ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗ್ರಾಮೀಣ ಭಾಗದಲ್ಲಿ ಜನರಿಗೆ ಹತ್ತಿರವಾಗಿ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತೆಯರು ಮನಸು ಮಾಡಿದರೆ ಸಕ್ಕರೆ ಕಾಯಿಲೆ ಬಗ್ಗೆ ಜನರಲ್ಲಿ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಮೂಡಿಸಲು ಸಾಧ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಮೆಟ್ರೋ ಆಸ್ಪತ್ರೆ ಮತ್ತು ವಿನ್ ಲೈಫ್ ಟ್ರಸ್ಟ್ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಮಧು ಮೇಹ ಮತ್ತು ತುರ್ತು ಜೀವ ರಕ್ಷಕ( ಸಿಪಿಆರ್ ) ಕುರಿತು ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಈಗ ಬದಲಾದ ನಮ್ಮ ಜೀವನಶೈಲಿಯ ಕಾರಣಕ್ಕೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು ಮಾಮೂಲು ಆಗಿದೆ. ಹಾಗಂತ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಇದು ತುಂಬಾ ಅಪಾಯಕಾರಿ ಕಾಯಿಲೆ. ಅದಾಗ್ಯೂ ಇದನ್ನು ಸರಿಯಾಗಿ ನಿರ್ವಹಣೆ ಮಾಡಿಕೊಂಡರೆ ಯಾವುದೇ ಆತಂಕವಿಲ್ಲದೆ ಬದುಕುಬಹುದು ಎಂದರು.ಮಧುಮೇಹ ಅಥವಾ ಸಕ್ಕರೆ ಕಾಯಿಲೆಯೆಂದರೆ ತುಂಬಾ ಅಪಾಯಕಾರಿ ಕಾಯಿಲೆ ಎನ್ನುವ ನಂಬಿಕೆಯಿದೆ. ಆದರೂ ಸಕ್ಕರೆ ಕಾಯಿಲೆ ಇದ್ದವರು ಅದರ ನಿರ್ವಹಣೆಯ ಕಡೆ ಹೆಚ್ಚು ಗಮನ ಹರಿಸಿದರೆ ಹೆಚ್ಚು ವರ್ಷ ಯಾವದೇ ಆತಂಕವಿಲ್ಲದೆ ಬದುಕಬಹುದು. ಅದಕ್ಕೆ ಜಾಗೃತಿ ಬೇಕಿದೆ. ಆ ನಿಟ್ಟಿನಲ್ಲಿ ಮೆಟ್ರೋ ಆಸ್ಪತ್ರೆ ಹಾಗೂ ವಿನ್ ಲೈಫ್ ಮಧುಮೇಹ ಮತ್ತು ಸಿಪಿಆರ್ ಕುರಿತು ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಸ್. ನಟರಾಜ್ ಮಾತನಾಡಿ, ಆರೋಗ್ಯ ಸುಧಾರಣೆಯಲ್ಲಿ ಆಶಾ ಕಾರ್ಯಕರ್ತೆಯರು ಕೊಡುಗೆ ಅಪಾರ. ಅವರಿಗೆ ಇಂತಹ ತರಬೇತಿ ಅಗತ್ಯವಾಗಿ ಬೇಕಾಗಿತ್ತು. ಆ ನಿಟ್ಟಿನಲ್ಲಿ ಮೆಟ್ರೋ ಆಸ್ಪತ್ರೆ ಹಾಗೂ ವಿನ್ ಲೈಫ್ ಮಧುಮೇಹ ಮತ್ತು ಸಿಪಿಆರ್ ಕುರಿತು ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರ ಶ್ಲಾಘನೀಯವಾದದ್ದು ಎಂದರು.ಭಾರತದಂತಹ ದೇಶದ ಯುವಜನರಲ್ಲಿ ಇದು ಈಗ ಹೆಚ್ಚಾಗುತ್ತಿದೆ. ಪರೀಕ್ಷೆ ನಡೆಸಿದರೆ ಶೇ. 18 ರಿಂದ 20 ರಷ್ಟು ಜನರಿಗೆ ಮಧುಮೇಹ ಇರುತ್ತದೆ. ಇದಕ್ಕೆ ಪ್ರಮುಖ ಕಾರಣ ಬದಲಾದ ಜೀವನ ಶೈಲಿ. ನಾವು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದೇ ಇದಕ್ಕೆ ಪರಿಹಾರ ಎಂದು ತಿಳಿಸಿದರು.
ವೇದಿಕೆಯಲ್ಲಿ ಮೆಟ್ರೋ ಆಸ್ಪತ್ರೆ ಡಾ.ಪಿ. ಲಕ್ಷ್ಮೀ ನಾರಾಯಣ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಮೆಟ್ರೋ ಆಸ್ಪತ್ರೆಯ ಎಂ.ಡಿ. ಡಾ. ಪೃಥ್ವಿ ಬಿ.ಸಿ. ಗಣ್ಯರನ್ನು ಸ್ವಾಗತಿಸಿದರು. ಆರ್‌ಸಿಎಚ್ ಡಾ. ಒ.ಮಲ್ಲಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜ್ ನಾಯ್ಕ್ ಇದ್ದರು.