೆ ಪ್ರೋತ್ಸಾಹ ನಿಲ್ಲಿಸಿದ್ದು, ಮತ್ತೆ ಅದನ್ನು ಚಾಲ್ತಿ ಮಾಡಬೇಕು, ಹಾಲು ಶೇಖರಣಾ ಸಮಯದಲ್ಲಿ ಪ್ರತಿ ಸರದಿಯಲ್ಲಿ ಸಂಘದಿಂದ ನಾವು ಉತ್ಪಾದಕರಿಗೆ ೮.೫ ಎಸ್ಎನ್ಎಫ್ ಚೀಟಿ ಕೊಡುವುದರಿಂದ ಪ್ರತಿ ಮಾಹೆಯಲ್ಲಿ ನಮ್ಮ ಸಂಘದಿಂದ ಹಾಲಿನ ಗುಣಮಟ್ಟ ಒಟ್ಟಾಗಿ ಶೇಕಡವಾರು ಕಡಿಮೆ ಬಂದಾಗ ಉತ್ಪಾದಕರಿಗೂ ಮತ್ತು ನೌಕರರಿಗೂ ಗಲಾಟೆ ಆಗುವ ಸಂಭವವಿರುತ್ತದೆ. ಆದುದರಿಂದ ನೀವು ಸಿದ್ಧಪಡಿಸಿರುವ ಏಕರೂಪ ತಂತ್ರಾಂಶದಿಂದ ತೊಂದರೆಯಾಗುತ್ತದೆ. ಇದನ್ನು ಸರಿಪಡಿಸಿ ಒಕ್ಕೂಟದಿಂದಲೇ ಆಳವಡಿಸಿ, ತರಬೇತಿ ನೀಡಿಬೇಕಾಗಿ ಎಂದು ಒತ್ತಾಯಿಸಿದರು,
ಕರ್ನಾಟಕದಲ್ಲಿರುವ ಎಲ್ಲಾ ಒಕ್ಕೂಟಗಳು ಏಕರೂಪ ತಂತ್ರಾಂಶವನ್ನು ಅಳವಡಿಸಿದ ಹಾಗೆ ಪ್ರತಿಯೊಂದು ಒಕ್ಕೂಟಗಳು ಏಕರೂಪ ಹಾಲಿನ ದರ ಉತ್ಪಾದಕರಿಗೆ ನಿಗದಿ ಮಾಡಬೇಕು. ಹಾಲು ಹಾಕುವ ಉತ್ಪಾದಕರಿಗೆ ಈಗ ಕೊಡುತ್ತಿರುವ ಹಾಲಿನ ದರ ಕಡಿಮೆ ಆಗಿದೆ. ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ೪೦ರು., ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹ ಧನ ೧೦ ರು., ಒಕ್ಕೂಟಗಳು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರಿಗೆ ಹೆಚ್ಚಿನ ಕೆಲಸದ ಹೊರೆ ಕೊಡುತ್ತಿರುವುದರಿಂದ ಪ್ರತಿ ಕೆಲಸಕ್ಕೂ ಒಕ್ಕೂಟದಿಂದ ಪ್ರೋತ್ಸಾಹ ಧನ ಕೊಡಬೇಕು. ಪ್ರತಿ ವರ್ಷ ಒಕ್ಕೂಟದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಮುಂಚಿತವಾಗಿ ಚಾಮುಲ್‌ನ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗ ಸೇರಿ ಪ್ರತಿ ತಾಲೂಕಿನಲ್ಲಿ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರ ಸಭೆ ಕರೆದು ಕುಂದುಕೊರತೆಗಳನ್ನು ಚರ್ಚಿಸಬೇಕು ಎಂದರು.ಈ ನಮ್ಮ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಈಡೇರಿಸದಿದ್ದರೆ ಹಾಲು ಬಂದ್ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಮಹದೇವಶೆಟ್ಟಿ, ಶಿವಣ್ಣ, ನಟರಾಜು, ಎಂ. ಬಸವಣ್ಣ, ಎಂ.ಶೇಷಕುಮಾರ್ ಇದ್ದರು.