ಮೇಲ್ಸೇತುವೆ ಕಾಮಗಾರಿ ನಿಧಾನ; ಜನ ಸಂಚಾರಕ್ಕೆ ನಿತ್ಯ ಪರದಾಟ

| Published : May 13 2025, 11:50 PM IST

ಸಾರಾಂಶ

ನಗರದ ಸುಧಾ ಕ್ರಾಸ್‌ನಲ್ಲಿ ಕೈಗೆತ್ತಿಕೊಂಡಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು ನಿತ್ಯ ಈ ಭಾಗದಲ್ಲಿ ಓಡಾಡುವ ವಾಹನ ಸವಾರರು ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದ ಸುಧಾ ಕ್ರಾಸ್‌ನಲ್ಲಿ ಕೈಗೆತ್ತಿಕೊಂಡಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು ನಿತ್ಯ ಈ ಭಾಗದಲ್ಲಿ ಓಡಾಡುವ ವಾಹನ ಸವಾರರು ಪರದಾಡುವಂತಾಗಿದೆ.

ಟ್ರಾಫಿಕ್ ಸಮಸ್ಯೆ ಕೊನೆಗಾಣಿಸಲು ₹103 ಕೋಟಿ ವೆಚ್ಚದಲ್ಲಿ (ರಸ್ತೆ ಅಗಲೀಕರಣದಲ್ಲಿ ಜಾಗ ಕಳೆದುಕೊಂಡಿರುವವರಿಗೆ ಪರಿಹಾರದ ಮೊತ್ತ ₹55 ಕೋಟಿ) ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ಸಂಗತಿಯಾದರೂ ಕೆಲಸ ಆಮೆಗತಿಯಲ್ಲಿ ಸಾಗುತ್ತಿರುವುದು ಸಾರ್ವಜನಿಕರಿಗೆ ನಿರಾಸೆ ಉಂಟುಮಾಡುವ ಜತೆಗೆ ಸಮಸ್ಯೆ ತಂದಿಟ್ಟಿದೆ.

ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಸುಧಾ ಕ್ರಾಸ್ ಮೂಲಕ ವಿವಿಧೆಡೆ ತೆರಳುವವರು ಬೇರೆ ಬೇರೆ ಒಳ ಮಾರ್ಗಗಳಲ್ಲಿ ಓಡಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸುಧಾ ಕ್ರಾಸ್‌ನ ರೈಲ್ವೆಗೇಟ್‌ನಿಂದಾಗಿ ವಾಹನ ಸವಾರರು ನಿಗದಿತ ಸಮಯಕ್ಕೆ ಗಮ್ಯ ಸ್ಥಳ ತಲುಪಲು ಪರದಾಡುವಂತಾಗಿತ್ತು. ಪ್ರಯಾಣಿಕರು ಹಾಗೂ ಗೂಡ್ಸ್ ರೈಲುಗಳು ಸಂಚರಿಸುವಾಗಲೆಲ್ಲ ರೈಲ್ವೆ ಗೇಟ್ ಹಾಕುವುದರಿಂದ ವಾಹನ ಸವಾರರು ಪರಿತಪಿಸುವಂತಾಗಿತ್ತು. ತುರ್ತಾಗಿ ತೆರಳಬೇಕಾದವರು ಬಳ್ಳಾರಿ ಜನರ ಮೂಲ ಸೌಕರ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳದ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದರು. ಸುಧಾ ಕ್ರಾಸ್‌ನಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕು ಎಂಬ ಒತ್ತಾಯಗಳು ಅನೇಕ ವರ್ಷಗಳಿಂದ ಕೇಳಿ ಬಂದಿದ್ದವು. ಆದರೆ, ನಾನಾ ತಾಂತ್ರಿಕ ಕಾರಣಗಳನ್ನೊಡ್ಡಿ ಮುಂದೂಡುತ್ತಲೇ ಬರಲಾಗಿತ್ತು.

ನಗರದ ಜನರ ಒತ್ತಾಸೆಯಂತೆ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕಳೆದ ಆಗಸ್ಟ್‌ನಲ್ಲಿ ಶುರುವಾಗಿದೆಯಾದರೂ ನಿಧಾನಗತಿಯ ಕೆಲಸ ನೋಡಿದರೆ ಇನ್ನೂ ಒಂದೂವರೆ ವರ್ಷಗಳ ಕಾಲ ಕಾಮಗಾರಿ ಮುಂದುವರಿಯುವ ಸಾಧ್ಯತೆ ಕಂಡು ಬರುತ್ತಿದೆ. ಕಾಮಗಾರಿ ಅವಧಿ 18 ತಿಂಗಳು ಸಮಯವಿದೆಯಾದರೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೇ ಹೋದರೆ ಜನರ ಪರದಾಟ ಮುಂದುವರಿಯುವುದು ನಿಶ್ಚಿತ. ಇದಕ್ಕೆ ಆಸ್ಪದ ನೀಡದೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿಗದಿಯ ದಿನಗಳಂತೆಯೇ ಕೆಲಸ ಮುಗಿಸಿ, ಓಡಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಮುಗಿಯುವುದು ಎಂದು?

ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಆಂಧ್ರಪ್ರದೇಶ ಮೂಲದ ಕಂಪನಿ ಕೈಗೆತ್ತಿಕೊಂಡಿದೆ. 12 ಮೀಟರ್ ಅಗಲ ಹಾಗೂ 900 ಮೀಟರ್ ಉದ್ದದ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಮೇಲ್ಸೇತುವೆಗೆ 18 ಪಿಲ್ಲರ್‌ಗಳನ್ನು ನಿರ್ಮಿಸಲಾಗುತ್ತಿದೆ. ಎರಡು ಬದಿಯಲ್ಲಿ ತಲಾ 5 ಮೀಟರ್ ಸರ್ವೀಸ್ ರಸ್ತೆಗಾಗಿ ಮೀಸಲಿಡಲಾಗಿದೆ. ಎರಡು ಕಡೆಗಳಲ್ಲಿ ಪಿಲ್ಲರ್ ಕಾಮಗಾರಿ ನಡೆದಿದ್ದು, ಕೆಲಸ ನಿಧಾನಗತಿಯಲ್ಲಿ ಸಾಗಿರುವುದರಿಂದ ಕಾಮಗಾರಿ ಮುಗಿಯುವುದೆಂದು? ಎಂಬ ಪ್ರಶ್ನೆ ಸಾರ್ವಜನಿಕರದ್ದು. 2026ರ ಜೂನ್‌ ವೇಳೆಗೆ ಕೆಲಸ ಪೂರ್ಣಗೊಂಡು ಜನ ಬಳಕೆಗೆ ದೊರೆಯಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.