ಸಾರಾಂಶ
ಪಿ.ಎಸ್. ಪಾಟೀಲ
ಕನ್ನಡಪ್ರಭ ವಾರ್ತೆ ರೋಣಮರಳು ಸಾಗಾಟಕ್ಕೆ ಲಾರಿ ಅಥವಾ ಟಿಪ್ಪರ್ ಜಿ.ಪಿ.ಎಸ್. ಕಡ್ಡಾಯವಿದ್ದರೂ ಮರಳು ಸಾಗಾಟ ಕೇಂದ್ರಗಳು ಈ ನಿಯಮವನ್ನು ಗಾಳಿಗೆ ತೂರಿ ಒಂದು ಪಾಸ್ ವಿತರಿಸಿ, ಉಳಿದಂತೆ 2 ರಿಂದ 3 ಲಾರಿ ಅಥವಾ ಟಿಪ್ಪರ್‌ಗಳನ್ನು ''''ಜೀರೋ ಪಾಸ್'''' ಲೆಕ್ಕದಲ್ಲಿ ಲೋಡ್ ಮಾಡಿ ಸಾಗಾಟ ಮಾಡುವ ದಂಧೆ ಎಗ್ಗಿಲ್ಲದೆ ನಡೆಯುತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊಡೆತ ಬೀಳುತ್ತಿದೆ. ಅಧಿಕೃತ ಪಾಯಿಂಟ್‌ಗಳು ರಾಯಲ್ಟಿ ಕಟ್ಟದೆ ಅಡ್ಡ ದಾರಿ ಹಿಡಿದಿವೆ.
ರೋಣ ತಾಲೂಕಿನಲ್ಲಿರುವ ಬಳಗೋಡ, ಹಿರೇಹಾಳ, ಯರೇಕುರಬನಾಳ, ಗಾಡಗೋಳಿ, ಹೊಳೆಮಣ್ಣೂರ, ಕುರವಿನಕೊಪ್ಪ, ಗುಳಗಂದಿ, ಮೇಣಸಗಿ ಭಾಗಗಳಲ್ಲಿರುವ ಅಧಿಕೃತ ಮರಳು ಸಾಗಾಟ ಅಧಿಕೃತ ಪಾಯಿಂಟ್ ಗಳ ಪೈಕಿ ಬಹುತೇಕ ಪಾಯಿಂಟ್ ಗಳು ಒಂದೇ ಪಾಸ್ ಗೆ 2 ರಿಂದ 3 ಬಾರಿ ಅದೇ ಲಾರಿ ಅಥವಾ ಟಿಪ್ಪರ್‌ಗೆ ಮರಳು ತುಂಬಿಸುತ್ತಾರೆ. ಹೀಗೆ ಮಾಡುವುದರಿಂದ ಪಾಯಿಂಟ್ ಮಾಲೀಕರಿಗೆ ಸರ್ಕಾರಕ್ಕೆ ಕಟ್ಟಬೇಕಾದ ರಾಯಲ್ಟಿ ಹಣ ಉಳಿಯುತ್ತದೆ. ಜೊತೆಗೆ ಪಾಸ್ ಗಳು ಉಳಿಯುತ್ತವೆ. ಇನ್ನೂ ಲಾರಿ, ಟಿಪ್ಪರ್ ಮಾಲೀಕರಿಗೆ ಪಾಸ್‌ಗೆ ಪಾವತಿಸಬೇಕಾದ ಹಣ ಉಳಿತಾಯವಾಗುತ್ತದೆ. ಹೀಗೆ ಲಾರಿ ಮಾಲೀಕರು, ಮರಳು ಸಾಗಾಟ ಕೇಂದ್ರವರಿಗೂ ಲಾಭವಾಗುತ್ತದೆ. ಆದರೆ ಸರ್ಕಾರದ ಆದಾಯಕ್ಕೆ ಮಾತ್ರ ಕತ್ತರಿ ಬೀಳುತ್ತದೆ.