ಸಾರಾಂಶ
ಬಾಲ್ಯಾವಸ್ಥೆಯಲ್ಲಿಯೇ ಸಾಹಿತ್ಯಿಕ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ಆಸಕ್ತಿ ಮೂಡಿಸುವುದರಿಂದ ಭಾಷಾ ಸಾಹಿತ್ಯ ವಿಸ್ತರಿಸಲು ಸಾಧ್ಯವಿದ್ದು ಇದಕ್ಕಾಗಿ ಶಾಲೆಗಳಲ್ಲಿ ಒಂದಿಷ್ಟು ಸಮಯ ಮೀಸಲಿಡುವುದು ಅವಶ್ಯವಿದೆ.
ಅಳ್ನಾವರ:
ಜನಪದ ಸಾಹಿತ್ಯವು ಲಿಖಿತ ಸಾಹಿತ್ಯದ ತಾಯಿಬೇರು. ಜಾನಪದರು ತಮ್ಮ ಅನುಭವದ ಕ್ರೋಡೀಕರಣಕ್ಕೆ ಸಾಹಿತ್ಯದ ಲೇಪನ ನೀಡಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಹೇಳಿದರು.ತಾಲೂಕಿನ ಹುಲಿಕೇರಿ ಗ್ರಾಮದ ಶಾಲಾ ಆವರಣದಲ್ಲಿ ಕಸಾಪ ತಾಲೂಕು ಘಟಕದಿಂದ ಆಯೋಜಿಸಿದ್ದ ಚಂದ್ರಾ ಶ್ರೀಪತಿ ಕಾಶಿಕರ ಮತ್ತು ದಿ. ಪ್ರಕಾಶ ನಾಯಕ ದತ್ತಿ ಅಂಗವಾಗಿ ಉಪನ್ಯಾಸ, ಸಾಧಕರಿಗೆ ಸನ್ಮಾನ, ಜಾನಪದ ಉದ್ಘಾಟಿಸಿದ ಅವರು, ಮಕ್ಕಳಲ್ಲಿ ಪಾಲಕರು ಮತ್ತು ಶಿಕ್ಷಕರು ಸಾಹಿತ್ಯದ ಅಭಿರುಚಿ ಹೆಚ್ಚಿಸಬೇಕು, ಸಾಹಿತ್ಯಿಕ ಪುಸ್ತಕ, ಪತ್ರಿಕೆಗಳ ಓದು ಉತ್ತಮ ಸಂಸ್ಕಾರ ನೀಡುತ್ತದೆ ಎಂದರು.
ಬಾಲ್ಯಾವಸ್ಥೆಯಲ್ಲಿಯೇ ಸಾಹಿತ್ಯಿಕ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ಆಸಕ್ತಿ ಮೂಡಿಸುವುದರಿಂದ ಭಾಷಾ ಸಾಹಿತ್ಯ ವಿಸ್ತರಿಸಲು ಸಾಧ್ಯವಿದ್ದು ಇದಕ್ಕಾಗಿ ಶಾಲೆಗಳಲ್ಲಿ ಒಂದಿಷ್ಟು ಸಮಯ ಮೀಸಲಿಡುವುದು ಅವಶ್ಯವಿದೆ ಎಂದು ಹೇಳಿದರು.ಸಾಹಿತಿ ಈರಣ್ಣ ಅಗಳಗಟ್ಟಿ ಮಾತನಾಡಿ, ಜನಪದ ಸಾಹಿತ್ಯಕ್ಕೆ ಎರಡು ಸಾವಿರಕ್ಕಿಂತಲೂ ಪೂರ್ವದ ಇತಿಹಾಸವಿದೆ. ಜನಪದರು ಪ್ರಾಣಿ-ಪಕ್ಷಿ ಮಾತನಾಡಿಸಬಲ್ಲ ವಿಶಿಷ್ಠವಾದ ಜ್ಞಾನ ಹೊಂದಿದವರು. ಅವರಲ್ಲಿ ಅಗಾಧವಾದ ಪಾಂಡಿತ್ಯವಿದ್ದು ಜೀವನದ ಎಲ್ಲ ವಿಷಯ, ಘಟನೆಗಳನ್ನು ಹಾಡು, ಕತೆಗಳಲ್ಲಿ ದಾಖಲಿಸಿದ್ದಾರೆ. ಗ್ರಾಮೀಣ ಸಂಸ್ಕೃತಿಯಲ್ಲಿ ಜಾನಪದದ ವೈವಿಧ್ಯತೆ ಕಾಣಬಹುದು. ಜನಪದರು ಅನಕ್ಷರಾದರೂ ಸಹ ಆಶುಕವಿಗಳಂತೆ ಸಾಹಿತ್ಯ ರಚಿಸಿದ್ದಾರೆ. ದೈವಿಭಕ್ತಿಯಲ್ಲಿ ಲೀನವಾಗುತ್ತಿದ್ದ ಜನಪದರು ಸ್ತ್ರೀಯರಿಗೆ ಅಪಾರವಾದ ಗೌರವ ನೀಡುತ್ತಿರುವುದನ್ನು ನಾವು ಅವರ ಹಾಡು, ಒಡಪುಗಳಲ್ಲಿ ಕಾಣಬಹುದಾಗಿದೆ ಎಂದರು.ವಕೀಲ ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಕ ಮಾತನಾಡಿದರು, ಶಾರದಾ ಕೇದಾರ್ಜಿ ಸಂಗಡಿಗರಿಂದ ಜಾನಪದ ಹಾಡು ಮೂಡಿಬಂದವು. ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಗ್ರಾಮದ ಮಹನೀಯರನ್ನು ಈ ವೇಳೆ ಸನ್ಮಾನಿಸಲಾಯಿತು.
ಕಸಾಪ ತಾಲೂಕಾಧ್ಯಕ್ಷ ಗುರುರಾಜ ಸಬ್ನಿಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರವೀಣ ಪವಾರ, ಬಸವರಾಜ ಇನಾಮದಾರ. ಶಿವಾಜಿ ಡೊಳ್ಳಿನ, ಈರಣ್ಣ ಕಲ್ಲೂರ, ಜಮಾಲಸಾಬ ಮುನವಳ್ಳಿ, ಯಲ್ಲಪ್ಪಾ ಬೆಳಗಾವಿ, ಸ್ನೇಹಶ್ರೀ ಕಿತ್ತೂರ, ದಾವಲಸಾಬ ಕಿತ್ತೂರ ಶಿಕ್ಷಕರಾದ ತಿಪ್ಪೆಸ್ವಾಮೀ, ಬಿ.ಜಿ.ಮಖಾಂದಾರ, ಅಕ್ಕಮ್ಮ ತುಮ್ಮರಗುದ್ದಿ, ರುಕ್ಸನಾ ಗುಳ್ಳದಕೊಪ್ಪ, ನಿರ್ಮಲಾ ಹಬ್ಬಣ್ಣವರ ಇದ್ದರು.