ಜನಪದ ಕಲೆಗಳು ಜೀವನ ಮೌಲ್ಯಗಳ ಕಣಜ: ಮನೋಹರ

| Published : Jan 10 2024, 01:46 AM IST / Updated: Jan 10 2024, 02:38 PM IST

ಸಾರಾಂಶ

ಜನಪದ ಕಲೆಗಳಿಗೆ ಕುಲದ ಹಂಗಿಲ್ಲ, ಉಚ್ಚ ನೀಚ ಭಾವನೆಯ ಸೋಂಕಿಲ್ಲ. ಅವು ಸಮಸ್ತ ಮಾನವ ಕಲ್ಯಾಣದ ಗುರಿಯೊಂದಿಗೆ ಸೌಹಾರ್ದ ಬದುಕಿನ ಪಾಠ ಕಲಿಸುವ ಸದಾಶಯ ಹೊಂದಿವೆ ಎಂದು ಹಿರಿಯ ನ್ಯಾಯವಾದಿ ನೋಟರಿ, ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಹೇಳಿದರು.

ಗದಗ: ಜನಪದ ಕಲೆಗಳಿಗೆ ಕುಲದ ಹಂಗಿಲ್ಲ, ಉಚ್ಚ ನೀಚ ಭಾವನೆಯ ಸೋಂಕಿಲ್ಲ. ಅವು ಸಮಸ್ತ ಮಾನವ ಕಲ್ಯಾಣದ ಗುರಿಯೊಂದಿಗೆ ಸೌಹಾರ್ದ ಬದುಕಿನ ಪಾಠ ಕಲಿಸುವ ಸದಾಶಯ ಹೊಂದಿವೆ ಎಂದು ಹಿರಿಯ ನ್ಯಾಯವಾದಿ ನೋಟರಿ, ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಹೇಳಿದರು.

ನಗರದ ಕಬ್ಬಿಗರ ಕೂಟವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಜಾನಪದ ಸಂಭ್ರಮದಡಿ ಸಾದರಪಡಿಸಿದ ಡೊಳ್ಳಿನ ಹಾಡುಗಳು ಮತ್ತು ಹೊಸ ವರ್ಷದ ವಿಶೇಷ ಕಾರ್ಯಕ್ರಮ ಹಾಸ್ಯ ಕವಿಗೋಷ್ಠಿಯನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿ, ಪರಂಪರೆ ಉಳಿಯಬೇಕಾದರೆ ಜನವಾಣಿಯಾದ ಜಾನಪದ ಕಲಾ ಸಂಪತ್ತನ್ನು ಉಳಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಇದಕ್ಕೆ ಕನ್ನಡದ ಮನಸ್ಸುಗಳು ಒಗ್ಗೂಡಿ ದುಡಿಯಬೇಕಾಗಿದೆ. 

ವಿಶೇಷವಾಗಿ ಡೊಳ್ಳಿನ ಹಾಡುಗಳ ಪರಂಪರೆ ಕುರಿತು ಉಲ್ಲೇಖಿಸಿದ ಅವರು ಶ್ರಮ ಜೀವಿಗಳ ಕೊಡುಗೆಯಾದ ಹಾಲು ಮತ ಸಂಸ್ಕೃತಿಯ ಡೊಳ್ಳಿನ ಹಾಡುಗಳು ಮತ್ತು ಡೊಳ್ಳು ಕುಣಿತ, ಡೊಳ್ಳು ಮೇಳ ನೀತಿ, ಭಕ್ತಿ, ಪರಿಶುದ್ಧ ಜೀವನಕ್ಕೆ ದಾರಿ ತೋರುವ ಸದಾಶಯದೊಂದಿಗೆ ಸಮ್ಮಿಶ್ರ ಕಲೆಯಾಗಿ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿವೆ. 

ತಾಳ, ಲಯದೊಂದಿಗೆ ಗಂಡು ಕಲೆಯಾಗಿ ಪ್ರದರ್ಶನಗೊಳ್ಳುವ ಡೊಳ್ಳು ಕಲಾ ಪರಂಪರೆಗೆ ಇತ್ತೀಚೆಗೆ ಮಹಿಳೆಯರೂ ಕೊಡುಗೆ ನೀಡಿದ್ದಾರೆ. ಇಂಥ ಅಪರೂಪದ ಕಲೆಗಳನ್ನು ಜನತೆಗೆ ಪರಿಚಯಿಸುವ ಗುರಿಯನ್ನು ಕಬ್ಬಿಗರ ಕೂಟ ಹೊಂದಿದೆ ಎಂದರು.

ಕಬ್ಬಿಗರ ಕೂಟದ ಸಂಸ್ಥಾಪಕ, ಹಿರಿಯ ಸಾಹಿತಿ ಡಿ.ವಿ. ಬಡಿಗೇರ ಮಾತನಾಡಿ, ಕವಿಗಳು ಕಾವ್ಯ ರಚನೆಯನ್ನು ಲಘುವಾಗಿ ಭಾವಿಸಬಾರದು. ಗಂಭೀರ ಚಿಂತನೆಯೊಂದಿಗೆ ಕಾವ್ಯ ಕಟ್ಟುವ ಕಲೆಯನ್ನು ರೂಢಿಸಿಕೊಳ್ಳಬೇಕು. ಜನಮನಕ್ಕೆ ಹತ್ತಿರವಾದ ಕವಿತೆಗೆ ಹೆಚ್ಚಿನ ಆಯುಷ್ಯವಿದೆ. ಆದರೆ ವೈಚಾರಿಕತೆಯಿಂದ ಎರವಾದ ಕವಿತೆಗಳು ಜನಮನ ತಟ್ಟಲಾರವು ಎಂದರು.