ಪಾಯಿಂಟ್‌ನಲ್ಲಿ ಒಂದು ಪಾಸ್‌ಗೆಗೆ 2 ಅಥವಾ 3 ಬಾರಿ ಮರಳು ತುಂಬಿಸಿ ಕೊಡ್ತಾರಂದ್ರೆ ನಾವೇಕೆ ತಗೆದುಕೊಳ್ಳಬಾರದು? ನಮ್ಮ ಲಾರಿಗಳನ್ನು ಯಾರೂ ಹಿಡಿಯುವುದಿಲ್ಲ. ಪ್ರತಿ ತಿಂಗಳು ಲಾರಿ ಅಥವಾ ಟಿಪ್ಪರ್ ಒಂದಕ್ಕೆ ಇಂತಷ್ಟು ಹಣ( ಲಂಚ) ಅಂತ ಪೊಲೀಸರಿಗೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಮುಟ್ಟಿಸುತ್ತೇವೆ. ನಾವು ತಡ ಮಾಡಿದ್ರೂ ಅವರೇ ನಮಗೆ ನೆನಪಿಸುತ್ತಾರೆ. ಪಾಯಿಂಟ್ ವರೆಗೂ ಬಂದು ವಸೂಲಿ ಮಾಡುತ್ತಾರೆ ಎಂದು ಅಧಿಕಾರಗಳ ನಡೆಯನ್ನು ಮುಲಾಜಿಲ್ಲದೇ ಪಾಯಿಂಟ್ ಮಾಲೀಕರು ಬಿಚ್ಚಿಡುತ್ತಾರೆ. ಬೇಲಿಯೇ ಎದ್ದು ಹೊಲ ಮೇಯ್ದಲ್ಲಿ ರಕ್ಷಿಸುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಪಾಯಿಂಟ್‌ಗಳಲ್ಲೇ ಟ್ರ್ಯಾಕ್ಟರ್‌ಗೂ ಲೋಡ್ಜಿ.ಪಿ.ಎಸ್. ಅಳವಡಿಸಿ ಕೇವಲ ಟಿಪ್ಪರ್ ಅಥವಾ ಲಾರಿಗೆ ಮಾತ್ರ ಮರಳು ಲೋಡ್ ಮಾಡಬೇಕು ಎಂಬ ನಿಯಮ ಕಡ್ಡಾಯವಾಗಿದ್ದರೂ, ಬಹುಕೇತ ಮರಳು ಸಾಗಾಟ ಕೇಂದ್ರಗಳು ತಮ್ಮ ಲಾಭಕ್ಕಾಗಿ ಜಿ.ಪಿ.ಎಸ್. ಇಲ್ಲದ ಟ್ರ್ಯಾಕ್ಟರ್‌ಗಳಿಗೆ ಮರಳು ತುಂಬಿಸುತ್ತಿದ್ದಾರೆ. ಪಾಯಿಂಟ್ ಒಂದರಲ್ಲೇ ನಿತ್ಯ 50 ರಿಂದ 100 ಟ್ರ್ಯಾಕ್ಟರ್ ತುಂಬಿಸುತ್ತಾರೆ. ಟ್ರ್ಯಾಕ್ಟರ್ ಒಂದಕ್ಕೆ ₹3000 ರಿಂದ ₹3500 ಪಡೆದು ಮರಳು ಲೋಡ್ ಮಾಡಲಾಗುತ್ತಿದೆ. ಅಲ್ಲದೇ ಟಿಪ್ಪರ್ ಮತ್ತ ಲಾರಿ ಮಾಲಿಕರೇ ಟ್ರ್ಯಾಕ್ಟರ್‌ಗಳ ಮೂಲಕ ಮರಳು ಎತ್ತುವಳಿ ಮಾಡಿ ಒಂದಡೆ ಸಂಗ್ರಹಿಸಿ, ಬಳಿಕ ಅದೇ ಮರುಳನ್ನು ಲಾರಿಗೆ ತುಂಬಿಸಿಕೊಂಡು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಇದರಿಂದ ಮರಳಿನ ದರ ಏರಿಕೆಯಾಗಿದ್ದು, ಬಡವರು, ಕೂಲಿಕಾರರು, ರೈತರು, ಆಶ್ರಯ ಮನೆ ನಿರ್ಮಿಸಿಕೊಳ್ಳುವವರಿಗ ಮರಳು ಗಗನ ಕುಸುಮವಾಗಿದೆ.
