ನೆರೆಸಂತ್ರಸ್ತರಲ್ಲಿ ಮತ್ತೆ ನಿರಾಸೆ, ಮರೀಚಿಕೆಯಾದ ಶಾಶ್ವತ ಪರಿಹಾರ

| Published : Mar 07 2025, 11:46 PM IST

ನೆರೆಸಂತ್ರಸ್ತರಲ್ಲಿ ಮತ್ತೆ ನಿರಾಸೆ, ಮರೀಚಿಕೆಯಾದ ಶಾಶ್ವತ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಬಜೆಟ್ ನಲ್ಲಿ ನವಗ್ರಾಮಗಳಿಗೆ ಮೂಲಸೌಕರ್ಯ ಸಿಗಬಹುದು ಎಂದು ನೆರೆಸಂತ್ರಸ್ತರು ಎಂದಿನಂತೆ ಈ ಬಜೆಟ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅದು ನಿರೀಕ್ಷೆಯಾಗಿಯೇ ಉಳಿದಿದೆ.

ಹುಬ್ಬಳ್ಳಿ: 2009ರಿಂದ ಶಾಶ್ವತ ಪರಿಹಾರಕ್ಕಾಗಿ ಎದುರು ನೋಡುತ್ತಿರುವ ಕರ್ನಾಟಕದ ಉತ್ತರ ಭಾಗದ ನೆರೆಸಂತ್ರಸ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್‌ ಮತ್ತೊಮ್ಮೆ ನಿರಾಸೆ ಮೂಡಿಸಿದೆ.

ಉತ್ತರ ಭಾಗದ 17 ಜಿಲ್ಲೆಗಳ 917 ಗ್ರಾಮಗಳು ಕಳೆದ ಒಂದೂವರೆ ದಶಕದಲ್ಲಿ ಐದು ಬಾರಿ ಮಹಾ ಪ್ರವಾಹಕ್ಕೆ ತುತ್ತಾಗಿವೆ. ಈ ದುರಂತದಲ್ಲಿ 4 ಲಕ್ಷ ಜನ ನೆರೆ ಸಂತ್ರಸ್ತರಾಗಿದ್ದರು. 316 ಜನ, ಸಾವಿರ ಸಂಖ್ಯೆಯಲ್ಲಿ ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಅಂದಾಜು 2 ಲಕ್ಷ ಕೋಟಿ ನಷ್ಟವಾಗಿದೆ.

ಈ ಪ್ರವಾಹಕ್ಕೆ ಪ್ರಮುಖ ಕಾರಣ ಭೀಮಾ, ದೋಣಿ, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ವರದಾ, ತುಂಗಭದ್ರಾ ನದಿಗಳು ಮತ್ತು, ಬೆಣ್ಣಿಹಳ್ಳ, ತುಪ್ಪರಿ ಹಳ್ಳಗಳ ಅತಿಯಾದ ಒತ್ತುವರಿ (ಅತಿಕ್ರಮಣ) ಹಾಗೂ ಅವುಗಳ ಒಡಲಲ್ಲಿನ ಅತಿಯಾದ ಗಿಡಗಂಟಿ, ಹೂಳು ಎಂದು ತಜ್ಞರು ವರದಿ ನೀಡಿದ್ದಾರೆ.

ಪ್ರವಾಹ ಬಂದಾಗ ಪರಿಹಾರ ಕ್ರಮಗಳನ್ನು ಕೈಕೊಳ್ಳುವ ಬದಲು ವೈಜ್ಞಾನಿಕವಾಗಿ ನದಿ-ಹಳ್ಳಗಳ ಸರ್ವೆ ಮಾಡಿ, ಅವುಗಳ ಒತ್ತುವರಿ ಮತ್ತು ಹೂಳು ತೆಗೆಯುವ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮಾಡಿದರೆ ಪ್ರವಾಹ ಸಮಸ್ಯೆ ಶೇ.90 ರಷ್ಟು ಪರಿಹಾರವಾಗುತ್ತದೆ. ಇಂಥದೊಂದು ಪ್ರಯತ್ನಕ್ಕೆ ಮುಂದಾಗುವ ಜತೆಗೆ ಹಾಳುಕೊಂಪೆ ಆಗಿರುವ ನವಗ್ರಾಮಗಳಿಗೆ ಮೂಲಸೌಕರ್ಯ ಸಿಗಬಹುದು ಎಂದು ನೆರೆಸಂತ್ರಸ್ತರು ಎಂದಿನಂತೆ ಈ ಬಜೆಟ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅದು ನಿರೀಕ್ಷೆಯಾಗಿಯೇ ಉಳಿದಿದೆ.

ನೆರೆ ಪೀಡಿತ ಪ್ರದೇಶ

ಮೇಲಿಂದ ಮೇಲೆ `ಬರ ಪೀಡತ ಪ್ರದೇಶ'''' ಎಂದು ಘೋಷನೆಯಾಗುತ್ತಿದ್ದ `ಕರ್ನಾಟಕದ ಉತ್ತರ ಭಾಗ'''' ಇತ್ತೀಚಿನ ವರ್ಷಗಳಲ್ಲಿ `ನೆರೆ ಪೀಡಿತ ಪ್ರದೇಶ''''ವಾಗಿ ಮಾರ್ಪಟ್ಟಿದೆ. ಬರಗಾಲಕ್ಕೆ ಮದ್ದು ಹುಡುಕುವಲ್ಲಿ ಸರ್ಕಾರಗಳು ನಿರ್ಲಕ್ಷ್ಯ ತೋರಿದ್ದರ ಪರಿಣಾಮವಾಗಿ ಇಲ್ಲಿನ ಜನ ಉದ್ಯೋಗ ಅರಸಿ `ಗುಳೆ'''' ಹೋಗುವುದನ್ನು ರೂಢಿಸಿಕೊಂಡಿದ್ದಾರೆ. ಈಗ ಪ್ರವಾಹವೂ ಅವರ ಬದುಕನ್ನು ಕೊಚ್ಚಿ ಒಯ್ದು ಬೀದಿಗೆ ಚೆಲ್ಲಿದ್ದರಿಂದ ಅವರು ಮತ್ತಷ್ಟು ಕಂಗಾಲಾಗಿದ್ದಾರೆ.