ಕಥೆಗಾರ ಬಸವರಾಜ ಗಣಪ್ಪನವರ ಮಾತನಾಡಿ, ಡೊಳ್ಳು ವಾದನ ಹಾಗೂ ಡೊಳ್ಳಿನ ಹಾಡುಗಳಲ್ಲಿ ನೀತಿ ಮೌಲ್ಯಗಳು ತುಂಬಿದ್ದು ಡೊಳ್ಳಿನ ಮೇಳಗಳು ರೋಮಾಂಚಕಾರಿ ಕಸರತ್ತುಗಳಿಗೆ ಹೆಸರಾಗಿದ್ದು ಅವುಗಳನ್ನು ಕಂಡಾಗ ಮೈನವಿರೇಳುತ್ತದೆ. 

ಶುದ್ಧ ಗ್ರಾಮೀಣ ಕಲೆಯಾಗಿ ಬೆಳೆದು ಬಂದ ಈ ಕಲಾ ಪರಂಪರೆ ಹಿಂದೆ ಮಳೆ ಕರೆಯಲು, ಜಗದ ಒಳಿತಿಗೆ ಶುಭಕೋರಲು, ದೇವತೆಗಳ ಉತ್ಸವ, ಜಾತ್ರೆ, ಅಗ್ನಿ, ಪಲ್ಲಕ್ಕಿ ಮುಂತಾದ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಪ್ರದರ್ಶನ ಗೊಳ್ಳುತ್ತಿದ್ದವೆಂದರು.

ಈ ವೇಳೆ ಹಾತಲಗೇರಿಯ ಬೀರಲಿಂಗೇಶ್ವರ ಕಲಾ ಮೇಳದ ಕಲಾವಿದರಾದ ಮಲ್ಲಿಕಾರ್ಜುನ ಪೂಜಾರ, ಸಿದ್ದಪ್ಪ ಮುರ್ಲಾನವರ, ಭೀಮಪ್ಪ ಕುರುಬರ, ಮಂಜಪ್ಪ ಅಬ್ಬಿಗೇರಿ, ಲಕ್ಷ್ಮವ್ವ ನಾಡಗೇರಿ, ಹನುಮಂತ ಹಂದ್ರಾಳ ಮುಂತಾದವರು ಆಕರ್ಷಕ ಡೊಳ್ಳು ವಾದನ ಹಾಗೂ ಡೊಳ್ಳಿನ ಪದಗಳನ್ನು ಸಾದರಪಡಿಸಿ ಜನಮನಕ್ಕೆ ಹೊಸ ಅನುಭವ ನೀಡಿದರು.

ವಿಶೇಷ ಆಕರ್ಷಣೆಯಾಗಿ ಜರುಗಿದ ಹಾಸ್ಯ ಕವಿಗೋಷ್ಠಿಯಲ್ಲಿ ಮಂಜುಳಾ ವೆಂಕಟೇಶಯ್ಯ, ಅಜಿತ್ ಘೋರ್ಪಡೆ, ಜಲೇಖಾ ಬೇಗಂ ಸಂಶಿ, ಬಸವರಾಜ ವಾರಿ, ಬಸವರಾಜ ನೆಲಜೇರಿ, ಸುರೇಶ ಜೋಶಿ, ಆರ್.ಡಿ.ಕಪ್ಪಲಿ, ಮಲ್ಲಿಕಾರ್ಜುನ ಪೂಜಾರ, ಅನಸೂಯಾ ಮಿಟ್ಟಿ, ಮಲ್ಲೇಶ ಹೊನಗುಡಿ, ವಿ.ಎಂ. ಪವಾಡಿಗೌಡರ, ಮಂಜುನಾಥ ಹಿಂಡಿ ಮುಂತಾದವರು ಕವನ ವಾಚಿಸಿದರು.

ನಿವೃತ್ತ ಶಿಕ್ಷಕ ಎಸ್.ಎಸ್.ಮಲ್ಲಾಪೂರ, ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಬಿ.ಎಸ್. ಹಿಂಡಿ, ಪ್ರ.ತೋ. ನಾರಾಯಣಪೂರ, ಎಂ.ಜಿ. ಹೂಗಾರ, ಮಲ್ಲಪ್ಪ ಡೋಣಿ, ಎಸ್.ಆರ್. ಗುರುಬಸಣ್ಣವರ, ಪ್ರೇಮಾ ನಂದರಗಿ, ಜಯಶ್ರೀ ಮೇರವಾಡೆ, ಸುಭದ್ರಾ ಬಡಿಗೇರ, ಶಾಂತಾ ಗಣಪ್ಪನವರ ಮುಂತಾದವರು ಉಪಸ್ಥಿತರಿದ್ದರು. ವೆಂಕಟೇಶಯ್ಯ ಕ್ರಾಂತಿಗೀತೆ ಹಾಡಿದರು. ನಜೀರ ಸಂಶಿ ಸ್ವಾಗತಿಸಿದರು. ರತ್ನಕ್ಕ ಪಾಟೀಲ ವಂದಿಸಿದರು.