ಸಾರಾಂಶ
ಕಂಪ್ಲಿ: ಮುಸ್ಲಿಂ ಧರ್ಮಗುರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಈದ್ ಮಿಲಾದ್ ಹಬ್ಬ ಆಚರಿಸಿದರು. ಈದ್ ಮಿಲಾದ್ ಪ್ರಯುಕ್ತ ಕಂಪ್ಲಿ- ಕೋಟೆಯಲ್ಲಿ ಆರಂಭಗೊಂಡ ಮೆಕ್ಕಾ ಮದೀನಾ ಸ್ತಬ್ಧಚಿತ್ರಗಳ ಮೆರವಣಿಗೆಗೆ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಉರುಫ್ ಆಜಂ ಪಾಷಾ ಸಾಹೇಬ್ ಸಜ್ಜಾದೇ ನಶೀನ್ ದಿವಾನ್ ಖಾನಾ ಚಾಲನೆ ನೀಡಿದರು.
ಪಟ್ಟಣದ ನಡುವಲ ಮಸೀದಿ, ಸಂತೆ ಮಾರುಕಟ್ಟೆ, ಸರ್ಕಾರಿ ಆಸ್ಪತ್ರೆ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಡಾ. ರಾಜಕುಮಾರ ಮುಖ್ಯರಸ್ತೆಯೊಂದಿಗೆ ಜೋಗಿ ಕಾಲುವೆ ಬಳಿಯ ಗಂಗಾವತಿ ರಸ್ತೆಯ ಬಡೇಸಾಹೇಬ ಖಾದ್ರಿ, ದರ್ಗಾ ತಲುಪಿತು.ಆನಂತರ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಉರುಫ್ ಆಜಂ ಪಾಷಾ ಸಾಹೇಬ್ ಸಜ್ಜಾದೇ ನಶೀನ್ ದಿವಾನ್ ಖಾನಾ ಅವರು ಮಾತನಾಡಿ, ಮುಸ್ಲಿಂ ಧರ್ಮಗುರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ತತ್ವಾದರ್ಶಗಳ ಪರಿಪಾಲನೆಯೊಂದಿಗೆ ನೆಮ್ಮದಿಯ ಜೀವನ ನಡೆಸಬೇಕು ಎಂದರು. ಆನಂತರ ಮೆಕ್ಕಾ ಮದೀನಾ ಸ್ತಬ್ಧಚಿತ್ರದ ಧ್ವಜಗಳನ್ನು ನಗರದುದ್ದಕ್ಕೂ ಬಿತ್ತರಿಸಿದರು.
ಮೆರವಣಿಗೆಯಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ ಭಾಗಿಯಾಗಿ, ಈದ್ ಮಿಲಾದ್ ಹಬ್ಬದ ಶುಭಾಶಯ ಕೋರಿದರು. ಮುಸ್ಲಿಂ ಸಮಾಜದ ಈದ್ ಮಿಲಾದುನ್ನಬಿ ಕಮಿಟಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಆನಂತರ ಧ್ವಜಗಳನ್ನು ಹಿಡಿದು ಯುವಕರು ವಿಜೃಂಭಣೆಯಿಂದ ಹಬ್ಬ ಆಚರಿಸಿದರು.ಧರ್ಮಗುರುಗಳಾದ ಮುಸ್ಲಿಂ ಸೈಯದ್ ಮೆಹಮೂದ್ ಖಾದ್ರಿ ಉರುಫ್ ರೈಸ್ ಸಾಹೇಬ್ ಸಜ್ಜಾದೇ ನಶೀನ್ ಹಟ್ಟಿ ಸಾಕೀನ್ ಕಂಪ್ಲಿ, ಸೈಯದ್ ಷಾ ಖಾಜಾ ಮೈನುದ್ದೀನ್ ಖಾದ್ರಿ ಸಜ್ಜಾದೇ ನಶೀನ್ ದರ್ಗಾ ನೂರುಲ್ಲಾ ಖಾದ್ರಿ ಕಂಪ್ಲಿ, ಸೈಯದ್ ಷಾ ನೂರ್ ಅಹ್ಮದ್ ಖಾದ್ರಿ ಈದ್ ಮಿಲಾದುನ್ನಬಿ ಕಮಿಟಿಯ ಅಧ್ಯಕ್ಷ ಯು. ಜಹೀರುದ್ದೀನ್ ಇದ್ದರು. ತೋರಣಗಲ್ ಉಪವಿಭಾಗದ ಡಿವೈಎಸ್ಪಿ ಪ್ರಸಾದ ಗೋಖಲೆ ನೇತೃತ್ವದಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಪಿಐ ಕೆ.ಬಿ. ವಾಸುಕುಮಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.