ಸರ್ಕಾರದ ಸಿದ್ಧ ಸೂತ್ರ ನೆರೆ ಸಂತ್ರಸ್ತರಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ಅನ್ವಯವಾಗುತ್ತಿಲ್ಲ ಎನ್ನುವುದು ೨೦೦೯ರ ಸಂತ್ರಸ್ತರಿಗಾಗಿ ಕಲ್ಪಿಸಿರುವ `ಪರಿಹಾರ'''' ಮತ್ತು `ಆಸರೆ'''' ಯೋಜನೆ ಸಾಕ್ಷಿಯಾಗಿದೆ. ನವಗ್ರಾಮಗಳು, ಅವೈಜ್ಞಾನಿಕ ಸೂರುಗಳು ಈಗಲೂ ಖಾಲಿ ಖಾಲಿ ಉಳಿದಿರುವುದು ಮತ್ತು ಹಾಳು ಕೊಂಪೆಯಾಗಿರುವುದು ಕಣ್ಣೆದುರಿಗೆ ಇರುವ ಸತ್ಯ. ಈ ತಪ್ಪು ಹೆಜ್ಜೆ ಈಗ ಪಾಠವಾಗದೇ ಹೋದರೆ ಸಂತ್ರಸ್ತರ ಬದುಕು ಊಹೆಗೆ ನಿಲುಕದಷ್ಟು ನಿಕೃಷ್ಟವಾಗಲಿದೆ ಎನ್ನುವುದನ್ನು ಯಾರೂ ಮರೆಯುವಂತಿಲ್ಲ.

ಬಾಗಲಕೋಟೆ- ೫೯, ರಾಯಚೂರು- ೫೨, ಬೆಳಗಾವಿ- ೨೩, ವಿಜಯಪುರ- ೧೮, ಬಳ್ಳಾರಿ -೧೮, ಕೊಪ್ಪಳ -೧೭, ಗುಲ್ಬರ್ಗ- ೧೫, ಗದಗ- ೧೪, ಧಾರವಾಡ- ೦೬, ಯಾದಗಿರಿ- ೦೪, ಹಾವೇರಿ- ೦೩, ಒಟ್ಟು-೨೨೯ ನಿರ್ಮಿಸಿದ ನವಗ್ರಾಮಗಳನ್ನು ನಿರ್ಮಿಸಲಾಗಿದೆ.

ಅಚ್ಚರಿಯೆಂದರೆ, ಶೇ.೯೫ರಷ್ಟು ಮನೆಗಳು ಈಗಲೂ ಖಾಲಿ ಉಳಿದಿವೆ. ಏನೊಂದೂ ಸೌಲಭ್ಯವಿಲ್ಲದ ನವಗ್ರಾಮಗಳು ಹಾಳು ಕೊಂಪೆಗಳಾಗಿವೆ. ಉಳಿದ ಶೇ.೫ರಷ್ಟು ಮನೆಗಳು ಕೂಡ ಮೇವು, ಹೊಟ್ಟು, ಕಟ್ಟಿಗೆ ಒಟ್ಟಲು, ಕುರಿ, ಆಡು ಕಟ್ಟಲು ಬಳಕೆಯಾಗಿವೆ. ಎಲ್ಲೂ ನೆಲೆಯೇ ಇಲ್ಲ ಎನ್ನುವ ಬೆರಳೆಣಿಕೆಯ ಸಂತ್ರಸ್ತರು ಮಾತ್ರ ಈ ಮನೆಗಳಲ್ಲಿ ಉಳಿದು ಕಾಡು ಜೀವನ ಸಾಗಿಸುತ್ತಿದ್ದಾರೆ.

ಈ ಸೂರು ಒಗ್ಗದವರು ಅದೇ ನೆರೆ ಪೀಡಿದ ಊರಲ್ಲಿ ಉಳಿದಿದ್ದರು. ಮೊನ್ನೆಯ ಪ್ರವಾಹಕ್ಕೆ ಮತ್ತೊಮ್ಮೆ ಸಂತ್ರಸ್ತರಾಗಿದ್ದಾರೆ. ಸರ್ಕಾರ ಹಿಂದೆ ಪರಿಹಾರ ನೀಡಿದ ಮನೆಗಳಿಗೆ ಮತ್ತೆ ಪರಿಹಾರ ನೀಡುತ್ತಿದೆ. ಆ ಸಂತ್ರಸ್ತರಿಗೂ ಸೇರಿದಂತೆ ಎಲ್ಲ ನೆರೆ ಸಂತ್ರಸ್ತರಿಗೆ ಸೂರು, ಪುನರ್ವಸತಿ ಕಲ್ಪಿಸುವುದಾಗಿ ಹೇಳಿದೆ. ಪ್ರಸಕ್ತ ಬಜೆಟ್‌ನಲ್ಲಿ ಈ ಕುರಿತಂತೆ ಮುಖ್ಯಮಂತ್ರಿಗಳು ಚಕಾರ ಎತ್ತದಿರುವುದು ನೆರೆ ಸಂತ್ರಸ್ತರಿಗೆ ಈ ಸಮಸ್ಯೆಯೇ ಶಾಶ್ವತ ಎನ್ನುವುದನ್ನು ದೃಢಪಡಿಸಿದೆ.