ಲಾರಿಯಿಂದ ಕಿರಿಕಿರಿಮರಳು ತುಂಬಿದ ಲಾರಿಗಳು ರಸ್ತೆಯಲ್ಲಿ ಸಂಚರಿಸುವ ವೇಳೆ ಗಾಳಿಗೆ ಮರಳು ಹಾರಿ ಹೋಗಿ ಹಿಂದೆ ಬರುವ ವಾಹನ ಸವಾರರ ಕಣ್ಣಿಗೆ ಬೀಳಬಾರದು ಎಂಬ ಉದ್ದೇಶದಿಂದ ತಾಡಪತ್ರೆ ಹಾಕಿಕೊಂಡು ಸಾಗಬೇಕು ಎಂಬ ನಿಯಮವಿದೆ. ಆದರೆ ಯಾವುದೇ ಲಾರಿಗಳು ಈ ನಿಯಮ ಪಾಲಿಸುವುದಿಲ್ಲ. ಇದರಿಂದ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರಿಗೆ, ಎತ್ತುಗಳಿಗೆ, ಜನರ ಕಣ್ಣಿಗೆ ಉಸುಕು ಸಿಡಿಯುತ್ತಿದೆ. ಇದರಿಂದ ಕೆಲವೊಮ್ಮೆ ವಾಹನ ಸವಾರರು ಬಿದ್ದು ಗಾಯಮಾಡಿಕೊಂಡ ಉದಾಹರಣೆಗಳಿವೆ.ಪರಿಶೀಲನೆ
ನಿಯಮ ಉಲ್ಲಂಘಿಸಿ ಮರಳು ಸಾಗಾಟ ಮಾಡುವ ಅಧಿಕೃತ ಮತ್ತು ಅನಧಿಕೃತ ಮರಳು ಸಾಗಾಟ ಕೇಂದ್ರಗಳ ಮೇಲೆ ನಿಗಾವಹಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಅಕ್ರಮ ಮರಳು ಸಾಗಾಟ ಮಾಡುವವರ ಮೇಲೆ ರಾಜ್ಯದಲ್ಲಿಯೇ ಗದಗ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಿಸಿ, ದಂಡ ಹಾಕಲಾಗಿದೆ. ಕೂಡಲೇ ರೋಣ ತಾಲೂಕಿನ ಭಾಗದಲ್ಲಿನ ಮರಳು ಸಾಗಾಟ ಪಾಯಿಂಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವದು. ಇದಕ್ಕೆ ಕಡಿವಾಣ ಹಾಕಲಾಗುವದುಚಿದಂಬರ ಗಣಿ ಮತ್ತು ಭೂವಿಜ್ಞಾನ ಇಲಾಖೆ,ಗದಗ ಜಿಲ್ಲಾ ಅಧಿಕಾರಿ.
ಕಟ್ಟುನಿಟ್ಟಿನ ಕ್ರಮ
ಆಶ್ರಯ ಮನೆ ನಿರ್ಮಾಣಕ್ಕೆ ಆಶ್ರಯ ಪಲಾನುಭವಿಗಳಿಗೆ, ಬಡವರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ ಮರಳು ಅಭಾವ ಆಗದಂತೆ, ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಮರಳು ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಮರಳು ಸಾಗಾಟಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜಿರೋ ಪಾಸ್‌ನಲ್ಲಿ ಮರಳು ಸಾಗಾಟ ಅಪರಾಧವಾಗಿದೆ.ನಾಗರಾಜ.ಕೆ. ತಹಸೀಲ್ದಾರ್ ರೋಣ ತಾಲೂಕು